ವಸತಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಿ- ಸಂಸದ ಶಿವರಾಮಗೌಡ

  ಕೇಂದ್ರ ಹಾಗೂ ರಾಜ್ಯದ ವಿವಿಧ ವಸತಿ ಯೋಜನೆಗಳನ್ನು ಜಿಲ್ಲೆಯಲ್ಲಿ ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು.  ತಪ್ಪಿದಲ್ಲಿ, ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ, ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಶಿವರಾಮಗೌಡ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಕೇಂದ್ರ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ಸಂಬಂಧ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಸೂರು ರಹಿತ ಬಡಜನರಿಗೆ ಮನೆ ನಿರ್ಮಿಸಿಕೊಡುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಂದಿರಾ ಆವಾಸ್, ಬಸವ ವಸತಿ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ರೂಪಿಸಿ, ಜಾರಿಗೊಳಿಸಿದೆ.  ಆದರೆ ಜಿಲ್ಲೆಯಲ್ಲಿ ವಸತಿ ಯೋಜನೆಗಳ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ.  ಅಧಿಕಾರಿಗಳು ಯೋಜನೆಗಳ ಅನುಷ್ಠಾನದಲ್ಲಿ ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ.  ಇದರಿಂದಾಗಿ ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ದೊರಕಲು ತೊಂದರೆ ಉಂಟಾಗಿದೆ.  ೨೦೧೦-೧೧ ನೇ ಸಾಲಿನ ಇಂದಿರಾ ಆವಾಸ್ ಯೋಜನೆಯಡಿ ಜಿಲ್ಲೆಗೆ ೨೨೦೦೦, ೨೦೧೧-೧೨ ನೇ ಸಾಲಿನಲ್ಲಿ ೧೨೪೪೧ ಮನೆಗಳು ಮಂಜೂರಾಗಿದ್ದು, ಈ ಪೈಕಿ ಹಿಂದಿನ ಸಾಲಿನ ಮನೆಗಳ ಪೈಕಿ ೫೨೦ ಮನೆಗಳು ಮಾತ್ರ ಪೂರ್ಣಗೊಂಡು, ೧೫೭೧ ಮನೆಗಳು ಪ್ರಗತಿಯಲ್ಲಿವೆ.  ಈ ವರ್ಷದ ೧೨೪೪೧ ಮನೆಗಳ ಪೈಕಿ ಕೇವಲ ೧೮೮ ಮನೆಗಳ ನಿರ್ಮಾಣ ಮಾತ್ರ ಪ್ರಗತಿಯಲ್ಲಿವೆ.  ಈ ಅಂಕಿ-ಅಂಶಗಳೇ ವಸತಿ ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬವನ್ನು ಬಿಂಬಿಸುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.  
ಕುಡಿಯುವ ನೀರು : ಈ ವರ್ಷ ಮಳೆಯ ವಿಫಲತೆಯಿಂದಾಗಿ ಬರಪರಿಸ್ಥಿತಿ ತಲೆದೋರಿದೆ.  ಬೇಸಿಗೆಯ ದಿನಗಳು ಹತ್ತಿರವಾಗುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗದಂತೆ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.  ಜಿಲ್ಲೆಯಲ್ಲಿ ಜಾರಿಯಲ್ಲಿರುವ ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆಯಡಿಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಿ, ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು.  ಈ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಲಾಗಿದ್ದರೂ, ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ, ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿಲ್ಲ.  ಕುಡಿಯುವ ನೀರಿನ ಸಮಸ್ಯೆಗಳಿಗೆ ಸಾರ್ವಜನಿಕರಿಗೆ ಜನಪ್ರತಿನಿಧಿಗಳು ಉತ್ತರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.  
ಸಿಲಿಂಡರ್ ಸಮಸ್ಯೆ: ಜಿಲ್ಲೆಯಲ್ಲಿ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ಸಮಸ್ಯೆ ಕಂಡುಬಂದಿದ್ದು, ಅಡುಗೆ ಅನಿಲ ಸಿಲಿಂಡರ್ ವಿತರಕರು ಸೂಕ್ತ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ.  ಗಂಗಾವತಿ ನಗರದಲ್ಲಿ ಎರಡು ಏಜೆನ್ಸಿಗಳಿದ್ದು, ಗ್ರಾಹಕರ ಹಂಚಿಕೆಯಲ್ಲಿ ಬಹಳಷ್ಟು ಲೋಪದೋಷಗಳಾಗಿವೆ.  ಕೊಪ್ಪಳ ನಗರದಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಕೊಪ್ಪಳ ನಗರದ ಗ್ರಾಹಕರಿಗೆ ಸಿಲಿಂಡರ್ ವಿತರಣೆಯನ್ನು ಸಮರ್ಪಕವಾಗಿ ಪೂರೈಕೆ ಮಾಡುತ್ತಿಲ್ಲವಾದ್ದರಿಂದ, ಖಾಸಗಿ ಏಜೆನ್ಸಿಯವರಿಗೆ ವಹಿಸಿಕೊಡುವ ಕುರಿತು ಅಧಿಕಾರಿಗಳು ವರದಿ ಸಲ್ಲಿಸಬೇಕು.  ನಗರಕ್ಕೆ ಇನ್ನೊಂದು ಏಜೆನ್ಸಿ ಪ್ರಾರಂಭಿಸಲು ಅಗತ್ಯವಿರುವ ಪ್ರಸ್ತಾವನೆಯನ್ನು ಸಲ್ಲಿಸಬೇಕು.  ಅಡುಗೆ ಅನಿಲ ಸಿಲಿಂಡರ್ ಸಮಸ್ಯೆಯನ್ನು ಪರಿಹರಿಸಲು ಪ್ರತ್ಯೇಕ ಸಭೆಗೆ ದಿನಾಂಕ ನಿಗದಿಪಡಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.
ಉದ್ಯೋಗಖಾತ್ರಿ : ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಪಾಸ್‌ವರ್ಡ್ ದುರ್ಬಳಕೆಯಿಂದ ಬಹಳಷ್ಟು ಲೋಪ-ದೋಷಗಳುಂಟಾಗಿದ್ದು, ಕಂಪ್ಯೂಟರ್‌ನಲ್ಲಿ ದಾಖಲಿಸಿರುವ ಪ್ರಕಾರ ಭೌತಿಕವಾಗಿ ಯಾವುದೇ ಕೆಲಸವಾಗಿಲ್ಲ.  ಆದರೆ ಕಂಪ್ಯೂಟರ್‌ನಲ್ಲಿ ಮಾತ್ರ ಹಣ ಪಾವತಿ ದಿನಾಂಕವನ್ನೂ ಸಹ ದಾಖಲಿಸಿದ್ದು, ವಾಸ್ತವದಲ್ಲಿ ಹಣ ಪಾವತಿಸಿಲ್ಲ.  ಇದರಿಂದಾಗಿ ಉದ್ಯೋಗ ಪಡೆಯದೆ ಇರುವ ಕೂಲಿಕಾರ್ಮಿಕರು ಪುನಃ ಉದ್ಯೋಗಕ್ಕಾಗಿ ನೋಂದಣಿಗೆ ತೊಂದರೆ ಉಂಟಾಗಿದೆ.  ಇದರ ಬಗ್ಗೆ ಕಂಪ್ಯೂಟರ್‌ನಲ್ಲಿ ದಾಖಲಿಸಿರುವ ದೋಷಪೂರಕ ಅಂಶಗಳನ್ನು ತೆಗೆದುಹಾಕಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿ.ಪಂ. ಪ್ರಭಾರಿ ಸಿ.ಇ.ಓ. ಆಗಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರಿಗೆ ಸಂಸದ ಶಿವರಾಮಗೌಡ ಅವರು ಸೂಚನೆ ನೀಡಿದರು.
  ಸಭೆಯಲ್ಲಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿ.ಪಂ. ಉಪಕಾರ್ಯದರ್ಶಿ ಅನ್ನದಾನಯ್ಯ , ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರುಗಳಾದ ಶರಣಬಸಪ್ಪ, ಸುನಂದಾ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ್, ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.  ಸಭೆಯಲ್ಲಿ ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳಿಸಲಾಗುವ ಕೇಂದ್ರ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
Please follow and like us:
error