ಕೃತಿಗಳು ಸಮಾಜದಲ್ಲಿ ಮೆರೆಯುತ್ತಿರುವುದು ನೋವಿನ ಸಂಗತಿ-ಡಾ. ಮೂಡ್ನಕೂಡು ಚಿನ್ನಸ್ವಾಮಿ

 ಬಳ್ಳಾರಿ, ನ. ೧೫:ಸಾಂಸ್ಕೃತಿಕ ವೈವಿಧ್ಯತೆ, ವಿಸ್ಮತೆ ಕುರಿತ ಚರ್ಚೆಗಳು ಕ್ಷೀಣಿಸಿ ಅತ್ಯಾಚಾರ, ಅನಾಚಾರಗಳಂತ ವಿಕೃತಿಗಳು ಸಮಾಜದಲ್ಲಿ ಮೆರೆಯುತ್ತಿರುವುದು ನೋವಿನ ಸಂಗತಿ ಎಂದು ಪ್ರಸಿದ್ಧ ಕವಿ ಡಾ. ಮೂಡ್ನಕೂಡು ಚಿನ್ನಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದರು.

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಹಾಗೂ ನಗರದ ಸಂಸ್ಕೃತಿ ಪ್ರಕಾಶನದ ಸಹಯೋಗದಲ್ಲಿ ಶುಕ್ರವಾರ ವಿವಿ ಸಭಾಂಗಣದಲ್ಲಿ ಜರುಗಿದ ಸಂಸ್ಕೃತಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳ ಮೇಲೆ ನಡೆಯುವ ಅತ್ಯಾಚಾರಗಳಂತಹ ಹೀನಕೃತ್ಯಗಳು ಹೆಚ್ಚುತ್ತಿರುವುದನ್ನು ಗಮನಿಸಿದರೆ ನಾವು ಕಲಿಯುತ್ತಿರುವ, ಕಲಿಸುತ್ತಿರುವ ಶೈಕ್ಷಣಿಕ ವ್ಯವಸ್ಥೆಯಲ್ಲಿ ಲೋಪವಿರಬೇಕು. ಮೌಲ್ಯಗಳನ್ನು ಬಿತ್ತಬೇಕಾದ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಭಿತ್ತರವಾಗುತ್ತಿರುವ ಮನಸ್ಸನ್ನು ಕೆರಳಿಸುವ ಕಾರ್ಯಕ್ರಮಗಳು, ಜಾಲತಾಣ(ಇಂಟರ್ ನೆಟ್)ಗಳಲ್ಲಿ ಅನಾಯಾಸವಾಗಿ ಲಭ್ಯವಾಗುತ್ತಿರುವ ಪ್ರಚೋದಕ ತಾಣಗಳು ಯುವ ಸಮೂಹವನ್ನು ತಪ್ಪುದಾರಿಗೆ ತಳ್ಳುತ್ತಿವೆ ಎಂದು ಅಭಿಪ್ರಾಯಪಟ್ಟರು.
ಸದೃಢ ಸಮಾಜ ಕಟ್ಟುವಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದು.  ವಿದ್ಯಾರ್ಥಿಗಳು, ಯುವ ಸಮೂಹ ಮೌಢ್ಯ, ಕಂದಾಚಾರಗಳಿಂದ ದೂರವಿದ್ದು ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಅಸಮಾನತೆ, ಜಾತಿ ಪದ್ಧತಿ ದೇಶದ ಅಭಿವೃದ್ಧಿಗೆ ಮಾರಕ. ಸ್ವಚ್ಛ ಭಾರತ ಅಭಿಯಾನದ ಹೆಸರಿನಲ್ಲಿ ಪೊರಕೆ ಹಿಡಿದು ಸಾಂಕೇತಿಕವಾಗಿ ಕಸಗೂಡಿಸಿದರೆ ಸಾಲದು. ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ, ಅಸ್ಪೃಶ್ಯತೆ, ಅಸಮಾನತೆಯನ್ನು ಹೋಗಲಾಡಿಸಬೇಕು ಜತೆಗೆ ಮಕ್ಕಳಲ್ಲಿ ಬಾಲ್ಯದಲ್ಲಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ದೆಸೆಯಲ್ಲೇ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು ಎಂದರು. 
ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಫ್ರೊ. ಜೆ ಸೋಮಶೇಖರ್ ಅವರು ಮಾತನಾಡಿ, ಜನರಲ್ಲಿ ಜಾಗೃತಿ ಮೂಡಿಸಬೇಕಾದ ಮಾಧ್ಯಮಗಳು ಮೌಢ್ಯತೆ, ಕಂದಾಚಾರಗಳನ್ನು ಬಿತ್ತುವುದರಲ್ಲಿ ನಿರತವಾಗಿರುವದರಿಂದ ಸಮಾಜದಲ್ಲಿ ವಿಕೃತಿಗಳು ಹೆಚ್ಚುತ್ತಿವೆ.  ನಡವಳಿಕೆಗಳನ್ನು ಬದಲಾಯಿಸಿಕೊಳ್ಳುವ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕಿದೆ ಎಂದು ಹೇಳಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ, ಸಂಸ್ಕೃತಿ ಪ್ರಕಾಶನದ ಸಿ ಮಂಜುನಾಥ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿ ಕುಲಸಚಿವ ಫ್ರೊ. ವಿಜಯಕುಮಾರ್, ಲೋಹಿಯಾ ಪ್ರಕಾಶನದ ಸಿ ಚೆನ್ನಬಸವಣ್ಣ, ರಂಗ ಕಲಾವಿದೆ ಕೂಡ್ಲಿಗಿಯ ಬಿ ಶಿವಕುಮಾರಿ, ರಾಷ್ಟ್ರೀಯ ಸೇವಾ ಯೋಜನಾ ಕೋಶದ ರಾಜ್ಯ ಸಂಪರ್ಕಾಧಿಕಾರಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಉಪಸ್ಥತರಿದ್ದರು.
ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಕವಿಗಳೊಂದಿಗೆ ಸಂವಾದಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ೨೦೧೪ ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ರಂಗ ಕಲಾವಿದೆ ಬಿ ಶಿವಕುಮಾರಿ ಹಾಗೂ ಕುಲಪತಿ ಫ್ರೊ. ಜೆ ಸೋಮಶೇಖರ್ ಅವರನ್ನು ಸಂಸ್ಕೃತಿ ಪ್ರಕಾಶನದ ಪರವಾಗಿ ಸತ್ಕರಿಸಿ ಗೌರವಿಸಲಾಯಿತು.
ಸಹಾಯಕ ಪ್ರಾಧ್ಯಾಪಕ ಡಾ. ಶಾಂತನಾಯ್ಕ ಸ್ವಾಗತಿಸಿದರು. ಜಾನಪದ ಗಾಯಕ ಎಸ್ ಎಂ ಹುಲುಗಪ್ಪ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಹೊನ್ನೂರಾಲಿ ನಿರೂಪಿಸಿದರು. ವಿವಿ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಡಾ. ರಾಮಕೃಷ್ಣ ವಂದಿಸಿದರು.
Please follow and like us:
error

Related posts

Leave a Comment