ಸಕಾಲಕ್ಕೆ ಚಾಲನೆ : ಆಡಳಿತ ವ್ಯವಸ್ಥೆಯಲ್ಲಿ ಹೊಸ ಪರ್ವ- ಸಂಗಣ್ಣ ಕರಡಿ

 : ಕರ್ನಾಟಕ ನಾಗರಿಕ ಸೇವಾ ಖಾತ್ರಿ ಯೋಜನೆ ’ಸಕಾಲ’ ಜಾರಿಯಿಂದಾಗಿ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಹೊಸ ಪರ್ವ ಪ್ರಾರಂಭವಾಗಲಿದ್ದು, ಅಧಿಕಾರಿ, ಸಿಬ್ಬಂದಿಗಳಲ್ಲಿ ಸೇವಾ ದಕ್ಷತೆ ಸುಧಾರಣೆಗೊಳ್ಳಲಿದೆ ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಹೇಳಿದರು.
  ಕೊಪ್ಪಳ ನಗರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ನಾಗರಿಕ ಸೇವಾ ಖಾತ್ರಿ ಯೋಜನೆ ’ಸಕಾಲ’ ಕ್ಕೆ ಚಾಲನೆ ನೀಡುವ ಸಮಾರಂಭದ ಉದ್ಘಾಟನೆ ನೆರವೇರಿಸಿ ಸೋಮವಾರ ಅವರು ಮಾತನಾಡಿದರು.

  ರಾಜ್ಯ ಸರ್ಕಾರ ಕರ್ನಾಟಕ ನಾಗರಿಕ ಸೇವಾ ಖಾತ್ರಿ ಯೋಜನೆಯನ್ನು ಜಾರಿಗೊಳಿಸುವುದರ ಮೂಲಕ ಹೊಸ ಆಡಳಿತ ವ್ಯವಸ್ಥೆಗೆ ನಾಂದಿ ಹಾಡಿದೆ.  ದೇಶದಲ್ಲಿಯೇ ಇಂತಹ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಸರ್ಕಾರ ಶ್ಲಾಘನೀಯ ಕೆಲಸ ಮಾಡಿದೆ.  ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಪದೇ ಪದೇ ಕಚೇರಿಗಳಿಗೆ ಅಲೆದಾಡುವ ವ್ಯವಸ್ಥೆಗೆ ಈ ಯೋಜನೆಯ ಜಾರಿಯಿಂದ ಕಡಿವಾಣ ಬಿದ್ದಂತಾಗುತ್ತದೆ.  ನಿಗದಿತ ಕಾಲಮಿತಿಯಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸುವುದರಿಂದ, ಸಾರ್ವಜನಿಕರ ಅಭಿಲಾಷೆಗೆ ತಕ್ಕಂತೆ ಸರ್ಕಾರ ಸ್ಪಂದಿಸಿದಂತಾಗಲಿದೆ.  ಈ ಹಿಂದೆ ಸರ್ಕಾರ ಜಾರಿಗೊಳಿಸಿದ ಮಾಹಿತಿ ಹಕ್ಕು ಅಧಿನಿಯಮದಿಂದಾಗಿ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆ.  ನಾಗರಿಕ ಸೇವಾ ಖಾತ್ರಿ ಅಧಿನಿಯಮ ಕಾಯ್ದೆ ಜಾರಿಗೆ ಎಲ್ಲ ಜನಪ್ರತಿನಿಧಿಗಳು ಪಕ್ಷಬೇಧ ಮರೆತು ಬೆಂಬಲ ವ್ಯಕ್ತಪಡಿಸಿದ್ದಾರೆ.  ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ನೂತನ ಪದ್ಧತಿ ಜಾರಿಗೆ ತರುವ ಸಂದರ್ಭದಲ್ಲಿ, ಅದರ ಸಾಧಕ, ಬಾಧಕಗಳನ್ನು ಪರಿಶೀಲಿಸಿ, ಸರ್ಕಾರ ಆ ವ್ಯವಸ್ಥೆಯನ್ನು ಜಾರಿಗೆ ತರುವಾಗ ಎಲ್ಲ ಜನಪ್ರತಿನಿಧಿಗಳು ಬೆಂಬಲ ನೀಡಬೇಕಾಗುತ್ತದೆ.  ಸದ್ಯ ನಾಗರಿಕ ಸೇವಾ ಖಾತ್ರಿ ಯೋಜನೆಯಲ್ಲಿ ೧೧ ಇಲಾಖೆಗಳ ೧೫೧ ವಿವಿಧ ಸೇವೆಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗಿದೆ.  ಹಂತ, ಹಂತವಾಗಿ ಸಾರ್ವಜನಿಕರಿಗೆ ಅಗತ್ಯವಾಗುವ ಇತರೆ ಇಲಾಖೆಗಳಿಂದ ಲಭಿಸುವ ವಿವಿಧ ಸೇವೆಗಳನ್ನೂ ಸಹ ಈ ಯೋಜನೆಯ ವ್ಯಾಪ್ತಿಗೆ ತರುವಂತಾಗಬೇಕು.  ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಅರ್ಜಿ ವಿಲೇವಾರಿಯಲ್ಲಿ ಒಬ್ಬರ ಮೇಲೊಬ್ಬರು ಜವಾಬ್ದಾರಿ ಹಾಕುತ್ತ, ಸಾರ್ವಜನಿಕರಿಗೆ ಗೊಂದಲ ತರುವಂತಹ ಸ್ಥಿತಿ ನಿವಾರಿಸಲು ಈ ಕಾಯ್ದೆ ಪೂರಕವಾಗಿದೆ.  ಈ ನೂತನ ಯೋಜನೆಯ ಜಾರಿ ನಂತರ, ಅಧಿಕಾರಿ, ಸಿಬ್ಬಂದಿಗಳಲ್ಲಿ ಶಿಸ್ತು, ಸಮಯಪ್ರಜ್ಞೆ ರೂಢಿಸಿಕೊಂಡು, ಸೇವಾ ದಕ್ಷತೆ ಹೆಚ್ಚಲಿದೆ ಎನ್ನುವ ವಿಶ್ವಾಸವಿದೆ.  ಸರ್ಕಾರಿ ನೌಕರರಿಗೂ ಈ ಯೋಜನೆ ಕುರಿತಂತೆ ಹೆಚ್ಚಿನ ತರಬೇತಿ ನೀಡಿ ಸಜ್ಜುಗೊಳಿಸುವ ಕಾರ್ಯವನ್ನು ಜಿಲ್ಲಾಡಳಿತ ನಡೆಸಬೇಕಾಗಿದೆ ಎಂದು ಶಾಸಕ ಸಂಗಣ್ಣ ಕರಡಿ ಅವರು ಅಭಿಪ್ರಾಯಪಟ್ಟರು.
  ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಮಾತನಾಡಿ, ಸಕಾಲ ಯೋಜನೆ ಜಾರಿಯು ಸರ್ಕಾರದ ವ್ಯವಸ್ಥೆಗೆ ಹೊಸ ಸೂತ್ರವನ್ನು ನೀಡಿದಂತಾಗಿದೆ.  ಸಾರ್ವಜನಿಕರು ಈ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಯಾವುದೇ ಸೇವೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಮರ್ಪಕ ದಾಖಲಾತಿಗಳನ್ನು ನೀಡಿದಾಗ ಮಾತ್ರ, ನಿಗದಿತ ಕಾಲಮಿತಿಯಲ್ಲಿ ಸೇವೆ ಒದಗಿಸಲು ಸಾಧ್ಯವಾಗಲಿದೆ.  ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ.  ಸರ್ಕಾರವು ಸದ್ಯ ಈ ಯೋಜನೆಯ ವ್ಯಾಪ್ತಿಗೆ ಕೇವಲ ೧೧ ಇಲಾಖೆಗಳ ೧೫೧ ಸೇವೆಗಳನ್ನು ಸೇರಿಸಿದೆ.  ಕಾಲಕ್ರಮೇಣ ಸಾರ್ವಜನಿಕರಲ್ಲಿ ಈ ಯೋಜನೆಯ ಬಗ್ಗೆ ಜಾಗೃತಿ ಮೂಡಲಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಇಲಾಖೆಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿವೆ ಎಂದರು.
  ಕೊಪ್ಪಳ ನಗರಸಭೆ ಅಧ್ಯಕ್ಷ ಸುರೇಶ್ ದೇಸಾಯಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.  ನಗರಸಭೆ ಸದಸ್ಯೆ ಇಂದಿರಾ ಬಾವಿಕಟಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ವೇದಿಕೆ ಮೇಲೆ ಉಪಸ್ಥಿತರಿದ್ದರು.  ಸಮಾರಂಭದಲ್ಲಿ ನಗರಸಭೆಯ ಸದಸ್ಯರುಗಳು, ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.  ನಗರಸಭೆ ಪೌರಾಯುಕ್ತೆ ಬಿ.ಎಂ. ಅಶ್ವಿನಿ ಪ್ರಾರಂಭದಲ್ಲಿ ಸ್ವಾಗತಿಸಿದರು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Please follow and like us:
error