ಕುಷ್ಟಗಿ : ಫಲಾನುಭವಿ ಪಟ್ಟಿ ಅನುಮೋದನೆಗೆ ಅ. ೧೫ ರವರೆಗೆ ಕಾಲಾವಕಾಶ

 ಇಂದಿರಾ ಆವಾಸ್ ಯೋಜನೆಗೆ ಗ್ರಾಮ ಸಭೆಗಳ ಮೂಲಕ ಆಯ್ಕೆ ಮಾಡಲಾಗುವ ಫಲಾನುಭವಿಗಳ ಪಟ್ಟಿಗೆ ಅನುಮೋದನೆ ಪಡೆಯಲು ರಾಜೀವ್‌ಗಾಂಧಿ ವಸತಿ ನಿಗಮವು ಅ. ೧೫ ರವರೆಗೆ ಕಾಲಾವಕಾಶ ಒದಗಿಸಿದ್ದು, ಯಾವುದೇ ಫಲಾನುಭವಿಗಳು ವಸತಿ ಯೋಜನೆಯಿಂದ ವಂಚಿತರಾಗುವುದಿಲ್ಲ ಎಂದು ಕುಷ್ಟಗಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
  ಫಲಾನುಭವಿಗಳ ಪಟ್ಟಿ ಸಲ್ಲಿಕೆಯ ವಿಳಂಬದಿಂದ ೮೨೧ ಮನೆಗಳನ್ನು ನಿಗಮವು ತಂತ್ರಾಂಶದಲ್ಲಿ ಲಾಕ್ ಮಾಡಿದ್ದು, ಬಡವರಿಗೆ ವಸತಿ ಸೌಲಭ್ಯ ದೊರೆಯುವಲ್ಲಿ ತೊಂದರೆಯಾಗಿದೆ ಎಂಬುದಾಗಿ ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.  ಇಂದಿರಾ ಆವಾಸ್ ಯೋಜನೆಗೆ ಸಂಬಂಧಿಸಿದಂತೆ ಕುಷ್ಟಗಿ ತಾಲೂಕುನ ಎಲ್ಲ ಗ್ರಾಮ ಪಂಚಾಯತಿಗಳಿಂದ ೮೨೧ ಮನೆಗಳ ಗುರಿ ನಿಗದಿಪಡಿಸಲಾಗಿದ್ದು, ಫಲಾನುಭವಿಗಳನ್ನು ಗ್ರಾಮ ಸಭೆಯ ಮೂಲಕ ಆಯ್ಕೆ ಮಾಡಲು ಗ್ರಾಮ ಪಂಚಾಯತಿಗಳಿಗೆ ಸೂಚನೆ ನೀಡಲಾಗಿದ್ದರೂ, ಕೆಲವು ಗ್ರಾ.ಪಂ.ಗಳಲ್ಲಿ ಕಾರಣಾಂತರಗಳಿಂದ ಗ್ರಾಮ ಸಭೆ ನಡೆಯದ ಕಾರಣ, ಫಲಾನುಭವಿಗಳ ಪಟ್ಟಿಯನ್ನು ವಸತಿ ನಿಗಮದಿಂದ ಅನುಮೋದನೆ ಪಡೆಯಲು ಸಾಧ್ಯವಾಗಿರಲಿಲ್ಲ.  ಇದೀಗ ನಿಗಮವು ಫಲಾನುಭವಿಗಳ ಪಟ್ಟಿಗೆ ಅನುಮೋದನೆ ಪಡೆಯಲು ಅ. ೧೫ ರವರೆಗೆ ಕಾಲಾವಕಾಶ ಕಲ್ಪಿಸಿದ್ದು, ಯಾವುದೇ ಅರ್ಹ ಫಲಾನುಭವಿಗಳು ವಸತಿ ಸೌಲಭ್ಯದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಕುಷ್ಟಗಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
Please follow and like us:
error