ರಾಮುಲುಗೆ ಪ್ರಬಲ ಸೆಡ್ಡು ಬಿಜೆಪಿಯಿಂದ ಗಾದಿ ಲಿಂಗಪ್ಪ

ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲು ಮುಖಂಡರು ನಡೆಸಿದ ಕಸರತ್ತು ವಿಫಲವಾಗಿದೆ.ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಥಳೀಯ ಮುಖಂಡ ಪಿ.ಗಾದಿ ಲಿಂಗಪ್ಪ ಅವರನ್ನು ಕಣಕ್ಕೆ ಇಳಿಸಲು ಪಕ್ಷ ತಡರಾತ್ರಿ ನಿರ್ಧರಿಸಿದೆ.
ಅಚ್ಚರಿಯ ರಾಜಕೀಯ ಬೆಳವಣಿಗೆಯಲ್ಲಿ ಶ್ರೀರಾಮುಲು ಅವರನ್ನೇ ಬಿಜೆಪಿ ಅಭ್ಯರ್ಥಿ ಮಾಡಲು ಗುರುವಾರ ಇಡೀ ದಿನ ಪಕ್ಷದ ಮುಖಂಡರು ಕಸರತ್ತು ನಡೆಸಿದರು.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ರಾಮುಲು ಅವರನ್ನು ಬಳ್ಳಾರಿಯಿಂದ ಕರೆಸಿಕೊಂಡು ನಗರದ ಪಂಚತಾರಾ ಹೋಟೆಲ್‌ನಲ್ಲಿ ಮಾತುಕತೆ ನಡೆಸಿದರು.
ಎಷ್ಟೇ ಮನವೊಲಿಸಿದರೂ ಶ್ರೀರಾಮುಲು ಒಪ್ಪಲಿಲ್ಲ.ನಿಲುವು ಸಡಿಲಿಸಲಿಲ್ಲ. ಬೇಸತ್ತ ಮುಖಂಡರು ಪ್ರಯತ್ನವನ್ನು ಕೈಬಿಟ್ಟು ಬದಲಿ ಅಭ್ಯರ್ಥಿಯ ಆಯ್ಕೆಗೆ ಮುಂದಾದರು.ರಾತ್ರಿ 11ರ ವೇಳೆಗೆ ಗಾದಿ ಲಿಂಗಪ್ಪ ಅವರನ್ನು ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಿದರು.
ನಾಮಪತ್ರ ಸಲ್ಲಿಕೆಗೆ ಶುಕ್ರವಾರ ಕೊನೆಯ ದಿನ.ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ,ಮುಖಂಡರಾದ ಯಡಿಯೂರಪ್ಪ,ಈಶ್ವರಪ್ಪ ಮತ್ತಿತರ ಮುಖಂಡರು ಬಳ್ಳಾರಿ ತೆರಳಿ ನಾಮಪತ್ರ ಸಲ್ಲಿಕೆಗೆ ಸಾಥ್ ನೀಡಲಿದ್ದಾರೆ.
ಬಿಜೆಪಿಗೆ ಸೆಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಶ್ರೀರಾಮುಲು ಅವರನ್ನೇ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕು.ಸರ್ಕಾರಕ್ಕೆ ಮುಂದೆ ಒದಗಬಹುದಾದ ಗಂಡಾಂತರವನ್ನು ಈ ಮೂಲಕ ತಪ್ಪಿಸಬೇಕು ಎಂಬುದು ಬಿಜೆಪಿ ಮುಖಂಡರ ಉದ್ದೇಶವಾಗಿತ್ತು.ಆದರೆ ಶ್ರೀರಾಮುಲು ಇದಕ್ಕೆ ಸೊಪ್ಪು ಹಾಕಿಲ್ಲ ಎನ್ನಲಾಗಿದೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶ್ರೀರಾಮುಲು ಅವರನ್ನು ಸಂಪರ್ಕಿಸಿದಾಗ `ನಾನು ಬೆಂಗಳೂರಿಗೆ ಬಂದೇ ಇಲ್ಲ.ಬಿಜೆಪಿ ಮುಖಂಡರನ್ನೂ ಭೇಟಿ ಮಾಡಿಲ್ಲ. ಬಿಜೆಪಿ ಸಹವಾಸವೇ ಬೇಡ.ಪಕ್ಷೇತರ ಅಭ್ಯರ್ಥಿಯಾಗಿಯೇ ಚುನಾವಣೆ ಎದುರಿಸುತ್ತೇನೆ` ಎಂದರು.
ಆದರೆ, ಮಾತುಕತೆ ನಡೆದಿದ್ದು ನಿಜ.ಆಗ  ರಾಮುಲು ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.`ಪಕ್ಷವನ್ನು ಅಧಿಕಾರಕ್ಕೆ ತರಲು ನಾವು ಬೇಕು. ಈಗ ನಾವ್ಯಾರೂ ಬೇಕಾಗಿಲ್ಲ.ಲೋಕಾಯುಕ್ತ ವರದಿಯನ್ನು ಮುಂದಿಟ್ಟುಕೊಂಡು ನಮ್ಮ ಭವಿಷ್ಯ ಹಾಳು ಮಾಡುತ್ತೀದ್ದೀರಿ`ಎಂದು ಆಕ್ಷೇಪಿಸಿದರು ಎನ್ನಲಾಗಿದೆ.
`ಕಷ್ಟದಲ್ಲಿರುವಾಗ ಕ್ಯಾರೇ ಅನ್ನಲಿಲ್ಲ.ನಮ್ಮ ನಾಯಕ ಜನಾರ್ದನ ರೆಡ್ಡಿ ಜೈಲಿಗೆ ಹೋದ ನಂತರ ನೀವು ಅವರ ಯೋಗಕ್ಷೇಮ ವಿಚಾರಿಸಲಿಲ್ಲ.ನಮ್ಮ ಕಷ್ಟ ಏನು ಎಂದು ಕೂಡ ಕೇಳಲಿಲ್ಲ.ಹೀಗಾಗಿ ನಿಮ್ಮ ಸಹವಾಸ ಬೇಡ`ಎಂದು ರಾಮುಲು ಕಡ್ಡಿ ತುಂಡು ಮಾಡಿದಂತೆ ಹೇಳಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ

Related posts

Leave a Comment