ಸಂತೋಷ ಹೆಗ್ಡೆ ಇಂದು ನಿವೃತ್ತಿ

ಬೆಂಗಳೂರು, ಆ.೧: ಅಕ್ರಮ ಗಣಿಗಾರಿಕೆಯ ತನಿಖಾ ವರದಿ ಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸುವ ಮೂಲಕ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಸ್ಥಾನ ದಿಂದ ಕೆಳಗಿಳಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಇಂದು (ಆ.೨) ತನ್ನ ಸೇವಾವಧಿ ಪೂರೈಸಿ, ನಿವೃತ್ತರಾಗಲಿದ್ದಾರೆ. ೨೦೦೬ರಲ್ಲಿ ಅಧಿಕಾರ ವಹಿಸಿಕೊಂಡ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಬಣ್ಣ ಬಯಲು ಮಾಡುವ ಮೂಲಕ ಅಧಿಕಾರಿಗಳಿಗೆ ಸಿಂಹ ಸ್ವಪ್ನವಾಗಿದ್ದರು. ಅವರು ನಾಳೆ ನಿವೃತ್ತರಾಗಲಿದ್ದು, ಆ ಹುದ್ದೆಗೆ ನ್ಯಾ.ಶಿವರಾಜ್ ಪಾಟೀಲ್ ಬರಲಿದ್ದಾರೆ.

ಈ ಸಂದರ್ಭದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಸಂತೋಷ್ ಹೆಗ್ಡೆ, ತನ್ನ ವಿರುದ್ಧ ಮಾಜಿ ಸಚಿವರಾದ ಸೋಮಣ್ಣ, ಹಾಗೂ ರೇಣುಕಾಚಾರ್ಯ ಅನಗತ್ಯ ಆಪಾದನೆ ಮಾಡುತ್ತಿದ್ದು, ಅವರ ಹೇಳಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆಯ ವರದಿಯಲ್ಲಿ ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳ ಬಣ್ಣ ಬಯಲು ಮಾಡಿದ್ದು, ಅದರ ಫಲವನ್ನು ಅವರೇ ಉಣ್ಣಲಿದ್ದಾರೆ ಎಂದು ಮಾರ್ಮಿಕವಾಗಿ ನುಡಿದ ಸಂತೋಷ್ ಹೆಗ್ಡೆ, ಲೋಕಾಯುಕ್ತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿರುವುದು ತನಗೆ ಅತೀವ ತೃಪ್ತಿ ತಂದಿದ್ದು, ಸಂತೋಷದಿಂದ ನಿವೃತ್ತ್ತ ನಾಗಲಿದ್ದೇನೆ ಎಂದು ತಿಳಿಸಿದರು.
ಲೋಕಾಯುಕ್ತ ಹುದ್ದೆಯಿಂದ ನಿವೃತ್ತಿ ಹೊಂದಿದ ಬಳಿಕ ಜನ ಸಾಮಾನ್ಯರೊಂದಿಗೆ ಸೇರಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವುದಾಗಿ ತಿಳಿಸಿದ ಅವರು, ಸಂಘ-ಸಂಸ್ಥೆಗಳು, ಸಾರ್ವಜನಿಕರು ತನ್ನ ಚಳವಳಿಯನ್ನು ಮುಂದುವರಿಸಲಿದ್ದಾರೆ. ಭ್ರಷ್ಟಚಾರದ ವಿರುದ್ಧದ ಹೋರಾಟಕ್ಕೆ ತನ್ನ ಬೆಂಬಲ ನಿರಂತರ ಎಂದು ಭರವಸೆ ನೀಡಿದರು.

ಜನ ಲೋಕಪಾಲ್ ಕರಡು ಸಮಿತಿಯ ಸದಸ್ಯನಾಗಿ ನಾಗರಿಕ ಸಮಿತಿಯ ಅಣ್ಣಾ ಹಝಾರೆಯವರೊಂದಿಗೆ ಕೆಲಸ ಮಾಡುವುದಾಗಿ ಹೇಳಿದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಭ್ರಷ್ಟರ ವಿರುದ್ಧ ತನ್ನ ಹೋರಾಟ ಯಾವತ್ತೂ ನಿಲ್ಲದು ಎಂದರು.

Please follow and like us:
error

Related posts

Leave a Comment