You are here
Home > Koppal News > ’ಏಪ್ರಿಲ್ ೧೮’ಹಕ್ಕಬುಕ್ಕರು ದಿನಾಚರಣೆಯಂದು ಹಂಪಿ ಉತ್ಸವ ಆಚರಿಸಿದರೆ ಅರ್ಥಪೂರ್ಣವಾಗಿರುತ್ತದೆ-ವೀರಭದ್ರ ಚನ್ನಮಲ್ಲಸ್ವಾಮಿ

’ಏಪ್ರಿಲ್ ೧೮’ಹಕ್ಕಬುಕ್ಕರು ದಿನಾಚರಣೆಯಂದು ಹಂಪಿ ಉತ್ಸವ ಆಚರಿಸಿದರೆ ಅರ್ಥಪೂರ್ಣವಾಗಿರುತ್ತದೆ-ವೀರಭದ್ರ ಚನ್ನಮಲ್ಲಸ್ವಾಮಿ

ಹಂಪಿಗೆ ಹಾಗೂ ಮಲೆಮಹದೇಶ್ವರ ಗುಡಿಗೆ ಬಂದ ರಾಜಕಾರಣಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಭ್ರಮೆಯನ್ನು ಹುಟ್ಟುಹಾಕಲಾಗಿದ್ದು, ತಿರುಪತಿಗೆ ಹೋದವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಯಾಕೇ ಹೇಳುತ್ತಿಲ್ಲ.
ಹೊಸಪೇಟೆ: ಹಂಪಿ ಉತ್ಸವವನ್ನು ಏಪ್ರಿಲ್ ೧೮ರಂದು ಹಕ್ಕಬುಕ್ಕರು ವಿಜಯನಗರ ಸಾಮ್ರಾಜ್ಯದ ಸ್ಥಾಪಕ ದಿನಾಚರಣೆಯಂದು ಆಚರಿಸಿದರೆ ಅರ್ಥಪೂರ್ಣವಾಗುತ್ತದೆ. ರಾಜ್ಯ ಸರ್ಕಾರವು ಇದರತ್ತ ಗಮನ ಹರಿಸಬೇಕೆಂದು ಮಾನವ ಧರ್ಮ ಪೀಠದ ವೀರಭದ್ರ ಚನ್ನಮಲ್ಲ ಮಹಾಸ್ವಾಮಿ ಆಗ್ರಹಿಸಿದರು.
ಅವರು ಹಂಪಿಯಲ್ಲಿ ಶನಿವಾರ ವಿಜಯನಗರ ಸಂಸ್ಥಾಪನಾ ದಿನದ ವಿಜಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಂಪಿಯು ಶೈವಕೇಂದ್ರವಾಗಿದ್ದು, ಈ ಕೇಂದ್ರವನ್ನು ವೈಷ್ಣವ ಕೇಂದ್ರವನ್ನಾಗಿ ವೈದಿಕ ಕೇಂದ್ರವನ್ನಾಗಿಸುವ ದಿಕ್ಕಿನಲ್ಲಿ ಇತಿಹಾಸದಲ್ಲಿ ಪ್ರಯತ್ನ ನಡೆಯಿತು. ಇದರ ಭಾಗವಾಗಿ ವಿಜಯನಗರ ಸಾಮ್ರಾಜ್ಯ ನಾಶವಾಯಿತು , ಆರ್ಯರು ಎಲ್ಲವನ್ನೂ ವೈದೀಕರಣ ಮಾಡುವ ಪ್ರಯತ್ನ ನಡೆಸುತ್ತಾ ಬಂದರು. ಪುರೋಹಿತ ಶಾಹಿಯು ಶತಮಾನಗಳಿಂದ ಶೋಷಣೆಯನ್ನು ಮುಂದುವರೆಸುತ್ತಿದ್ದು, ಇವತ್ತು ಮಾಧ್ಯಮವನ್ನು ಬಳಸಿಕೊಂಡು ಜ್ಯೋತಿಷ್ಯ, ಧರ್ಮದ ಮೂಲಕ ಆಳ್ವಿಕೆ ಮುಂದುವರೆಸಿದೆ , ಮಾಧ್ಯಮದಲ್ಲಿ ವೈದಿಕರಿಗೆ ಸಿಕ್ಕ ಪ್ರಾಶಸ್ತ್ಯ ಅವೈದಿಕ ಪರಂಪರೆಗೆ ಸಿಗುತ್ತಿಲ್ಲ ಎಂದರು. 
ಹಂಪಿಗೆ ಹಾಗೂ ಮಲೆಮಹದೇಶ್ವರ ಗುಡಿಗೆ ಬಂದ ರಾಜಕಾರಣಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಭ್ರಮೆಯನ್ನು ಹುಟ್ಟುಹಾಕಲಾಗಿದ್ದು, ತಿರುಪತಿಗೆ ಹೋದವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಯಾಕೇ ಹೇಳುತ್ತಿಲ್ಲ. ಶೈವ ದೇವಾಲಯಗಳ ಮೇಲೆ ಇವರ ಕಣ್ಣು ಯಾಕೇ? ಇಂತಹ ಪುರೋಹಿತ ಶಾಹಿ ಹುನ್ನಾರವನ್ನು ಸೋಲಿಸಬೇಕೆಂದರು. ಮೂಢನಂಬಿಕೆಯ ವಿರುದ್ಧ ಜನರು ಜಾಗೃತರಾಗಿ ಹೋರಾಟ ನಡೆಸಬೇಕಿದೆ ಎಂದರು. ಋಷಿ ಪರಂಪರೆ ಅರ್ಯರದ್ದಾದರೆ ಮುನಿ ಪರಂಪರೆ ಶೈವರದು. ಈ ಪರಂಪರೆಗಳ ಬಗ್ಗೆ ವಿದ್ವಾಂಸರು ಅಧ್ಯಯನ ನಡೆಸಬೇಕಿದೆ ಎಂದರು.
ವಾಲ್ಮೀಕಿ, ಕಾಳಿದಾಸನನ್ನು ವೈದಿಕೀಕರಣ ಮಾಡುವ ಪ್ರಯತ್ನ ನಡೆಸಲಾಯಿತು. ಪುರೋಹಿತಶಾಹಿ ಒಬ್ಬ ಪ್ರತಿಭಾವಂತನನ್ನು ಸೃಷ್ಠಿ ಮಾಡಲಾಗಿಲ್ಲ. ಜನ ಸಮುದಾಯದಿಂದ ಬಂದ ಪ್ರತಿಭಾವಂತರನ್ನು ವೈದಿಕೀಕರಣ ಮಾಡುವ ಮಾಡುವ ಮೂಲಕ ಜಾತಿ ಶುದ್ಧೀಕರಣ ನಡೆಸುತ್ತಾ ಬರಲಾಗುತ್ತಿದೆ. ಇವರು ಅಂಬೇಡ್ಕರ್ ಬಗ್ಗೆಯೂ ಇಂತಹ ಕಟ್ಟುಕತೆ ಕಟ್ಟಿದ್ದಾರೆ. ಇವರ ಬಗ್ಗೆ ಅತಿ ಎಚ್ಚರ ಇಂದಿನ ಅಗತ್ಯವಾಗಿದೆ ಎಂದರು.
ಶಂಕರಾಚಾರ್ಯರ ಬಗ್ಗೆ ಮಾತನಾಡಿದ ಅವರು, ಶಂಕರಾಚಾರ್ಯರು ಮಾನವೀಯವಾಗಿದ್ದ ಎರಡು ಘಟನೆಗಳು ಮುಖ್ಯವಾಗಿವೆ. ಕಾಶಿಯಲ್ಲಿ ಚಂಡಾಲನೊಬ್ಬನು ಎದುರಾಗಿ ವಾದಿಸಿದಾಗ ಜ್ಞಾನೋದಯ ಪಡೆದ ಶಂಕರಾಚಾರ್ಯರು ಅದ್ವೈತ ಸಿದ್ದಾಂತ ರೂಪಿಸಿದರು. ಇದು ಚಂಡಾಲನೊಬ್ಬನ ಕೊಡುಗೆಯಾಗಿದೆ ಎಂದರು. ತಮ್ಮ ಭಾಷಣದೂದ್ದಕ್ಕೂ ಪುರೋಹಿತಶಾಹಿಗಳ ಕುತಂತ್ರಗಳನ್ನು ವಿವರಿಸಿದ ಅವರು, ಇಂತಹ ಕುತಂತ್ರಗಳ ಮೂಲವೇ ೫ಸಾವಿರ ವರ್ಷ ತಳವರ್ಗದ ಜನರ ಮೇಲೆ ಸಾಂಸ್ಕೃತೀಕರಣ ಹೇರುತ್ತಾ ಭೋಗ ಜೀವನ ನಡೆಸುತ್ತಾ ಬಂದಿದೆ. ಅದು ಇವತ್ತಿಗೂ ಮುಂದುವರೆದಿದೆ ಎಂದರು. ಸಮಾರಂಭದ ಸಾನಿಧ್ಯವನ್ನು ವಹಿಸಿದ್ದ ಕಾಗಿನೆಲೆ ಮಹಾ ಸಂಸ್ಥಾನದ ಕಲ್ಬುರ್ಗಿ ಭಾಗದ ಕನಕ ಗುರುಪೀಠ ಸಿದ್ಧರಾಮಾನಂದ ಮಹಾಸ್ವಾಮಿ ಮಾತನಾಡಿ, ಹಂಪಿ ಉತ್ಸವವನ್ನು ಕನಕಗುರುಪೀಠದಿಂದ ನಡೆಸುವ ಉದ್ದೇಶ ನನ್ನದಾಗಿತ್ತು. ಸರ್ಕಾರವೇ ಅದನ್ನು ಮುಂದುವರೆಸಿತು. ಹಂಪಿ ಉತ್ಸವವನ್ನು ಏಪ್ರಿಲ್ ೧೮ರಂದು ಹಕ್ಕಬುಕ್ಕರು ವಿಜಯನಗರ ಸಾಮ್ರಾಜ್ಯದ ಸ್ಥಾಪಕ ದಿನಾಚರಣೆಯಂದು ಆಚರಿಸಿದರೆ ಯೋಗ್ಯ. ಇದು ಹಕ್ಕಬುಕ್ಕರಿಗೆ ನ್ಯಾಯ ಸಲ್ಲಿಸದಂತಾಗುತ್ತದೆ ಎಂದರು. 
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುವೆಂಪು ವಿವಿಯ ಕುಲಸಚಿವೆ ಮಲ್ಲಿಕಾ ಘಂಟಿ ಮಾತನಾಡಿ, ದುಡಿಯುವ ಜನರು ತಮ್ಮ ಇತಿಹಾಸವನ್ನು ನೆನಪಿಸಿಕೊಂಡು ನಾಳೇಗಳ ಕನಸು ಕಾಣುವಂತಾಗಲಿ ಎಂದರು.
ಕುವೆಂಪು ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಪ್ರಶಾಂತ ಜಿ. ನಾಯಕ, ಕನ್ನಡ ವಿವಿ ಪ್ರಾಧ್ಯಾಪಕ ಚೆಲುವರಾಜ್ ಮಾತನಾಡಿದರು. ಈ ಸಮಾರಂಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್.ಸಿದ್ದನಗೌಡ ಇವರನ್ನು ಸನ್ಮಾನಿಸಲಾಯಿತು. 
ತಾಲೂಕು ಕುರುಬರಸಂ ಏರ್ಪಡಿಸಿದ್ದ ಈ ಸಮಾರಂಭದಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎಸ್.ಎಲ್.ಸ್ವಾಮಿ ಹಾಜರಿದ್ದರು. ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಕೆ.ಎಂ. ಹಾಲಪ್ಪ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಡಾ.ಲಿಂಗದಳ್ಳಿ ಹಾಲಪ್ಪ ಮಾತನಾಡಿದರು. ಎಫ್.ಟಿ.ಹಳ್ಳಿಕೇರಿ ನಿರೂಪಿಸಿದರು.

Leave a Reply

Top