ಮೂಲಭೂತ ಸೌಕರ್ಯಕ್ಕಾಗಿ ಕೆಂಚಮ್ಮ ಗುಡಿ ಸ್ಲಂ ನಿವಾಸಿಗಳ ಮನವಿ

ಹೊಸಪೇಟೆ: ನಗರದ ಕೆಂಚಮ್ಮ ಗುಡಿ ಸ್ಲಂನಲ್ಲಿ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ  ಸೋಮವಾರ ಸ್ಲಂ ಜನಾಂದೋಲನ-ಕರ್ನಾಟಕ, ಸಾವಿತ್ರಿ ಬಾಯಿ ಪುಲೆ ಮಹಿಳಾ ಸಂಘಟನೆ ಪ್ರತಿಭಟನೆ ನಡೆಸಿ ನಗರಸಭೆ ಅಧ್ಯಕ್ಷೆ ಕಣ್ಣಿ ಉಮಾದೇವಿ ಹಾಗೂ ಪೌರಾಯುಕ್ತರಿಗೆ ಮನವಿ ಸಲ್ಲಿಸಿದವು.
ಈ ಸಂದರ್ಭದಲ್ಲಿ ಸಂಯೋಜಕಿ ಎನ್. ಹುಲಿಗೆಮ್ಮ ಮಾತನಾಡಿ, ನಗರದ ೫ನೇ ವಾರ್ಡಿನ ಕೆಂಚಮ್ಮ ಗುಡಿ ಸ್ಲಂನಲ್ಲಿ ಚರಂಡಿ, ರಸ್ತೆ ನಿರ್ಮಾಣ ಮಾಡಬೇಕು. ಕೆಂಚಮ್ಮಗುಡಿ ಸ್ಲಂನಲ್ಲಿ ಸುಮಾರು ೭೦ ವರ್ಷಗಳಿಂದ ೧೦೦ ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು. ಪ್ರತಿದಿನ ನರಕಯಾತನೆ ಅನುಭವಿಸುವಂತಾಗಿದೆ. ಸ್ನಾನ ಮಾಡಿದ ನೀರನ್ನು ಎತ್ತಿಹಾಕಬೇಕು. ಅಲ್ಲದೇ ಚರಂಡಿಗಳು ಇಲ್ಲದೇ ಸೊಳ್ಳೆಗಳ ಕಾಟ ಹೆಚ್ಚಾಗಿ ನಾನಾ ರೋಗಗಳಿಗೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ನಮಗೆ ರಸ್ತೆ ಮತ್ತು ಚರಂಡಿಯನ್ನು ನಿರ್ಮಾಣ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವದಾಗಿ ಎಚ್ಚರಿಕೆ ನೀಡಿದರು. ಮನವಿ ಸ್ವೀಕರಿಸಿದ ನಗರಸಭೆ ಅಧ್ಯಕ್ಷೆ ಕಣ್ಣಿ ಉಮಾದೇವಿ ಮಾತನಾಡಿ, ಎಸ್.ಎಫ್.ಸಿ ಯೋಜನೆ ಅಡಿಯಲ್ಲಿ ಹಂತ ಹಂತವಾಗಿ ಈ ಸ್ಲಂನ ಕೆಲಸಗಳನ್ನು ಮಾಡಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ವಾರ್ಡಿನ ಸದಸ್ಯರಾದ ರೂಪೇಶ್, ಮಹಿಳಾ ಘಟಕದ ಅಧ್ಯಕ್ಷರಾದ ಮೈಮುನಾಬಿ, ಕಾರ್ಯದರ್ಶಿ ರಾಜ್ಮ, ಉಪಾಧ್ಯಕ್ಷೆ ತಿಮ್ಮಕ್ಕ, ರುಕ್ಕಮ್ಮ, ದೇವಿಕಮ್ಮ, ಬಸಮ್ಮ ಹಾಗೂ ಸ್ಲಂ ನಿವಾಸಿಗಳು ಭಾಗವಹಿಸಿದ್ದರು. 

Leave a Reply