ಕುಡಿಯುವ ನೀರಿನ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ- ಜ್ಯೋತಿ ಬಿಲ್ಗಾರ್


ಕೊಪ್ಪಳ ಆ. : ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಜನರಿಗೆ ಕುಡಿಯುವ ನೀರು ಒದಗಿಸಲು ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ, ಜನರಿಗೆ ಮೊದಲು ಕುಡಿಯುವ ನೀರು ಒದಗಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ನಾಗರಾಜ್ ಬಿಲ್ಗಾರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆಸೂಚನೆ ನೀಡಿದರು.
ಈಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಕರ್ನಾಟಕ ಅಬಿವೃದ್ಧಿ ಅಂಶಗಳ ಕೆ.ಡಿ.ಪಿ. ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಬೇಸಿಗೆ ಕಾಲ ಮುಗಿದು, ಮಳೆಗಾಲ ಪ್ರಾರಂಭಗೊಂಡಿದೆ. ಆದರೆ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಸಾರ್ವಜನಿಕರು ಇನ್ನೂ ಸಹ ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿದ್ದಾರೆ. ಜನರಿಗೆ ಪ್ರಥಮಾದ್ಯತೆಯಲ್ಲಿ ಶುದ್ಧ ಕುಡಿಯುವ ನೀರು ಒದಗಿಸಬೇಕಾಗಿದೆ. ಆದರೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಉತ್ತರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ಹಲವಾರು ಗ್ರಾಮಗಳಲ್ಲಿನ ಕೈಪಂಪು ಕೊಳವೆ ಬಾವಿಗಳು ಕೆಟ್ಟು ಹೋಗಿದ್ದು, ದುರಸ್ತಿ ಕಾರ್ಯಗಳಿಗಾಗಿ ಆಯಾ ಗ್ರಾಮ ಪಂಚಾಯತಿಗಳಿಗೆ ಸಾಕಷ್ಟು ಅನುದಾನ ಒದಗಿಸಲಾಗುತ್ತಿದೆ. ಆದರೆ ಸಂಬಂಧಪಟ್ಟ ಗ್ರಾಮ ಪಂಚಾಯತಿಗಳು ಕೊಳವೆ ಬಾವಿಗಳ ದುರಸ್ತಿ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಇದೇ ಪ್ರವೃತ್ತಿ ಮುಂದುವರೆದಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕಾಗುವುದು ಎಂದು ಎಚ್ಚರಿಕೆ ನೀಡಿದರು.
ಅಂಗನವಾಡಿ ಕಟ್ಟಡಗಳು: ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ನಿರ್ಮಿತಿ ಕೇಂದ್ರ, ಭೂಸೇನಾ ನಿಗಮಗಳಿಗೆ ಜವಾಬ್ದಾರಿಯನ್ನು ವಹಿಸಲಾಗಿದೆ. ಆದರೆ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡಗಳನ್ನು ಕಟ್ಟಲು ಸ್ಥಳ ಗುರುತಿಸಿ, ಅವರಿಗೆ ಜಾಗ ಹಸ್ತಾಂತರಿಸುವ ಕುರಿತು ಆಯಾ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಆಸಕ್ತಿ ವಹಿಸುತ್ತಿಲ್ಲ. ನಿಗದಿತ ಕಾಲಮಿತಿಯೊಳಗೆ ಕಟ್ಟಡ ಕಾಮಗಾರಿಗಳನ್ನು ಪ್ರಾರಂಭಿಸಲು ವಿಫಲವಾಗುವ ಸಿಡಿಪಿಓ ಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ಗ್ರಾಮೀಣ ಉದ್ಯೋಗಖಾತರಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ಕಾಂಪೌಂಡ್ ಕಟ್ಟಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಜರುಗಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
ಸರ್ವಶಿಕ್ಷಣ ಅಭಿಯಾನ: ಸರ್ವಶಿಕ್ಷಣ ಅಭಿಯಾನದ ಕಳೆದ ಸಾಲಿನ ಪ್ರಚಾರ ಕಾರ್ಯಕ್ರಮಗಳಿಗೆ ಫ್ಲೆಕ್ಸ್ ಮುಂತಾದ ಕೆಲಸದಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆಸಲಾಗಿದೆ ಎಂದು ಹಲವಾರು ಮಾಧ್ಯಮಗಳು ದಾಖಲೆಯೊಂದಿಗೆ ವರದಿ ಮಾಡಿವೆ. ಈ ಕುರಿತು ವಿವರಣೆ ನೀಡುವಂತೆ ಜಿ.ಪಂ. ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರು ಸೂಚಿಸಿದ್ದಕ್ಕೆ ಉತ್ತರಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಟೇಲಿಂಗಾಚಾರ್ ಅವರು, ಮಾಧ್ಯಮಗಳಲ್ಲಿ ವರದಿಯಾದ ವಿಷಯಕ್ಕೆ ಸಂಬಂಧಪಟ್ಟಂತೆ ಸಮಗ್ರ ದಾಖಲೆ, ಮಾಹಿತಿಯನ್ನು ಸಂಗ್ರಹಿಸಿಕೊಂಡು, ಸರ್ವ ಶಿಕ್ಷಣ ಅಭಿಯಾನ ಯೋಜನೆಯ ಉನ್ನತ ಅಧಿಕಾರಿಗಳಿಗೆ ಸಮಗ್ರ ವರದಿಯನ್ನು ಕಳುಹಿಸಿಕೊಡಲಾಗಿದೆ ಎಂದು ವಿವರಣೆ ನೀಡಿದರು.
ಜಿ.ಪಂ. ಉಪಾಧ್ಯಕ್ಷರಿಂದ ತರಾಟೆ: ಕೊಪ್ಪಳ ತಾಲೂಕಿನಲ್ಲಿ ಸಮಸ್ಯಾತ್ಮಕ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸುಧಾರಿಸಲು ಅಗತ್ಯ ಕ್ರಿಯಾ ಯೋಜನೆಯನ್ನು ರೂಪಿಸಿ, ಅನುಷ್ಠಾನಗೊಳಿಸುವುದು ಪಂ.ರಾ. ಇಂಜಿನಿಯರಿಂಗ್ ಗ್ರಾಮೀಣ ಕುಡಿಯುವ ನೀರು ವಿಭಾಗದ ಕೆಲಸವಾಗಿದೆ. ಆದರೆ ಕೊಪ್ಪಳ ತಾಲೂಕಿನಲ್ಲಿ ಅಗತ್ಯ ಇರದ ಕಡೆಗಳಲ್ಲಿ ಲಕ್ಷಾಂತರ ರೂ.ಗಳ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲು ಕ್ರಿಯಾ ಯೋಜನೆ ಸಿದ್ಧಪಡಿಸಿ, ಅನುಮೋದನೆ ಪಡೆದಿರುವುದಕ್ಕೆ ಜಿ.ಪಂ. ಉಪಾಧ್ಯಕ್ಷೆ ಡಾ. ಸೀತಾ ಗೂಳಪ್ಪ ಹಲಗೇರಿ ಅವರು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದೇಶಪಾಂಡೆ ಅವರನ್ನು ತರಾಟೆಗೆ ತೆಗೆದುಕೊಂಡರು. ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ ನಿಮ್ಮಿಷ್ಟಕ್ಕೆ ನೀವೇ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಂಡರೆ, ಅಧಿಕಾರಿದಲ್ಲಿ ನಾವು ಏಕೆ ಇರಬೇಕು?, ಅಧಿಕಾರದಲ್ಲಿ ಮಹಿಳೆಯರಿದ್ದಾರೆ, ಇವರಿಗೆ ಏನು ಬೇಕಾದರೂ ಉತ್ತರ ನೀಡಬಹುದೆಂದು ನೀವು ಯೋಚಿಸಿದ್ದರೆ ಅದು ನಿಮ್ಮ ತಪ್ಪು ಊಹೆ. ಜಿಲ್ಲೆಯಲ್ಲಿ ಆಸಕ್ತಿಯಿಂದ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಜಿಲ್ಲೆ ಬಿಟ್ಟು ಹೊರಡಿ ಎಂದು ತಿಳಿಸಿದ ಅವರು ಕ್ರಿಯಾ ಯೋಜನೆಯಲ್ಲಿ ಕಾಮಗಾರಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ರೂಪಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೆಚ್. ಕಾಕನೂರ ಅವರು ಮಾತನಾಡಿ, ಸುಪ್ರೀಂಕೋರ್ಟ್ ಸೂಚನೆಯನ್ವಯ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಕುಡಿಯುವ ನೀರು ಸರಬರಾಜು ಹಾಗೂ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕಿದೆ. ಆದರೆ ಇನ್ನೂ ಜಿಲ್ಲೆಯಲ್ಲಿ ಒಟ್ಟು ೨೫೭ ಶಾಲೆಗಳಿಗೆ ಕುಡಿಯುವ ನೀರು ಸೌಲಭ್ಯ ಒದಗಿಸಿಲ್ಲ, ಇವುಗಳ ಪೈಕಿ ೧೦೯ ಶಾಲೆಗಳಿಗೆ ಕುಡಿಯುವ ನೀರು ಪೂರೈಸಲು ಪ್ರಸಕ್ತ ಸಾಲಿನ ಕ್ರಿಯಾ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಉಳಿದ ೧೩೬ ಶಾಲೆಗಳಲ್ಲಿ ಕುಡಿಯುವ ನೀರಿನ ಸ್ವಲಭ್ಯ ಒದಗಿಸಲು ಪಟ್ಟಿಯನ್ನು ಜಿ.ಪಂ. ಗೆ ಸಲ್ಲಿಸಬೇಕು. ಈಲ್ಲೆಯಲ್ಲಿ ಸಂಪೂರ್ಣ ಸ್ವಚ್ಛತಾ ಆಂದೋಲನ ಯೋಜನೆಯಡಿ ೨೩೨ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಈಗಾಗಲೆ ಅನುದಾನ ಬಿಡುಗಡೆ ಮಾಡಲಾಗಿದೆ. ೪೪೩ ಶಾಲೆಗಳಿಗೆ ಶೌಚಾಲಯ ಕಲ್ಪಿಸಲು ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮದಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಇಲ್ಲದಿರುವ ಯಾವುದೇ ಶಾಲೆಗಳಿದ್ದಲ್ಲಿ ಅಂತಹ ಪಟ್ಟಿಯನ್ನು ಶೀಘ್ರ ಸಿದ್ಧಪಡಿಸಿ ಜಿಲ್ಲಾ ಪಂಚಾಯತಿಗೆ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಟೇಲಿಂಗಾಚಾರ್ ಅವರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ, ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ್ ಅವರು ಉಪಸ್ಥಿತರಿದ್ದರು. ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೈಗಾರಿಕೆ, ರೇಷ್ಮೆ, ಸಣ್ಣ ನೀರಾವರಿ, ಕೃಷಿ, ತೋಟಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ, ಮೀನುಗಾರಿಕೆ, ಸಹಕಾರ, ಕೃಷಿ ಮಾರುಕಟ್ಟೆ, ಸಮಾಜ ಕಲ್ಯಾಣ, ಬಿ.ಸಿ.ಎಂ., ಪಶುಸಂಗೋಪನೆ ಮುಂತಾದ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
Please follow and like us:
error

Related posts

Leave a Comment