ಸ್ವಚ್ಛತಾ ಅಭಿಯಾನಕ್ಕೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಗಿಣಿಗೇರಾ ಗ್ರಾಮದಲ್ಲಿ ಚಾಲನೆ

ಕೊಪ್ಪಳ ನ. ಕೊಪ್ಪಳ ಜಿಲ್ಲೆಯನ್ನು ಸ್ವಚ್ಛ ಜಿಲ್ಲೆಯನ್ನಾಗಿ ಮಾಡುವ ಉದ್ದೇಶದಿಂದ  ಹೋಬಳಿವಾರು ಸ್ವಚ್ಛತಾ ಅಭಿಯಾನಕ್ಕೆ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ತಾಲೂಕಿನ ಗಿಣಿಗೇರಾ ಗ್ರಾಮದಲ್ಲಿ ಚಾಲನೆ ನೀಡಿದರು.
     ಗಿಣಿಗೇರಾ ಗ್ರಾಮದಲ್ಲಿ ಸ್ವಚ್ಛತೆ ಕಾರ್ಯಕ್ಕೆ ಅಧಿಕಾರಿಗಳೊಂದಿಗೆ ಅನೇಕ ಜನಪ್ರತಿನಿಧಿಗಳು ಕೈಜೋಡಿಸಿದರು.  ನಂತರ ಮಾತನಾಡಿದ ರಾಘವೇಂದ್ರ ಹಿಟ್ನಾಳ್ ಅವರು, ಜಿಲ್ಲೆಯ ಎಲ್ಲಾ 20 ಹೋಬಳಿಗಳಲ್ಲಿ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನೊಳಗೊಂಡು ಪ್ರತಿ ಹೋಬಳಿಯಲ್ಲಿ ವಿನೂತನ ಸ್ವಚ್ಛತೆ ಅಭಿಯಾನ  ಕೈಗೊಂಡಿರುವುದು ಶ್ಲಾಘನೀಯವಾಗಿದ್ದು, ಅಭಿಯಾನಕ್ಕೆ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಒಂದಾಗಿ, ಕಾರ್ಯಕ್ರಮ ನಿರ್ವಹಿಸಿದಲ್ಲಿ, ಸ್ವಚ್ಛ ಕೊಪ್ಪಳ ಜಿಲ್ಲೆ ನಿರ್ಮಾಣ ಸಾಧ್ಯವಾಗಲಿದೆ.  ಸ್ವಚ್ಛತಾ ಕಾರ್ಯ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದ್ದು, ಸ್ವಚ್ಛತೆ ಅಭಿಯಾನದ ಯಶಸ್ವಿಗೆ ಸಮುದಾಯದ ಸಹಕಾರ ಅಗತ್ಯವಾಗಿದೆ.   ಜಿಲ್ಲೆಯಲ್ಲಿ ವಯಕ್ತಿಕ ಶೌಚಾಲಯ ನಿರ್ಮಾಣದ ಕ್ರಾಂತಿ ಮತ್ತೊಮ್ಮೆ ಆಗಬೇಕಾಗಿದ್ದು,   ಸರ್ಕಾರವು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು 12000/-ರೂ. ಅನುದಾನ ನೀಡುತ್ತಿದೆ.  ಅಲ್ಲದೇ, ವಿಶೇಷವಾಗಿ ನಮ್ಮ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದವರಿಗೆ 15000/-ರೂ.  ಅನುದಾನ ನೀಡುತ್ತಿದೆ.   ವಿಶೇಷವಾಗಿ ವಿದ್ಯಾರ್ಥಿನಿಯರು ಊಟವನ್ನಾದರೂ ಬಿಟ್ಟು ಪಾಲಕರೊಂದಿಗೆ ಹಠ ಮಾಡಿ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಲು ತಮ್ಮ ಪಾಲಕರ ಮನವೊಲಿಸಲು ಪ್ರಯತ್ನಿಸಬೇಕೆಂದು ಮನವಿ ಮಾಡಿದರು. 
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮಾತನಾಡಿ, ಸ್ವಚ್ಛತೆ ಇರುವೆಡೆ ದೇವರು ನೆಲೆಸಿರುತ್ತಾನೆ. ಸ್ವಚ್ಛತೆ ಇಲ್ಲದಿದ್ದಲ್ಲಿ ಆರೋಗ್ಯವು ಹಾಳಾಗುತ್ತದೆ.  ರಸ್ತೆಗಳೂ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲೂ ಸಹ ಸ್ವಚ್ಛತೆಯನ್ನು ಕಾಪಾಡುವುದು  ಪ್ರತಿಯೊಬ್ಬರ ಕರ್ತವ್ಯವಾಗಿದೆ.   ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಸ ಬೀಸಾಕದೆ, ನಿಗದಿತ ಸ್ಥಳದಲ್ಲಿ ಕಸವನ್ನು ಹಾಕಬೇಕು.  ಗ್ರಾಮ ಪಂಚಾಯತ್‍ಗಳು ಈ ಕಾರ್ಯವನ್ನು ಆದ್ಯತೆಯ ಮೇಲೆ ತೆಗೆದುಕೊಂಡು ಸಂಪೂರ್ಣ ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಮಾಡಿ, ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು. 
     ಗ್ರಾಮ ಪಂಚಾಯತ್ ಸದಸ್ಯ ಗೂಳಪ್ಪ ಹಲಗೇರಿ ಇವರು ಮಾತನಾಡಿ, ದೇಶದ ಪ್ರಧಾನ ಮಂತ್ರಿಯಿಂದ ಹಿಡಿದು ಗ್ರಾಮ ಪಂಚಾಯತ್ ಸದಸ್ಯರವರೆಗೂ ಎಲ್ಲಾ ಹಂತದ ಜನ ಪ್ರತಿನಿಧಿಗಳು ಸ್ವಚ್ಛತೆಯ ಬಗ್ಗೆ ಗಮನಹರಿಸುತ್ತಿರುವುದು ಒಳ್ಳೆಯ ಬೆಳವಣಿಗೆ.  ಇದನ್ನು ಲಘುವಾಗಿ ಪರಿಗಣಿಸಬಾರದೆಂದು ತಿಳಿಸಿದರು. 
     ಯೋಜನಾ ನಿರ್ದೇಶಕ ಬಿ. ಕಲ್ಲೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯತ್ ಸದಸ್ಯ ಮಾರುತೆಪ್ಪ ಹಲಗೇರಿ,  ತಾಲೂಕ ಪಂಚಾಯತ್ ಸದಸ್ಯ ನಾಗರಾಜ ಚಲ್ಲೊಳ್ಳಿ,   ಗಿಣಿಗೇರಿ ಗ್ರಾಮದ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಸ್ವಯಂಸೇವಕರು ಪಾಲ್ಗೊಂಡು ಗಿಣಿಗೇರಾ ಗ್ರಾಮದ ಸ್ವಚ್ಛತೆಯಲ್ಲಿ ಭಾಗವಹಿಸಿದರು.
  ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಮಲ್ಲಿಕಾರ್ಜುನ ಹಲಗೇರಿ,   ಗಂಗಮ್ಮ ಪೋಲೀಸ ಪಾಟೀಲ್, ಗ್ರಾಮ ಪಂಚಾಯತ್ ಅಧ್ಯಕ್ಷ ಯಂಕಪ್ಪ ಇಂದರಗಿ ಮತ್ತು ಹೋಬಳಿ ವ್ಯಾಪ್ತಿಯ 8 ಪಂಚಾಯತ್‍ಗಳ ಗ್ರಾಮ ಪಂಚಾಯತ್ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮದ ಪ್ರಮುಖರಾದ ಕೊಟ್ರಬಸ್ಸಯ್ಯ, ಸುಬ್ಬಣ್ಣಾಚಾರ ಮುಂತಾದವರು ಭಾಗವಹಿಸಿದ್ದರು.  

Leave a Reply