ಶ್ರೀರಾಮುಲು ಶಾಸಕ ಸ್ಥಾನಕ್ಕೆ ರಾಜೀನಾಮೆ? ಕೊಪ್ಪಳದಿಂದ ಪಕ್ಷೇತರನಾಗಿ ಸ್ಪರ್ಧಿಸುವ ಸಾಧ್ಯತೆ

ಬೆಂಗಳೂರು, ಸೆ: ಬಿಜೆಪಿ ಸರಕಾರದಿಂದ ಮನನೊಂದಿರುವ ಮಾಜಿ ಸಚಿವ, ಹಾಲಿ ಶಾಸಕ ಶ್ರೀರಾಮುಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ವ್ಯಾಪಕವಾಗಿದ್ದು, ರವಿವಾರ ಇದಕ್ಕೆ ಅಂತಿಮ ತೆರೆ ಬೀಳಲಿದೆ. ಶ್ರೀರಾಮುಲುಗೆ ಬಿಜೆಪಿಯ ನೂತನ ಸಂಪುಟದಲ್ಲಿ ಸ್ಥಾನಮಾನ ನೀಡದಿರುವುದರಿಂದ ಆಕ್ರೋಶಗೊಂಡಿರುವ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ, ಜೆಡಿಎಸ್ ಸೇರಲಿ ದ್ದಾರೆ, ಹೊಸ ಪಕ್ಷ ಕಟ್ಟಲಿದ್ದಾರೆ ಎಂಬ ವದಂತಿಗಳು ವ್ಯಾಪಕವಾಗಿದ್ದು, ಇದನ್ನು ನಾಳೆ ಶ್ರೀರಾಮುಲುರವರೇ ಸ್ಪಷ್ಟಪಡಿಸಲಿದ್ದಾರೆ. ಈ ಸಂಬಂಧ ಬೆಂಗಳೂರಿನ ಹೊಟೇಲ್ ಅಶೋಕದಲ್ಲಿ ರವಿವಾರ ಬೆಳಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ಕರೆದಿರುವ ಶ್ರೀರಾಮುಲು, ತನ್ನ ಮುಂದಿನ ನಡೆಯ ಕುರಿತು ಸ್ಪಷ್ಟವಾದ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.
ಇತ್ತೀಚಿನ ಲೋಕಾಯುಕ್ತರ ವರದಿಯಲ್ಲಿ ರೆಡ್ಡಿ ಸಹೋದರರು, ಶ್ರೀರಾಮುಲುರ ಹೆಸರು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವುದರಿಂದ ನೂತನ ಸಂಪುಟದಿಂದ ಅವರನ್ನು ದೂರವಿಡಲಾಗಿತ್ತು. ಆದರೂ ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದರೂ, ಅದಕ್ಕೆ ಪುರಸ್ಕಾರವೇ ಸಿಕ್ಕಿರಲಿಲ್ಲ. ಇದೇ ಸಂದರ್ಭದಲ್ಲಿ ಗಣಿ ಕಳಂಕಿತರಾದ ವಿ.ಸೋಮಣ್ಣರನ್ನು ಸಂಪುಟಕ್ಕೆ ಸೇರಿಸಿಕೊಂಡದ್ದು, ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲುರನ್ನು ಆಕ್ರೋಶಕ್ಕೀಡು ಮಾಡಿತ್ತು.ಈ ಸಂದರ್ಭದಲ್ಲಿ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲುರ ಪರವಾಗಿ ಪಕ್ಷದ ಹಲವು ನಾಯಕರು ಬೆಂಗಾವಲಾಗಿ ನಿಂತಿದ್ದರೂ, ಅದಕ್ಕೆ ಬಿಜೆಪಿ ಮನ್ನಣೆ ನೀಡಿರಲಿಲ್ಲ. ಇದರಿಂದ ಮುನಿಸಿಕೊಂಡ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು, ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವಾಗ ನಮ್ಮ ಸಹಕಾರ ಪಡೆದು, ಕೇವಲ ಆರೋಪ ಬಂದಾಗ ದೂರವಿಟ್ಟಿರುವುದಕ್ಕೆ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.  ಜೊತೆಗೆ ಇತ್ತೀಚೆಗೆ ತಮ್ಮ ಬೆಂಬಲಿಗ ಕೆಲವು ಶಾಸಕರನ್ನು ಇಂಡೋನೇಷ್ಯಾಕ್ಕೆ ಕರೆದೊಯ್ದು, ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಬ್ಲ್ಲಾಕ್‌ಮೇಲ್ ತಂತ್ರವನ್ನೂ ನಡೆಸಿದ್ದರು. ಆದರೂ ಬಿಜೆಪಿ ಸರಕಾರ ಯಾವುದೇ ರೀತಿಯಿಂದಲೂ ಮಣಿಯಲಿಲ್ಲ.
ಇದೇ ಸಂದರ್ಭದಲ್ಲಿ ಶ್ರೀರಾಮುಲು ಬಿಜೆಪಿ ತೊರೆದು, ಜೆಡಿಎಸ್ ಸೇರುತ್ತಾರೆ ಎಂಬ ವದಂತಿ ಕೂಡಾ ವ್ಯಾಪಕವಾಗಿ ಹಬ್ಬಿತ್ತು. ಜೊತೆಗೆ ಶ್ರೀರಾಮುಲುರೊಂದಿಗೆ ಬಳ್ಳಾರಿಯ ಕೆಲ ಜೆಡಿಎಸ್ ಮುಖಂಡರು ಕೂಡಾ ಕಾಣಿಸಿಕೊಂಡಿದ್ದು, ಇದಕ್ಕೆ ಇನ್ನಷ್ಟು ಪುಷ್ಠಿ ನೀಡಿತ್ತು. ಆದರೆ ತಾನು ಜೆಡಿಎಸ್ ಸೇರುವುದಿಲ್ಲ, ತಮ್ಮ ಬೆಂಬಲಿಗರು ಏನು ಹೇಳುತ್ತಾರೆಯೋ, ಅದರಂತೆ ಮುನ್ನಡೆಯುತ್ತೇನೆ ಎಂದು ಶ್ರೀರಾಮುಲು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದರು.ನಿನ್ನೆ ಹಾಗೂ ಇಂದು ಶ್ರೀರಾಮುಲು ಬಳ್ಳಾರಿ, ಗದಗ ಹಾಗೂ ಕೆಲವು ಜಿಲ್ಲೆಯ ತಮ್ಮ ಆಪ್ತರೊಂದಿಗೆ ಹಲವು ಸುತ್ತಿನ ಮಾತುಕತೆ ಕೂಡಾ ನಡೆಸಿದ್ದು, ಬಿಜೆಪಿ ತೊರೆಯುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಬಿಜೆಪಿಯ ನಡವಳಿಕೆಯಿಂದ ಮನನೊಂದಿರುವ ಶ್ರೀರಾಮುಲು, ರವಿವಾರ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ, ತನ್ನ ಮುಂದಿನ ರಾಜಕೀಯ ನಡೆ, ತಮ್ಮನ್ನು ದೂರವಿಟ್ಟಿರುವ ಕುರಿತು ಮಾಹಿತಿ ಕೂಡಾ ಒದಗಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಆಪ್ತ ಶಾಸಕರೊಂದಿಗೆ ಶ್ರೀರಾಮುಲು ಸಭೆ
ತನ್ನ ಮುಂದಿನ ರಾಜಕೀಯ ನಡೆಯ ಕುರಿತು ಶ್ರೀರಾಮುಲು ಇಂದು ಬಳ್ಳಾರಿಯ ಜನಾರ್ದನ ರೆಡ್ಡಿ ನಿವಾಸದಲ್ಲಿ ಹೂವಿನ ಹಡಗಲಿ ಶಾಸಕ ಚಂದ್ರ ನಾಯಕ್, ಸಿರಗುಪ್ಪ ಶಾಸಕ ಸೋಮಲಿಂಗಪ್ಪ, ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ್, ಸಂಸದರಾದ ಜೆ.ಶಾಂತಾ, ಸಣ್ಣಫಕೀರಪ್ಪ ಸೇರಿದಂತೆ ಹಲವು ಶಾಸಕರೊಂದಿಗೆ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಬಿಜೆಪಿ ಸರಕಾರದಿಂದ ಆಗಿರುವ ಅನ್ಯಾಯ, ಅಧಿಕಾರಕ್ಕೆ ಬರುವ ವೇಳೆ ಪಡೆದ ಸಹಕಾರ, ಅನಂತರ ಆರೋಪ ಕೇಳಿ ಬಂದಾಗ ದೂರ ವಿಟ್ಟಿರುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಜೊತೆಗೆ ಬಿಜೆಪಿಯಲ್ಲಿ ಮುಂದುವರಿ ಯುವ, ರಾಜೀನಾಮೆ ನೀಡುವ ಕುರಿತು ಕೂಡಾ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ಪಕ್ಷದ ನಿರ್ಧಾರ?
 ಬಿಜೆಪಿಯಿಂದ ಹೊರ ಬಂದು ಹೊಸ ಪಕ್ಷ ಕಟ್ಟುವ ಇರಾದೆಯನ್ನು ಶ್ರೀರಾಮುಲು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇಂದು ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಂಧ್ರಪ್ರದೇಶದಲ್ಲಿ ವೈ.ಎಸ್.ರಾಜಶೇಖರ ರೆಡ್ಡಿಯವರ ಅಕಾಲಿಕ ಸಾವಿನ ನಂತರ ಅವರ ಪುತ್ರ ಜಗನ್ಮೋಹನ್ ರೆಡ್ಡಿ ಕಾಂಗ್ರೆಸ್‌ನಿಂದ ಹೊರ ಬಂದು ಹೊಸ ಪಕ್ಷ ಕಟ್ಟಿದ ರೀತಿಯಲ್ಲಿ ರಾಜ್ಯದಲ್ಲಿ ಹೊಸ ಪಕ್ಷ ಕಟ್ಟುವ ಕುರಿತು ಕೂಡಾ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಪಕ್ಷೇತರರಾಗಿ ಸ್ಪರ್ಧೆ?
  ಬಿಜೆಪಿಯಿಂದ ಹೊರ ಬಂದು ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಶ್ರೀರಾಮುಲು ನಿರ್ಧರಿಸಿದ್ದಾರೆನ್ನಲಾಗಿದೆ. ಲೋಕಾಯುಕ್ತರ ಗಣಿ ವರದಿಯಲ್ಲಿ ತನ್ನ ಹೆಸರು ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ಗಣಿ ಕಳಂಕದಿಂದ ಹೊರ ಬರಲು ಹಾಗೂ ಕೊನೆಯ ಗಳಿಗೆಯಲ್ಲಿ ಬಿಜೆಪಿ ತೋರಿದ ವರ್ತನೆಯಿಂದ ಬೇಸತ್ತು ಬಿಜೆಪಿಗೆ ರಾಜೀನಾಮೆ ನೀಡಿ, ಪಕ್ಷೇತರನಾಗಿ ಸ್ಪರ್ಧಿಸುವ ಇರಾದೆಯನ್ನು ಅವರು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ
Please follow and like us:
error