ಕೊಪ್ಪಳ ತಾಲೂಕ ಸಾಹಿತ್ಯ ಸಮ್ಮೇಳನ ಭಾಗ್ಯನಗರದಲ್ಲಿ

ಕೊಪ್ಪಳ ತಾಲೂಕಾ ಸಾಹಿತ್ಫ್ಯ ಸಮ್ಮೇಳನ ಭಾಗ್ಯನಗರದಲ್ಲಿ ಜರುಗಿತು. ಹಿರಿಯ ಸಾಹಿತಿ ಸಂಶೋದಕ ಬಿ.ಸಿ.ಪಾಟೀಲ ಅಧ್ಯಕ್ಷರಾಗಿದ್ದ ಈ ಸಮ್ಮೇಳನದಲ್ಲಿ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಉದ್ಘಾಟನೆ ಮಾಡಿದ ಅರ್ಜುನ ಗೊಳಸಂಗಿ -ಸಂಸ್ಕೃತಿಯೊಂದಿಗೆ ತಂದೆ ತಾತ, ಅಜ್ಜಂದಿರ ಬದುಕಿನ ಅವಲೋಕನವನ್ನು ಹಾಗೂ ಇತಿಹಾಸವನ್ನು ಇಂದಿನ ಯುವಕರು ಅನುಕರಣೆ ಮಾಡಿಕೊಳ್ಳಬೇಕು. ಮಾತೃ ಭಾಷೆ ಕನ್ನಡವನ್ನು ಹೆಚ್ಚು ಪ್ರೀತಿಸುವುದರೊಂದಿಗೆ ಬೆಳೆಸುವಂತಾಗಬೇಕು. ಭಾಷೆ ಬದುಕಿದರೆ ನಾಡು ಬದುಕುತ್ತದೆ ಎಂದು ದಲಿತ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಖೋಡೆ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ತಾಲೂಕ ಕಸಾಪ ಇವರ ಆಶ್ರಯದಲ್ಲಿ ಆಯೋಜಿಸಲಾದ ಕೊಪ್ಪಳ ತಾಲೂಕ ೨ನೇ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತ, ಈ ನಾಡಿನ ಶರಣರು, ದಾಸರು, ಋಮುನಿಗಳು ಹಾಗೂ ಕ್ರಾಂತಿಕಾರರು ನಾಡಿನ ಏಳಿಗೆಗಾಗಿ ಶ್ರಮಿಸಿದ್ದಾರೆ. ಆದರೆ ಯುವಕರು ಅದನ್ನು ಅನುಸರಿಸುತ್ತಿಲ್ಲ. ಹೀಗಾಗಿ ಕನ್ನಡದ ದೀಪ ಉರಿಯುತ್ತಿಲ್ಲ. ಬದಲಾಗಿ ಇಂಗ್ಲೀಷ್ ದೀಪ ಉರಿಯುವಂತಾಗಿದೆ. ಇಂಗ್ಲೀಷ್ ಭಾಷೆಯ ಕಲಿಕೆಗಾಗಿ ಕೇಂದ್ರ ಸರಕಾರ ೪೦೦ ಕೋಟಿ. ರೂ. ಕಾರಿಸಿದೆ. ಆದರೆ ಕನ್ನಡ ಭಾಷೆಗೆ ಸರಕಾರವೂ ಸಹ ಮಲತಾಯಿ ಧೋರಣೆ ತೋರುತ್ತಿದೆ.
ಕನ್ನಡಿಗರೆಲ್ಲ ಉದಾರಿಗಳು. ಅನ್ಯ ಭಾಷಾ ವ್ಯಾಮೋಹಕ್ಕೊಳಗಾಗಿದ್ದೇವೆ. ಅಪ್ಪ-ಅಮ್ಮ ಬದಲು ಮಮ್ಮಿ-ಡ್ಯಾಡಿ ಸಂಸ್ಕೃತಿಗೆ ಬದ್ಧರಾಗಿದ್ದೇವೆ. ನಾವು ಬದುಕಬೇಕಾದರೆ ಮೊದಲು ಕನ್ನಡ ಭಾಷೆಯನ್ನು ಬದುಕಿಸಬೇಕು. ಬ್ರೆಡ್‌ನಿಂದ್ ಬೆಡ್‌ವರೆಗೆ ಅಂದರೆ ಬೆಳಿಗ್ಗೆಂದ ರಾತ್ರಿ ಮಲಗುವವರೆಗೆ ಬರೀ ಇಂಗ್ಲೀಷ್ ಪದ ಬಳಸುತ್ತಿದ್ದೇವೆ. ಎಲ್ಲ ಇಂಗ್ಲೀಷ್‌ಮಯವಾಗಿದೆ. ಬದಲಾಗಿ ಕನ್ನಡ ಮಾಯವಾಗುತ್ತಿದೆ. ಇದು ಕಳವಳಕಾರಿ. ಕನ್ನಡ ಬದುಕನ್ನು ಕಳೆದುಕೊಳ್ಳುತ್ತಿದ್ದೇವೆ. ಕನ್ನಡ ದೀಪಕ್ಕೆ ಬತ್ತಿ ಇಲ್ಲ ಎಣ್ಣೆ ಇಲ್ಲದಂತಾಗಿದೆ. ಅದನ್ನು ನಾವೆಲ್ಲರೂ ಒಟ್ಟಾಗಿ ಪೂರೈಸಬೇಕು ಕನ್ನಡ ದೀಪ ಬೆಳಗಿಸಬೇಕು ಎಂದರು.
ಆಂದ್ರ, ತ”ಳುನಾಡು ಮಹಾರಾಷ್ಟ್ರ ಸೇರಿದಂತೆ ದೇಶದ ಇತರ ರಾಜ್ಯಗಳಲ್ಲಿ ಅವರವರ ಭಾಷೆ ಬಳಸಲಾಗುತ್ತಿದೆ. ಆದರೆ ಕರ್ನಾಟಕದ ಬಳ್ಳಾರಿ ರಾಯಚೂರು ಜಿಲ್ಲೆಗಳಲ್ಲಿ ತೆಲುಗು, ಬೆಳಗಾಂವ್ ಕಾರವಾರ ಜಿಲ್ಲೆಗಳಲ್ಲಿ ಮರಾಠಿ ಹೀಗೆ ಗಡಿ ಭಾಗದ ಜಿಲ್ಲೆಗಳು ಪರಭಾಷೆ ಬಳಸಿದರೆ ಕನ್ನಡದ ಉಳಿವು ಹೇಗಾದೀತು. ಮೊದಲು ನಮ್ಮ ತಾಯನ್ನು ಗೌರವಿಸೋಣ. ಜನಸಾಮಾನ್ಯರಿಂದ ಜನಪ್ರತಿನಿಧಿಗಳವರೆಗೆ ಕನ್ನಡಾಭಿಮಾನ ಬೆಳೆಯಬೇಕು; ಮೊಳಗಬೇಕು.
ಕನ್ನಡಕ್ಕೆ ಏಳು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಅದೆ ಕನ್ನಡ ನಾಡಿನಲ್ಲಿ ಚಿನ್ನದ ಗಣಿಗಳಿವೆ. ಗ್ರಾನೈಟ್ ಉಕ್ಕಿನ ಅದಿರಿನ ಸಂಪತ್ತಿದೆ. ಗಂಧದ ಮಹಾ ನಿಧಿದೆ. ಕರಾವಳಿ ಜಲಪಾತ ನೀರು ಮಣ್ಣು ಸೇರಿದಂತೆ ಅಪಾರ ಸಂಪತ್ತಿದೆ. ಆದರೆ ಭಾಷೆಗೆ ಕುಂದು ಬರುತ್ತಿದೆ. ಇಂಥ ಸಂಪದ್ಭರಿತ ನಾಡಲ್ಲಿ ಜಾಗತೀಕರಣದಿಂದ ಭಾಷೆ ಮುಳುಗಬಾರದು ಎಂದು ಕರೆ ನೀಡಿದರು.
ಸಮ್ಮೇಳನದ ಸರ್ವಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಬಿ.ಸಿ. ಪಾಟೀಲ ವಹಿಸಿದ್ದರು. ಸ್ಮರಣ ಸಂಚಿಕೆಯನ್ನು ಜಿ.ಪಂ. ಅಧ್ಯಕ್ಷ ರಾಘವೇಂದ್ರ ಹಿಟ್ನಾಳ ಬಿಡುಗಡೆಗೊಳಿಸಿದರು. ಕಸಾಪ ತಾಲೂಕ ಅಧ್ಯಕ್ಷ ಜಿ.ಎಸ್. ಗೋನಾಳ ಸ್ವಾಗತಿಸಿದರು. ಪ್ರ. ಕಾರ್ಯದರ್ಶಿ ಮಂಜುನಾಥ ಗೊಂಡಬಾಳ ವಂದಿಸಿದರು. ಮೊದಲಿಗೆ ರಾಷ್ಟ್ರ ಧ್ವಜಾರೋಹಣವನ್ನು ರಾಘವೇಂದ್ರ ಹಿಟ್ನಾಳ ನೆರವೇರಿಸಿದರು. ಕನ್ನಡ ಧ್ವಜಾರೋಹಣವನ್ನು ಕಸಾಪ ಜಿಲ್ಲಾಧ್ಯಕ್ಷ ಶೇಕರಗೌಡ ಮಾಲಿಪಾಟೀಲ ನೆರವೇರಿಸಿದರು. ಪರಿಷತ್ ಧ್ವಜಾರೋಹಣವನ್ನು ಜಿ.ಎಸ್. ಗೋನಾಳ ಮಾಡಿದರು.
ಈ ಸಂದರ್ಭದಲ್ಲಿ ಅಲ್ಲಮಪ್ರಭು ಬೆಟ್ಟದೂರು, ಸಾಹಿತಿ ಡಾ. ವಿ.ಬಿ ರಡ್ಡೇರ, ಜಿ.ಪಂ. ಸದಸ್ಯ ಪ್ರಸನ್ನ ಗಡಾದ, ಯಮನಪ್ಪ ಕಬ್ಬೇರ, ಗ್ರಾ.ಪಂ. ಅಧ್ಯಕ್ಷ ಶಂಕರ ಲಿಂಗನಬಂಡಿ, ಉಪಾಧ್ಯಕ್ಷೆ ಈರಮ್ಮ ಕಾಕಿ, ಗ್ರಾ.ಪಂ. ಸದಸ್ಯರಾದ ದಾನಪ್ಪ ಕವಲೂರು, ಭೋಗಪ್ಪ ಡಾಣಿ, ಚಂದ್ರಶೇಖರ ಹಾದಿಮನಿ, ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ, ಹಿರಿಯ ಸಾಹಿತಿ ಗಳಾದ ಎಚ್.ಎಸ್. ಪಾಟೀಲ, ವಿಠ್ಠಪ್ಪ ಗೋರಂಟ್ಲಿ, ಎ.ಎಂ. ಮದರಿ, ರಾಜಶೇಖರ ಅಂಗಡಿ, ವೀರಣ್ಣ ವಾಲಿ, ಶಿವಾನಂದ ಹೊದ್ಲೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮೊದಲಿಗೆ ಸಂಗೀತ ದಿಗ್ಗಜ ಸಿ. ಅಶ್ವತ್ಥ ಹಾಗೂ ಹೆಸರಾಂತ ಚಿತ್ರ ನಟ ವಿಷ್ಣುವರ್ಧನ್ ನಿಧನ ನಿಮಿತ್ತ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.
Please follow and like us:
error