ಹಜ್ ಸಬ್ಸಿಡಿ: ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸರಿಯಾಗಿಯೇ ಇದೆ.

ಲಾಭ ಪಡೆದವರಾರು?
ಹಜ್ ಯಾತ್ರೆ ಮುಸ್ಲಿಮರ ಮೂಲಭೂತ ನಂಬಿಕೆಗಳಲ್ಲಿ ಮಹತ್ತರ ಸ್ಥಾನವನ್ನು ಪಡೆದುಕೊಂಡಿದೆ. ಇದನ್ನು ಎಲ್ಲರಿಗೂ ಕಡ್ಡಾಯ ಮಾಡಿಲ್ಲ. ಆರೋಗ್ಯ, ಹಣ ಇತ್ಯಾದಿಗಳಲ್ಲಿ ಸಮರ್ಥನಾದವನಿಗಷ್ಟೇ ಈ ಯಾತ್ರೆಯನ್ನು ಇಸ್ಲಾಂ ಧರ್ಮ ಕಡ್ಡಾಯಗೊಳಿಸಿದೆ. ಹಲವು ದುರ್ಬಲ ವರ್ಗದ ಮುಸ್ಲಿಮರಿಗೂ ಹಜ್‌ಯಾತ್ರೆಯ ಕನಸಿರುತ್ತದೆ. ಇಂತಹವರಿಗೆ ಅನುಕೂಲವಾಗಲಿ ಎಂದು ಸರಕಾರ ಹಜ್‌ಯಾತ್ರೆಯ ಸಬ್ಸಿಡಿಯನ್ನು ನೀಡುತ್ತಾ ಬಂದಿದೆ.ಆದರೆ ಈ ಸಬ್ಸಿಡಿಯ ಪ್ರಯೋಜನವನ್ನು ನಿಜಕ್ಕೂ ಪಡೆಯುತ್ತಾ ಬಂದಿರುವವರು ಯಾರು? ಬಡ ಮುಸ್ಲಿಮ್ ಹಜ್ ಯಾತ್ರಿಕರಿಗೆ ಎಷ್ಟರ ಮಟ್ಟಿಗೆ ಈ ಸಬ್ಸಿಡಿ ಪ್ರಯೋಜನಕಾರಿಯಾಗಿದೆ? ಸುಪ್ರೀಂಕೋರ್ಟ್ ಹಜ್ ಸಬ್ಸಿಡಿ ನೀತಿಯನ್ನು ರದ್ದುಗೊಳಿಸಬೇಕು ಎಂದು ಮಂಗಳವಾರ ಕೇಂದ್ರಕ್ಕೆ ಸೂಚನೆಯನ್ನು ನೀಡಿದೆ. ಈ ಆದೇಶ ಹಜ್ ಸಬ್ಸಿಡಿಯ ಹೆಸರಿನಲ್ಲಿ ನಡೆಯುತ್ತಿದ್ದ ರಾಜಕಾರಣಗಳಿಗೆ ತೆರೆ ಎಳೆಯುವುದಿದ್ದರೆ ಅದರಿಂದ ಈ ದೇಶದ ಮುಸ್ಲಿಮರು ಸಂತೋಷ ಪಡಬೇಕಾಗಿದೆ. ಯಾಕೆಂದರೆ ಈ ಸಬ್ಸಿಡಿಯನ್ನು ಮುಂದಿಟ್ಟುಕೊಂಡು ಈವರೆಗೆ ಲಾಭ ಪಡೆಯುತ್ತಿದ್ದವರು ಮುಸ್ಲಿಮರಾಗಿರಲಿಲ್ಲ. ಹಜ್ ಸಬ್ಸಿಡಿಯನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಸಂಘಪರಿವಾರ ‘ಮುಸ್ಲಿಮರ ತುಷ್ಟೀಕರಣ’ ಎಂದು ಬೊಬ್ಬೆ ಹೊಡೆಯುತ್ತಾ ಹಿಂದೂಗಳ ಮತಗಳನ್ನು ತಮ್ಮೆಡೆಗೆ ಸೆಳೆಯಲು ಪ್ರಯತ್ನಿಸುತ್ತಿತ್ತು.
ನಿಜಕ್ಕೂ ಸಬ್ಸಿಡಿಯಿಂದ ಮುಸ್ಲಿಮರಿಗೆ ಲಾಭವಾಗಿರುವುದು ನಿಜವೇ? 600 ಕೋಟಿ ರೂಪಾಯಿಯನ್ನು ಮುಂದಿಟ್ಟುಕೊಂಡು ಸರಕಾರಗಳು ನಡೆಸಿದ ರಾಜಕೀಯಕ್ಕೆ ಮುಸ್ಲಿಮರು ಬಲಿ ಪಶುವಾದರೇ? ಈ ಬಗ್ಗೆ ಚರ್ಚಿಸಲು ಇದು ಒಳ್ಳೆಯ ಸಮಯವಾಗಿದೆ.ಹಜ್ ಯಾತ್ರೆಗೆ ಸಬ್ಸಿಡಿ ನೀಡುತ್ತೇವೆ ಎಂದು ಘೋಷಿಸಿ ಸರಕಾರ ಸಬ್ಸಿಡಿಯನ್ನು ನೀಡುತ್ತಿದ್ದುದು ಏರ್ ಇಂಡಿಯಾಕ್ಕೆ. ಹಜ್‌ಯಾತ್ರೆಯ ಸಬ್ಸಿಡಿ ಒಪ್ಪಂದವನ್ನು ಸರಕಾರ ಹೊಂದಿರುವುದು ಏರ್ ಇಂಡಿಯಾ ಮತ್ತು ಸೌದಿ ಏರ್‌ಲೈನ್ಸ್‌ಗಳೊಂದಿಗೆ. ಇಷ್ಟು ಹಜ್ ಯಾತ್ರಿಕರು ಏರ್ ಇಂಡಿಯಾದ ದುಬಾರಿ ಒಪ್ಪಂದಕ್ಕೆ ತಲೆಬಾಗಬೇಕಾಗುತ್ತದೆ. ಇದಾದ ಬಳಿಕ, ಸರಕಾರ ಅದನ್ನು ಈ 600 ಕೋಟಿ ರೂಪಾಯಿಯಲ್ಲಿ ಸರಿದೂಗಿಸುತ್ತದೆ. ಇದರಿಂದ ಲಾಭವಾಗಿರುವುದು ಏರ್‌ಇಂಡಿಯಾಕ್ಕೆ ಹೊರತು, ಹಜ್ ಯಾತ್ರಿಕರಿಗಲ್ಲ.
ನಿಜಕ್ಕೂ, ಈ ಒಪ್ಪಂದದಿಂದ ಹಿಂದೆ ಸರಿದು, ಜಾಗತಿಕ ಟೆಂಡರ್ ಕರೆದು ಆ ಮೂಲಕ ಹಜ್ ಯಾತ್ರೆಯನ್ನು ಸರಕಾರ ಹಮ್ಮಿಕೊಂಡರೆ ಅದರಿಂದ ಸರಕಾರಕ್ಕೂ ಲಾಭ. ಹಜ್ ಯಾತ್ರೆಗೆ ತೆರಳುವ ಮುಸ್ಲಿಮರಿಗೂ ಲಾಭವಿದೆ. ಆದುದರಿಂದ ಈಗ ಇರುವ ಹಜ್‌ಯಾತ್ರೆ ಸಬ್ಸಿಡಿ ನೀತಿಯೇ ಅತ್ಯಂತ ಬಾಲಿಶವಾದುದು. ಏರ್‌ಇಂಡಿಯಾ ಜೊತೆಗಿನ ಒಪ್ಪಂದವನ್ನೇ ಮರು ಪರಿಶೀಲಿಸಿ, ಯಾತ್ರಿಕರಿಗೆ ಲಾಭವಾಗುವಂತೆ ಸರಕಾರ ನೋಡಬೇಕು ಹೊರತು, ಏರ್ ಇಂಡಿಯಾಕ್ಕೆ ಲಾಭವಾಗುವಂತೆ ನೋಡುವುದಲ್ಲ.
ಇದಷ್ಟೇ ಅಲ್ಲ. ಸಬ್ಸಿಡಿ ಎನ್ನುವುದು ಭಾರತದೊಳಗಿನ ಮಧ್ಯಮ ವರ್ಗಗಳಿಗೆ ಅನುಕೂಲವಾಗುವುದಕ್ಕಾಗಿ ಒದಗಿಸಿರುವುದು. ಹಜ್ ಯಾತ್ರೆಯೆನ್ನುವುದು ಇಸ್ಲಾಮ್‌ನಲ್ಲಿ ವರ್ಷಕ್ಕೊಮ್ಮೆಯೋ ಐದುವರ್ಷಕ್ಕೊಮ್ಮೆಯೋ ಆಚರಿಸುವುದಕ್ಕಿರುವ ಕರ್ಮವಲ್ಲ. ಜೀವಮಾನದಲ್ಲಿ ಒಮ್ಮೆ ಕೈಗೊಳ್ಳುವುದಕ್ಕಿರುವುದು ಹಜ್‌ಯಾತ್ರೆ. ಆದರೆ ಕೆಲವರು ಸಮಾಜದಲ್ಲಿ ತಮ್ಮ ಸ್ಥಾನಮಾನವನ್ನು ಹೆಚ್ಚಿಸಲು,ಶ್ರೀಮಂತಿಕೆಯನ್ನು ಪ್ರದರ್ಶಿಸಲು ಎರಡು ವರ್ಷಕ್ಕೊಮ್ಮೆ, ಐದು ವರ್ಷಕ್ಕೊಮ್ಮೆ ಹಜ್‌ಯಾತ್ರೆ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇವರಲ್ಲಿ ಹೆಚ್ಚಿನವರು ಸರಕಾರಿ ಪ್ರಾಯೋಜಿತ ಯಾತ್ರೆಯ ಮೂಲಕ ಹಜ್‌ನ್ನು ನಿರ್ವಹಿಸುತ್ತಾರೆ. ಇದು ದೇವರಿಗೂ, ಸರಕಾರಕ್ಕೂ ಮಾಡುವ ವಂಚನೆ ಎಂದು ಅವರು ತಿಳಿದುಕೊಂಡಂತಿಲ್ಲ. ಪದೇ ಪದೇ ಹಜ್‌ಯಾತ್ರೆಯನ್ನು ಮಾಡುವುದರಿಂದ, ನಿಜವಾದ ಫಲಾನುಭವಿಗಳು ಹಜ್‌ಯಾತ್ರೆಯಿಂದ ವಂಚಿತರಾಗುತ್ತಾರೆ.
ಸಬ್ಸಿಡಿಯ ಮೂಲಕ ವರ್ಷಕ್ಕೊಮ್ಮೆ ಮಾತ್ರ ಹಜ್‌ಯಾತ್ರೆ ಮಾಡಬಹುದು ಎನ್ನುವ ನಿಯಮವನ್ನು ಸರಕಾರ ಅನುಸರಿಸಿದ್ದರೆ, ಸರಕಾರಿ ಪ್ರಾಯೋಜಿತ ಯಾತ್ರೆ ಎಲ್ಲ ಫಲಾನುಭವಿಗಳನ್ನೂ ತಲುಪುತ್ತಿತ್ತೋ ಏನೋ. ಆದರೆ ಸರಕಾರ ಯಾವುದೋ ಲಾಬಿಗೆ ಮಣಿದಿದೆ. ಆದುದರಿಂದ, ಲಾಭ ಪಡೆದವರೇ ಮತ್ತೆ ಮತ್ತೆ ಫಲಾನುಭವಿಗಳಾಗುತ್ತಿದ್ದಾರೆ.ಹಜ್ ಯಾತ್ರೆಯ ಸಬ್ಸಿಡಿಯ ಹೆಸರಿನಲ್ಲಿ ನಡೆಯುವ ದಂಧೆ ಇಲ್ಲಿಗೇ ಮುಗಿಯುವುದಿಲ್ಲ. ಪ್ರತಿ ಹಜ್‌ಯಾತ್ರೆಯ ಸಂದರ್ಭದಲ್ಲಿ ವಿಐಪಿಗಳ ನಿಯೋಗವೂ ಯಾತ್ರಿಕರೊಂದಿಗೆ ತೆರಳುತ್ತದೆ. ಇದಕ್ಕೂ ಹಜ್‌ಯಾತ್ರೆಗೂ ಯಾವುದೇ ಸಂಬಂಧವಿಲ್ಲ. ಹಜ್‌ಯಾತ್ರೆಯ ಹೆಸರಿನಲ್ಲಿ ತೆರಳುವ ವಿಐಪಿಗಳು ಈ ಸಂದರ್ಭವನ್ನು ಸಂಪೂರ್ಣ ದುರುಪಯೋಗಪಡಿಸಿಕೊಳ್ಳುತ್ತಾರೆ. ಹಜ್‌ಯಾತ್ರೆಯ ವೌಲ್ಯಗಳು ಮತ್ತು ಪಾವಿತ್ರಕ್ಕೆ ಇವರಿಂದಾಗಿ ಧಕ್ಕೆಯುಂಟಾಗಿದೆ.
ದೇವರ ಮುಂದೆ ಬಡವರು, ಶ್ರೀಮಂತರು ಒಂದೇ ಎನ್ನುವ ವೌಲ್ಯದ ತಳಹದಿಯ ಮೇಲೆ ಇಸ್ಲಾಮ್ ನಿಂತಿದೆ. ಹಜ್‌ಯಾತ್ರಿಕರು ತಮ್ಮೆಲ್ಲ ಹಣ, ದೌಲತ್ತು, ಅಹಂಕಾರಗಳನ್ನು ಬದಿಗಿಟ್ಟು, ವಿರಾಗಿಗಳಂತೆ ಕಾಬಾದೆಡೆಗೆ ಧಾವಿಸುತ್ತಾರೆ. ಅಲ್ಲಿ ವಿಐಪಿಗಳಿಗೊಂದು, ಬಡವರಿಗೊಂದು ಎನ್ನುವಂತಹ ಭೇದಭಾವವಿಲ್ಲ. ಹೀಗಿರುವಾಗ, ಸರಕಾರ ಮುಸ್ಲಿಮರ ಹೆಸರಲ್ಲಿ ಬಿಡುಗಡೆ ಮಾಡಿದ ಹಣವನ್ನು ಈ ವಿಐಪಿಗಳು ದುಂದುವೆಚ್ಚ ಮಾಡುತ್ತಿರುವುದು ಎಷ್ಟು ಸರಿ?
dಈ ದೇಶದ ಮುಸ್ಲಿಮರ ಸಂಖ್ಯೆಗೆ ಮತ್ತು ಅವರ ಬಡತನಕ್ಕೆ ಹೋಲಿಸಿದರೆ 600 ಕೋಟಿ ರೂ. ಒಂದು ಜುಜುಬಿ ಮೊತ್ತ. ಈ ಮೊತ್ತ ಯಾರ್ಯಾರ ಪಾಲಾಗುವುದರ ಬದಲಿಗೆ ಅದನ್ನು ಮುಸ್ಲಿಮರ ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದು. ಅಥವಾ ಸುಪ್ರೀಂಕೋರ್ಟ್ ಹೇಳಿದಂತೆ ಹಜ್ ಸಬ್ಸಿಡಿ ನೀತಿಯನ್ನೇ ಪುನಃಪರಿಶೀಲಿಸಬೇಕು.ಹಜ್‌ಯಾತ್ರೆಯ ಹೆಸರಿನಲ್ಲಿ ಹಂಚುವ ಹಣ ಯಾವುದೋ ವಿಮಾನ ಸಂಸ್ಥೆಯ ಅಥವಾ ವಿಐಪಿಗಳ ಪಾಲಾಗದಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯ. ಆದುದರಿಂದ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸರಿಯಾಗಿಯೇ ಇದೆ.
Please follow and like us:
error