ಮಕ್ಕಳ ಪ್ರತಿಭೆ ಅನಾವರಣಕ್ಕೆ ಪಾಲಕರ ಪ್ರೋತ್ಸಾಹ ಅಗತ್ಯ- ಶಂಭುಲಿಂಗನಗೌಡ


ಕೊಪ್ಪಳ. ಜು. : ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಪಾಲಕರು, ಶಿಕ್ಷಕರ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಶಂಭುಲಿಂಗನಗೌಡ ಹಲಗೇರಿ ಅವರು ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜು. ೧೫ ಮತ್ತು ೧೬ ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಕಲಾ ಪ್ರತಿಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಕ್ರವಾರ ಅವರು ಮಾತನಾಡುತ್ತಿದ್ದರು.
ಮಕ್ಕಳಲ್ಲಿ ಅಡಗಿರುವ ಹಲವು ಬಗೆಯ ಪ್ರತಿಭೆಯನ್ನು ಹೊರತರುವಂತಹ ಕಾರ್ಯವಾಗಬೇಕು. ಮಕ್ಕಳು ಯಾವು ಕಲೆಯಲ್ಲಿ ಆಸಕ್ತಿ ಹೊಂದಿವೆ ಎಂಬುದನ್ನು ಗಮನಿಸಿಕೊಂಡು, ಪಾಲಕರು, ಶಿಕ್ಷಕರು ಅದಕ್ಕೆ ಪ್ರೋತ್ಸಾಹ ನೀಡುವಂತಾಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಬರೀ ಡಾಕ್ಟರ್, ಇಂಜಿನಿಯರ್ ಆಗಬೇಕೆಂದು ಬಯಸುವ ಪಾಲಕರೇ ಹೆಚ್ಚು, ಮಕ್ಕಳ ಕಲೆಗೆ ಪ್ರೋತ್ಸಾಹ ನೀಡುವ ಪಾಲಕರ ಸಂಖ್ಯೆ ಬಹು ವಿರಳ. ಮಕ್ಕಳ ಕಲೆಗೆ ಪ್ರೋತ್ಸಾಹ ನೀಡಿ, ಅದರ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಕಲ್ಪಿಸಿದಲ್ಲಿ, ಮಕ್ಕಳಿಗೆ ಇನ್ನಷ್ಟು ಉತ್ಸಾಹ ಮೂಡಿ, ಕಲಾ ಸಾಮರ್ಥ್ಯ ಇಮ್ಮಡಿಗೊಳ್ಳಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮಕ್ಕಳ ಕಲಾ ಪ್ರದರ್ಶನಕ್ಕೆ ಈ ಕಾರ್ಯಕ್ರಮದ ಮೂಲಕ ವೇದಿಕೆ ಕಲ್ಪಿಸಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್ ಅವರು, ಉತ್ತರ ಕರ್ನಾಟಕದ ಮಕ್ಕಳು ಸಂಗೀತ, ಸಾಹಿತ್ಯ ಹಾಗೂ ವಿವಿಧ ಕಲಾ ಪ್ರಕಾರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಸಂತಸಕರ ಸಂಗತಿಯಾಗಿದೆ. ಸಂಗೀತದಲ್ಲಿ ಈ ಭಾಗದ ಮಕ್ಕಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಮನಸ್ಸಿಗೆ ಚೇತೋಹಾರಿ ಅನುಭವನ ನೀಡುವಂತಹ ಶಕ್ತಿ ಸಂಗೀತಕ್ಕಿದೆ, ಕೇವಲ ಮನಷ್ಯನಿಗಷ್ಟೇ ಅಲ್ಲ ಪ್ರಾಣಿ, ಪಕ್ಷಿಗಳ ಮೇಲೂ ಸಂಗೀತ ಉತ್ತಮ ಪರಿಣಾಮ ಬೀರುತ್ತದೆ ಎಂಬುದನ್ನು ವೈಜ್ಞಾನಿಕ ಸಂಶೋಧನೆಗಳು ದೃಢಪಡಿಸಿವೆ. ಮಕ್ಕಳು ಕೇವಲ ವ್ಯಾಸಂಗಕ್ಕೆ ಅಷ್ಟೇ ಮಹತ್ವವನ್ನು ನೀಡದೆ, ಸಂಗೀತ, ಕಲೆಗಳ ಕಡೆಗೂ ಆಸಕ್ತಿ ಮೂಡಿಸಿಕೊಳ್ಳಬೇಕು. ಇದು ಉತ್ತಮ ಶಿಕ್ಷಣಕ್ಕೆ ಪೂರಕವಾಗಲಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ ಅವರು ಸ್ವಾಗತಿಸಿದ ನಂತರ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿನ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರತಿ ವರ್ಷ ಕಲಾ ಪ್ರತಿಭೋತ್ಸವ ಕಾರ್ಯಕ್ರಮವನ್ನು ಏರ್ಪಡಿಸುತ್ತಿದೆ. ಭವಿಷ್ಯದ ಕಲಾ ಸಾಧಕರನ್ನು ಈ ವೇದಿಕೆಯಲ್ಲಿ ಕಾಣಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ರಾವ್ ಬಿ.ವಿ., ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ತಾಲೂಕು ಘಟಕದ ಅಧ್ಯಕ್ಷ ಜಿ.ಎಸ್. ಗೋನಾಳ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜೇಂದ್ರ ಬಾಬು ಕಾರ್ಯಕ್ರಮ ನಿರೂಪಿಸಿದರು. ಕಲಾ ಪ್ರತಿಭೋತ್ಸವ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಚಿತ್ರಕಲೆ, ಸಂಗೀತ, ಏಕಪಾತ್ರಾಭಿನಯ, ನೃತ್ಯ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
Please follow and like us:
error