ರಾಜ್ಯಾಧ್ಯಕ್ಷ ಪಟ್ಟದತ್ತ ಬಿಎಸ್‌ವೈ

 *ಡಿವಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲು ಬೆಂಬಲಿಗರ ಒತ್ತಾಯ
*ಯಡಿಯೂರಪ್ಪ ಬಣದ ತೀವ್ರ ವಿರೋಧ
ಬೆಂಗಳೂರು, ಜು.9: ನಿರ್ಗಮನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಅವರ ಬೆಂಬಲಿಗ ಸಚಿವರು ಹಾಗೂ ಶಾಸಕರು ಹೈಕಮಾಂಡ್‌ಗೆ ಒತ್ತಾಯ ಹೇರಿದ್ದು, ಇದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಣ ವಿರೋಧ ವ್ಯಕ್ತಪಡಿಸಿದೆ.ಯಾವುದೇ ಕಾರಣಕ್ಕೂ ಸದಾನಂದ ಗೌಡರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬಾರದು ಎಂದು ಆಗ್ರಹಿಸಿರುವ ಯಡಿಯೂರಪ್ಪ ಬಣ, ಗೌಡರನ್ನು ರಾಜ್ಯ ರಾಜಕೀಯದಿಂದ ದೂರವಿಡಲು ಷಡ್ಯಂತ್ರ ರೂಪಿಸಿದೆ. ನಂದ ಗೌಡರನ್ನು ನಿನ್ನೆ ‘ಅನುಗ್ರಹ’ದಲ್ಲಿ ಅವರ ಬೆಂಬಲಿಗ ಸಚಿವರು ಹಾಗೂ ಶಾಸಕರು ಭೇಟಿಯಾಗಿದ್ದರು. ಈ ವೇಳೆ ರಾಜ್ಯಾಧ್ಯಕ್ಷ ಪಟ್ಟವನ್ನು ಅವರು ಅಲಂಕರಿಸಬೇಕು. ಇದಕ್ಕೆ ತಾವು ವರಿಷ್ಠರಿಗೆ ಒತ್ತಾಯ ಹೇರುತ್ತೇವೆ ಎಂದು ಹೇಳಿ ಒಪ್ಪಿಗೆಯನ್ನೂ ಪಡೆದಿದ್ದರು.
ಈ ವಿಷಯ ಯಡಿಯೂರಪ್ಪ ಬಣಕ್ಕೆ ತಿಳಿಯು ತ್ತಿದ್ದಂತೆ ಇಂದು ಡಾಲರ್ಸ್‌ ಕಾಲನಿಯಲ್ಲಿರುವ ಯಡಿಯೂರಪ್ಪನವರ ನಿವಾಸದಲ್ಲಿ ಸಭೆ ಸೇರಿ, ಬಿರುಸಿನ ಚರ್ಚೆ ನಡೆಸಿತು.ಸಭೆಯಲ್ಲಿ ಯಡಿಯೂರಪ್ಪ, ಸಚಿವರಾದ ಬಸವರಾಜ ಬೊಮ್ಮಾಯಿ, ಸಿ.ಎಂ.ಉದಾಸಿ, ಮುರುಗೇಶ್ ನಿರಾಣಿ, ಸೋಮಣ್ಣ ಸೇರಿದಂತೆ ಹಲವರು ಹಾಜರಿದ್ದರು.ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಯಡಿಯೂರಪ್ಪ, 2013ರ ಜನವರಿಯಲ್ಲಿ ಹಾಲಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪನವರ ಅವಧಿ ಅಂತ್ಯಗೊಂಡ ನಂತರ ಈ ಪಟ್ಟವೇರಲು ತಂತ್ರ ರೂಪಿಸಿದ್ದಾರೆ.
ಈಶ್ವರಪ್ಪ ಅವಧಿ ಮುಗಿಯುತ್ತಿದ್ದಂತೆ ವಿಧಾನಸಭೆಯ ಚುನಾವಣೆ ಕೂಡಾ ಎದುರಾಗಲಿದ್ದು, ಈ ವೇಳೆ ಪಟ್ಟ ಅಲಂಕರಿಸಿದರೆ ಮುಂದೆ ಮತ್ತೆ ಸಿಎಂ ಪಟ್ಟಕ್ಕೇರುವುದು ಸುಲಭ. ಜೊತೆಗೆ ಈ ಸಂದರ್ಭದಲ್ಲಿ ಸಿಬಿಐ ಸೇರಿದಂತೆ ತಮ್ಮ ಮೇಲಿರುವ ಎಲ್ಲ ವಿಚಾರಣೆ, ಆರೋಪಗಳಿಂದ ಮುಕ್ತರಾಗಿ ಹೊರಬರುವ ವಿಶ್ವಾಸವಿಟ್ಟುಕೊಂಡು ರಾಜ್ಯಾಧ್ಯಕ್ಷ ಪಟ್ಟದ ಮೇಲೆ ಯಡ್ಡಿ ಕಣ್ಣಿಟ್ಟಿದ್ದಾರೆ.

Leave a Reply