ಸ್ವಾರ್ಥ ರಾಜಕೀಯ ಸಮಾಜದ ಶಾಂತಿ ಹಾಳು ಮಾಡುತ್ತಿದೆ- ಕೆ.ಎಸ್.ಭಗವಾನ್ ಕವಿಸಮಯ-100

ವೈಚಾರಿಕ ನೆಲೆಗಟ್ಟನ್ನು ಹೊಂದಿರದ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಸಾಧನೆಗಾಗಿ ಸಮಾಜದಲ್ಲಿ ಮನಸ್ಸು ಕದಡಿಸುವ ಕೆಲಸ ಮಾಡುತ್ತಿದೆ. ಜಾತಿ,ಧರ್ಮಗಳ ಹೆಸರಿನಲ್ಲಿ ಸಮಾಜದ ಶಾಂತಿಯನ್ನು ಕದಡಲಾಗುತ್ತಿದೆ ಎಂದು ಖ್ಯಾತಿ ಲೇಖಕ, ಸಂಸ್ಕೃತಿ ಚಿಂತಕ ಪ್ರೊ ಕೆ.ಎಸ್.ಭಗವಾನ್ ಹೇಳಿದರು. ಅವರು ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ತನ್ನ ೧೦೦ನೇ ಕವಿಸಮಯದ ನಿಮಿತ್ಯ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಸಾಹಿತ್ಯಿಕ ಕಾರ‍್ಯಕ್ರಮದಲ್ಲಿ  “ಈ ದಶಕದ ಬರಹಗಾರರ ತಲ್ಲಣಗಳು”ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವಾಲ್ಮೀಕಿ ರಾಮನನ್ನು ಒಬ್ಬ ಮನುಷ್ಯನನ್ನಾಗಿ ಚಿತ್ರಿಸಿದ. ಎಲ್ಲೂ ದೇವರೆಂದು ಚಿತ್ರಿಸಲಿಲ್ಲ. ಆದರೆ ಇಂದು ರಾಮ ದೇವರಾಗಿ ಪೂಜಿಸಲ್ಪಡುತ್ತಿದ್ದಾನೆ. ತುಂಬು ಗರ್ಭಿಣಿಯನ್ನು ಕಾಡಿಗಟ್ಟಿ ಮಹಿಳಾ ವಿರೋಧಿಯಾದ,ಶಂಭೂಕನ ಎಂಬ ಶೂದ್ರನ ವದೆ ಮಾಡಿ ದುಡಿವ ವರ್ಗದ ವಿರೋಧಿಯಾದ ರಾಮ ಹೇಗೆ ದೇವರಾಗುತ್ತಾನೆ. ಪ್ರಪಂಚದಲ್ಲಿಯೇ ಭಾರತದಂತಹ ಅನಾಗರಿಕ ಸಮಾಜ ಮತ್ತೊಂದಿಲ್ಲ. ಇದು ನಮ್ಮ ರಾಜಕೀಯ ಪಕ್ಷಗಳಿಗೆ ಮುಖ್ಯ ಅಸ್ತ್ರ  ಈ ದಶಕದ ತಲ್ಲಣಗಳು ನಮ್ಮ ದೇಶ ಯಾವತ್ತೂ ಅನುಭವಿಸುತ್ತಿರುವ ತಲ್ಲಣಗಳೇ ಆಗಿವೇ. ಈ ಸಂದರ್ಭದಲ್ಲಿ ಸಮಾಜದಲ್ಲಿ ಶಾಂತಿಯನ್ನು ,ಸಾಮರಸ್ಯವನ್ನು ಮೂಡಿಸುವ ಕೆಲಸ ಬರಹಗಾರರಿಂದ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಈ ಗೋಷ್ಠಿಯಲ್ಲಿ ಡಾ.ಅರುಣ್ ಜೋಳದ ಕೂಡ್ಲಿಗಿ ಕಾವ್ಯದ ಕುರಿತು,ಡಾ.ಜಾಜಿ ದೇವೇಂದ್ರಪ್ಪ -ಸಂಶೋಧನೆ ಮತ್ತು ವಿಮರ್ಶೆ ಹಾಗೂ ಡಾ.ಮಮ್ತಾಜ್ ಬೇಗಂ – ಚಳುವಳಿಗಳು ಹಾಗೂ ಮಹಿಳೆ ಕುರಿತು ಮಾತನಾಡಿದರು. ಗೋಷ್ಠಿಯ ಅಧ್ಯಕ್ಷತೆವಹಿಸಿಕೊಂಡಿದ್ದ ಹೋರಾಟಗಾರ ಬಸವರಾಜ್ ಸೂಳಿಬಾವಿ ಪ್ರಭುತ್ವ ಯಾವತ್ತೂ ಬರಹಗಾರರನ್ನು ಕಟ್ಟಿಹಾಕಲು ಬಯಸುತ್ತದೆ. ಭಯ ಹುಟ್ಟಿಸುವದರಿಂದಲೋ ಇಲ್ಲವೆ ಅವರಿಗೆ ಪ್ರಶಸ್ತಿ,ಪುರಸ್ಕಾರಗಳಿಂದಲೊ ಮತ್ಯಾವುದೋ ರೂಪದಿಂದ ಆಮೀಷಕ್ಕೆ ಒಳಗಾಗಿಸಿ ಅವರ ಧ್ವನಿಯನ್ನು ಹತ್ತಿಕ್ಕಲು ನೋಡುತ್ತದೆ.  ಕವಿ,ಬರಹಗಾರ ಯಾವತ್ತೂ ಪ್ರಭುತ್ವದ ವಿರುದ್ಧ ಜನಸಾಮಾನ್ಯನ ಧ್ವನಿಯಾಗಿರಬೇಕು. ತನ್ನ ಬರಹವನ್ನು ಮೀರಿ ಪ್ರಭುತ್ವದ ಜೊತೆ ಒಪ್ಪಂದ ಮಾಡಿಕೊಳ್ಳಬಾರದು ಎಂದು ಹೇಳಿದರು. 
ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವಪುರಸ್ಕಾರ ಪಡೆದ ವೀರಣ್ಣ ಮಡಿವಾಳಿರಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 
ಗೋಷ್ಠಿಯಲ್ಲಿ ಪ್ರಾರ್ಥನೆಯನ್ನು ಅನಸೂಯಾ ಜಾಗೀರದಾರ,ಸ್ವಾಗತವನ್ನು ಲಲಿತಾ ಭಾವಿಕಟ್ಟಿ, ಪ್ರಾಸ್ತಾವಿಕವಾಗಿ ಮಹೇಶ ಬಳ್ಳಾರಿ ಮಾತನಾಡಿದರೆ ಕಾರ‍್ಯಕ್ರಮದ ನಿರೂಪಣೆಯ ಎನ್.ಜಡೆಯಪ್ಪ ಹಾಗೂ ವಂದನಾರ್ಪಣೆಯನ್ನು ಶಾಂತಪ್ಪ ಬಡಿಗೇರ ನೆರವೇರಿಸಿದರು.
ಪುಸ್ತಕಗಳ ಬಿಡುಗಡೆ
ಮಧ್ಯಾಹ್ನ  ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ  ವಿಠ್ಠಪ್ಪ ಗೋರಂಟ್ಲಿಯವರ- ಒಳನೋಟ, ಅಲ್ಲಮಪ್ರಭು ಬೆಟ್ಟದೂರರ-ಸಹಜ ವಿಮರ್ಶೆ , ಎ.ಎಸ್.ಮಕಾನದಾರ ಸಂಪಾದಿಸಿದ ಬೊಗಸೆ ತುಂಬ ಬಯಲು ಕಥಾಸಂಕಲನ ಹಾಗೂ ಸಿರಾಜ್ ಬಿಸರಳ್ಳಿಯವರ ಕೊಪ್ಪಳ ಜಿಲ್ಲಾ ಡೈರೆಕ್ಟರಿ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಪುಸ್ತಕಗಳ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪುರಸ್ಕಾರವನ್ನು ಪಡೆದಿರುವ ಗುರುಮೂರ್ತಿ ಪೆಂಡಕೂರರು ಮಾತನಾಡಿ ಕವಿಸಮಯ,ಲೇಖಕರ ಒಕ್ಕೂಟದಂತಹ ಕಾರ‍್ಯಕ್ರಮಗಳಿಂದ ನಿರಂತರ ಸಾಹಿತ್ಯ ಚಟುವಟಿಕೆಗಳು ನಡೆಯುತ್ತಿರಬೇಕು. ಅಮೇರಿಕಾದಲ್ಲಿ ಕವಿಸಮಯದ ರೀತಿಯ ಚಟುವಟಿಕೆಗಳು ನಡೆಯುತ್ತಿವೆ. ಅದರ ಪ್ರೇರಣೆಯಿಂದ ನಾನೂ ಈ ರೀತಿಯ ಕಾರ‍್ಯಕ್ರಮಗಳನ್ನು ನಮ್ಮ ಊರಿನಲ್ಲಿ ಹಮ್ಮಿಕೊಳ್ಳುತ್ತಿದ್ದೇನೆ. ನಮ್ಮಲ್ಲಿ ಸರಕಾರ ಪುಸ್ತಕಗಳ ಸಗಟು ಖರೀದಿಗೆ ಅವಕಾಶ ನೀಡಿರುವುದರಿಂದ ಹೇರಳವಾಗಿ ಪುಸ್ತಕಗಳ ಪ್ರಕಟವಾಗುತ್ತಿವೆ. ಆದರೆ ಪಕ್ಕದ ಆಂದ್ರ ಪ್ರದೇಶದಲ್ಲಿ  ಸರಕಾರದ ಯಾವುದೇ ಸಹಾಯವಿಲ್ಲದೇ ನೇರವಾಗಿ ಪ್ರಕಾಶಕರೆ ತಮ್ಮ ಪುಸ್ತಕಗಳನ್ನು ಜನರಿಗೆ ತಲುಪಿಸುವಂತಹ ಕೆಲಸ ಮಾಡುತ್ತಿದ್ದಾರೆ. ಇದು ಜನಸಾಮಾನ್ಯರನ್ನು ತಲುಪಲು ನೆರವಾಗುತ್ತದೆ. ಆಂದ್ರದ ರೀತಿಯಲ್ಲಿ ಪುಸ್ತಕ ಖರೀದಿಸುವ ಸಂಸ್ಕೃತಿ ನಮ್ಮಲ್ಲಿ ಬೆಳೆಯಬೇಕು. ನಮ್ಮ ಸಾಹಿತ್ಯ ಪರಂಪರೆ ಹಳ್ಳಿಗಳಿಗೂ ತಲುಪಬೇಕು ಎಂದರು.
ಅನ್ಮೋಲ್ ಟೈಂಸ್ ಪತ್ರಿಕೆಯ ಸಂಪಾದಕರಾದ ವಲೀಸಾಹೇಬ್ ಮಾತನಾಡಿ ಬರಹಗಾರ ಮತ್ತು ಪತ್ರಕರ್ತನ ಮೇಲೆ ಗುರುತರವಾದ ಜವಾಬ್ದಾರಿಗಳಿವೆ. ಅದನ್ನು ಅರಿತುಕೊಂಡು ಬರೆಯಬೇಕು. ಬರಹಗಾರನಿಗೆ,ಪತ್ರಕರ್ತನಿಗೆ ಸಮಾಜದ ಬೆಂಬಲ,ಪ್ರೋತ್ಸಾಹ ಅಗತ್ಯ ಅವರು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಾರೆ ಎಂದರು.
ಇನ್ನೊರ್ವ ಅತಿಥಿ ಸಯ್ಯದ್ ಪೌಂಡೇಷನ್ ಅಧ್ಯಕ್ಷರಾದ ಕೆ.ಎಂ.ಸಯ್ಯದ್ ಕೊಪ್ಪಳದಲ್ಲಿ ಕವಿಸಮಯದಿಂದ ನಿರಂತರವಾಗಿ ಸಾಹಿತ್ಯಿಕ ಚಟುವಟಿಕೆಗಳು ನಡೆಯುತ್ತಿವೆ. ಇದು ಶ್ಲಾಘನೀಯ. ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಸಾಹಿತಿಗಳ ಕೆಲಸ ನಿರಂತರವಾಗಿರಲಿ ಎಂದು ಆಶಿಸಿದರು. 
ಹಿರಿಯ ಪತ್ರಕರ್ತ ಬಸವರಾಜ್ ಶೀಲವಂತರ ಮಾತನಾಡಿ ಕವಿಸಮಯದ ಹಲವಾರು ಕಾರ‍್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದೇನೆ. ಇದು ಹೊಸ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದೆ. ಬರೆದಿದ್ದೆಲ್ಲ ಕವಿತೆಯಾಗುವುದಿಲ್ಲ ಎನ್ನುವ ಅರಿವಿನೊಂದಿಗೆ ಬರಹಗಾರನಾದವನು ಸೂಕ್ತ ಸಾಮಾಜಿಕ ಪ್ರಜ್ಞೆಯನ್ನಿಟ್ಟುಕೊಂಡು ಬರೆಯಬೇಕು ಎಂದು ಹೇಳಿದರು.
ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಮೀಡಿಯಾ ಕ್ಲಬ್ ಅಧ್ಯಕ್ಷರಾದ ಸೋಮರಡ್ಡಿ ಅಳವಂಡಿ ಮಾತನಾಡಿ ವಿಶ್ವದ ನಾನಾ ಸಾಹಿತ್ಯ ಕನ್ನಡಕ್ಕೆ ಬರಬೇಕು. ಇದರಿಂದ ನಮ್ಮ ಜ್ಞಾನದ ವಿಸ್ತಾರವಾಗುತ್ತದೆ ಜೊತೆಗೆ ಬದುಕನ್ನು ನೋಡುವ ವಿಶಾಲದೃಷ್ಟಿ ಬೆಳೆಯುತ್ತದೆ. ಪ.ಬಂಗಾಲ, ಕೇರಳದಂತಹ ರಾಜ್ಯಗಳ ಜನರು ಹೆಚ್ಚು ಪ್ರಜ್ಞಾವಂತರಾಗಿರಲು ಕಾರಣ ಅಲ್ಲಿ ಬೇರೆ ಭಾಷೆಯ ಸಾಹಿತ್ಯ ಅವರದೇ ಭಾಷೆಗಳಲ್ಲಿ ಲಭ್ಯವಾಗಿರುವುದು. ಈ ಕೆಲಸ ನಮ್ಮಲ್ಲೂ ನಡೆಯಬೇಕಿದೆ. ಅಲ್ಲದೇ ತಾಂತ್ರಿಕ ಶಿಕ್ಷಣ ಹಾಗೂ ಸಾಮಾನ್ಯ ಶಿಕ್ಷಣವೂ ಸಹಿತ ನಮ್ಮದೇ ಭಾಷೆಯಲ್ಲಿ ನೀಡುವಂತಾದಾಗ ಭಾಷೆ ಬೆಳೆಯುತ್ತದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕನ್ನಡ ಭಾಷೆಗೆ ಆತಂಕ ಕಾದಿದೆ ಎಂದು ಅಭಿಪ್ರಾಯಪಟ್ಟರು. 
ವೇದಿಕೆಯ ಮೇಲೆ  ಕಾಟನ್ ಪಾಷಾ, ವಿಠ್ಠಪ್ಪ ಗೋರಂಟ್ಲಿ, ಅಲ್ಲಮಪ್ರಭು ಬೆಟ್ಟದೂರು, ಎ.ಎಸ್.ಮಕಾನದಾರ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿರಾಜ್ ಬಿಸರಳ್ಳಿ ಕವಿಸಮಯ ನಡೆದು ಬಂದ ದಾರಿ ಬಗ್ಗೆ ಮಾತನಾಡಿದರು. ಕಾರ‍್ಯಕ್ರಮದ ಸ್ವಾಗತ ಶಿವಪ್ರಸಾದ ಹಾದಿಮನಿ, ನಿರೂಪಣೆ ಬಸವರಾಜ್ ಸಂಕನಗೌಡರ ಹಾಗೂ ವಂದನಾರ್ಪಣೆಯನ್ನು ವಿಜಯಲಕ್ಷ್ಮೀ ಮಠದ ನೆರವೇರಿಸಿದರು.
ಕವಿಗೋಷ್ಠಿ
ಪುಸ್ತಕಗಳ ಬಿಡುಗಡೆಯ ನಂತರ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ೫೫ಕ್ಕೂ ಹೆಚ್ಚು ಕವಿಗಳು ತಮ್ಮ ಕವನಗಳ ವಾಚನ ಮಾಡಿದರು.  ಕವಿಗೋಷ್ಠಿಗೆ ಚಾಲನೆ ನೀಡಿದ ಚಿದಾನಂದ ಸಾಲಿ ವರ್ತಮಾನದ ಕಾವ್ಯ ಗಟ್ಟಿಯಾದ ರೂಪಕಾತ್ಮಕ ಪರಿಭಾಷೆಯಲ್ಲಿ ಬರುತ್ತಿದೆಯಾದರೂ  ನಮ್ಮ ಸಾಮಾಜಿಕ ಆಗು ಹೋಗುಗಳಿಗೆ ನಿಖರವಾದ ಸ್ಪಂಧನೆಯಲ್ಲಿ ಸೋಲುತ್ತಿದೆ ಎಂದು ಎನಿಸುತ್ತಿದೆ. ಭಾಷಾ ಕಸರತ್ತಿನ ಭಾರದಲ್ಲಿ  ಕಾವ್ಯ ಮತ್ತೆ ನವ್ಯದೆಡೆಗೆ  ವಾಲುತ್ತಿದೆಯೇನೋ ಎಂಬ ಸಂದೇಹ ಬರುತ್ತಿದೆ. ಲಂಭಿಸದೇ ಸಂಕ್ಷಿಪ್ತವಾಗಿ ಹೇಳುವ ಆ ಮೂಲಕ  ನಮ್ಮ ಪ್ರಸ್ತುತ ಬದುಕಿಗೆ ಸನಿಹವಾಗಬಲ್ಲ ಕಾವ್ಯ ಹೆಚ್ಚು ಬರಬೇಕಿದೆ ಎಂದರು.
ಆಶಯ ನುಡಿಗಳನ್ನಾಡಿದ ಆರೀಫ್ ರಾಜಾ ಸಾಮಾಜಿಕ ಬದ್ಧತೆಯ ಹೆಸರಿನಲ್ಲಿ ಕಾವ್ಯ ಭಾಷೆ ಸೋಲುತ್ತಿದೆ. ಇನ್ನೊಂದೆಡೆ  ಕಾವ್ಯ ಸಶಕ್ತವಾಗುತ್ತ ಸಾಮಾಜಿಕ ಆಶಯಗಳಿಂದ ದೂರವಾಗುತ್ತಿದೆ. ಭಾಷೆಯ ಬಂಧ,ಕಾವ್ಯ ಸ್ವರೂಪದ ಹಿಡಿತ, ಸಾಮಾಜಿಕ ಬದ್ದತೆಯ ಕಾವ್ಯ ಇತ್ತೀಚಿನ ತಲೆಮಾರಿನ ಲೇಖಕರಿಂದ ಬರುತ್ತಿದೆ. ಈ ನೆಲೆಯ ಕಾವ್ಯ ಇನ್ನೂ ಹೆಚ್ಚಾಗಿ ಬರಬೇಕು ಎಂದು ಹೇಳಿದರು. 
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿಕೊಂಡಿದ್ದ ಬಿ.ಪೀರ್ ಬಾಷಾ ಕೊಪ್ಪಳದಲ್ಲಿಂದು ನಡೆದ ಕವಿಗೋಷ್ಠಿ ಹೊಸ ಪ್ರಯೋಗಳೆಡೆಗೆ,ಹೊಸ ವಿಷಯಗಳೆಡೆಗೆ ನಮ್ಮ ಕನ್ನಡ ಕಾವ್ಯ ಸಾಗುತ್ತಿರುವದನ್ನು ತೋರಿಸಿದೆ. ವೈವಿದ್ಯಮಯ ವಿಷಯಗಳಿಂದ, ವಿವಿಧ ಪ್ರಕಾರಗಳಿಂದ ಕೂಡಿದ ಕವಿಗೋಷ್ಠಿ ಯಶಸ್ಸನ್ನು ಕಂಡಿದೆ. ಭಿನ್ನ ಧ್ವನಿಗಳು, ಭಿನ್ನ ಮಾದರಿಗಳು ನಮ್ಮ ಕಾವ್ಯಕ್ಕೆ ವಸ್ತುವಾಗುತ್ತಿರುವುದು ಅಶಾದಾಯಕ ಬೆಳವಣಿಗೆ, ವ್ಯಕ್ತಿಯೊಬ್ಬ ತನ್ನ ಸ್ವನೆಲೆಯಿಂದಲೇ ತನ್ನ ಸುತ್ತಲಿನ ವಿಕಾರಗಳನ್ನು ಪ್ರತಿಭಟಿಸುವುದು ಆರೋಗ್ಯಪೂರ್ಣ ಬೆಳವಣಿಗೆ ಎಂದು ಹೇಳಿದ ಅವರು ವಾಚನ ಮಾಡಿದ ಕವನಗಳ ವಿಮರ್ಶೆ ಮಾಡಿದರು. 
ಡಾ.ಮಹಾಂತೇಶ ಮಲ್ಲನಗೌಡರ, ಎಚ್.ಎಸ್.ಪಾಟೀಲ್, ಶರಣಬಸಪ್ಪ ದಾನಕೈ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸ್ವಾಗತವನ್ನು ನಟರಾಜ ಸವಡಿ, ವಂದನಾರ್ಪಣೆ ಡಾ.ರೇಣುಕಾ ಕರಿಗಾರ ಮಾಡಿದರೆ, ವಿಜಯಲಕ್ಷ್ಮೀ ಮಠದ ಹಾಗೂ ಪುಷ್ಪಲತಾ ಏಳುಬಾವಿ ಕಾರ‍್ಯಕ್ರಮವ ನಿರ್ವಹಣೆ ಮಾಡಿದರು. 
Please follow and like us:
error