ನ್ಯಾಯಸಮ್ಮತವಾಗಿ ಎಸ್‌ಡಿಸಿ/ಎಫ್‌ಡಿಸಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ- ಡಿ.ಸಿ. ತುಳಸಿ ಸೂಚನೆ

ಕೊಪ್ಪಳ ಜೂ. : ಕರ್ನಾಟಕ ಲೋಕಸೇವಾ ಆಯೋಗ ಎಸ್‌ಡಿಸಿ ಹುದ್ದೆಗೆ ಜೂ. ೫ ರಂದು ಹಾಗೂ ಎಫ್‌ಡಿಸಿ ಹುದ್ದೆಗೆ ಜೂ. ೧೯ ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ. ಈ ಪರೀಕ್ಷೆಯು ಜಿಲ್ಲೆಯಲ್ಲಿ ನ್ಯಾಯಸಮ್ಮತವಾಗಿ ಹಾಗೂ ಪಾರದರ್ಶಕವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಸ್‌ಡಿಸಿ ಹಾಗೂ ಎಫ್‌ಡಿಸಿ ಹುದ್ದೆ ಭರ್ತಿಗಾಗಿ ಜಿಲ್ಲೆಯಲ್ಲಿ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಕುರಿತಂತೆ ಚರ್ಚಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಸ್ಪರ್ಧಾತ್ಮಕ ಪರೀಕ್ಷೆಗಳು ನ್ಯಾಯಸಮ್ಮತವಾಗಿ ಹಾಗೂ ಪಾರದರ್ಶಕವಾಗಿ ನಡೆಯಬೇಕು. ಪರೀಕ್ಷಾ ಮೇಲ್ವಿಚಾರಕರು ಅಥವಾ ಅಭ್ಯರ್ಥಿಗಳಿಗೆ ಯಾವುದೇ ಗೊಂದಲ ಉಂಟಾಗದಂತೆ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಪರೀಕ್ಷಾ ಕೇಂದ್ರದ ಒಳಗೆ ಮೇಲ್ವಿಚಾರಕರೂ ಸೇರಿದಂತೆ ಯಾವುದೇ ಅಭ್ಯರ್ಥಿಗಳು ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಒಯ್ಯುವಂತಿಲ್ಲ. ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಮಾತ್ರ ಮೊಬೈಲ್ ಉಪಯೋಗಿಸಲು ಅನುಮತಿಸಲಾಗಿದೆ. ಒಂದು ವೇಳೆ ಯಾವುದೇ ಅಭ್ಯರ್ಥಿಗಳು ಮೊಬೈಲ್‌ನೊಂದಿಗೆ ಪರೀಕ್ಷಾ ಕೇಂದ್ರ ಪ್ರವೇಶಿಸಿದಲ್ಲಿ, ಅಂತಹ ಅಭ್ಯರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ. ಪರೀಕ್ಷಾ ಕೇಂದ್ರದ ಒಳಗೆ ಯಾವುದೇ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ಇರುವುದಿಲ್ಲ. ಪರೀಕ್ಷಾ ಕೇಂದ್ರದ ಸುತ್ತ ಪೊಲೀಸ್ ಇಲಾಖೆಯವರು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಬೇಕು. ಪ್ರಶ್ನೆಪತ್ರಿಕೆಗಳ ಮುಖ್ಯ ಬಂಡಲ್ ತೆರೆಯುವ ಮುನ್ನ ನಿಗದಿಯಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ಪಾಲಿಸಬೇಕು. ಪ್ರಶ್ನೆಪತ್ರಿಕೆಗಳ ಲಕೋಟೆಯನ್ನು ಪರೀಕ್ಷೆ ಪ್ರಾರಂಭಿಸುವ ಸಮಯದಲ್ಲಿ ಅಭ್ಯರ್ಥಿಗಳ ಸಮ್ಮುಖದಲ್ಲೆ ತೆರೆಯಬೇಕು. ಪರೀಕ್ಷಾ ಕೊಠಡಿಗಳಿಗೆ ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಪರೀಕ್ಷೆ ನಡೆಯುವ ಮುನ್ನಾ ದಿನದಂದು ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಸಿದ್ಧತೆಯ ಬಗ್ಗೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಕೆಪಿಎಸ್‌ಸಿ ಪರೀಕ್ಷೆಯ ಜಿಲ್ಲಾ ನೋಡಲ್ ಅಧಿಕಾರಿ ಗುರಯ್ಯ ಹಿರೇಮಠ ಅವರು ಮಾತನಾಡಿ, ಕರ್ನಾಟಕ ಲೋಕಸೇವಾ ಆಯೋಗವು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಕಿರಿಯ ಸಹಾಯಕರು/ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಾಗಿ (ಎಸ್‌ಡಿಸಿ) ಜೂ. ೦೫ ರಂದು ಹಾಗೂ ಹಿರಿಯ ಸಹಾಯಕರು/ಪ್ರಥಮ ದರ್ಜೆ ಸಹಾಯಕರ ಹುದ್ದೆಗಾಗಿ (ಎಫ್‌ಡಿಸಿ) ಜೂ. ೧೯ ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ. ಜಿಲ್ಲೆಯಲ್ಲಿ ಎಸ್‌ಡಿಸಿ ಪರೀಕ್ಷೆಗೆ ಕೊಪ್ಪಳದಲ್ಲಿ ೧೯ ಹಾಗೂ ಗಂಗಾವತಿಯಲ್ಲಿ ೧೬ ಸೇರಿದಂತೆ ಒಟ್ಟು ೩೫ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೊಪ್ಪಳದಲ್ಲಿ ೫೮೩೨, ಗಂಗಾವತಿಯಲ್ಲಿ ೪೮೭೨ ಸೇರಿದಂತೆ ಒಟ್ಟು ೧೦೭೦೪ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪ್ರಶ್ನೆಪತ್ರಿಕೆಗಳು ಎ ಯಿಂದ ಎಚ್ ಶ್ರೇಣಿಗಳನ್ನು ಒಳಗೊಂಡಿದೆ ಎಂದರು.
ಎಫ್‌ಡಿಸಿ ಹುದ್ದೆಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಜಿಲ್ಲೆಯ ೧೫ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಎಲ್ಲ ಪರೀಕ್ಷಾ ಕೇಂದ್ರಗಳು ಕೊಪ್ಪಳದಲ್ಲಿವೆ. ಒಟ್ಟು ೫೦೮೮ ಅಭ್ಯರ್ಥಿಗಳು ಎಫ್‌ಡಿಸಿ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲಿದ್ದಾರೆ. ಅಂಧ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತಿ ಅಂಧ ಅಭ್ಯರ್ಥಿ ಒಬ್ಬರು ಸಹಾಯಕರ ನೆರವು ಪಡೆಯಲು ಅವಕಾಶವಿದ್ದು, ಸಹಾಯಕರು ಎಸ್‌ಎಸ್‌ಎಲ್‌ಸಿ ಹಾಗೂ ಅದಕ್ಕೂ ಕಡಿಮೆ ವಿದ್ಯಾರ್ಹತೆ ಹೊಂದಿದವರಾಗಿರಬೇಕು. ಅಂಧ ಅಭ್ಯರ್ಥಿ ತಿಳಿಸಿದಂತೆ ಮಾತ್ರ ಸಹಾಯಕರು ಉತ್ತರ ನಮೂದಿಸಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ನಾಲ್ವರು ಅಧಿಕಾರಿಗಳನ್ನು ಮಾರ್ಗಾಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಗುರಯ್ಯ ಹಿರೇಮಠ ವಿವರಿಸಿದರು.
ಸಭೆಯಲ್ಲಿ ಸಹಾಯಕ ಆಯುಕ್ತ ಶರಣಬಸಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಟೆಲಿಂಗಾಚಾರ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎಂ. ಮಸೂತಿ, ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ಬಿ. ಕಲ್ಲೇಶ್, ಬಿ.ಸಿ.ಎಂ. ಜಿಲ್ಲಾ ಅಧಿಕಾರಿ ಹೆಚ್.ಎಸ್. ಅಂಗಡಿ, ನೋಡಲ್ ಅಧಿಕಾರಿ ಎಸ್.ಎಫ್. ಸಂಗಟಿ, ಎಲ್ಲ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಭಾಗವಹಿಸಿದ್ದರು.

Please follow and like us:
error