ಪಾಕಿಸ್ತಾನದ ಧ್ವಜ ಮುಸ್ಲಿಮರನ್ನು ಪ್ರತಿನಿಧಿಸುವುದಿಲ್ಲ

ಪಾಕಿಸ್ತಾನ ಧ್ವಜ: ಸಮಾಜವನ್ನು ಒಡೆಯುವ ಹುನ್ನಾರ
ಸಮಾಜ ಕಟ್ಟುವುದೆಂದರೆ ಅಷ್ಟು ಸುಲಭವಲ್ಲ. ಅದಕ್ಕೆ ನೂರಾರು ವರ್ಷಗಳ ಶ್ರಮ ಬೇಕು.ನೂರಾರು ಮಹಾತ್ಮರ ಬಲಿದಾನಗಳು ಬೇಕು.ಆದರೆ ಸಂದರ್ಭದಲ್ಲಿ ಸಮಾಜವನ್ನು ಒಡೆಯುವುದಕ್ಕೆ ಒಂದು ಕ್ಷಣ ಸಾಕು. ಸದ್ಯದ ದಿನಗಳಲ್ಲಿ ಒಂದು ಪಾಕಿಸ್ತಾನ ಧ್ವಜ, ಹಂದಿಮಾಂಸ, ದನದ ಮಾಂಸ ಒಂದು ಇಡೀ ಊರನ್ನೇ ಸುಟ್ಟು ಹಾಕಬಲ್ಲವು. ರಾಜಕಾರಣಿಗಳಿಗೆ ಸಮಾಜ ಕಟ್ಟುವ ಸಿದ್ಧಾಂತಗಳು ಬೇಡ.ಯಾಕೆಂದರೆ, ಅಂತಹ ಸಿದ್ಧಾಂತದ ಬೆನ್ನು ಹತ್ತಿದರೆ ಪಕ್ಷವನ್ನು ಬೇಗನೆ ಬೆಳೆಸುವುದಕ್ಕೆ ಸಾಧ್ಯವಿಲ್ಲ. ಅಧಿಕಾರಕ್ಕೇರುವುದೂ ಸಾಧ್ಯವಿಲ್ಲ. ಆದುದರಿಂದಲೇ ಬಿಜೆಪಿ 1992ರಲ್ಲಿ ಎಲ್ಲಕ್ಕೂ ಎಳ್ಳು ನೀರು ಬಿಟ್ಟು ರಥಯಾತ್ರೆಯನ್ನು ಹಮ್ಮಿಕೊಂಡಿತು. ದೇಶಾದ್ಯಂತ ದೇವಸ್ಥಾನ-ಮಂದಿರದ ವಿಷ ಬೀಜವನ್ನು ಬಿತ್ತಿ ಅಧಿಕಾರದ ಬೆಳೆ ತೆಗೆಯಿತು. 90ರದಶಕದ ಬಳಿಕ,ಜನರನ್ನು ಸೆಳೆಯುವುದಕ್ಕೆ ಎಲ್ಲ ಪಕ್ಷಗಳೂ ಭಾವನಾತ್ಮಕ ತಂತ್ರಗಳನ್ನು ಅನುಸರಿಸುತ್ತಿವೆ. ಅದರಲ್ಲಿ ಪಾಕಿಸ್ತಾನ ಧ್ವಜ ಹಾಗೂ ದನದ ಮಾಂಸ ಪ್ರಧಾನ ಪಾತ್ರವಹಿಸಿವೆ.ಇದರ ಮೂಲಕ ಪಕ್ಷಗಳು ಅಧಿಕಾರ ಪಡೆದಿವೆ.ಅಧಿಕಾರದಿಂದ ಇಳಿದಿವೆ.ರಾಜ್ಯದಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿರುವ ಸಂದರ್ಭದಲ್ಲಿ ಅಲ್ಲಲ್ಲಿ ಸಣ್ಣ ಪುಟ್ಟ ಕೋಮು ಉದ್ವಿಗ್ನತೆ ಕಾಣಿಸಿಕೊಳ್ಳುತ್ತಿವೆ.
ರವಿವಾರ ಬಿಜಾಪುರದ ಸಿಂಧಗಿಯಲ್ಲಿ ತಹಶೀಲ್ದಾರ್ ಕಚೇರಿಯ ಮೇಲೆಯೇ ದುಷ್ಕರ್ಮಿಗಳು ಪಾಕಿಸ್ತಾನದ ಧ್ವಜ ಹಾರಿಸಿದ್ದಾರೆ. ಈ ಹಿಂದೆಲ್ಲ, ದರ್ಗಾದ ಮೇಲಿರುವ ಹಸಿರು ಧ್ವಜಗಳನ್ನೇ ಪಾಕಿಸ್ತಾನದ ಧ್ವಜವೆಂದು ಕರೆದು ಸಂಘಪರಿವಾರದ ಕೆಲ ದುಷ್ಕರ್ಮಿಗಳು ಸಮಾಜದ ನೆಮ್ಮದಿಯನ್ನು ಕೆಡಿಸಿದ್ದರು. ಆದರೆ ಈ ಬಾರಿ ಹಾಗಲ್ಲ. ತಹಶೀಲ್ದಾರ್ ಕಚೇರಿಯಲ್ಲೇ ಪಾಕಿಸ್ತಾನದ ಧ್ವಜವನ್ನು ಹಾರಿಸಿದ್ದಾರೆ. ಈ ಮೂಲಕ, ಸಮಾಜಕ್ಕೆ ಬೆಂಕಿ ಹಚ್ಚುವ ಒಂದು ದೊಡ್ಡ ಸಂಚನ್ನು ನಡೆಸಿದ್ದಾರೆ. ಜೊತೆಗೆ ಅದನ್ನು ಒಂದು ಸಮುದಾಯದ ತಲೆಗೆ ಕಟ್ಟುವ ಪ್ರಯತ್ನವೂ ಅದರ ಹಿಂದೆ ನಡೆಯುತ್ತಿದೆ. ರಾಜಕೀಯ ಕೈಗಳು ಇದರಲ್ಲಿ ಕೆಲಸ ಮಾಡಿರುವುದು ನಿಸ್ಸಂಶಯ.ಬಿಜಾಪುರದಲ್ಲಿ ಪಾಕಿಸ್ತಾನದ ಧ್ವಜ ಹಾರಾಟ ಇದೇ ಮೊದಲಲ್ಲ.
2008ರಲ್ಲೂ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸಲಾಗಿತ್ತು. ಇದರ ಬಗ್ಗೆ ಗಂಭೀರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕೆಂದು ಮುಸ್ಲಿಂ ಸಮುದಾಯದ ಮುಖಂಡರು ಬಲವಾಗಿ ಒತ್ತಾಯಿಸಿದ್ದರು. ಸಂಘಪರಿವಾರ ಪ್ರತಿಭಟನೆಯನ್ನು ಮುಸ್ಲಿಮರ ವಿರುದ್ಧ ದ್ವೇಷ ಕಾರಲು ಬಳಸಿಕೊಂಡಿತೇ ಹೊರತು, ಆರೋಪಿಗಳನ್ನು ಬಂಧಿಸುವುದು ಅವುಗಳಿಗೆ ಇಷ್ಟವಿರಲಿಲ್ಲ. ಇದೀಗ ಮತ್ತೆ ಬಿಜಾಪುರದಲ್ಲಿ ಅಂತಹದೇ ಒಂದು ಘಟನೆ ಅಥವಾ ಅದಕ್ಕಿಂತಲೂ ಗಂಭೀರವಾದ ಘಟನೆ ನಡೆದಿದೆ. ಈಗಲೂ ಪ್ರತಿಭಟನೆ ನಡೆಯುತ್ತಿರುವುದು ಆರೋಪಿಗಳನ್ನು ಬಂಧಿಸುವುದಕ್ಕೆ ಒತ್ತಾಯಿ ಸಿಲ್ಲ. ಬದಲಾಗಿ ಒಂದು ಸಮುದಾಯದ ವಿರುದ್ಧ ದ್ವೇಷವನ್ನು ಬಿತ್ತುವ ಭಾಗವಾಗಿ ಸಂಘಪರಿವಾರ ಪ್ರತಿಭಟನೆಗಿಳಿದಿದೆ.
ಅಪರಾಧಿಗಳನ್ನು ಪತ್ತೆ ಹಚ್ಚುವ ಗಂಭೀರ ಪ್ರಯತ್ನವನ್ನು ಸರಕಾರ ಮಾಡುತ್ತಿಲ್ಲ. ಹಾರಿಸಿದುದು ಪಾಕಿಸ್ತಾನ ಧ್ವಜವಾಗಿರುವುದ ರಿಂದ ಯಾರೋ ಮುಸ್ಲಿಮರೇ ಹಾರಿಸಿರ ಬೇಕು ಎನ್ನುವ ಪೂರ್ವಗ್ರಹವನ್ನು ಪೊಲೀ ಸರೂ ತಳೆದಂತಿದೆ. ಅಥವಾ ಅಂತಹ ಅಭಿ ಪ್ರಾಯವನ್ನು ಬಿತ್ತುವುದಕ್ಕೆ ಸಂಘಪರಿವಾರದ ದುಷ್ಕರ್ಮಿಗಳು ಹವಣಿಸುತ್ತಿದ್ದಾರೆ.ಇಷ್ಟಕ್ಕೂ ಪಾಕಿಸ್ತಾನಕ್ಕಾಗಲಿ, ಪಾಕಿಸ್ತಾನದ ಧ್ವಜದೊಂದಿಗಾಗಲಿ ಮುಸ್ಲಿಮರಿಗೆ ಯಾವ ಸಂಬಂಧವೂ ಇಲ್ಲ.ಪಾಕಿಸ್ತಾನದ ಧ್ವಜ ಯಾವ ರೀತಿಯಲ್ಲೂ ಮುಸ್ಲಿಮರನ್ನು ಪ್ರತಿನಿಧಿಸುವುದಿಲ್ಲ.ಅದನ್ನು ಮುಸ್ಲಿಮರ ಪ್ರತಿನಿಧಿಯಾಗಿಸಲು ಕೇಸರಿ ಪರಿವಾರಗಳು ಮಾಡಿರುವ ಪ್ರಯತ್ನಗಳೆಲ್ಲವೂ ಹಾಸ್ಯಾಸ್ಪದವಾಗಿವೆ.
ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಧ್ವಜಕ್ಕೂ ಇಸ್ಲಾಂ ಧರ್ಮದಲ್ಲಿ ಪ್ರಾಧಾನ್ಯವಿಲ್ಲ.ಇಂತಹದೊಂದು ಧ್ವಜವನ್ನು ತಹಶೀಲ್ದಾರ್ ಕಚೇರಿಯಲ್ಲಿ ಹಾರಿಸುವುದರಿಂದ ಮುಸ್ಲಿಮರಿಗೆ ಯಾವ ಪ್ರಯೋಜನವೂ ಇಲ್ಲ. ಒಂದು ವೇಳೆ ಅಂತಹ ಪ್ರಯೋಜನ ಇದ್ದರೆ ಅದು ಸಂಘಪರಿವಾರದಂತಹ ರಾಜಕೀಯ ಸಂಘಟನೆಗಳಿಗೆ. ಮುಸ್ಲಿಮರನ್ನು ದೇಶದ್ರೋಹಿಗಳು ಎಂದು ಬಿಂಬಿಸುವ ಪ್ರಯತ್ನವಾಗಿ ದುಷ್ಕರ್ಮಿಗಳು ಪಾಕಿಸ್ತಾನದ ಧ್ವಜವನ್ನು ಹಾರಿಸಿದ್ದಾರೆ. ಇದನ್ನು ಮುಸ್ಲಿಮರು ಸೇರಿದಂತೆ ನಾಡಿನ ಎಲ್ಲ ಜನರೂ ಒಂದಾಗಿ ಖಂಡಿಸಿದ್ದಾರೆ.
ಮಸೀದಿಗಳಲ್ಲಿ ಹಂದಿಯ ತಲೆಯನ್ನು ಹಾಕುವುದು, ದೇವಸ್ಥಾನಗಳಲ್ಲಿ ದನದ ಮಾಂಸ ಎಸೆಯುವುದು, ಪಾಕಿಸ್ತಾನದ ಧ್ವಜ ಹಾರಿಸುವುದು ಇವೆಲ್ಲದರ ಹಿಂದೆ ಸಮಾಜವನ್ನು ಒಡೆಯುವ ಉದ್ದೇಶವಿದೆ. ಆದುದರಿಂದ ಇದರ ಹಿಂದಿರುವ ವ್ಯಕ್ತಿಗಳನ್ನು ಕಂಡು ಹಿಡಿದು ಅವರಿಗೂ, ಅವರು ಪ್ರತಿನಿಧಿಸುವ ಸಂಘಟನೆಗೂ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಜಿಲ್ಲಾಡಳಿತದ ಕರ್ತವ್ಯ. ಬಿಜಾಪುರದಲ್ಲಿ ನಡೆದ ಘಟನೆ ಪ್ರತಿಭಟನೆ, ಬಂದ್‌ಗಳಲ್ಲಿ ಮುಗಿದು ಹೋಗಬಾರದು. ಒಂದು ವೇಳೆ ಪೊಲೀಸರಿಗೆ ಪ್ರಕರಣವನ್ನು ಭೇದಿಸಲು ಸಾಧ್ಯವಾಗದೆ ಇದ್ದರೆ ಉನ್ನತ ತನಿಖಾ ಸಂಸ್ಥೆಗಳಿಗೆ ತನಿಖೆ ನಡೆಸುವ ಜವಾಬ್ದಾರಿಯನ್ನು ನೀಡಬೇಕು. ಇದೀಗ ಚುನಾವಣೆ ಹತ್ತಿರವಾಗುತ್ತಿದೆ. ರಾಜಕೀಯ ನಾಯಕರು, ಪಕ್ಷಗಳು ಹತಾಶ ಸ್ಥಿತಿಯಲ್ಲಿವೆ. ಸಮಾಜದಲ್ಲಿ ಗಲಭೆಗಳಾಗುವುದು, ಸಮಾಜವನ್ನು ಒಡೆಯುವುದು ಅವರಿಗೆ ಅಗತ್ಯವಾಗಿದೆ. ಆದುದರಿಂದ ಪೊಲೀಸ್ ಇನ್ನಷ್ಟು ಬಿಗಿಯಾಗಿ ಕೆಲಸ ನಿರ್ವಹಿಸಬೇಕಾಗಿದೆ. ಸಮಾಜ ವಿದ್ರೋಹಿ ಶಕ್ತಿಗಳನ್ನು ಯಾವ ದಾಕ್ಷಿಣ್ಯವೂ ಇಲ್ಲದೆ ಮಟ್ಟ ಹಾಕಬೇಕಾಗಿದೆ. -ವಾರ್ತಾಭಾರತಿ ಸಂಪಾದಕೀಯ
Please follow and like us:
error