ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ – ಡಾ. ಸುರೇಶ್ ಇಟ್ನಾಳ್

 ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.  ತಪ್ಪಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
  ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಏರ್ಪಡಿಸಲಾಗಿದ್ದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.  ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು.  ಯಾವುದೇ ಕಾರ್ಯಕ್ರಮ ನಡೆಸುವುದು, ರಾಜಕೀಯ ಪ್ರಮುಖರ ಬಹಿರಂಗ ಸಭೆ ಏರ್ಪಡಿಸುವುದಕ್ಕೆ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಯಾವುದೇ ಫ್ಲೆಕ್ಸ್ ಅಳವಡಿಕೆ, ಸಭೆ, ಸಮಾರಂಭಗಳಿಗೆ ಅನುಮತಿ, ವಾಹನಗಳ ಬಳಕೆ ಇತ್ಯಾದಿಗಳಿಗೆ  ಅನುಮತಿ ಪಡೆಯಲು ಏಕಗವಾಕ್ಷಿ ವ್ಯವಸ್ಥೆ ಅಂದರೆ ನಗರಸಭೆ/ಪೊಲೀಸ್/ಅಗ್ನಿಶಾಮಕ ಮುಂತಾದ ಅನುಮತಿಗೆ ಒಂದೇ ಕಡೆ ಅರ್ಜಿ ಸಲ್ಲಿಸಿ  ಅನುಮತಿ ಪಡೆಯಲು ಅನುಕೂಲ ಮಾಡಿಕೊಡಲಾಗುವುದು.  ಈ ಬಾರಿ ಪ್ರತಿ ಅಭ್ಯರ್ಥಿಗೆ ಚುನಾವಣಾ ವೆಚ್ಚ ಮಿತಿಯನ್ನು ೭೦ ಲಕ್ಷ ರೂ.ಗಳಗೆ ಹೆಚ್ಚಿಸಲಾಗಿದೆ.  ಚುನಾವಣೆಗಾಗಿ ಈಗಾಗಲೆ ವಿದ್ಯುನ್ಮಾನ ಮತಯಂತ್ರಗಳ ಮೊದಲ ಹಂತದ ಪರಿಶೀಲನೆ ಕಾರ್ಯ ಪೂರ್ಣಗೊಂಡಿದ್ದು, ಇದಕ್ಕಾಗಿ ೧೭೨೦ ಬ್ಯಾಲೆಟ್ ಯುನಿಟ್ ಹಾಗೂ ೧೩೫೦ ಕಂಟ್ರೋಲ್ ಯುನಿಟ್‌ಗಳನ್ನು ಸಿದ್ಧ ಮಾಡಿಟ್ಟುಕೊಳ್ಳಲಾಗಿದೆ.  ಚುನಾವಣಾ ಆಯೋಗದ ಸೂಚನೆಯಂತೆ ಈ ಬಾರಿ ರಾಜಕೀಯ ಪಕ್ಷ/ಅಭ್ಯರ್ಥಿಗಳು ಪ್ರತಿ ೦೩ ದಿನ ದಿನಗಳಿಗೊಮ್ಮೆ ಚುನಾವಣಾ ವೆಚ್ಚದ ವಿವರವನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.  ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ಠೇವಣಿ ಮೊತ್ತವನ್ನು ೨೫೦೦೦ ರೂ. ಗಳಿಗೆ ನಿಗದಿಪಡಿಸಲಾಗಿದೆ.
ಹೆಸರು ಸೇರ್ಪಡೆಗೆ ಮಾ. ೧೬ ರವರೆಗೆ ಅವಕಾಶ : ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಮಾ. ೧೬ ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ೧೮ ವರ್ಷ ಮೇಲ್ಪಟ್ಟ ಅರ್ಹರು ಆಯಾ ಮತಗಟ್ಟೆಯಲ್ಲಿನ ಬೂತ್ ಮಟ್ಟದ ಅಧಿಕಾರಿಗಳಿಂದ ನಮೂನೆ-೬ ಅನ್ನು ಭರ್ತಿ ಮಾಡಿ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬೇಕು. ಈಗಾಗಲೆ ಆಯಾ ಮತಗಟ್ಟೆ ಅಧಿಕಾರಿಗಳಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಮತದಾರರ ಪಟ್ಟಿಯನ್ನು ವಿತರಿಸಲಾಗಿದ್ದು, ಆಯಾ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಹಾಗೂ ಫೋಟೋ ಇರುವುದನ್ನು ಪರಿಶೀಲಿಸಿಕೊಂಡು ಖಾತ್ರಿಪಡಿಸಿಕೊಳ್ಳಬೇಕು.  ಒಂದು ವೇಳೆ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದಲ್ಲಿ ಅಥವಾ ಡಿಲೀಟ್ ಆಗಿದ್ದಲ್ಲಿ, ಅಂತಹವರು ಪುನಃ ಸೂಕ್ತ ದಾಖಲೆಗಳೊಂದಿಗೆ ನಮೂನೆ-೬ ಅನ್ನು ಭರ್ತಿ ಮಾಡಿ, ಹೆಸರು ಸೇರ್ಪಡೆಗೊಳಿಸಬಹುದಾಗಿದೆ. ಮಾ. ೦೯ ರಂದು ನಡೆಸಿದ ಮತದಾರರ ನೋಂದಣಿ ಅಭಿಯಾನದಲ್ಲಿ ಜಿಲ್ಲೆಯಲ್ಲಿ ೨೭೨೫ ಜನ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದ್ದಾರೆ ಎಂದರು.
ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಭ್ಯರ್ಥಿ ಅಥವಾ ರಾಜಕೀಯ ಪಕ್ಷಗಳು ಜಾತಿ, ಧರ್ಮ, ಮತಭೇದ ಉಂಟು ಮಾಡುವಂತಹ ಭಾಷಣ ಮಾಡುವಂತಿಲ್ಲ ಅಲ್ಲದೆ ವಯಕ್ತಿಕ ನಿಂದನೆ ಅಥವಾ ಹೇಳಿಕೆ ನೀಡುವಂತಿಲ್ಲ.  ಸಮುದಾಯ ಅಥವಾ ಜಾತಿ ಆಧಾರವನ್ನಾಗಿಸಿ ಮತ ಯಾಚಿಸುವಂತಿಲ್ಲ.  ಅಭ್ಯರ್ಥಿಗಳು ತಮ್ಮ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್, ಯುಟ್ಯೂಬ್, ಇ-ಮೇಲ್ ಐಡಿ ಗಳ ವಿವರವನ್ನು ಸಹ ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಬೇಕು.  ಪ್ರಚಾರ ಸಂದರ್ಭದಲ್ಲಿ ಬೆಳಿಗ್ಗೆ ೦೬ ಗಂಟೆಯಿಂದ ರಾತ್ರಿ ೧೦ ಗಂಟೆಯವರೆಗೆ ಮಾತ್ರ ಮೈಕ್ ಬಳಸಲು ಅನುಮತಿ ನೀಡಲಾಗುವುದು.  ಕೇಬಲ್ ಹಾಗೂ ಇತರೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಯಾವುದೇ ಜಾಹೀರಾತನ್ನು ನೇರವಾಗಿ ಪ್ರಕಟಿಸುವುದು ಅಥವಾ ಪ್ರಸಾರ ಮಾಡಲು ಅವಕಾಶವಿಲ್ಲ.  ವಿದ್ಯುನ್ಮಾನ ಮಾಧ್ಯಮ ಅಂದರೆ ಕೇಬಲ್ ನೆಟ್‌ವರ್ಕ್, ವಾಯ್ಸ್ ಕಾಲ್, ಗುಂಪು ಎಸ್‌ಎಂಎಸ್ ಈ ರೀತಿಯ ಯಾವುದೇ ಜಾಹೀರಾತು/ಪ್ರಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸಮಿತಿಯಿಂದ ಕ್ಲಿಯರೆನ್ಸ್ ಪ್ರಮಾಣ ಪತ್ರ ಪಡೆದು ಪ್ರಸಾರಗೊಳಿಸಬಹುದಾಗಿದೆ.  ಇದನ್ನು ಉಲ್ಲಂಘಿಸುವ ಪಕ್ಷ/ಅಭ್ಯರ್ಥಿ/ಕೇಬಲ್ ನೆಟ್‌ವರ್ಕ್ ಅವರ ವಿರುದ್ಧ ನೀತಿಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು.  ಚುನಾವಣಾ ಪ್ರಚಾರಕ್ಕಾಗಿ ಯಾವುದೇ ಧಾರ್ಮಿಕ ಸ್ಥಳ, ಮಸೀದಿ, ಮಂದಿರಗಳನ್ನು ಬಳಸುವಂತಿಲ್ಲ ಎಂದರು.
ನೀತಿ ಸಂಹಿತೆ ನಿಗಾ ತಂಡ : ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ಉದ್ದೇಶದಿಂದ ನೀತಿ ಸಂಹಿತೆ ಪಾಲನೆಯ ಬಗ್ಗೆ ನಿಗಾ ವಹಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೦೩  ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೦೪ ಫ್ಲೈಯಿಂಗ್ ಸ್ಕ್ವಾಡ್, ಅಕ್ರಮ ಮದ್ಯ ಸಾಗಾಣಿಕೆ ಮತ್ತು ವಿತರಣೆ ಕುರಿತು ನಿಗಾ ವಹಿಸಲು ಅಬಕಾರಿ ನಿಯಂತ್ರಣ ತಂಡವನ್ನು ರಚಿಸಿ, ಅಧಿಕಾರಿಗಳನ್ನು ನೇಮಿಸಲಾಗಿದೆ.    ಪ್ರತಿ ಪ್ರಮುಖ ಅಭ್ಯರ್ಥಿಗೆ ವಿಡಿಯೋ ಕವರೇಜ್ ತಂಡವನ್ನು ಸಹ ನಿಯೋಜಿಸಲಾಗುತ್ತಿದೆ.  ಅಲ್ಲದೆ ಈ ರೀತಿ ಚಿತ್ರೀಕರಣ ನಡೆಸಿದ ವಿಡಿಯೋ ದೃಶ್ಯಾವಳಿಗಳನ್ನು ವೀಕ್ಷಿಸಲು ವಿಡಿಯೋ ವೀಕ್ಷಣೆ ತಂಡ ಮತ್ತು ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ಪತ್ತೆ ಹಚ್ಚಲು ವಿಡಿಯೋ ಸರ್ವೆಲೆನ್ಸ್ ತಂಡಗಳನ್ನು  ಪ್ರತ್ಯೇಕವಾಗಿ ರಚಿಸಲಾಗಿದೆ.  ಚುನಾವಣಾ ವೆಚ್ಚ ಪರಿಶೀಲನೆ, ಲೆಕ್ಕಾಚಾರಗಳ ನಿರ್ವಹಣೆಗೆ ಪ್ರತ್ಯೇಕ ತಂಡ ನೇಮಕ ಮಾಡಲಾಗಿದ್ದು, ಯಾವುದೇ ಚುನಾವಣಾ ಅಕ್ರಮ ನಡೆಸಲು ಅವಕಾಶ ಇರುವುದಿಲ್ಲ.  ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ, ಚುನಾವಣೆಯನ್ನು ಶಾಂತಿಯುತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು  ಎಂದರು.
  ಸಭೆಯಲ್ಲಿ  ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ರಾಜು ಬಾಕಳೆ, ಅಕ್ಬರ್ ಪಾಷಾ ಪಲ್ಟನ್, ಕೆ.ರವೀಂದ್ರರಾವ್, ಎಸ್.ಪಿ. ಹಿರೇಮಠ, ನಾಸೀರುದ್ದೀನ್, ಅಂದಪ್ಪ ಮುಂತಾದವರು ಭಾಗವಹಿಸಿದ್ದರು.

Leave a Reply