೪. ೮ ಕೋಟಿ ರೂ. ವೆಚ್ಚದ ಎನ್.ಹೆಚ್. ರಸ್ತೆ ಚರಂಡಿ ಕಾಮಗಾರಿಗೆ ಚಾಲನೆ

ಕೊಪ್ಪಳ ಜೂ.: ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-೬೩ ರ ರಸ್ತೆ ಅಗಲೀಕರಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ರಸ್ತೆಯ ಇಕ್ಕೆಲಗಳಲ್ಲಿ ೪. ೮ ಕೋಟಿ ರೂ. ವೆಚ್ಚದಲ್ಲಿ ಚರಂಡಿ ನಿರ್ಮಿಸುವ ಕಾಮಗಾರಿಗೆ ಸಂಸದ ಶಿವರಾಮಗೌಡ ಅವರು ಚಾಲನೆ ನೀಡಿದರು.
ಕೊಪ್ಪಳ ನಗರದ ಬಸವೇಶ್ವರ ವೃತ್ತದ ಬಳಿ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ಸಂಸದ ಶಿವರಾಮಗೌಡ ಅವರು ಕಾಮಗಾರಿಗೆ ಚಾಲನೆ ನೀಡಿದರು.
ಕೊಪ್ಪಳ ನಗರ ವಾಸಿಗಳ ಬಹುದಿನಗಳ ಬೇಡಿಕೆಯಂತೆ ರಾಷ್ಟ್ರೀಯ ಹೆದ್ದಾರಿ-೬೩ ಈಗಾಗಲೆ ಅಗಲೀಕರಣಗೊಂಡಿದ್ದು, ರಸ್ತೆ ಅಭಿವೃದ್ಧಿ ಕಾರ್ಯ ಪ್ರಾರಂಭವಾಗಬೇಕಾಗಿದೆ. ಆದರೆ ಇದಕ್ಕೂ ಮುನ್ನ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣ ಕಾರ್ಯವಾಗಬೇಕಾಗಿದ್ದು, ಇದೀಗ ಈ ಕಾಮಗಾರಿಗೆ ಸಂಸದ ಶಿವರಾಮಗೌಡ ಅವರು ಚಾಲನೆ ನೀಡಿದರು. ೪.೮೨ ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ೦೨ ಕಿ.ಮೀ. ಉದ್ದದ ಸಿ.ಸಿ. ಡ್ರೈನ್ ನಿರ್ಮಾಣವಾಗಲಿದೆ. ಒಟ್ಟು ೨೦೨೦ ಮೀಟರ್ ಉದ್ದದ ಈ ಚರಂಡಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ೦೩ ತಿಂಗಳ ಕಾಲಮಿತಿಯನ್ನು ಯೋಜನೆಯ ಹೊಣೆ ಹೊತ್ತಿರುವ ನಿರ್ಮಿತಿ ಕೇಂದ್ರಕ್ಕೆ ಹಾಕಿಕೊಡಲಾಗಿದೆ.
ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ, ನಗರಸಭೆ ಅಧ್ಯಕ್ಷ ಸುರೇಶ್ ದೇಸಾಯಿ, ಉಪಾಧ್ಯಕ್ಷ ಅಮ್ಜದ್ ಪಟೇಲ್, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಸೇರಿದಂತೆ ನಗರಸಭೆ ಸದಸ್ಯರುಗಳು, ವಿವಿಧ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error