ರೈತರೊಂದಿಗೆ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ನೂತನ ವರ್ಷಾಚರಣೆ

 ಕೊಪ್ಪಳದ ಎಪಿಎಂಸಿ ಪ್ರಾಂಗಣದಲ್ಲಿ ಪ್ರಾರಂಭಿಸಲಾಗಿರುವ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ನೂತನ ವರ್ಷಾಚರಣೆಯ ಸಂಭ್ರಮವನ್ನು ರೈತರೊಂದಿಗೆ ಆಚರಿಸಿದರು.
  ಬೆಂಬಲ ಬೆಲೆಯಲ್ಲಿ ರೈತರಿಂದ ಮೆಕ್ಕೆಜೋಳ ಖರೀದಿಸಲು ನಗರದ ಎಪಿಎಂಸಿ ಆವರಣದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಲಾಗಿದ್ದು, ಖರೀದಿ ಕೇಂದ್ರದಲ್ಲಿನ ಪ್ರಕ್ರಿಯೆ ಪರಿಶೀಲನೆಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು, ರೈತರಿಂದ ಮೆಕ್ಕೆಜೋಳ ಖರೀದಿಗೆ ಸಮರ್ಪಕ ರಸೀದಿ ನೀಡಿಕೆ, ಮಾಹಿತಿಯ ಬ್ಯಾನರ್ ಪ್ರದರ್ಶನ, ತೂಕ ಮತ್ತು ಇತರೆ ಸ್ಥಿತಿ-ಗತಿಗಳ ಬಗ್ಗೆ ಪರಾಮರ್ಶೆ ನಡೆಸಿದರು.  ಮೆಕ್ಕೆಜೋಳ ಆವಕ ಹೆಚ್ಚಾದಲ್ಲಿ, ಇದಕ್ಕಾಗಿ ಗಿಣಿಗೇರಾ ಬಳಿಯ ವೇರ್‌ಹೌಸ್ ಅನ್ನು ದಾಸ್ತಾನಿಗಾಗಿ ಸಿದ್ಧವಾಗಿಟ್ಟುಕೊಳ್ಳಬೇಕು.  ೫೦ ಕೆ.ಜಿ. ಚೀಲದಲ್ಲಿ ನಿಗದಿಗಿಂತ ಹೆಚ್ಚಿನ ತೂಕ ಪಡೆಯಬಾರದು.  ಚೀಲದ ಸಮೇತ ೫೧ ಕೆ.ಜಿ. ಮಾತ್ರವೇ ತೂಕ ಮಾಡಬೇಕು.  ಖರೀದಿಸಿದ ನಂತರ ರೈತರಿಗೆ ಅಧಿಕೃತ ಬಿಲ್ ಒದಗಿಸಬೇಕು.  ಸಂಜೆ ೦೪ ಗಂಟೆಯ ಒಳಗಾಗಿ ಖರೀದಿ ಕೇಂದ್ರಕ್ಕೆ ಬರುವ ರೈತರ ಮೆಕ್ಕೆಜೋಳವನ್ನು ಅದೇ ದಿನ ಖರೀದಿ ಮಾಡಬೇಕು.   ಮೆಕ್ಕೆಜೋಳ ನೀಡಿದ ರೈತರಿಗೆ ಮೂರ‍್ನಾಲ್ಕು ದಿನಗಳಲ್ಲಿ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕು.  ಖರೀದಿ ಕೇಂದ್ರದಲ್ಲಿ ರೈತರಿಗೆ ಯಾವುದೇ ಬಗೆಯ ಶೋಷಣೆ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು.  ಖರೀದಿ ಕೇಂದ್ರದಲ್ಲಿನ ಎಲ್ಲ ಪ್ರಕ್ರಿಯೆಗಳು ಸುಗಮವಾಗಿ ನಡೆಸಲು ಸೂಕ್ತ ವ್ಯವಸ್ಥೆಯನ್ನು ಕೈಗೊಳ್ಳಬೇಕು ಎಂದು ಖರೀದಿ ಏಜೆನ್ಸಿಯಾಗಿರುವ ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾ ಮಂಡಳದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ರೈತರೊಂದಿಗೆ ಹೊಸ ವರ್ಷಾಚರಣೆ : ಹೊಸ ವರ್ಷದ ಸಂಭ್ರಮಾಚರಣೆಯನ್ನು ಜಿಲ್ಲಾಧಿಕಾರಿ ಕೆ.ಪಿ. ಮೋಹನ್ ರಾಜ್ ಅವರು ರೈತರು ಹಾಗೂ ಹಮಾಲರೊಂದಿಗೆ ಆಚರಿಸಿದರು.  ನಗರದ ಎಪಿಎಂಸಿ ಆವರಣದಲ್ಲಿನ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಆಗಮಿಸಿದ್ದ ರೈತರಿಗೆ ಹಾಗೂ ಹಮಾಲರಿಗೆ ಸಿಹಿ ತಿನಿಸಿ ಹೊಸ ವರ್ಷದ ಶುಭಾಷಯ ವಿನಿಮಯ ಮಾಡಿಕೊಂಡರು.  ಹೊಸ ವರ್ಷ ಉತ್ತಮ ಮಳೆ, ಬೆಳೆಯೊಂದಿಗೆ ರೈತರ ಬದುಕಿನಲ್ಲಿ ಸಂಭ್ರಮ ತರುವಂತಾಗಲಿ ಎಂದು ಶುಭ ಹಾರೈಸಿದರು.
  ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾ ಮಂಡಳದ ಅಧಿಕಾರಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರಿಗಳು, ಆಹಾರ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Leave a Reply