fbpx

ವಿಷದ ಬೇರಿನ ‘ಕವಲು’ :ಕವಲು ಕಾದಂಬರಿ ವಿಮರ್ಶೆ


ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಾರಕ್ಕೆ ,ವಿವಾದಕ್ಕೆ ಒಳಗಾದ ಕೃತಿ”ಕವಲು’. ಎಸ್.ಎಲ್.ಭೈರಪ್ಪನವರು ಕನ್ನಡದ ಅಗ್ರಗಣ್ಯ ಲೇಖಕರು. ಅತೀ ಹೆಚ್ಚು ಕನ್ನಡಿಗರಿಗೆ ಕಾದಂಬರಿಯ ಓದಿನ ರುಚಿ ಹೆಚ್ಚಿಸಿದವರು. ಈಗಲೂ ಕನ್ನಡದಲ್ಲಿ ಸಂಖ್ಯೆಯ ಲೆಕ್ಕದಲ್ಲಿ ಹೆಚ್ಚು ಮಾರಾಟವಾಗುವ ಕೃತಿಗಳೆಂದರೆ ಎಸ್.ಎಲ್.ಬೈರಪ್ಪನವರವು. ಪುಸ್ತಕ ಪ್ರಕಟಣೆ ಎನ್ನುವದು ಈಗ ದೊಡ್ಡ ಉದ್ಯಮವಾಗಿ ಬೆಳೆದಿದೆ. ಹತ್ತಾರು ಪ್ರಕಾಶನಗಳು ಹುಟ್ಟಿಕೊಂಡಿವೆ. ಕೆಲವು ಕಾರ್ಪೋರೇಟ್ ಶೈಲಿಯಲ್ಲಿ ವ್ಯವಹಾರ ನಡೆಸುತ್ತಿವೆ. ಮಾರಾಟಕ್ಕಾಗಿ ಕೆಲವೊಮ್ಮೆ ಮಾರಾಟಗಾರರು ಗಿಮಿಕ್ ಗಳಿಗೆ ಮೊರೆ ಹೋಗುತ್ತಾರೆ. ಹತ್ತನೇ ಆವೃತ್ತಿ, ೧೫ನೇ ಆವೃತ್ತಿ ೫೦ ಸಾವಿರ ಪ್ರತಿಗಳ ಮಾರಾಟವಾಗಿದೆ ಎಂಬಂತಹ ಸಂಖ್ಯೆಯ ಶೋಗಳಲ್ಲಿ ತೊಡಗುತ್ತಾರೆ. ಬೈರಪ್ಪನವರ ಕವಲು ಕಾದಂಬರಿ ಬಿಡುಗಡೆಯಾದ ವಾರದೊಳಗೆ ಮತ್ತೆ ಮುದ್ರಿಸಬೇಕಾಯಿತು. ಹಲವಾರು ಆವೃತ್ತಿಗಳನ್ನು ಕಂಡಿತು ಎನ್ನಲಾಗುತ್ತಿದೆ. ಬಿಡುಗಡೆಯ ಮುನ್ನವೇ ಪುಸ್ತಕಗಳು ಮಾರಾಟವಾಗಿವೆ ಎನ್ನುವ ಮಾತು ಕೇಳಿ ಬಂತು. ಹೀಗಾಗಿದೆ ಎಂದರೆ ಕನ್ನಡದ ಪುಸ್ತಕೋಧ್ಯಮಕ್ಕೆ ಶುಕ್ರದೆಸೆ ಇದೆಯಂತಲೇ ಅರ್ಥ.
ಆದರೆ ಎಸ್.ಎಲ್.ಭೈರಪ್ಪನವರಂತಹ ಅಗ್ರ ಲೇಖಕರು ಸಹ ತಮ್ಮ ಪುಸ್ತಕಗಳ ಮಾರಾಟಕ್ಕೆ ಗಿಮಿಕ್ ಗಳ ಮೊರೆ ಹೋಗುವುದು, ಕೋಮು ಭಾವನೆಗಳನ್ನು ಕೆರಳಿಸುವುದು ಕಂಡರೆ ಅಯ್ಯೋ ಎನಿಸುತ್ತದೆ. ಹೊರಗೆ ಕೆಲಸ ಮಾಡುವ ,ಕಲಿತ, ಅಧುನಿಕ ಮನೋಭಾವದ , ಸ್ವಬುದ್ದಿಯನ್ನು ಉಪಯೋಗಿಸುವ , ಹಕ್ಕಿಗಳಿಗಾಗಿ ಹೋರಾಡುವ ಹೆಣ್ಣನ್ನು ಹೀನವಾಗಿ ತೋರಿಸಲೇಬೇಕು ಎನ್ನುವ ಪೂರ್ವಾಗ್ರಹದಿಂದಲೇ ಕಾದಂಬರಿ ರಚಿತವಾಗಿದೆ. ಇಲ್ಲಿಯ ಗಂಡು ಪಾತ್ರಗಳೆಲ್ಲ ಸೋಲುವುದಕ್ಕಾಗಿಯೇ ಹುಟ್ಟಿವೆ. ಒಂದೇ ಒಂದು ಗಂಡು ಪಾತ್ರವೂ ಹೆಣ್ಣಿಗೆ ಸಮವಾಗಿ ಮಾತನಾಡುವುದಿಲ್ಲ. ಅವರ ವ್ಯಬಿಚಾರ, ಅನಾಚಾರಗಳಿಗೆಲ್ಲ ತಾತ್ವಿಕ ಅರ್ಥವಿದೆ. ಅವರೆಲ್ಲ ಕೆಟ್ಟ ಕಾರ್‍ಯಗಳಿಗೂ ಈ ಕಲಿತ , ಬಳೆ ತೊಡದ, ಕುಂಕುಮ ಹಚ್ಚದ , ಹಕ್ಕಿಗಾಗಿ ಹೋರಾಡುವ ಹೆಣ್ಣುಗಳೇ ಕಾರಣ.
ಫ್ಯಾಕ್ಟರಿಯ ಮಾಲಿಕ ತನ್ನ ಹೆಂಡತಿ ಸತ್ತ ಬಳಿಕೆ ಮರುಮದುವೆಯಾಗದೇ ತನ್ನದೇ ಆಫೀಸಿನವಳ ಜೊತೆ ಬೇಕೋ ಬೇಡ ಎನ್ನುವಂತೆ (ಓದುಗರು ಅಂದುಕೊಳ್ಳಬೇಕು) ಅನಿವಾರ್‍ಯವಾಗಿ ದೇಹ ಸಂಬಂಧ ಬೆಳೆಸುತ್ತಾನೆ. ಆದರೂ ಅವನು ಆ ಸಮಯದಲ್ಲಿ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಮಾತನಾಡುತ್ತಾನೆ. ಅವಳು ಎನೂ ತೊಂದರೆ ಇಲ್ಲವೆನ್ನುತ್ತಾಳೆ ಇದು ಅವಳ ಮೋಸದ ಆರಂಭ. ನಂತರ ಕೆಲವೇ ದಿನಗಳಲ್ಲಿ ಅವಳು ತಾನು ಗರ್ಭವತಿಯಾಗಿರುವುದಾಗಿ ಹೇಳಿ ಮದುವೆಯಾಗಲೇ ಬೇಕೆಂದು ಒತ್ತಾಯ ತರುತ್ತಾಳೆ. ಅದೂ ಹೇಗೆ ಕಾಲೇಜು ಹುಡುಗಿಯರು, ಮಹಿಳಾ ಹೋರಾಟಗಾರ್ತಿಯರು ಫ್ಯಾಕ್ಟರಿಗೆ ಬಂದು ಅವನಿಗೆ ಧಮಕಿ ಹಾಕುತ್ತಾರೆ. ಹೆದರಿದ ಅವನು ಮದುವೆಯಾಗುತ್ತಾನೆ. ಮದುವೆಯಾದ ಮೇಲೆಯೂ ಅವನು ತನ್ನ ಹೆಂಡತಿಯಿಂದ ಸುಖ ಪಡೆದುಕೊಳ್ಳಲಾಗದೇ ವೇಶ್ಯೆಯರ ಮೊರೆ ಹೋಗುತ್ತಾನೆ. ಕೊನೆಗೊಂದು ದಿನ ಪೋಲೀಸರು ರೈಡ್ ಮಾಡಿದಾಗ ಸಿಕ್ಕಿಬಿದ್ದು ಜೈಲು ಸೇರುತ್ತಾನೆ. ಅವನು ಅಲ್ಲಿ ಹೋಗಿದ್ದ ತಪ್ಪಲ್ಲ ಸಿಕ್ಕಿ ಬಿದ್ದದ್ದು ತಪ್ಪು. ಮತ್ತು ಲಾಡ್ಜ್ ನ ಮಾಲಿಕ ಪೋಲೀಸರಿಗೆ ತಕ್ಕ ಮಾಮೂಲು ನೀಡದ್ದರಿಂದ ಸಿಕ್ಕಿ ಬಿದ್ದ ಅದರಲ್ಲಿ ಅವನ ತಪ್ಪೇನಿಲ್ಲ ಎಂಬಂತ ಭಾವನೆಯನ್ನು, ಅವನ ಪರವಾಗಿ ಅನುಕಂಪ ಬೆಳೆಸಲೇ ಬೇಕು ಎನ್ನುವುದಕ್ಕಾಗಿ ಬೈರಪ್ಪನವರು ಒದ್ದಾಡುತ್ತಲೇ ಹೋಗುತ್ತಾರೆ.
ಅಮೇರಿಕದಲ್ಲಿರುವ ಅವನ ಅಳಿಯನೂ ಹೆಣ್ಣಿನಿಂದ ಶೋಷಣೆಗೊಳಗಾದವನು ಎರಡು ಮದುವೆ ಮಾಡಿಕೊಂಡರೂ ಮೋಸ ಹೋದವನು ಪಾಪ!. ಲಿವಿಂಗ್ ಟುಗೇದರ್ ಎಂಜಾಯ್ ಮಾಡುತ್ತಿದ್ದವನು ಅರಿಯದೇ ಹೆಣ್ಣಿನ ಮೋಸದ ಬಲೆಗೆ ಬಿದ್ದು ಕೊನೆಗೆ ಅವಳಿಂದ ಮುಕ್ತಿ ಪಡೆಯಲು ಒದ್ದಾಡುತ್ತಾನೆ. ತಾನು ದುಡಿದದ್ದನ್ನೆಲ್ಲ ಅವಳಿಗೆ ಸುರಿದು ವಾಪಸ್ ಭಾರತಕ್ಕೆ ಬಂದು ಆದರ್ಶಯುತವಾಗಿ ಮೂರನೇ ಮದುವೆಯಾಗುತ್ತಾನೆ. ಇಲ್ಲಿ ಅವನ ಆದರ್ಶ ಎನ್ನುವುದಕ್ಕೆ ಕಾರಣ ಅವನು ಮಾನಸಿಕವಾಗಿ ಸ್ವಸ್ಥಳಲ್ಲದ ಮಾವನ ಮಗಳನ್ನು ಮದುವೆಯಾದದ್ದು.
ಅಧುನೀಕ ಸ್ತ್ರೀಯರನ್ನು ಲಂಪಟರನ್ನಾಗಿ ತೋರಿಸುವುದಕ್ಕಾಗಿಯೇ ಈ ಕಾದಂಬರಿಯನ್ನು ಬೈರಪ್ಪನವರು ಬರೆದಿದ್ದಾರೆ. ಸ್ತ್ರೀ ಪರ ಹೋರಾಟಗಾರ್ತಿ ಉಪನ್ಯಾಸಕಿಯನ್ನು ಅತೀ ಕೀಳಾಗಿ ಚಿತ್ರಿಸಲಾಗಿದೆ. ಸ್ವಂತ ವ್ಯಕ್ತಿತ್ವದ ಅವಳಿಗೆ ಕಾಮವೊಂದೇ ಗುರಿ ಎನ್ನುವಂತೆ ಚಿತ್ರಿಸಿ ,ಮಂತ್ರಿಯೊಬ್ಬನ ಜೊತೆ ಸಂಬಂಧ ಕುದುರಿಸಿಯೇ ಬಿಡುತ್ತಾರೆ ಬೈರಪ್ಪನವರು. ಅವಳ ಪ್ರತಿ ಮಾತಿನಲ್ಲಿಯೂ ಕಾಮಕ್ಕೆ ಒತ್ತುಕೊಡುತ್ತಾ ಹೋಗುತ್ತಾರೆ. ಸ್ವಾಮಿ ಬೈರಪ್ಪನವರೇ ಕಾಮದಾಟದ ಪುಸ್ತಕ ಬರೆಯಲು ಮತ್ತು ಅದನ್ನು ಈ ಪರಿ ಪ್ರಚಾರ ಕೊಡುವುದಕ್ಕೆ ನೀವೇ ಬೇಕಿತ್ತಾ? . ಬೇರೆ ಯಾರಾದರು ಬರೆದಿದ್ದರೆ ಇಂತಹ ಪುಸ್ತಕದ ಬಗ್ಗೆ ಯಾರೂ ಹೆಚ್ಚು ಮಾತನಾಡುತ್ತಿದ್ದಿಲ್ಲ. ಬಲಪಂಥೀಯವಾದವನ್ನು ಯಾವಾಗಲೂ ಸಮರ್ಥಿಸುವ , ಅದರ ಪರವಾಗಿ ವಾದಿಸುವ ಎಸ್.ಎಲ್.ಬೈರಪ್ಪನವರಂತಹ ಹಿರಿಯ ಲೇಖಕರು ಈ ಮಟ್ಟಕ್ಕೆ ಇಳಿಯಬಾರದಿತ್ತು.
ಹೆಣ್ಣನ್ನು ಪೂಜಿಸಬೇಕು, ಗೌರವಿಸಬೇಕು ಎನ್ನುವ ಮಾತುಗಳೆಲ್ಲ ಒತ್ತಟ್ಟಿಗಿರಲಿ ಅವಳನ್ನು ಮನುಷ್ಯಳಂತೆ ನೋಡಿಕೊಂಡರೇ ಸಾಕು ಬೈರಪ್ಪನವರೇ .  ಕೈಗೆ ಬಳೆ ಹಾಕಿಲ್ಲ ಮತ್ತು ಹಣೆಗೆ ಕುಂಕಮ ಹಚ್ಚಿಕೊಂಡಿಲ್ಲವೆಂದರೇ ಅವಳನ್ನು ಹೇಗಾದರೂ ಮಾಡಿ ಕೆಟ್ಟವಳು ಎಂದು ಸಾಧಿಸಲೇಬೇಕು ಎನ್ನುವ ಮನಸ್ಥಿತಿ ಈ ಕೃತಿಯಲ್ಲಿ ಕಂಡುಬರುತ್ತಿದೆ. ಪ್ರತಿಯೊಂದು ಕೃತಿಯ ಹಿಂದೆ ಯಾವತ್ತೂ ಒಂದು ಅಜೆಂಡಾವನ್ನು ಇಟ್ಟುಕೊಂಡೇ ಬರೆಯುವ ಎಸ್.ಎಲ್.ಬೈರಪ್ಪನವರು ಬೇಕೆಂದೇ ವಿವಾದಾತ್ಮಕವಾದ ಹೇಳಿಕೆಗಳನ್ನು ಪತ್ರಿಕೆಗಳಲ್ಲಿ ನೀಡಿ ಅವುಗಳಿಂದ ತಮ್ಮ ಕೃತಿಗಳಿಗೆ ಪ್ರಚಾರ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಸಮಕಾಲೀನ ಜೀವನಕ್ಕೆ ಕನ್ನಡಿಯಾಗಿರುವ ಕೃತಿ ಇದು ಎಂದು ಪ್ರಥಮ ಪುಟಗಳಲ್ಲಿಯೇ ಬರೆದಿರುವ ಪ್ರಕಾಶಕರು ಸಮಕಾಲೀನ ಜೀವನವನ್ನು ಹಾದರಕ್ಕೆ ಹೋಲಿಸುತ್ತಿದ್ದಾರೇನು ಎನಿಸುತ್ತದೆ. ಬೈರಪ್ಪನವರ ಮನಸ್ಥಿತಿ ಆದಷ್ಟು ಬೇಗ ಸುಧಾರಿಸಲಿ
Please follow and like us:
error

Leave a Reply

error: Content is protected !!