ನಿಡುಮಾಮಿಡಿ ಸ್ವಾಮೀಜಿ ಬಹಿರಂಗ ಚರ್ಚೆಗೆ ಬರಲಿ’

ಬಾಗಲಕೋಟೆ: `ನಿಡುಮಾಮಿಡಿ ಸ್ವಾಮೀಜಿ ನನ್ನ ಬಗ್ಗೆ ಟೀಕೆ ಮಾಡುವ ಮೊದಲು ಬಹಿರಂಗ ಚರ್ಚೆಗೆ ಬರಬೇಕು` ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಬಹಿರಂಗ ಸವಾಲು ಹಾಕಿದರು.
ನಗರದ ದಲಿತರ ಕೇರಿಗಳು ಮತ್ತು ಕೊಳಗೇರಿಗಳಲ್ಲಿ ಗುರುವಾರ ವಿವಿಧ ಮಠಾಧೀಶರೊಂದಿಗೆ ಪಾದಯಾತ್ರೆ ನಡೆಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
`ನಿಡುಮಾಮಿಡಿ ಸ್ವಾಮೀಜಿ ಟೀಕೆ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಅದನ್ನು ಬಿಟ್ಟು ಬಹಿರಂಗ ಚರ್ಚೆಗೆ ಬರಲಿ. ಅವರ ಪ್ರಶ್ನೆಗೆ ತಕ್ಕ ಉತ್ತರ ನೀಡಲಾಗುವುದು. ಯಾರ ಬಗ್ಗೆಯೂ ಸಂಪೂರ್ಣವಾಗಿ ತಿಳಿಯದೇ ಟೀಕೆ ಮಾಡುವುದನ್ನು ಅವರು ಬಿಡಬೇಕು. 
ಕುಕ್ಕೆ ಸುಬ್ರಮಣ್ಯ ಕ್ಷೇತ್ರದಲ್ಲಿ ಮಡೆ ಮಡೆಸ್ನಾನ ನಿಷೇಧಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೂ ಈ ವಿಷಯದಲ್ಲಿ ಕೆಲವರು ಅನಾವಶ್ಯಕವಾಗಿ ನಮ್ಮ ಹೆಸರು ಎಳೆದು ತರುತ್ತಿದ್ದಾರೆ` ಎಂದು ಅಸಮಾಧಾನ ವ್ಯಕ್ತಪಡಿಸಿದರು.
`ದಲಿತರಿಗೂ ಮಡೆ ಮಡೆಸ್ನಾನಕ್ಕೂ ಯಾವುದೇ ಸಂಬಂಧವಿಲ್ಲ. ಈ ಪದ್ಧತಿ ಹಲವು ವರ್ಷಗಳಿಂದ ನಡೆಯುತ್ತ ಬಂದಿದೆ. ಅಲ್ಲದೇ ಕುಕ್ಕೆಸುಬ್ರಮಣ್ಯ ಕ್ಷೇತ್ರ ನಮ್ಮ ಮಠದ ವ್ಯಾಪ್ತಿಯಲ್ಲಿಲ್ಲ. ಅದು ಮುಜರಾಯಿ ಇಲಾಖೆಯ ಅಧೀನದಲ್ಲಿದೆ. 
ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೇ ಮಡೆ ಮಡೆಸ್ನಾನ ಕುರಿತು ಕ್ರಮ ಕೈಗೊಳ್ಳಬಹುದು. ಇದಕ್ಕೆ ನಮ್ಮ ಯಾವುದೇ ವಿರೋಧ- ತಕರಾರು ಇಲ್ಲ.
ಹಿಂದೂ ಧರ್ಮ ರಕ್ಷಣೆ, ಅಸ್ಪೃಶ್ಯತೆ  ನಿವಾರಣೆ ಮತ್ತು ಮತಾಂತರ ತಡೆಗಾಗಿ ನಿಡುಮಾಮಿಡಿ ಸ್ವಾಮೀಜಿ ಅವರನ್ನು ಹೊರತುಪಡಿಸಿ ಎಲ್ಲ ಸಾಮೀಜಿಗಳು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ` ಎಂದು ಹೇಳಿದರು.
ಇಂತಹ ಆಚರಣೆಗಳು ಎಲ್ಲ ಧರ್ಮದಲ್ಲೂ ಇವೆ. 

ಆದರೆ ಹಿಂದೂಗಳು ಆಚರಿಸುವ ಪದ್ಧತಿಗಳ ಮೇಲೆ ಏಕೆ ಕೆಲವರ ಕಣ್ಣು. ಮುಸ್ಲಿಮರು ಇಫ್ತಾರ್ ಕೂಟದಲ್ಲಿ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಾರೆ. ಅದೂ ಎಂಜಲು ಅಲ್ಲವೇ. ಕ್ರೈಸ್ತ ಧರ್ಮಿಯರಲ್ಲೂ ಇಂತಹ ಪದ್ಧತಿಗಳಿವೆ.
ಆದರೆ ಅವುಗಳ ಬಗ್ಗೆ ಮಾತನಾಡದೇ ಹಿಂದೂ ಧರ್ಮದ ಜನರು ತಮ್ಮ ಸ್ವಯಂ ಪ್ರೇರಣೆಯಿಂದ ಆಚರಿಸುವ ಪದ್ಧತಿಗಳ ವಿರುದ್ಧ ಹೇಳಿಕೆ ನೀಡುವುದು ಸೂಕ್ತವೇ ಎಂದು ಪೇಜಾವರ ಸ್ವಾಮೀಜಿ ಪ್ರಶ್ನಿಸಿದರು
Please follow and like us:
error