ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಘಟಕಕ್ಕೆ ತುಂಗಭದ್ರಾ ನೀರು: ನಿಷೇದಾಜ್ಞೆ ಜಾರಿ

ಬಳ್ಳಾರಿ ಜಿಲ್ಲೆ ಕುಡತಿನಿ ಬಳಿಯ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಕ್ಕೆ ತುಂಗಭದ್ರಾ ಎಡದಂಡೆ ಕಾಲುವೆಯಿಂದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಢಣಾಪುರ ಗ್ರಾಮದ ಮರಳಿ ಹಳ್ಳದಿಂದ ನೀರು ಹರಿಸಲಾಗುತ್ತಿದ್ದು ಅಕ್ರಮವಾಗಿ ಪಂಪ್‌ಸೆಟ್ ಮೂಲಕ ನೀರು ಪಡೆಯುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಆದೇಶ ಹೊರಡಿಸಿದ್ದಾರೆ.

ತುಂಗಭದ್ರಾ ಎಡದಂಡೆ ಕಾಲುವೆ ಡಿಸ್ಟ್ರಿಬ್ಯೂಟರಿ ೧೭ ರ ಮೂಲಕ ಢಣಾಪುರ ಗ್ರಾಮದ ಮರಳಿ ಹಳ್ಳದಿಂದ ಪಂಪ್‌ಹೌಸ್ ಮುಖಾಂತರ ನೀರನ್ನು ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ  ನೀರು ಸರಬರಾಜು ಮಾಡಲಾಗುತ್ತಿದ್ದು, ರೈತರು ನೀರನ್ನು ಅಕ್ರಮವಾಗಿ ಪಡೆಯುವುದನ್ನು ನಿಷೇಧಿಸಿ ಆದೇಶಿಸಲಾಗಿದೆ.
ಮರಳಿಹಳ್ಳದ ದಡದಲ್ಲಿ ಬರುವ ರೈತರು ಯಾವುದೇ ಕಾರಣಕ್ಕೂ ಅನಧಿಕೃತವಾಗಿ ಪಂಪ್‌ಸೆಟ್  ಮುಖಾಂತರ ನೀರನ್ನು ಎತ್ತುವಳಿ ಮಾಡುವಂತಿಲ್ಲ. ಅನಧಿಕೃತವಾಗಿ ನೀರು ಎತ್ತುವಳಿ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪಂಪ್‌ಸೆಟ್‌ಗಳನ್ನು ತಮ್ಮ ಸುಪರ್ದಿಗೆ ಪಡೆಯುವರು. ಜೆಸ್ಕಾಂ ಅಧಿಕಾರಿಗಳು ಮರಳಿಹಳ್ಳದ ದಡದಲ್ಲಿ ಬರುವ ಎಲ್ಲಾ ಪಂಪ್‌ಸೆಟ್‌ಗಳಿಗೆ ಪ್ರಸಾರವಾಗುವ ತ್ರಿ-ಫೇಸ್ ವಿದ್ಯುತ್ ಕಡಿತಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಏ.೧ ರಿಂದ ಜೂನ್ ೩೦ ರವರೆಗೆ ತುಂಗಭದ್ರಾ ಎಡದಂಡೆ ಕಾಲುವೆ ಡಿಸ್ಟ್ರಿಬ್ಯೂಟರಿ ೧೭ ರಿಂದ ಗಂಗಾವತಿ ತಾಲೂಕಿನ ಡಾಣಾಪೂರ ಗ್ರಾಮದಲ್ಲಿ ಸ್ಥಾಪಿತವಾಗಿರುವ ಕೆಪಿಸಿಎಲ್ ಪಂಪ್‌ಹೌಸ್ (ಬಸಾಪಟ್ಟಣ, ವಡ್ಡರಹಟ್ಟಿ ಕ್ಯಾಂಪ್, ಇಸ್ಲಾಂಪುರ, ಗಂಗಾವತಿ-ಕನಕಗಿರಿ ಸೇತುವೆ, ಬಾಪಿರೆಡ್ಡಿ ಕ್ಯಾಂಪ್, ಜಂಗಮರ ಕಲ್ಗುಡಿ) ವರೆಗೆ ಕಡ್ಡಾಯವಾಗಿ ಪೊಲೀಸ್ ಬಂದೋಬಸ್ತ್ ನೀಯೋಜಿಸಬೇಕೆಂದು ಪೊಲೀಸ್ ಇಲಾಖೆಗೆ ಸೂಚಿಸಲಾಗಿದ್ದು, ಆದೇಶ ಉಲ್ಲಂಘನೆ ಮಾಡಿದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ   ತಿಳಿಸಿದ್ದಾರೆ.

Related posts

Leave a Comment