fbpx

ಮಾದಕ ಮಾಯೆಯ ಭ್ರಮೆ ನಿವಾರಣೆಗೆ ಜನಾಂದೋಲನ ಅಗತ್ಯ

  ಮಾದಕ ವಸ್ತು ಸೇವೆನೆ ಎಂದರೆ ತಪ್ಪಿಸಿಕೊಂಡು ಬರುವುದು ದುಸಾಧ್ಯವಾದ ಒಂದು ಘೋರ ವಿಷಸುಳಿ, ಮಾಯಾಜಾಲ.  ಈ ವಿಷಸುಳಿಯಲ್ಲಿ ಬೀಳುತ್ತಿರುವವರ ಸಂಖ್ಯೆ ಪ್ರತಿ ವರ್ಷ ಶೇ.೧೫ ರಷ್ಟು ಹೆಚ್ಚಾಗುತ್ತಿದೆ. ೧೬ ರಿಂದ ೩೦ ವರ್ಷ ವಯಸ್ಸಿನ ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಈ ಮಾಯಾಜಾಲಕ್ಕೆ ಬೀಳುತ್ತಿರುವವರಾಗಿದ್ದಾರೆ.   ಈಗೀಗ ಬೆಂಗಳೂರು ಮಾತ್ರವಲ್ಲ, ಚಿಕ್ಕ ಚಿಕ್ಕ ಪಟ್ಟಣಗಳಿಗೂ ಮಾದಕ ವಸ್ತುಗಳ ಜಾಲ ವಿಸ್ತರಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಈ ವಿಷಸುಳಿಯಿಂದ ನಮ್ಮ ವಿದ್ಯಾರ್ಥಿ, ಯುವಜನರನ್ನು ಪಾರು ಮಾಡುವುದು ನಮ್ಮೆಲ್ಲರ ಕರ್ತವ್ಯ. ಮಾದಕ ವಸ್ತುಗಳ ವ್ಯವಹಾರವನ್ನು ನಿಗ್ರಹಿಸಲು ಬಿಗಿಯಾದ ಕಾನೂನುಗಳು ಇವೆಯಾದರೂ ಕೇವಲ ಕಾನೂನಿನಿಂದ ಇದರ ಪರಿಹಾರ ಸಾಧ್ಯವಿಲ್ಲ. ಸಮಾಜದಲ್ಲಿ ವಿಶೇಷವಾಗಿ ವಿದ್ಯಾರ್ಥಿ ಯುವಜನರಲ್ಲಿ ಅರಿವು ಮೂಡಿಸಿ, ಅವರು ಈ ಮಾಯಾಜಾಲಕ್ಕೆ ಬೀಳದಂತೆ ರಕ್ಷಿಸುವುದೇ ಅತ್ಯುತ್ತಮ ಮಾರ್ಗ.
ಮಾದಕ ವಸ್ತುಗಳ ಚರಿತ್ರೆ ಬಹು ದೊಡ್ಡದು. ಅನಾದಿ ಕಾಲದಿಂದ, ಇಂದಿನವರೆಗೆ ಅದರ ಆಕರ್ಷಣೆ, ಚೆಲ್ಲಾಟ ನಿರಂತರವಾಗಿ ನಡೆದಿದೆ. ಮನುಷ್ಯನ ನೋವಿಗೆ, ನರಳಿಕೆಗೆ, ದುಃಖ ದುಮ್ಮಾನಗಳಿಗೆ ಅವು ಯಕ್ಷಿಣಿ ಪರಿಹಾರವೆಂಬ ಭ್ರಮೆ ಬಹುಜನರಿಗೆ ಗಾಳ ಹಾಕಿ, ಆಸೆ ತೋರಿಸಿ, ಮತ್ತು ಬರಿಸಿ, ಅಮಲು ಏರಿಸಿ, ಈ ವಸ್ತುಗಳು ನಮ್ಮನ್ನು ತಮ್ಮ ಬಿಗಿ ಹಿಡಿತಕ್ಕೆ ಸಿಕ್ಕಿಸಿಕೊಳ್ಳುತ್ತವೆ. ಹೇಳಿದಂತೆ ಕೇಳುವ, ಆಡಿಸಿದಂತೆ ಆಡುವ ಗುಲಾಮರನ್ನಾಗಿ ಮಾಡಿಕೊಳ್ಳುತ್ತವೆ. ನಿಧಾನವಾಗಿ, ಅಣು ಅಣುವಾಗಿ ನಮ್ಮನ್ನು ಕೊಲ್ಲುತ್ತವೆ. ಆದರೆ ಈ ಸಕ್ಕರೆ ಲೇಪಿತ, ಕಾರ್ಕೋಟಕ ವಿಷವನ್ನು ಸ್ವ-ಇಚ್ಚೆಯಿಂದಲೇ ಸೇವಿಸಿ, ನಾವು ನಾಶವಾಗುತ್ತಿದ್ದೇವೆ ಎಂಬುದು ಎಷ್ಟು ಜನರಿಗೆ ಗೊತ್ತು ?
ಮಾದಕ ವಸ್ತುಗಳ ಅಂತರಾಷ್ಟ್ರೀಯ ಕಳ್ಳಸಾಗಣೆ ವ್ಯವಹಾರ ಬೃಹತ್ ಜಾಲವಾಗಿ ಬೆಳೆಯುತ್ತಿದೆ. ಅದರ ಪರೋಕ್ಷ ಪರಿಣಾಮವಾಗಿ ಭಾರತದ ಪ್ರಮುಖ ನಗರಗಳಲ್ಲಿ ಮಾದಕ ವಸ್ತುಗಳ ಸೇವನೆಯ ಚಟ ಕ್ರಮೇಣ ಹೆಚ್ಚತೊಡಗಿದೆ. ದೆಹಲಿ, ಮುಂಬೈಗಳಲ್ಲಿ ಅತಿ ಹೆಚ್ಚು ಮಂದಿ ಮಾದಕ ವಸ್ತುಗಳ ದಾಸರಾಗಿದ್ದಾರೆ. ಇವರ ಸಂಖ್ಯೆ ಪ್ರತಿ ವರ್ಷ ಶೇ.೧೫ ರಷ್ಟು ಹೆಚ್ಚುತ್ತಿದೆ ಎಂದು ಹೇಳಲಾಗಿದೆ. ೧೬ ರಿಂದ ೩೦ ವರ್ಷ ವಯಸ್ಸಿನ ಶಾಲಾ ಕಾಲೇಜು ವಿದ್ಯಾರ್ಥಿಗಳೇ ಈ ಚಟಕ್ಕೆ ಬಲಿಯಾಗುತ್ತಿರುವುದು. ಮಾದಕ ವಸ್ತುಗಳ ಮಾರಾಟ ಮಾಡುವವರಿಗೆ ೧೦ ರಿಂದ ೨೦ ವರ್ಷ ಶಿಕ್ಷೆ ಹಾಗೂ ಒಂದರಿಂದ ಎರಡು ಲಕ್ಷ ರೂಪಾಯಿ ದಂಡ ವಿಧಿಸುವ ಕಾನೂನು ಜಾರಿಯಲ್ಲಿದೆ. ಮಾದಕ ವಸ್ತುಗಳ ಸೇವನೆಗೆ ದಾಸರಾದವರು ತಮ್ಮ ಚಟವನ್ನು ಪೂರೈಸಿಕೊಳ್ಳಲು ಎಂತಹ ಹೇಯ ಕೃತ್ಯ ನಡೆಸಲೂ ಸಿದ್ದ. ಸಮಾಜದ ಒಳಿತು ಮತ್ತು ನೆಮ್ಮದಿಯನ್ನು ಬಯಸುವ ಎಲ್ಲರೂ ಈ ಸಮಸ್ಯೆಯ ಪರಿಹಾರಕ್ಕೆ ಗಮನಹರಿಸಬೇಕು. 
ಸಾವಿಗೆ ಸರಪಣಿ : ಹೆರಾಯಿನ್‌ಅನ್ನು ಸೂಜಿಮದ್ದಿನ ರೂಪದಲ್ಲಿ, ಬ್ರೌನ್‌ಶುಗರ್‌ಅನ್ನು ಹೊಗೆ ಬತ್ತಿಯೊಂದಿಗೆ ಸೇರಿದಾಗ, ಮಿದುಳಿನ ನರಮಂಡಲವನ್ನು ಸೇರಿ ಅದರ ಮೇಲೆ ಪ್ರಭಾವ ಬೀರುತ್ತವೆ. ಯಾವುದೇ ನೋವಿನ ಸಂವೇದನೆ ಇರದು. ಕೆಲವು ಸಲ ತೀವ್ರ ಅಲರ್ಜಿ ಪ್ರತಿಕ್ರಿಯೆ ಕಂಡುಬಂದು, ವ್ಯಕ್ತಿ ಪ್ರಜ್ಞೆ ತಪ್ಪಿ ಬೀಳಬಹುದು, ಸಾಯಲೂಬಹುದು ಅಫೀಮನ್ನು ಪದೇ ಪದೇ ಉಪಯೋಗಿಸುವವರಲ್ಲಿ ಜಡತ್ವ, ಎಲ್ಲದರಲ್ಲೂ ನಿರಾಸಕ್ತಿ, ಆಲೋಚಿಸಲು ಆಗದಿರುವಿಕೆ, ಮರೆವು ಇತ್ಯಾದಿ ತೊಂದರೆಗಳೂ ಕಾಣಿಸಿಕೊಳ್ಳುತ್ತವೆ. ಅಫೀಮು ನರಮಂಡಲವನ್ನು ಮಂಕಾಗಿಸುವುದರಿಂದ ಶ್ವಾಸಕೋಶಗಳ ಕ್ರಿಯೆಗೆ ಅಡ್ಡಿಯುಂಟಾಗಿ, ಉಸಿರಾಟ ನಿಲ್ಲುವುದೇ ಸಾವಿಗೆ ಸರಪಣೆಯಾಗುತ್ತದೆ.
ಹೆರಾಯಿನನ್ನು ತಾವೇ ಇಂಜೆಕ್ಟ್ ಮಾಡಿಕೊಳ್ಳುವವರು ಅನೇಕ ಬಗೆಯ ಪ್ರಾಣಘಾತುಕ ರೋಗಗಳಿಗೆ ತುತ್ತಾಗುತ್ತಿರುವುದು ಕಂಡುಬಂದಿದೆ. ಸಿರಿಂಜನ್ನು ಶುದ್ಧೀಕರಿಸದೆ, ಒಂದೇ ಸೂಜಿಯಲ್ಲಿ ಹಲವಾರು ಜನ ಔಷಧವನ್ನು ಚುಚ್ಚಿಕೊಳ್ಳುವುದು, ದೇಹದ ಸ್ವಚ್ಚತೆ-ಪೋಷಣೆಗೆ ಗಮನ ಕೊಡದಿರುವುದರಿಂದ ಇವರಲ್ಲಿ ಧನುರ್ವಾಯು (ಟೆಟನಸ್-ಸಾವು ನಿಶ್ಚಿತ), ಲಿವರ್ ಉರುಯೂತ, ಹೃದಯದ ಸೋಂಕು, ಕ್ಷಯ ಮಿದುಳ ಪೊರೆ ಉರಿತ (ಮೆನಂಜ್ಜೈಟಿಸ್), ರಕ್ತ ನಂಜೇರುವಿಕೆ, ಫಿಟ್ಸ್, ಶ್ವಾಸಕೋಶಗಳ ಕ್ಯಾನ್ಸರ್ ಹಾಗೂ ಮರಣಾಂತಕ ಏಯ್ಡ್ಸ್ ರೋಗ ಕಂಡುಬರಬಹುದು.
ಅಪಾಯಕಾರಿ ರೋಗಗಳು : ಏಯ್ಡ್ಸ್, ಇತರ ಲೈಂಗಿಕ ರೋಗಗಳು, ಲಿವರ್ ಉರಿಯೂತ, ಷಂಡತನ, ಬಂಜೆತನ ಬುದ್ಧಿ ಭ್ರಮಣೆಯಂತಹ ರೋಗಗಳು, ಮಾದಕ ವಸ್ತುಗಳ ಚಟವಿರುವವರಲ್ಲಿ ಹೆಚ್ಚು ಸಲಿಂ ಕಾಮ ವಿಕೃತ ಕಾಮ, ಬಹುಮಂದಿಯೊಂದಿಗೆ ಲೈಂಗಿಕ ಚಟುವಟಿಕೆ, ವೈಯಕ್ತಿಕ ಸ್ವಚ್ಚತೆ ಇಲ್ಲದಿರುವುದು ಈ ಅಪಾಯಕಾರಿ ರೋಗಗಳು ಬರಲು ಕಾರಣವಾಗುತ್ತವೆ. 
ಚಟಕ್ಕೆ ಚಿಕಿತ್ಸೆ : ಈಗಾಗಲೇ ಒಬ್ಬ ವ್ಯಕ್ತಿ ಅಫೀಮಿನ ಚಟಕ್ಕೆ ಬಿದ್ದಿದ್ದಾನೆ ಎಂದರೆ, ಆತನಿಗೆ ಆದಷ್ಟು ಬೇಗ ಚಿಕಿತ್ಸೆ ನೀಡಿ, ಚಟದಿಂದ ಬಿಡುಗಡೆ ಮಾಡುವುದು ಅಗತ್ಯವಾಗುತ್ತದೆ. ಯಾವುದೇ ಸುಸಜ್ಜಿತ ಜನರಲ್ ಆಸ್ಪತ್ರೆಯಲ್ಲಿ ಹಾಗೂ ಮನೋವೈದ್ಯಕೀಯ ವಿಭಾಗ ಅಥವಾ ಮಾನಸಿಕ ಆಸ್ಪತ್ರೆಯಲ್ಲಿ ಈ ಚಿಕಿತ್ಸೆಯನ್ನು ಕೊಡಬಹುದಾಗಿದೆ. ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಬೇಕಾಗುತ್ತದೆ. ಆಫೀಮನ್ನು ನಿಲ್ಲಿಸಿದಾಗ ಕಾಣಿಸಿಕೊಳ್ಳಬಹುದಾದ ಹಿಂದೆಗೆತದ ಚಿಹ್ನೆಗಳನ್ನು ಶಮನಕಾರಿ ಔಷಧಿಗಳಿಂದ ಹತೋಟಿಯಲ್ಲಿಡಬೇಕಾಗುತ್ತದೆ. ವ್ಯಕ್ತಿಗೆ ಇರಬಹುದಾದ ದೈಹಿಕ ಮನಪರಿವರ್ತನೆಗೆ ಮನೋಚಿಕಿತ್ಸೆ, ಮನೆಯವರ, ಬಂಧು ಮಿತ್ರರ ಸಹಾಯ ಸಹಾನುಭೂತಿಯೂ ಮುಖ್ಯವಾಗುತ್ತದೆ. ಅನಂತರ ವ್ಯಕಿ, ಉಪಯುಕ್ತ ಚಟುವಟಿಕೆ-ಉದ್ಯೋಗವನ್ನು ನಡೆಸಲು ಅನುಕೂಲ, ಪ್ರೋತ್ಸಾಹದ ಅಗತ್ಯವಿರುತ್ತದೆ. ಚಿಕಿತ್ಸೆ ಎಷ್ಟು ಯಶಸ್ವಿಯಾಗುತ್ತದೆ ಎನ್ನುವುದು ವ್ಯಕ್ತಿ, ಆತನ ಮನೆಯವರು, ಪರಿಸರ ಹಾಗೂ ಸಾಮಾಜಿಕ ಧೋರಣೆಗಳ ಮೇಲೆ ನಿರ್ಧರಿತವಾಗುತ್ತದೆ. 
ಅಪಘಾತಗಳು ಮತ್ತು ಅಪರಾಧಗಳು : ಮಾದಕ ವಸ್ತುಗಳ ಸೇವನೆಗೂ, ಅಪಘಾತಗಳು ಮತ್ತು ಅಪರಾಧಗಳ ಪ್ರಮಾಣ ಹಾಗೂ ತೀವ್ರತೆಗೂ ನೇರವಾದ ಸಂಭಧವಿದೆ. ಸೇವನೆಯ ಅಮಲಿನಲ್ಲಿ, ದೇಹ ಮತ್ತು ಮನಸ್ಸುಗಳು ತಮ್ಮ ಸಮತೋಲನವನ್ನು ಕಳೆದುಕೊಳ್ಳುವುದಲ್ಲದೆ, ಸರಿ ನಿರ್ಧಾರವನ್ನು ಮಾಡುವ ಶಕ್ತಿ ಹಾಗೂ ಮಾನವೀಯ ಭಾವನೆಗಳನ್ನು ಕಳೆದುಕೊಳ್ಳುತ್ತದೆ. ಇದರಿಂದ ಎದೆ ನಡುಗಿಸುವ, ಪ್ರಾಣಾಂತಕ ವಾಹನ-ಅಪಘಾತಗಳು ಮತ್ತು ಅತ್ಯಂತ ಕ್ರೂರವಾದ ಅಪರಾಧಗಳೂ ನಡೆದುಹೋಗುತ್ತದೆ. ರಸ್ತೆ ಅಪಘಾತಗಳಲ್ಲಿ ಮೂರನೇ ಒಂದು ಭಾಗದ ಅಪಘಾತಗಳು, ಚಾಲಕರು ಮದ್ಯಪಾನ ಮಾಡುವುದರಿಂದ ಆಗುತ್ತವೆ ಎಂಬುದು ಸಾಬೀತಾಗಿದೆ. ಈ ರಸ್ತೆ ಅಪಘಾತಗಳಲ್ಲಿ ಸಾವಿರಾರು ಜನ ಸಾಯುತ್ತಾರೆ. ಅದಕ್ಕೆ ಹತ್ತು ಪಟ್ಟು ಜನ ಶಾಶ್ವತವಾಗಿ ಅಂಗವಿಕಲರಾಗುತ್ತಾರೆ. ಸಮಾಜ ಕಂಟಕರ ಜಾಲಕ್ಕೆ ಬಿದ್ದ ಇವರು ಬಹಳ ಅಪಾಯಕಾರಿಗಳಾಗಿಬಿಡುತ್ತಾರೆ. ದುಷ್ಟರ ವಂಚನೆ-ಮೋಸಕ್ಕೆ ಬಲಿಯಾಗಿ, ಬ್ಲಾಕ್‌ಮೇಲ್ ಒತ್ತಡದಿಂದ, ಬೇರೆ ದಾರಿಯಿಲ್ಲದೆ, ಅತಿ ಹೀನ ಹಾಗೂ ಭಯಂಕರ ತಪ್ಪುಗಳನ್ನು, ಅಪರಾಧಗಳನ್ನು ಮಾಡಲು ಹಿಂಜರಿಯುವುದಿಲ್ಲ. ತಮ್ಮ ವರ್ತನೆಯ ಪರಿಣಾಮಗಳ ಅರಿವಿಲ್ಲದೆ, ಶಿಕ್ಷೆಯ ಭಯವಿಲ್ಲದೆ, ತಮ್ಮ ಮೇಲೆ, ತಮ್ಮವರ ಮೇಲೆ ಆಗುವ ದುಷ್ಪರಿಣಾಮಗಳ ಪರಿವೆ ಇಲ್ಲದೆ, ಕೊಲೆ, ದರೋಡೆ, ಲೈಂಗಿಕ ಅತ್ಯಾಚಾರಗಳಂತಹ ಹೀನ ಅಪರಾಧಗಳಲ್ಲಿ ತೊಡಗುತ್ತಾರೆ.
ಜನರ ಚಳುವಳಿ : ಮಾದಕ ವಸ್ತುಗಳ ವಿರುದ್ಧದ ಹೋರಾಟ ಒಂದು ಜನರ ಚಳುವಳಿ ಯಾಗಬೇಕು. ಈಗಾಗಲೆ ಗ್ರಾಮೀಣ ಭಾಗಗಳಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳು, ಸಂಘ ಸಂಸ್ಥೆಗಳು ಜಾಗೃತರಾಗಿದ್ದು, ಮದ್ಯಪಾನ ಮುಕ್ತ ಗ್ರಾಮಗಳನ್ನಾಗಿ ಮಾಡುವತ್ತ ಚಳುವಳಿಗಳನ್ನೇ ಆರಂಭಿಸಿದ್ದಾರೆ.  ಈ ಚಳುವಳಿಗೆ ನಾವು ಮತ್ತು ನೀವು ಜೊತೆಯಾಗಿ ಕೈ ಕೈ ಸೇರಿಸಿ ದುಡಿಯೋಣ. ಮಾದಕ ವಸ್ತುಗಳ ಮಾಯಾಜಾಲವನ್ನು ಛೇದಿಸಿ, ಆರೋಗ್ಯ ಮತ್ತು ಆನಂದದ ಬದುಕಿನತ್ತ ಮುನ್ನಡೆಯೋಣ. ಆರೋಗ್ಯಕರ ಹವ್ಯಾಸಗಳನ್ನು ಮನರಂಜನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳೋಣ. ಸಾಧಿಸಬಲ್ಲಂತಹ ಆದರ್ಶ ಗುರಿಗಳನ್ನಿಟ್ಟುಕೊಂಡು ಅವುಗಳನ್ನು ಮುಟ್ಟಲು ಸಾಧನೆ ಮಾಡೋಣ. ಮನಸ್ಸನ್ನು ಚಿಂತೆ, ವ್ಯಥೆ, ನೋವು, ನಿರಾಶೆ ಆವರಿಸಿದಾಗ, ಮನೆಯವರ, ಬಂಧುಮಿತ್ರರ ನೆರವಿನಿಂದ ಮನರಂಜನೆಯನ್ನು ಪಡೆಯಲು ಅನೇಕ ಆರೋಗ್ಯಕರ ಚಟುವಟಿಕೆಗಳಿವೆ. ವಿವಿಧ ಬಗೆಯ ಕ್ರೀಡೆಗಳು, ಸಾಂಸ್ಕೃತಿಕ ಚಟುವಟಿಕೆಗಳು, ಸ್ನೇಹಕೂಟಗಳು, ಪ್ರವಾಸಗಳು, ಸಂಗೀತ ನೃತ್ಯ ಮುಂತಾದ ಲಲಿತ ಕಲೆಗಳು, ಅಪೂರ್ವ ವಸ್ತುಗಳನ್ನು ಸಂಗ್ರಹಿಸಿ ಪ್ರದರ್ಶಿಸುವುದು. ಧಾರ್ಮಿಕ ಚಟುವಟಿಕೆಗಳು, ಯೋಗ, ಪ್ರಾಣಾಯಾಮ, ಧ್ಯಾನ ಇತ್ಯಾ. ಪ್ರತಿಯೊಬ್ಬ ವ್ಯಕ್ತಿ ತನ್ನ ಅಭಿರುಚಿ-ಅನುಕೂಲಕ್ಕೆ ತಕ್ಕಂತೆ ಇವುಗಳಲ್ಲಿ ಕೆಲವನ್ನು ಆಯ್ದುಕೊಂಡು ತನ್ನ ಬಿಡಿವಿನ ವೇಳೆಯಲ್ಲಿ ಮಾಡಲು ಪ್ರೋತ್ಸಾಹಿಸಬೇಕು.
ಮಾನವೀಯ ಮೌಲ್ಯ ಬೆಳೆಸೋಣ : ಭಾವನಾತ್ಮಕ ಸಮಸ್ಯೆಗಳಿಂದ ವ್ಯಕ್ತಿ ಬಳಲುತ್ತಿದ್ದರೆ, ಅಗತ್ಯಬಿದ್ದರೆ ಈ ವಿಚಾರದಲ್ಲಿ ಕುಟುಂಬ ವೈದ್ಯರ ಅಥವಾ ಮನೋವೈದ್ಯರ ಸಲಹೆ ಪಡೆಯೋಣ. ಮಾನಸಿಕ ಆರೋಗ್ಯವರ್ಧನೆಗೆ ನಿರಂತರ ಪ್ರಯತ್ನ ಮಾಡೋಣ. ಭೋಗ ಭಾಗ್ಯಗಳ, ವಿಲಾಸೀ ಶ್ರೀಮಂತ ಜೀವನ ನಮ್ಮ ಗುರಿಯಾಗದೇ ಸರಳ, ಸಂತೃಪ್ತಿಯ, ಸ್ನೇಹಮಯ ಬದುಕು ನಮ್ಮ ಗುರಿಯಾಗಬೇಕು. ಪ್ರೀತಿ, ವಿಶ್ವಾಸ, ಕರುಣೆ, ಅನುಕಂಪ, ಕರ್ತವ್ಯಪಾರಾಯಣತೆ, ಎಲ್ಲರ ಯೋಗಕ್ಷೇಮಕ್ಕಾಗಿ ಚಿಂತನೆ ಅಗತ್ಯವಾಗಿದೆ. ಬನ್ನಿ, ಮಾದಕವಸ್ತು ಸೇವನೆಯ ವಿರುದ್ಧ ಅರಿವಿನ ಹೆದ್ದೆರೆಯನ್ನು ನಿರ್ಮಿಸೋಣ. ಆರೋಗ್ಯಕರ ಸಮಾಜ ಹಾಗೂ ಸಶಕ್ತ ಯುವಜನತೆ ಇವುಗಳ ನಿರ್ಮಾಣ ನಮ್ಮ ಗುರಿಯಾಗಲಿದೆ. ಬಲಿಷ್ಟ ಭಾರತದ ನಿರ್ಮಾಣಕ್ಕೆ ಈ ನಮ್ಮ ದಾರಿ ಮತ್ತು ಗುರಿ ಅಡಿಪಾಯವಾಗಿರಲಿ ಎನ್ನುತ್ತಾರೆ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಹಾಗೂ ಕಾರ್ಯದರ್ಶಿ ಹೆಚ್.ಬಿ. ದಿನೇಶ್ ಅವರು.
                                                                               –  ತುಕಾರಾಂ ರಾವ್ ಬಿ.ವಿ.
                                                                               ಜಿಲ್ಲಾ ವಾರ್ತಾಧಿಕಾರಿ, ಕೊಪ್ಪಳ
ಚಿತ್ರ ಕೃಪೆ ಅಂತರ್ಜಾಲ
Please follow and like us:
error

Leave a Reply

error: Content is protected !!