ಗಂಗಾವತಿ ವಸತಿ ರಹಿತ ನಾಗರಿಕರ ಕ್ಷಿಪ್ರ ಸಮೀಕ್ಷೆ.

ಕೊಪ್ಪಳ ಫೆ. ೨೪ (ಕ ವಾ) ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ವಸತಿ ರಹಿತ ನಾಗರಿಕರನ್ನು ಗುರುತಿಸಿ, ಅಂತಹವರಿಗೆ ಪುನರ್ವಸತಿ ಕಲ್ಪಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ನಗರಸಭೆ ವ್ಯಾಪ್ತಿಯಲ್ಲಿ ಫೆ. ೨೬ ರವರೆಗೆ ವಸತಿ ರಹಿತ ನಾಗರಿಕರ ಕ್ಷಿಪ್ರ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಪೌರಾಯುಕ್ತ ರಂಗಸ್ವಾಮಿ ಅವರು ತಿಳಿಸಿದ್ದಾರೆ.
     ನಗರದಲ್ಲಿ ರಾತ್ರಿ ವಸತಿ ರಹಿತರನ್ನು ಕ್ಷಿಪ್ರ ಸಮೀಕ್ಷೆಯ ಮೂಲಕ ಗುರುತಿಸಿ, ಅಂತಹವರಿಗೆ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳಳುವಂತೆ ಸರ್ವೋಚ್ಛ ನ್ಯಾಯಾಲಯ ಸೂಚಿಸಿದೆ.  ಅಲ್ಲದೆ ಈ ರೀತಿ ಗುರುತಿಸಿದ ನಾಗರಿಕರ ಪೈಕಿ ಮಹಿಳೆಯರು, ಪುರುಷರು, ಅಂಗವಿಕಲರು, ಮಾನಸಿಕ ಅಸ್ವಸ್ಥ್ಯರಿಗೆ ಪ್ರತ್ಯೇಕವಾದ ಕೇಂದ್ರವನ್ನು ಸ್ಥಾಪಿಸಿ, ಮೂಲಭೂತ ಸೌಕರ್ಯದೊಂದಿಗೆ ನಿಯಮಾನುಸಾರ ವಸತಿ ಕಲ್ಪಿಸಿ, ಪುನರ್ವಸತಿ ಕೈಗೊಳ್ಳಲು ಸಹ ಸೂಚನೆ ನೀಡಲಾಗಿದೆ.  ಇಂತಹ ತಂಗುದಾಣಗಳಲ್ಲಿ ವಾಸಿಸುವ ನಾಗರಿಕರಿಗೆ ವಿವಿಧ ಇಲಾಖೆಗಳ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನವನ್ನು ಒದಗಿಸಿ, ಸಮಾಜದ ಮುಖ್ಯ ವಾಹಿನಿಗೆ ತರುವುದು ಇದರ ಉದ್ದೇಶವಾಗಿದೆ.  ಇದಕ್ಕೆ ಸಂಬಂಧಿಸಿದಂತೆ ವಸತಿ ರಹಿತ ನಾಗರೀಕರನ್ನು ಗುರುತಿಸಲು, ಫೆ. ೨೪ ರಿಂದ ಫೆ. ೨೬ ರವರೆಗೆ ಮೂರು ದಿನಗಳ ಕಾಲ ಬೆಳಿಗ್ಗೆ ೧೦ ಗಂಟೆಯಿಂದ  ಸಂಜೆ ೦೪ ಗಂಟೆಯವರೆಗೆ ಮತ್ತು ರಾತ್ರಿ ೦೮ ಗಂಟೆಯಿಂದ ತಡರಾತ್ರಿಯವರೆಗೆ ನಗರಸಭೆಯಿಂದ ಗಂಗಾವತಿ ನಗರ ವಾಪ್ತಿಯಲ್ಲಿ ಜಂಟಿ ಕ್ಷಿಪ್ರ ಸಮೀಕ್ಷೆ ಆಯೋಜಿಸಲಾಗಿದೆ.  ಗಂಗಾವತಿ ನಗರ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಆಸ್ಪತ್ರೆ, ತಾಲೂಕು ಸಮಾಜ ಕಲ್ಯಾಣಾಧಿಕಾರಿ, ಕಂದಾಯ ಅಧಿಕಾರಿಗಳು, ನೈರ್ಮಲ್ಯ ನಿರೀಕ್ಷಕರು, ತಹಸಿಲ್ದಾರರ ಕಚೇರಿ ಪ್ರತಿನಿಧಿಗಳು, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ನಗರಸಭೆ, ಸರ್ಕಾರೇತರ ಸಂಘ/ಸಂಸ್ಥೆಗಳು, ವಸತಿ ರಹಿತ ನಾಗರೀಕರು, ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ನೆಹರು ಯುವ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ನಗರದಲ್ಲಿ ಜಂಟಿ ಸಮೀಕ್ಷೆ ಕೈಗೊಂಡು ವಸತಿ ರಹಿತರಿಗೆ ಆಶ್ರಯ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ರಂಗಸ್ವಾಮಿ ತಿಳಿಸಿದ್ದಾರೆ.
Please follow and like us:
error