ನಗರದಲ್ಲಿ ಅರ್ಥಪೂರ್ಣ ಅಖಿಲ ಭಾರತ ದಲಿತ ಸಮ್ಮೇಳನಕ್ಕೆ ಸಿದ್ಧತೆ

ಕೊಪ್ಪಳ. ಜೂ. ೫. ಐತಿಹಾಸಿಕ ನಗರ ಕೊಪ್ಪಳದಲ್ಲಿ ಜೂನ ೧೮ ಹಾಗೂ ೧೯ ೨೦೧೧ ರಂದು ಎರಡು ದಿನಗಳ ಕಾಲ ನಡೆಯುವ ಮೂರನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ದಸಾಪ ರಾಜ್ಯ ಅಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಹೇಳಿದರು.
ಅವರು ಇಂದು ಪತ್ರಿಕಾ ಗೋಷ್ಟಿಯಲ್ಲಿ ಈ ವಿಷಯ ತಿಳಿಸಿದರು. ಸಮ್ಮೇಳನದ ರೂಪ ಸ್ವರೂಪದ ಕುರಿತು ಮಾತನಾಡುತ್ತ ಮಾತನಾಡಿದ ಅವರು, ಎರಡು ದಿನ ಈ ಸಮ್ಮೇಳನದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ದಲಿತ ಸಾಹಿತ್ಯ, ಸಂಸ್ಕೃತಿ, ಸಂಘಟನೆಯ ಚಿಂತನೆಯಲ್ಲಿ ತೊಡಗಿಕೊಂಡ ನೂರಾರು ಜನ ಪ್ರತಿನಿಧಿಗಳು ಹಾಗೂ ಬುದ್ಧ-ಬಸವ-ಅಂಬೇಡ್ಕರ ಚಿಂತನೆಯ ಸಾಹಿತಿಗಳು ಭಾಗವಹಿಸುವರು. ಅವರಿಗೆಲ್ಲ ಊಟ ಮತ್ತು ವಸತಿ ವ್ಯವಸ್ಥೆಯನ್ನು ಸ್ವಾಗತ ಸಮಿತಿ ಕಲ್ಪಿಸುತ್ತದೆ. ಈ ಸಮ್ಮೇಳನದಲ್ಲಿ ದಲಿತ ಸಾಹಿತ್ಯ, ಸಂಸ್ಕೃತಿ, ಚಳುವಳಿ ಕುರಿತ ಎರಡು ಉಪನ್ಯಾಸಗಳು, ಬದಲಾಗಬೇಕಾದ ದಲಿತ ಮಹಿಳಾ ಬದುಕು, ತೆಲುಗು ದಲಿತ ಸಾಹಿತ್ಯ ಕುರಿತು ಮೂರು ವಿಶೇಷ ಉಪನ್ಯಾಸಗಳು, ಗೌರವ ಪ್ರಶಸ್ತಿ ಮತ್ತು ಪುಸ್ತಕ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ, ಕಾವ್ಯ-ಕುಂಚ-ಗೀತ ಗಾಯನ, ಸಾಧಕರಿಗೆ ಸನ್ಮಾನ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಹಾಗೂ ಪುಸ್ತಕ ಪ್ರದರ್ಶನ, ಮಾರಾಟ ವ್ಯವಸ್ಥೆಯನ್ನು ಮಾಡಲಾಗುವದು. ಸಮ್ಮೇಳನದ ಸಿದ್ಧತೆಗಾಗಿ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳು, ದಲಿತ ಸಾಹಿತ್ಯ ಪರಿಷತ್ತಿಗೆ ಬೆಂಬಲ ನೀಡಿವೆ. ಎರಡು ದಿನದ ಈ ಸಮ್ಮೇಳನದ ಸಿದ್ಧತೆಗಾಗಿ ಹಣಕಾಸು ಸಮಿತಿ, ಊಟೋಪಚಾರ ಸಮಿತಿ, ವಸತಿ ಸಮಿತಿ, ವೇದಿಕೆ ಅಲಂಕಾರ ಸಮಿತಿ, ಮೆರವಣಿಗೆ ಸಮಿತಿ, ಸ್ಮರಣ ಸಂಚಿಕೆ ಅಮಿತಿ, ಪುಸ್ತಕ ಮಳಿಗೆ ಸಮಿತಿ, ಸನ್ಮಾನ ಸಮಿತಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಿತಿ ಹೀಗೆ ವಿವಿಧ ಸಮಿತಿಗಳನ್ನು ಮಾಡಿಕೊಂಡು ಸಮ್ಮೇಳನದ ಯಶಸ್ವಿಗಾಗಿ ಎಲ್ಲರೂ ಶ್ರಮವಹಿಸುತ್ತಿದ್ದಾರೆ.
ದಲಿತ ಸಾಹಿತ್ಯ ಸಂಸ್ಕೃತಿಯ ಅಧ್ಯಯನ, ಅವಲೋಕನ ಪ್ರಕಟನೆಯ ಗುರಿ, ಉದ್ದೇಶ ಇರಿಸಿಕೊಂಡು ೧೯೯೭ ಫೆಬ್ರುವರಿ ೨ ರಂದು ಗದಗದಲ್ಲಿ ಆರಂಭವಾದ ದಲಿತ ಸಾಹಿತ್ಯ ಪರಿಷತ್ತು ದಶಮಾನ ಸಂಭ್ರಮ ಆಚರಿಸಿ ೧೪ ನೇ ವರ್ಷದಲ್ಲಿ ಮುನ್ನಡೆಯುತ್ತಿದೆ. ದಲಿತ ಹಾಗೂ ದಲಿತ ಪರ ಸಾಹಿತಿ, ಚಿಂತಕರು, ಹೋರಾಟಗಾರರೆಲ್ಲ ಒಂದೇ ವೇದಿಕೆಯಡಿ ಬಂದು ಚರ್ಚಿಸುತ್ತಿದ್ದಾರೆಂದರೆ, ಅದು ದಲಿತ ಸಾಹಿತ್ಯ ಪರಿಷತ್ತು ಎಂದು ಹೇಳಬೇಕು. ಇದೇ ಹಿನ್ನಲೆಯಲ್ಲಿ ೨೦೦೮ ರಂದು ಬಿಜಾಪೂರದಲ್ಲಿ ಪ್ರಥಮ, ೨೦೦೯ ರಂದು ಬೀದರದಲ್ಲಿ ಎರಡನೆಯ ದಲಿತ ಸಾಹಿತ್ಯ ಸಮ್ಮೇಳನವನ್ನು, ಅರ್ಥಪೂರ್ಣವಾಗಿ ಮಾಡಲಾಗಿದೆ.

ಸಮ್ಮೇಳನದ ಅಧ್ಯಕ್ಷರು : ಮೂರನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಾಡಿನ ಪ್ರಖ್ಯಾತ ಕವಿಗಳೂ, ದಲಿತ ಚಿಂತಕರೂ ಆದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರನ್ನು ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಚರ್ಚಿಸಿ, ಸರ್ವಾನುಮತದಿಂದ ಆಯ್ಕೆ ಮಾಡಿದೆ. ದಲಿತ ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಪಾರವಾದದ್ದು.

ಹಾಗೆಯೇ ಸಮ್ಮೇಳನದಲ್ಲಿ ದಲಿತ ಸಾಹಿತ್ಯ ಪರಿಷತ್ತು ನೀಡುವ ಗೌರವ ಪ್ರಶಸ್ತಿಗೆ ಪ್ರಖ್ಯಾತ ಕವಿ ಡಾ. ಸತ್ಯಾನಂದ ಪಾತ್ರೋಟ ಹಾಗೂ ಕರ್ನಾಟಕದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಡಿ.ಜಿ. ಸಾಗರ್ ಅವರನ್ನು ಆಯ್ಕೆ ಮಾಡಲಾಗಿದೆ.

ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವ ಬ್ರಹದ್ದೇಶಿ ಪ್ರಶಸ್ತಿಗೆ ನಾಡಿನ ಪ್ರಸಿದ್ಧ ಗಾಯಕರಾದ ಶ್ರೀಮತಿ ಬುರ್ರ ಕಥಾ ಈರಮ್ಮ ಅವರನ್ನು ಆಯ್ಕೆ ಮಾಡಲಾಗಿದೆ. ದಲಿತ ಚೇತನ ಪ್ರಶಸ್ತಿಗೆ ಬೆಳಗಾವಿಯ ಸಮಾಜ ಸೇವಕರಾದ ಡಾ. ಭೀಮರಾವ್ ಗಸ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ದಲಿತ ಸಿರಿ ಪ್ರಶಸ್ತಿಗೆ ಪ.ಶಿ. ದೊಡ್ಡಮನಿ ಸಂಪಾದಕರು ದಲಿತ ಕ್ರಾಂತಿ ಪತ್ರಿಕೆ ಹುಬ್ಬಳ್ಳಿ ಇವರನ್ನು ಆಯ್ಕೆ ಮಾಡಲಾಗಿದೆ.ಕೊಪ್ಪಳದ ಸಾಹಿತ್ಯ ಭವನದಲ್ಲಿ ಇದೇ ತಿಂಗಳು ೧೮ ಹಾಗೂ ೧೯-೨೦೧೧ ನಡೆಯುವ ಈ ಮಹಾಸಮ್ಮೇಳನಕ್ಕೆ ನಾಡಿನ ಮೂಲೆ ಮೂಲೆಯಿಂದ ಸಾವಿರಾರು ದಲಿತಾಭಿಮಾನಿಗಳು ಆಗಮಿಸುವ ಸಾಧ್ಯತೆ ಇದೆ.
ಈ ಸಮ್ಮೇಳನವನ್ನು ನಾಡಿನ ಖ್ಯಾತ ಸಂಶೋಧಕರಾದ ಡಾ.ಎಂ.ಎಂ. ಕಲಬುರ್ಗಿ ಅವರು ಉದ್ಘಾಟಿಸಲಿದ್ದಾರೆ. ಪ್ರಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಅವರು ಸಮಾರೋಪ ಭಾಷಣವನ್ನು ಮಾಡಲಿದ್ದಾರೆ. ಬೆಂಗಳೂರು ಸಂಸ್ಕೃತ ವಿಶ್ವ ವಿದ್ಯಾಲಯದ ಕುಲಪತಿಗಳೂ, ವಿದ್ವಾಂಸರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನಾಡಿನ ವಿವಿಧ ವಿದ್ವಾಂಸರು ಗೋಷ್ಠಿಗಳಲ್ಲಿ ಭಾಗವಹಿಸಿ ಘೋಷಣೆ ನೀಡಲಿದ್ದಾರೆಂದು ತಿಳಿಸಿದರು.ಪತ್ರಿಕಾ ಸಭೆಯಲ್ಲಿ ಸಮ್ಮೇಳನದ ಸಂಯೋಜಕರು ಹಾಗೂ ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಅರ್ಜುನ ಗೊಳಸಂಗಿ, ಸಮ್ಮೇಳನದ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಜಿ. ಗೊಂಡಬಾಳ, ಕುಷ್ಟಗಿ ದುರಗಪ್ಪ ಹಿರೇಮನಿ, ಕನಕಗಿರಿ ಈರಪ್ಪ ಚಿರ್ಚನಗುಡ್ಡ, ಹನುಮಂತಪ್ಪ ಅಂಡಗಿ, ಶಿವಾನಂದ ಹೊದ್ಲೂರ ಮುಂತಾದವರು ಭಾಗವಹಿಸಿದ್ದರು.

Please follow and like us:
error