ವಸತಿ ಯೋಜನೆಗೆ ನಿರ್ಭೀತಿಯಿಂದ ಅರ್ಹ ಫಲಾನುಭವಿಗಳ ಆಯ್ಕೆಮಾಡಿ- ವಿ. ಸೋಮಣ್ಣ

  ಸೂರಿಲ್ಲದ ಬಡವರಿಗೆ ಮನೆಗಳನ್ನು ಒದಗಿಸುವ ಸರ್ಕಾರದ ವಿವಿಧ ವಸತಿ ಯೋಜನೆಗಳಿಗಾಗಿ ಯಾವುದೇ ಒತ್ತಡ, ಪ್ರಭಾವಕ್ಕೆ ಒಳಗಾಗದೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಹದಿನೈದು ದಿನಗಳ ಒಳಗಾಗಿ ಫಲಾನುಭವಿಗಳ ಪಟ್ಟಿ ಒದಗಿಸುವಂತೆ ರಾಜ್ಯ ವಸತಿ ಸಚಿವ ವಿ. ಸೋಮಣ್ಣ ಅವರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಜಿಲ್ಲೆಯಲ್ಲಿ ವಸತಿ ಯೋಜನೆಗಳ ಅನುಷ್ಠಾನ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಸೂರು ಇಲ್ಲದ ಬಡಜನರಿಗೆ ಮನೆಗಳನ್ನು ಕಟ್ಟಿಕೊಡುವ ಸಲುವಾಗಿ ಸರ್ಕಾರ ಹಲವಾರು ವಸತಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಗಳಡಿ ಸ್ಥಿತಿವಂತರು, ಸ್ವಂತ ಮನೆಗಳನ್ನು ಹೊಂದಿರುವವರನ್ನೂ ಸಹ ಫಲಾನುಭವಿಗಳನ್ನಾಗಿ ಆಯ್ಕೆ ಮಾಡುತ್ತಿರುವುದು ರಾಜ್ಯದ ಎಲ್ಲೆಡೆ ಕಂಡುಬರುತ್ತಿದೆ.  ಆದರೆ, ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತು ದೊರೆಯಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ.  ಆದರೆ ಹಲವರು ತಮ್ಮ ಪ್ರಭಾವ, ಒತ್ತಡ ತಂತ್ರಗಳನ್ನು ಬಳಸಿ, ಅನರ್ಹರೂ ಸಹ ಫಲಾನುಭವಿಗಳಾಗುತ್ತಿದ್ದಾರೆ.  ಒಂದೇ ಕುಟುಂಬದ ಹಲವು ಸದಸ್ಯರುಗಳು, ಬಂಧುಗಳ ಹೆಸರಿನಲ್ಲಿ ಮನೆಗಳನ್ನು ಪಡೆಯುತ್ತಿರುವುದು ಗಮನಕ್ಕೆ ಬಂದಿದೆ.  ಅಧಿಕಾರಿಗಳು ಯಾವುದೇ ಪ್ರಭಾವ, ರಾಜಕೀಯ ಒತ್ತಡಗಳಿಗೆ ಮಣಿಯದೆ, ನಿರ್ಭೀತಿಯಿಂದ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು.  ಕಡ್ಡಾಯವಾಗಿ ಗ್ರಾಮ ಸಭೆಗಳ ಮೂಲಕವೇ ಫಲಾನುಭವಿಗಳ ಆಯ್ಕೆಯಾಗುವಂತೆ ನೋಡಿಕೊಳ್ಳಬೇಕು.  ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯು ಪಾರದರ್ಶಕವಾಗಿ ಇರುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಗ್ರಾಮ ಸಭೆ ನಡೆಸಲು ಅವಕಾಶ ದೊರೆಯದಿದ್ದಲ್ಲಿ, ತಕ್ಷಣವೇ ತಾವೇ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿ, ಜಾಗೃತ ಸಮಿತಿಗೆ ನೇರವಾಗಿ ಪಟ್ಟಿಯನ್ನು ಸಲ್ಲಿಸಬೇಕು.  ಯಾವುದೇ ಶಾಸಕರು, ಜನಪ್ರತಿನಿಧಿಗಳು ಮನೆಗಾಗಿ ಯಾವುದೇ ವ್ಯಕ್ತಿಯ ಪರ ಶಿಫಾರಸ್ಸು ಸಲ್ಲಿಸಿದಲ್ಲಿ, ಆ ವ್ಯಕ್ತಿ ಫಲಾನುಭವಿಯಾಗಲು ಅರ್ಹನೋ, ಅನರ್ಹನೋ ಎಂಬುದನ್ನು ಪರಿಶೀಲಿಸಿ, ಅರ್ಹರಿದ್ದಲ್ಲಿ ಮಾತ್ರ ಸವಲತ್ತು ಒದಗಿಸಬೇಕು. ಹದಿನೈದು ದಿನಗಳ ಒಳಗಾಗಿ ಪುನಃ ಜಿಲ್ಲೆಗೆ ಭೇಟಿ ನೀಡಿ, ಪ್ರತಿ ತಾಲೂಕಿಗೂ ಖುದ್ದು ಭೇಟಿ ನೀಡಿ ವಸತಿ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲಾಗುವುದು ಎಂದರು.
  ರಾಜ್ಯ ಸರ್ಕಾರವೇ ಸಂಪೂರ್ಣ ಅನುದಾನ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯಾದ ಬಸವ ವಸತಿ ಯೋಜನೆಯಡಿ ರಾಜ್ಯದಲ್ಲಿ ೬. ೭೦ ಲಕ್ಷ ಮನೆಗಳಿಗೆ ಸರ್ಕಾರ ಮಂಜೂರಾತಿ ನೀಡಿದೆ.  ಅಧಿಕಾರಿಗಳು ಅರ್ಹ ಫಲಾನುಭವಿಗಳ ಆಯ್ಕೆಗೆ ಆದ್ಯತೆ ನೀಡಬೇಕು.  ಯಾವುದೇ ಅವ್ಯವಹಾರ ಕಂಡುಬಂದಲ್ಲಿ, ಮಾಹಿತಿ ನೀಡುವ ಸಲುವಾಗಿ ವಸತಿ ಇಲಾಖೆಯಲ್ಲಿ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ.  ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಪ್ರತಿಯೊಬ್ಬ ಫಲಾನುಭವಿಗಳ ಆಯ್ಕೆಯಲ್ಲಿ ಮೈಯೆಲ್ಲ ಕಣ್ಣಾಗಿಸಿಕೊಂಡು ಪಾರದರ್ಶಕವಾಗಿ ಆಯ್ಕೆ ಮಾಡಬೇಕು.  ಆಶ್ರಯ ವಸತಿ ಯೋಜನೆಯಡಿ ಪ್ರತಿ ತಾಲೂಕುವಾರು ಅಗತ್ಯವಿರುವ ಅನುದಾನದ ಬಗ್ಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ, ತಕ್ಷಣವೇ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು.  ನನ್ನ ಮನೆ ನನ್ನ ಸ್ವತ್ತು ಯೋಜನೆಯಡಿ ರಾಜ್ಯದಲ್ಲಿ ವಸತಿ ಯೋಜನೆಗಳ ಮನೆಗಳಲ್ಲಿ ವಾಸಿಸುತ್ತಿರುವವರ ಹೆಸರಿಗೆ ಮಾಡಿಕೊಡಲು ಇಲಾಖೆ ಕ್ರಮ ಕೈಗೊಂಡಿದೆ.  ಈಗಾಗಲೆ ಈ ಯೋಜನೆಗೆ ಫಲಾನುಭವಿಗಳಿಂದ ಪಾವತಿಯಾಗಬೇಕಾಗಿದ್ದ ಒಟ್ಟು ೧೦೪೫ ಕೋಟಿ ರೂ.ಗಳ ಬಡ್ಡಿಯನ್ನು ಸರ್ಕಾರ ಮನ್ನಾ ಮಾಡಿದೆ.  ಸದ್ಯ ಈ ಯೋಜನೆಯಡಿ ರಾಜ್ಯದಲ್ಲಿ ೨೦ ಲಕ್ಷ ಮನೆಗಳನ್ನು ಯಾರು ಮನೆಯಲ್ಲಿ ವಾಸಿಸುತ್ತಿದ್ದಾರೋ ಅವರು ಕೇವಲ ೧೦೦೦೦ ರೂ. ಪಾವತಿಸಿದಲ್ಲಿ, ಅಂತಹ ಅರ್ಹ ಫಲಾನುಭವಿಗಳ ಹೆಸರಿಗೆ ಖಾತೆ ಮಾಡಿಕೊಡಲಾಗುತ್ತಿದೆ.  ಅಧಿಕಾರಿಗಳು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದರ ಮೂಲಕ ಇಲಾಖೆಯ ಗೌರವ ಕಾಪಾಡಬೇಕು ಎಂದು ಅದಿಕಾರಿಗಳಲ್ಲಿ ಮನವಿ ಮಾಡಿಕೊಂಡರು.
  ಸಭೆಯಲ್ಲಿ ಸಂಸದ ಶಿವರಾಮಗೌಡ, ಕೊಪ್ಪಳ ಶಾಸಕ ಸಂಗಣ್ಣ ಕರಡಿ, ಕುಷ್ಟಗಿ ಶಾಸಕ ಅಮರೇಗೌಡ, ಶಾಸಕ (ವಿಧಾನಪರಿಷತ್) ಹಾಲಪ್ಪ ಆಚಾರ್, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ರಾಜಾರಾಮ್, ನಗರಸಭೆ ಅಧ್ಯಕ್ಷ ಸುರೇಶ್ ದೇಸಾಯಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ತಹಸಿಲ್ದಾರರು, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. 

Leave a Reply