ನೈಟ್ ಉಪ್ಪಿಟ್ಟಿನ ರಾಚಪ್ಪ (ಕಥೆ )

ರಾತ್ರಿಯಿಡೀ ಸರ್ಕಲ್ ನಲ್ಲಿ ನಿಂತಿರುವ, ಬಸ್ ಗಾಗಿ ಕಾಯುತ್ತಿರುವ, ಬಸ್ ಮಿಸ್ ಮಾಡಿಕೊಂಡಿರುವ ಜನರಿಗೆ ಬಿಸಿಬಿಸಿ ಉಪ್ಪಿಟ್ಟನ್ನು ಹಂಚುವ ಕಾಯಕದಲ್ಲಿ ತೊಡಗಿರುವ ರಾಚಪ್ಪ ಯಾವತ್ತೂ ರಾತ್ರಿ ನಿದ್ದೆ ಮಾಡಿದ ನೆನಪಿಲ್ಲ.  ಯಾರೂ ಬಂದರೂ ಉಪ್ಪಿಟ್ಟಿನ ಬಿಸಿಯ ತಟ್ಟದೇ ಹೋಗಿಲ್ಲ. ಯಾರೊಂದಿಗೂ ಜಗಳವಂತೂ ದೂರ ದೂರ. ತನ್ನಪಾಡಿಗೆ ತಾನು ಹೊತ್ತಲ್ಲದ ಹೊತ್ತಲ್ಲಿ ಬಂದವರಿಗೆಲ್ಲ ಬಿಸಿ ಉಪ್ಪಿಟ್ಟನ್ನೇ ಉಣಬಡಿಸುವ ಕಾಯಕದಲ್ಲಿ ಮಗ್ನ. 
ಈತನಿಗೆ ಮದುವೆ ಮಾಡುವ ಮನಸ್ಸು ಈತನ ತಂದೆತಾಯಿಗಳಿಗೆ ಹೊಳೆಯುವ ಹೊತ್ತಿಗೆ ಮೆತ್ತಗಾಗಿ ಕಾಲವಾಗಿದ್ದರು. ಮೊದಮೊದಲು ತಂದೆಯ ಚಹಾ ಬ್ರೆಡ್ ನ ಅಂಗಡಿ ಯಲ್ಲಿ ತಂದೆಯೊಂದಿಗೆ ಕೈಗೂಡಿಸುತ್ತಿದ್ದ ರಾಚಪ್ಪ ತಂದೆ ಮೆತ್ತಗಾಗುವಷ್ಟರಲ್ಲಿ ತಾನೇ ಸ್ವತಹ ಅಂಗಡಿ ನಡೆಸುವಷ್ಟು ಸಮರ್ಥನಾಗಿದ್ದ. ಗೂಡಂಗಡಿಗಳು ಸುತ್ತಮುತ್ತ ತಲೆಯೆತ್ತಿದಾಗ ವ್ಯಾಪಾರವೂ ಸ್ವಲ್ಪ ಕೈಹತ್ತಿತ್ತು. ಆದರೆ ಸಣ್ಣ ಪುಟ್ಟ ಅಂಗಡಿಗಳ ನಡುವೆಯೇ ಚಿಕ್ಕ ಚಹಾ ಅಂಗಡಿಗಳು ತಲೆಯೆತ್ತಿ ವ್ಯಾಪಾರ ಹಂಚಿ ಹೋಯಿತು. ರಾಚಪ್ಪನ ವ್ಯಾಪಾರ ಕೆಳಮುಖವಾಗತೊಡಗಿತು. ಇದರಿಂದ ಚಿಂತಿತನಾದ ರಾಚಪ್ಪ ಬೇರೆ ದಾರಿ ಹುಡುಕಲೇ ಬೇಕಾಯ್ತು. ಅದೂ ಆನಿವಾರ್ಯವೂ ಆಯಿತು. ಇದೇ ಚಿಂತೆಯಲ್ಲಿ ರಾಚಪ್ಪ ಸೊರಗತೊಡಗಿದ. ಗೂಡಂಗಡಿ ಬಾಡಿಗೆಯೂ ಭಾರವಾಗತೊಡಗಿತು. ಹೆಂಡತಿ, ಮಕ್ಕಳಿಲ್ಲದೆಯೂ ತನಗೆ ತನ್ನೊಬ್ಬನನ್ನೇ ಸಾಕಿಕೊಳ್ಳಲಾಗಲಿಲ್ಲ ಎಂಬ ಚಿಂತೆ ಅವನನ್ನು ಇನ್ನಷ್ಟು ಮಾನಸಿಕವಾಗಿ ಘಾಸಿಗೊಳಿಸಿತು. ಅವನಿಗೆ ಕೆಲವೇ ಕೆಲವು ಅಡಿಗೆಗಳನ್ನು ಬಿಟ್ಟು ಮತ್ತಾವ ವಿಶೇಷ ಅಡಿಗೆಗಳು ಬರುತ್ತಿರಲಿಲ್ಲ ಮತ್ತು ಬೇರೆ ಹೋಟಲ್ ಗಳಲ್ಲಿ ಬಾಣಸಿಗನಾಗಿ ಹೋಗಿ ಅಲ್ಲಿಯೂ ಆ ಅವ್ಯವಸ್ಥೆಗಳಲ್ಲಿ ಕೆಲಸಮಾಡಲಾಗದೇ ಮತ್ತದೇ ತನ್ನ ಗೂಡಂಗಡಿಯೇ ಗತಿ ಎನ್ನುವಂತೆ ಮರಳಿದ್ದ. ವಯಸ್ಸು ಇವನ ಕಷ್ಟಗಳನ್ನು ಲೆಕ್ಕಿಸದೇ ಮುಂದೆ ಓಡುತ್ತಿತ್ತು. ಆರೋಗ್ಯ ಕೈಕೊಡಹತ್ತಿತ್ತು. ಗೂರಲು ಕಡಿಮೆಯಾಗಲೆಂದು ಪ್ರಾರಂಭವಾದ  ಕುಡಿತ ಕ್ರಮೇಣ ರೂಢಿಯಾಗಿತ್ತು. 
ಹೀಗೊಂದು ದಿನ ರಾತ್ರಿ ತನ್ನಂಗಡಿ ಮುಚ್ಚಿ ಬೀಗ ಹಾಕುತ್ತಿರುವಾಗ ಇಬ್ಬರು ಮುದುಕರು ಬಸ್ ತಪ್ಪಿಸಿಕೊಂಡು ಮುಂದಿನ ಬಸ್ ಇನ್ನೂ ೩ ತಾಸು ತಡವೆಂದು ತಿಳಿದುಕೊಂಡು ಸರಹೊತ್ತಲ್ಲಿ ಏನಾದರೂ ತಿನ್ನಲು ಸಿಗುತ್ತೋ ಏನೋ ಎಂದು ಹುಡುಕುತ್ತಾ ರಾಚಪ್ಪನ ಅಂಗಡಿ ಮುಂದೆ ಬಂದು ನಿಂತರು. ರಾಚಪ್ಪ ಎಲ್ಲ ಖಾಲಿಯಾಯ್ತು ಎನ್ನುವಂತೆ ತಲೆಯಾಡಿಸಿ ಅವರನ್ನು ಬೇರೆ ಕಡೆ ವಿಚಾರಿಸುವಂತೆ ಹೇಳಿ ತನಗೂ ಏನೂ ಕೆಲಸವಿಲ್ಲದ ಕಾರಣ ಅವರನ್ನು ಬೇರೆ ಕಡೆ ಕರೆದುಕೊಂಡು ಹೋಗಿ ತಿನ್ನಲು ಏನಾದರೂ ಕೊಡಿಸಿದರಾಯಿತು ಎಂದು ಯೋಚಿಸಿ ಅವರೊಡನೆ ಐದಾರು ಕಡೆ ವಿಚಾರಿಸಲು ಘಂಟೆ ಹತ್ತರ ನಂತರ ಆ ಬಸ್ ಸ್ಟ್ಯಾಂಡ್ ಸರ್ಕಲ್ ನಲ್ಲಿ ಏನೊಂದು ತಿನ್ನಲಿಕ್ಕೆ ಸಿಗುವುದಿಲ್ಲವೆಂದು ರಾಚಪ್ಪನಿಗೆ ಆ ರಾತ್ರಿ ಖಾತ್ರಿಯಾಯಿತು. ತನ್ನ ಪಾಡಿಗೆ ತಾನು ಅಂಗಡಿ ಬಂದ್ ಮಾಡಿ ಸಾಹಿಲ್ ಬಾರ್ ನ ಕೌಂಟರ್‌ನಲ್ಲಿ ೨ ಪೆಗ್ ಅಗ್ಗದ ವಿಸ್ಕಿ ಹೀರಿ ಮನೆಯಲ್ಲಿ ಹೋಗಿ ತೆಪ್ಪಗೆ ಮಲಗಿದ್ದಷ್ಟೇ ಆತನಿಗೆ ನೆನಪು. ಮತ್ತೇ ಬೆಳಿಗ್ಗೆ ಜಾವಕ್ಕೆ ಎದ್ದು ಹಾಲಿನವ ಬಂದಾಗ ಹಾಕಿಸಿಕೊಂಡು ಅಂಗಡಿಗೆ ಹೋದರೆ ಬರುವುದು ರಾತ್ರಿಯ ನಂತರವಷ್ಟೇ. 
ಆ ಇಬ್ಬರು ಮುದುಕರನ್ನು ಮನೆಗೆ ಕರೆದುಕೊಂಡು ಹೋಗಿ ಮನೆಯಲ್ಲಿ ಉಳಿದಿದ್ದ ಬ್ರೆಡ್ಡಿನ ಬಂಡಲ್ ಒಂದನ್ನು ಕೊಟ್ಟು ಸ್ವಲ್ಪವೇ ಉಳಿದಿದ್ದ ಹಾಲಿನಲ್ಲಿ ಚಹಾ ಮಾಡಿ ಬ್ರೆಡ್ಡಿನೊಂದಿಗೆ ತಿನಿಸಿ ಕಳಿಸಿದ. ಆ ರಾತ್ರಿ ತನಗೆ ವಿಚಾರವೊಂದು ಹೊಳೆಯಿತು. ತಾನು ರಾತ್ರಿಯೀಡಿ ಮಾತ್ರ ಅಂಗಡಿ ತೆಗೆದು ಏನೋ ಒಂದು ತಿಂಡಿ ಮತ್ತು ಚಹಾ ಮಾಡಿದ್ರೆ ಹೇಗೆ ಎಂಬ ವಿಚಾರ ಸುಳಿದು ಮಾಯವಾಯಿತು. ತಾನು ರಾತ್ರಿಯಾದರೂ ಮನೆಯಲ್ಲಿ ಯಾರನ್ನು ಕಾಯಬೇಕಾಗಿರುವುದು? ಹಗಲು ಮಲಗಿದರೆ ತನ್ನನ್ನು ಕೇಳುವರಾರು? ಎಂಬ ವಿಚಾರಗಳೆಲ್ಲ ಬಂದವು ಹೋದವು. ಬೆಳಗ್ಗೆ ಎದ್ದವನೇ ಇನ್ನು ಮುಂದೆ ರಾತ್ರಿ ಮಾತ್ರ ತನ್ನಂಗಡಿ ಎಂದು ನಿರ್ಧರಿಸಿದ. ರಾತ್ರಿ ಉಪ್ಪಿಟ್ಟನ್ನು ಮತ್ತು ಚಹಾ ಮಾತ್ರ ಮಾಡುವುದಾಗಿ ಮನಸ್ಸಿನಲ್ಲಿ ನಿರ್ಧರಿಸಿ ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡ. ಅಂಗಡಿ ಹೊರಗಡೆ ಸಣ್ಣ ಲೈಟೊಂದನ್ನು ಇಳಿಬಿಟ್ಟ. ಮಧ್ಯಾಹ್ನದೊಳಗೆ ಎಲ್ಲ ರೆಡಿಮಾಡಿಟ್ಟು ರಾತ್ರಿ ಪೂರ ಎಚ್ಚರವಾಗಿರಬೇಕಾಗುವುದರಿಂದ ಸ್ವಲ್ಪ ಹೊತ್ತು ನಿದ್ದೆ ತೆಗೆದ. ಅಂದಿನಿಂದ ಅಂಗಡಿ ತಡಸಂಜೆಗೆ ಪ್ರಾರಂಭವಾಯ್ತು. ಮೆಲ್ಲಗೆ ರಾತ್ರಿ ೧೦ ರ ನಂತರ ಸುತ್ತಲ ಅಂಗಡಿ ಮುಂಗಟ್ಟುಗಳು ಬಂದ್ ಆದವು, ರಾಚಪ್ಪನ ಅಂಗಡಿಯೊಂದು ಬಿಟ್ಟು ಆ ಚಿಕ್ಕ ಊರಿನ ಬಸ್ ಸ್ಟ್ಯಾಂಡಿನ ಸರ್ಕಲ್ ನಲ್ಲಿ ಬೇರೆ ಯಾವ ಅಂಗಡಿಯೂ ತೆಗೆದಿರಲಿಲ್ಲ. ರಾಚಪ್ಪನಿಗೆ ಕ್ರಮೇಣ ರಾತ್ರಿಯ ವ್ಯಾಪಾರ ಕೈಹತ್ತತೊಡಗಿತು. ರಾತ್ರಿ ಏನೂ ಸಿಗದಿದ್ದರೂ ರಾಚಪ್ಪನ ‘ನೈಟ್ ಉಪ್ಪಿಟ್’ ಸಿಗುವುದು ಜನರಿಗೆ ಖಾತ್ರಿಯಾಯಿತು. ತಡರಾತ್ರಿವರೆಗೆ ಬಾರ್ ಎಡತಾಕುವವರಿಗೆ ರಾಚಪ್ಪ ಅನ್ನ (ಉಪ್ಪಿಟ್ಟು)ದಾತನಾದ. ಸಾಹೀಲ್ ಬಾರ್ ನ ಗಿರಾಕಿಗಳು, ಬಸ್ ತಪ್ಪಿಸಿಕೊಂಡವರು, ಬಸ್ ಗಾಗಿ ಕಾಯುತ್ತಿರುವವರು, ಜೂಜುಅಡ್ಡೆಯಲ್ಲಿ ಎಲ್ಲ ಕಳೆದುಕೊಂಡು ಸರಹೊತ್ತಲ್ಲಿ ಚಿಲ್ಲರೆ ಕಾಸಷ್ಟೇ ಇಟ್ಟುಕೊಂಡು ನಿಂತವರು, ಇದ್ದ ಒಂದು ಥೀಯೆಟರ್ ನಲ್ಲಿ ಸೆಕೆಂಡ್ ಶೋ ನೋಡಿ ಮನೆಗೆ ಹೋಗುತ್ತಿರುವವರು, ವಯಸ್ಸಾದ ಸರಸಮ್ಮನ ಮನೆಯಲ್ಲಿ ಹಲವರೊಂದಿಗೆ ಲಲನೆಗೈದು ವಾಪಸಾಗುತ್ತಿರುವ ವಿಟರು, ಅವರು, ಇವರು ಹೀಗೆ ಎಲ್ಲರಿಗೂ ನೈಟ್ ಉಪ್ಪಿಟ್ ರಾಚಪ್ಪ ಅನಿವಾರ್ಯವಾಗಿ ಹೋದ. ಹೀಗೆ ದಿನಗಳು ಕಳೆದವು.
ರಾಚಪ್ಪ ರಾತ್ರಿ ಪೂರ ಎಚ್ಚರವಾಗಿರಬೇಕಾಯಿತು. ಹಗಲು ನಿದ್ರೆ ರೂಢಿಯಾಯ್ತು. ಮೊದಮೊದಲು ಕಷ್ಟವೆನಿಸಿದರೂ ಕೈಯಲ್ಲಿ ದುಡ್ಡು ಆಡತೊಡಗಿದಾಗ ಎಲ್ಲ ಕಷ್ಟಗಳೂ ಮಾಯವಾದವು. ಆರೋಗ್ಯ ಕೊಂಚ ಸುಧಾರಿಸಿದಂತೆ ಕಂಡುಬಂತು. ಕುಡಿತ ತನ್ನಿಂದ ತಾನೇ ಮೆಲ್ಲನೆ ಮಾಯವಾಯ್ತು. ರಾಚಪ್ಪ ಸ್ವಲ್ಪ ಚೇತರಿಸಿಕೊಂಡ. 
ಒಂದು ದಿನ ರಾಚಪ್ಪನಿಗೆ ದೂರದ ಊರಿಂದ ತನ್ನ ತಮ್ಮನ ಮಗ ತೀರಿಹೋದ ಸುದ್ದಿ ಬಂತು. ಕೂಡಲೇ ಅಂಗಡಿಯನ್ನು ಮುಚ್ಚಿ ರಾಚಪ್ಪ ದೂರದ ಪಡಗಾನೂರಿಗೆ ಹೊರಟು ನಿಂತ. ಅಂದು ರಾತ್ರಿ ಏನೂ ತಿನ್ನದೇ ಒಂದು ಜೊತೆ ಬಟ್ಟೆಗಳನ್ನು ಚೀಲದಲ್ಲಿ ತುಂಬಿಕೊಂಡು  ಹೊರಟ. ಡೈರೆಕ್ಟ್ ಬಸ್ ಸೌಲಭ್ಯ ಇರದ ಕಾರಣ ಬಸ್ಸುಗಳನ್ನು ಬದಲಾಯಿಸಬೇಕಾಯ್ತು. ಕೊನೆಗೆ ಯಾಕೋ ತುಂಬಾ ಸುಸ್ತಾಗತೊಡಗಿತು ರಾಚಪ್ಪನಿಗೆ. ಇತ್ತೀಚೀಗೆ ಮೈಬೆವರುವುದು, ಸುಸ್ತೆನಿಸುವುದು ಆಗಾಗ್ಗೆ ಕಾಣಿಸಿಕೊಂಡರೂ ಕೆಲಸ ಹೆಚ್ಚಾಗಿ ಸಹಜವಾಗಿ ಸುಸ್ತು ಆಗುತ್ತಿರಬೇಕು ಎಂದುಕೊಂಡು ಅಸಡ್ಡೆ ಮಾಡತೊಡಗಿದ್ದ. ಆದರೆ ಸಕ್ಕರೆ ಖಾಯಿಲೆ ಉಲ್ಬಣಿಸಿದ್ದು ಅವನಿಗೆ ಅರಿವಾಗಲೇ ಇಲ್ಲ. ಸತತ ೮ ಘಂಟೆಗಳ ಪ್ರಯಾಣ ಅವನನ್ನ ಹೈರಾಣ ಮಾಡಿಹಾಕಿತ್ತು. ಮರುದಿನ ನಸುಕಿನ ಜಾವ ರಾಚಪ್ಪ ಹೊಳೆನೂರು ತಲುಪಿದ. ಬಸ್ ನಿಂದ ಇಳಿಯುವದಕ್ಕೂ ಅವನು ಪ್ರಯಾಸ ಪಡಬೇಕಾಯ್ತು. ಬಸ್ ನ ಡ್ರೈವರ್ ನು ರಾಚಪ್ಪನನ್ನು ತನ್ನ ಈ ಅವಸ್ಥೆಯಲ್ಲಿ ಒಬ್ಬಂಟಿ ಪ್ರಯಾಣ ಮಾಡಬಾರದೆಂದು ಕಾಳಜಿಪೂರಕ ತಾಕೀತು ಮಾಡಿದ. ಹೊಳೆನೂರ ಚಳಿ ಅವನನ್ನು ಕೊರೆಯುತ್ತಿತ್ತು. ಸರಿಸುಮಾರು ೭ ಘಂಟೆಗೆ ಪಡಗಾನೂರ ಬಸ್ಸು ಹೊಳೆನೂರ ಕ್ರಾಸ್ ಮೂಲಕ ಹಾದು ಹೋಗುತ್ತಿತ್ತು. ರಾಚಪ್ಪ ಹೊಳೆನೂರ ಕ್ರಾಸ್ ಗೆ ಇಳಿದದ್ದು ನಸುಕಿನ ೦೩.೩೦ಕ್ಕೆ. ನಿತ್ರಾಣವಾಗಿದ್ದ ರಾಚಪ್ಪ ತನ್ನ ಚೀಲದಲ್ಲಿ ತಂದಿದ್ದ ಅಂಗಿಯೊಂದನ್ನು ಹಾಕಿಕೊಂಡು ಬೆಚ್ಚಗಾಗುತ್ತದೇನೋ ಎಂದು ಭಾವಿಸಿದ, ಆದರೆ ಚಳಿ ಅವನನ್ನು ಕೊರೆಯದೇ ಬಿಡಲಿಲ್ಲ. ಕಣ್ಣಲ್ಲಿ ನೀರು ಸಣ್ಣಗೆ ಜಿನುಗಲು ಪ್ರಾರಂಭವಾದವು, ತನ್ನ ಮೇಲೆ ತನಗೆ ವಿಚಿತ್ರ ಸಿಟ್ಟು ಬರಲು ಪ್ರಾರಂಭವಾಯ್ತು. ತನ್ನನ್ನು ಜೋಪಾನಮಾಡುವವರೇ ಇಲ್ಲವಲ್ಲ ಎಂಬ ಕೊರಗು ಹೆಚ್ಚಾಗತೊಡಗಿತು. ತಾನು ಯಾಕಾದರೂ ಪಡಗಾನೂರಿಗೆ ಹೊರಟಿದ್ದೇನೋ ಎನ್ನಿಸಿಬಿಡ್ತು. ತನ್ನಿಂದ ಇನ್ನು ಒಂದು ಹೆಜ್ಜೆ ಮುಂದಿಡಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿ ಕ್ರಾಸ್ ನ ಬಳಿಯಿರುವ ಹಳೆಯ ಗುಡಿಯ ಹತ್ತಿರದ ಕಟ್ಟೆಯ ಮೇಲೆ ಮಲಗಿಬಿಟ್ಟ. ಮೈಕೈಎಲ್ಲ ಸೆಟೆದು ಸತ್ವವೆಲ್ಲ ಬತ್ತಿಹೊದಂತಾಗಿತ್ತು. ರಣ ಹಸಿವು ಅವನನ್ನು ಈ ಕೂಡಲೇ ಏನನ್ನಾದರೂ ತಿನ್ನುವಂತೆ ಪದೇ ಪದೇ ಬೇಡುತ್ತಿತ್ತು. ಅವನ ಸಕ್ಕರೆ ಕಾಯಿಲೆ ರಾಚಪ್ಪನನ್ನು ಈ ಅವಸ್ಥೆಗೆ ತಲುಪಿಸಿತ್ತು. ಗಂಟಲ ಪಸೆ ಸಂಪೂರ್ಣ ಆರಿಹೋಯ್ತು. ಕೊನೆಗೆ ನೀರಾದರೂ ಸಿಕ್ಕು ಸ್ವಲ್ಪ ಚೇತರಿಸುತ್ತೇನೇನೋ ಎಂದೆನಿಸಿ  ಏನಾದರೂ ಸಿಕ್ಕೀತು ಎಂಬ ಆಸೆಯಿಂದ ಆ ಜಾವದಲ್ಲಿ ಕಟ್ಟೆಯಿಂದ ಇಳಿಯಲು ಪ್ರಯತ್ನಿಸಿದ. ಆಗಲಿಲ್ಲ. ಕೊನೆಗೆ ಮಗ್ಗುಲು ಬದಲಿಸಲುಹೋಗಿ ಕಟ್ಟೆಯಿಂದ ಕೆಳಗೆ ಬಿದ್ದ. ಪಕ್ಕೆಲುಬು ಮುರಿಯಿತೇನೋ ಎಂಬಂತೆ ವೀಪರೀತ ನೋವು ಅವನನ್ನು ಕಾಡಿತು. ಸಂಭಾಳಿಸಿಕೊಂಡು ಎದ್ದು ಕ್ರಾಸ್ ಕಡೆ ತೆವಳುತ್ತಾ ನಡೆದ. 
ಕ್ರಾಸ್ ನಲ್ಲಿ ಒಂದು ಬಂದ್ ಆಗಿದ್ದ ಗೂಡಂಗಡಿ ಬಿಟ್ಟು ಮತ್ತೇನಿರಲಿಲ್ಲ. ಆ ಮುಂಜಾವಲ್ಲೂ ಅವನ ಕಣ್ಣು ಕತ್ತಲುಗಟ್ಟಿತು. ಧಕ್ಕನೇ ಕೆಳಗೆ ಕುಳಿತ. ಕಣ್ಣ ಮುಂದೆ ತಾನು ಇಟ್ಟ ಉಪ್ಪಿಟ್ಟಿನ ಅಂಗಡಿ, ಹೊತ್ತಲ್ಲದ ಹೊತ್ತಲ್ಲಿ ಬಂದವರಿಗೆ ಹಸಿವು ನೀಗಿಸಿದ್ದು, ವರ್ಷಗಟ್ಟಲೇ ಸರಹೊತ್ತುಗಳಲ್ಲಿ ತನ್ನ ನಿದ್ರೆ ಮರೆತು ಬಿಸಿಬಿಸಿ ಉಪ್ಪಿಟ್ಟು ತಯಾರಿಸಿ ಉಣಬಡಿಸಿದ್ದು ಕಣ್ಣ ಮುಂದೆ ಬಂದು ಹೋದವು. ಕೊರೆವ ಚಳಿಗಾಳಿ ರಾಚಪ್ಪನ ದೇಹವನ್ನು ಸೀಳುತ್ತಾ ಮುನ್ನಡೆಯುತ್ತಿತ್ತು. ಮುಂಜಾವಿನ ೭ರ ಬಸ್ಸು ೮ ಘಂಟೆಗೆ ಹೊಳೆನೂರ ಕ್ರಾಸ್ ಮೂಲಕ ಯಥಾ ಪ್ರಕಾರ ಹಾದು ಹೋಯ್ತು. 
———–
ಡಾ. ಅಶೋಕ ಪಾಟೀಲ
ಉಪನ್ಯಾಸಕರು, ಡಿ.ಜಿ.ಮೇಲ್ಮಾಳಗಿ ಆಯುರ್ವೇದ ಮಹಾವಿದ್ಯಾಲಯ, ಗದಗ    
೯೯೭೨೫೮೩೯೫೪
Please follow and like us:
error

Related posts

Leave a Comment