ದೇಸಿಯ ಬೀಜ ಸಂಸ್ಕೃತಿ ಉಳಿಸಿ ಬೆಳೆಸುವ ಹಸಿರು ಹಬ್ಬ -ತೀಜ್


ನಮ್ಮ ದೇಸಿಯ ಬೀಜ ಸಂಸ್ಕೃತಿ ಮರೆಯಾಗುತ್ತಿರುವ, ಹಸಿರೇ ಇಲ್ಲವಾಗುತ್ತಿರುವ ಈ ದಿನಗಳಲ್ಲಿ ಕೊಪ್ಪಳ ಜಿಲ್ಲೆಯ ಕುಣಿಕೇರಿ ತಾಂಡಾದಲ್ಲೊಂದು ಹಸಿರು ಹಬ್ಬ ಎಲ್ಲೆಡೆ ಹೆಸರು ಮಾಡುತ್ತಿದೆ. ಬೀಜ ಸಂಸ್ಕೃತಿ ಮತ್ತು ಹಸಿರು ಸಂಸ್ಕೃತಿಯನ್ನು ಬೆಳೆಸಲು ತನ್ನದೇ ಆದ ರೀತಿಯಲ್ಲಿ ಧಾರ್ಮಿಕ ಆಚರಣೆಯಲ್ಲಿ ತೊಡಗಿರುವ ಬಂಜಾರಾ ಬಂಧುಗಳು ಎಲ್ಲರಿಗೂ ಪ್ರೇರಕರಾಗುತ್ತಿದ್ದಾರೆ. ಕೊಪ್ಪಳದಿಂದ ೬ ಕಿಮಿ ದೂರದಲ್ಲಿರುವ ಕುಣಿಕೇರಿ ತಾಂಡಾದಲ್ಲಿ ಈ ವಿಶಿಷ್ಟ ಗೋದಿ ಸಸಿ ಹಬ್ಬ ನಡೆಯುತ್ತದೆ. ಇದನ್ನು ತೀಜ್ ಹಬ್ಬ ಎಂದು ಇವರು ಕರೆಯುತ್ತಾರೆ. ಮೂಲತಃ ರಾಜಸ್ಥಾನ, ಗುಜರಾತ್, ಉತ್ತರ ಭಾರತದಿಂದ ವಲಸೆ ಬಂದ ಬಂಜಾರರು ( ಲಂಬಾಣಿಗಳು) ಹಸುಗಳನ್ನೇ ಅವಲಂಭಿಸಿ ತಮ್ಮ ವ್ಯಾಪಾರ , ಜೀವನ ನಡೆಸುತ್ತಾ ವಲಸೆ ಬಂದಿರುವುದು ಇತಿಹಾಸ. ಕೊಪ್ಪಳ ಜಿಲ್ಲೆಯ ಕುಣಿಕೇರಿ ತಾಂಡಾದ ಹತ್ತಿರದಲ್ಲಿಯೇ ಇರುವ ಬಹಾದ್ದೂರ ಬಂಡಿ ಇಡೀ ಭಾರತದಲ್ಲಿಯೇ ಬಂಜಾರ ( ಲಂಬಾಣಿ) ಜನಾಂಗದಲ್ಲಿ ಪ್ರಸಿದ್ದ ಪವಿತ್ರ ಸ್ಥಳ. ದೇಶದ ಯಾವುದೇ ಮೂಲೆಗೆ ಹೋದರು ಲಂಬಾಣಿಗರು ಹೇಳುವದು ” “ಕೊಪ್ಪಳ ಗಡ್ ಬಾದ್ದೂರ ಬಂಡಾ ಪತ್ತೇನ ಸಾಣ ತೇರನ ಚೌದ ಸತ್ತಾವಿಸ ಪಾಡಾರ ಮಲಾಣ’ ಎಂದು. ಬಹದ್ದೂರ ಬಂಡಿ ಲಂಬಾಣಿ ಜನಾಂಗದ ೨೭ ಉಪಜಾತಿಗಳವರು , ಒಳಪಂಗಡದವರು ಎಲ್ಲ ಸಣ್ಣ ದೊಡ್ಡ ಜನರು ಬಂದು ಸೇರುವಂಥ ಪವಿತ್ರ ಐತಿಹಾಸಿಕ ಸ್ಥಳ ಎಂಬ ಅರ್ಥವನ್ನು ಈ ವಾಕ್ಯ ಕೊಡುತ್ತದೆ. ಬ್ರಿಟಿಷ್ ಮತ್ತು ಪಠಾಣರ ದಬ್ಬಾಳಿಕೆಯಲ್ಲಿ ಚಲ್ಲಾಪಿಲ್ಲಿಯಾದ ಬಂಜಾರರಲ್ಲಿ ಕೆಲವು ಜನ ಇಲ್ಲಿಯೇ ಉಳಿದುಕೊಂಡರು. ಇದೇ ಕುಣಿಕೇರಿ ತಾಂಡಾ. ವಿಶಿಷ್ಟ ಬಂಜಾರ ಸಂಸ್ಕೃತಿ : ದೇಶದಲ್ಲಿಯೇ ಉಡುಗೆ ತೊಡುಗೆಗಳಿಂದ ತಟ್ಟಂತ ಗಮನ ಸೆಳೆಯುವ ಬಂಜಾರ ಜನಾಂಗದವರು ಹಿಂದಿನ ಕಾಲದ ತಮ್ಮ ಉಡುಗೆಯ ರೀತಿಯನ್ನು ಈಗಲೂ ಮುಂದುವರೆಸಿಕೊಂಡು ಬಂದಿದ್ದಾರೆ. ಇತ್ತೀಚಿನ ಯುವಪೀಳಿಗೆ ಅಧುನೀಕತೆಗೆ ಒಳಗಾಗಿದ್ದರೂ ಸಾಂಪ್ರದಾಯಿಕ ಉಡುಗೆ ಮುಂದುವರೆದೇ ಇದೆ. ಅದೇ ರೀತಿ ಬಂಜಾರ ಭಾಷೆ ಇಡೀ ಭಾರತದಲ್ಲಿ ಬಂಜಾರ ಭಾಷೆ ಒಂದೇ ತೆರನಾಗಿ ಕಾಣುತ್ತದೆ. ಆಯಾ ರಾಜ್ಯಗಳ ಭಾಷೆಗಳ ಶಬ್ದಗಳನ್ನು ಸೇರಿಸಿಕೊಂಡು ಲಂಬಾಣಿಗರು ಮಾತನಾಡುತ್ತಾರೆ. ತಮ್ಮದೇ ಆದ ವಿಶಿಷ್ಟ ಹಬ್ಬಗಳನ್ನು ಆಚರಿಸುವ ಬಂಜಾರರು (ಲಂಬಾಣಿ) ವಿಶೇಷವಾಗಿ ಸಿತಲಾ, ಹೋಳಿ, ದವಾಳಿ ( ದೀಪಾವಳಿ) ,ದಸರಾ, ತೀಜ್ ( ಸಸಿ ಹಬ್ಬ)ಗಳನ್ನು ಆಚರಿಸುತ್ತಾರೆ. ವಿಶಿಷ್ಟ ತೀಜ್ ಹಬ್ಬ ( ಗೋದಿ ಸಸಿ ಹಬ್ಬ) ತೀಜ್ (ಗೋದಿ ಸಸಿ ಹಬ್ಬ ) ಇದನ್ನು ಸಾಮಾನ್ಯವಾಗಿ ಎಲ್ಲ ಬಂಜಾರರು ಶ್ರಾವಣ ಮಾಸದಲ್ಲಿ ಮಾಡುತ್ತಾರೆ. ಕೆಲವೆಡೆ ಸ್ಥಳೀಯ ಹಬ್ಬಗಳ ಜೊತೆ ಈ ಹಬ್ಬವನ್ನು ಆಚರಿಸುತ್ತಾರೆ. ಸಸಿ ಹಬ್ಬದ ಆಚರಣೆಯು ವಿಶಿಷ್ಟವಾಗಿದೆ. ಕೊನೆಯ ಶ್ರಾವಣ ಸೋಮವಾರಕ್ಕೆ ೯ ದಿನ ಮುಂಚೆ ಹೊಸ ಬಿದರಿನ ಪುಟ್ಟಿಯನ್ನು ಖರೀದಿಸುತ್ತಾರೆ. ಕೃಷ್ಣ ಪರಮಾತ್ಮನ ಗುಡಿಯ ಪೂಜಾರಿಯು ಗುಡಿಗೆ ಬಂದ ಪ್ರತಿಯೊಬ್ಬರಿಗೂ ೯ ಗೋದಿಕಾಳುಗಳನ್ನು ನೀಡುತ್ತಾನೆ. ಹೀಗೆ ದೊರೆತ ೯ ಗೋದಿಕಾಳುಗಳನ್ನು ಮತ್ತೊಂದಿಷ್ಟು ಕಾಳುಗಳನ್ನು ಹುತ್ತದ ಮಣ್ಣಿನ ಜೊತೆ ಸೇರಿಸಿ ಮೊಳಕೆ ಬಿಡಲು ಹದಮಾಡಿ ಬಿದಿರಿನ ಪುಟ್ಟಿಯನ್ನು ಅವರವರ ಮನೆಯ ದೇವರ ಜಗುಲಿಯ ಹತ್ತಿರವಿಡುತ್ತಾರೆ. ಈ ಪುಟ್ಟಿಗೆ ೯ ದಿವಸದ ತನಕ ಬೆಳಿಗ್ಗೆ ಮತ್ತು ಸಂಜೆ ಬಹಳ ಮಡಿಯಿಂದ ತುಂಬಿದ ಬಿಂದಿಗೆಯ ನೀರನ್ನು ಹಾಕುತ್ತಾರೆ. ಈ ಕ್ರಿಯೆಯಲ್ಲಿ ಹೆಚ್ಚಿನ ಕಾಳಜಿ ವಹಿಸಿ ಭಾಗವಹಿಸುವವರು ಕುವಾರಿ ಕನ್ಯೆಯರು ( ಮದುವೆ ಆಗದೇ ಇರುವವರು). ತೀಜ್ ಹಬ್ಬದ ಮುಖ್ಯ ಘಟ್ಟ ಆರಂಭವಾಗುವುದು ಕಡೇ ಸೋಮವಾರದಂದು. ಅಂದು ಕೃಷ್ಣ ಗುಡಿಯ ಪೂಜಾರಿ ಗುಡಿಯ ಮುಂದೆ ಕಾಟಿ ಧ್ವಜವನ್ನು ಪ್ರತಿಷ್ಠಾಪಿಸುತ್ತಾರೆ. ಕೆಂಪು, ಹಳದಿ ಬಣ್ಣಗಳುಳ್ಳ ಕಾಟಿ ಧ್ವಜ್ ವನ್ನು ತೆಗೆದುಕೊಂಡು ನಗಾರಿ, ಭಜನೆ ಮೇಳದ ಜೊತೆ ಊರಿನ ಗಂಡು ಮಕ್ಕಳು ಪಕ್ಕದ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ವಾಪಸ್ ಗುಡಿಗೆ ಬರುತ್ತಾರೆ. ಗುಡಿಯ ಮುಂದೆ ಭೋಗ್ ( ಹೋಮ) ಪೂಜೆಯನ್ನು ನಡೆಸಲಾಗುತ್ತದೆ. ಕೃಷ್ಣ ಗುಡಿಯ ಪೂಜಾರಿ ಕುದಿಯುತ್ತಿರುವ ಅನ್ನದ ಹಂಡೆಯಲ್ಲಿ ಕೈಹಾಕಿ ಅನ್ನವನ್ನು ತೆಗೆಯುವ ಪವಾಡ ನಡೆಯುತ್ತದೆ. ಇಡೀ ರಾತ್ರಿ ಭಜನೆ, ಹಾಡು,ಕುಣಿತ ನಡೆಯುತ್ತದೆ. ಹೆಣ್ಣು ಗಂಡು ಬೇದವಿಲ್ಲದೇ ದೇವರ ಪ್ರಾರ್ಥನೆ ಮಾಡುತ್ತಾ ರಾತ್ರಿಯಿಡಿ ಜಾಗರಣೆ ಮಾಡುತ್ತಾರೆ. ಮರುದಿನ ಮಂಗಳವಾರದಂದು ಮಧ್ಯಾಹ್ನ ೧ ಗಂಟೆಯ ನಂತರ ಪ್ರತಿ ಮನೆಯಲ್ಲಿ ಹಾಕಿರುವ ತೀಜ್ ( ಸಸಿ) ಬುಟ್ಟಿಗಳನ್ನು ಸುಂದರವಾಗಿ ಶೃಂಗರಿಸಿಕೊಂಡು ಹೊಸ ಉಡುಗೆ ತೊಡುಗೆಗಳಿಂದ ಅಲಂಕೃತರಾದ ಕುಂವಾರಿ ಕನ್ಯೆಯರು ತಲೆ ಮೇಲೆ ಹೊತ್ತುಕೊಂಡು ಕೃಷ್ಣ ದೇವರ ಗುಡಿಗೆ ಬರುತ್ತಾರೆ. ಹೀಗೆ ಬರುವಾಗ ಹಾಡು ಹಾಡುತ್ತಾ ತಮ್ಮ ಸಂಗಡಿಗರೊಂದಿಗೆ ಸಾಗುತ್ತಾರೆ. ಕೃಷ್ಣ ದೇವರ ಗುಡಿಯ ಅಂಗಳಕ್ಕೆ ಬಂದು ಹಾಡಿ ಕುಣಿದು ಕುಪ್ಪಳಿಸುತ್ತಾರೆ. ಸುಮಾರು ೪ ಗಂಟೆಯ ಹೊತ್ತಿಗೆ ಇಡೀ ಊರಿನ ತೀಜ್ ಬುಟ್ಟಿಗಳು ಗುಡಿಯ ಅಂಗಳಕ್ಕೆ ಬಂದಿರುತ್ತದೆ. ನಂತರ ಕೃಷ್ಣ ಪೂಜಾರಿ ಜೊತೆಯಲ್ಲಿ ಊರಿನ ನಾಯಕ್, ಕಾರಬಾರಿ, ಡಾವೋ ಹಿರಿಯರೆಲ್ಲರೂ ಸೇರಿ ೯ ಬುಟ್ಟಿಗಳಿಂದ ತೀಜ್ ಸ್ವಲ್ಪ ಸ್ವಲ್ಪ ತೆಗೆದುಕೊಂಡು ದೇವರಿಗೆ ಅರ್ಪಿಸಿ ನಂತರ ಎಲ್ಲ ಹೆಂಗಸರು ಮತ್ತು ಕನ್ಯಾಮಣಿಗಳ ತೀಜ್ ಗಳನ್ನು ಬುಟ್ಟಿಯಿಂದ ಬೇರ್ಪಡಿಸುತ್ತಾರೆ . ನಂತರ ಗುಡಿಯ ಮುಂದೆ ಸೇರಿರುವ ಎಲ್ಲಾ ಹಿರಿಯ ಕಿರಿಯರಿಗೆ ಒಬ್ಬರಿಗೊಬ್ಬರು ತೀಜ್ ಹಂಚಿಕೊಂಡು ನಮಸ್ಕರಿಸುತ್ತಾ ವಿಜೃಂಭಣೆಯಿಂದ ರಾತ್ರಿ ೧೦ ಗಂಟೆಯವರೆಗೂ ಹಾಡುತ್ತಾ ಕುಣಿಯುತ್ತಾ ತೀಜ್ ಹಬ್ಬ ಆಚರಿಸುತ್ತಾರೆ. ಬನ್ನಿ ಹಬ್ಬದಂತೆ ಈ ಹಬ್ಬದ ಆಚರಣೆಯಲ್ಲೀಯೂ ಪರಸ್ಪರರಿಗೆ ತೀಜ್ ಹಂಚಿಕೊಂಡು ಬಾಳು ಯಾವತ್ತೂ ಹಸಿರಾಗಲಿ, ಒಳ್ಳೆಯದಾಗಲಿ ಎಂದು ಹಾರೈಸಲಾಗುತ್ತದೆ. ತೀಜ್ ಹಬ್ಬದ ಮುಕ್ತಾಯ : ಹುಲುಸಾಗಿ ಬೆಳೆಸಿದ ೯ ದಿವಸದ ಗೋದಿ ಸಸಿಗಳನ್ನು ಬನ್ನಿ ಹಂಚಿಕೊಳ್ಳುವಂತೆ ಹಂಚಿಕೊಂಡ ಸಸಿಗಳನ್ನು ಭಕ್ತಿಪೂರ್ವಕವಾಗಿ ಮತ್ತು ಜ್ಞಾಪಕಾರ್ಥವಾಗಿ ಸಾಧ್ಯವಾದಷ್ಟು ದಿನ ಮಡಿವಂತಿಕೆಯಿಂದ ಇಟ್ಟುಕೊಳ್ಳುತ್ತಾರೆ. ಬುಧವಾರದಂದು ಎಲ್ಲಾ ಕನ್ಯಾಮಣಿಗಳು ತಮ್ಮ ಬುಟ್ಟಿಗಳನ್ನು ಹತ್ತಿರದ ತುಂಗಭದ್ರಾನದಿಗೆ ಪೂಜೆ ಸಲ್ಲಿಸಿ ನಂತರ ಅವುಗಳನ್ನು ನೀರಲ್ಲಿ ಹರಿಯಲು ಬಿಟ್ಟು ಮನೆಗೆ ವಾಪಸ್ಸಾಗುತ್ತಾರೆ. ಪೃಕೃತಿ ದೇವತೆಗೆ ಎಲ್ಲರ ಬಾಳನ್ನು ಹಸನು ಮಾಡು ಎಂದು ಬೇಡಿಕೊಳ್ಳುವುದಕ್ಕಾಗಿ ಈ ಹಬ್ಬ ಆಚರಿಸಲಾಗುತ್ತದೆ. ಎಲ್ಲೆಡೆ ಒಳ್ಳೆಯ ಮಳೆಯಾಗಿ ಒಳ್ಳೆಯ ಬೆಳೆ ಬರಲಿ ಇಡೀ ಮನುಕುಲಕ್ಕೆ ಒಳ್ಳೆಯದಾಗಲಿ ಎಲ್ಲೆಡೆ ಹಸಿರು ಹರಡಲಿ , ಹಸಿರೇ ಉಸಿರು ಎಂದು ಈ ವಿಶಿಷ್ಟ ಹಬ್ಬದಂದು ಇಡೀ ಜಿಲ್ಲೆಯ ಸುತ್ತಮುತ್ತಲಿನ ತಾಂಡಾದವರು ತಮ್ಮ ದಿನ ನಿತ್ಯದ ಜಂಜಡಗಳನ್ನು ,ಕಷ್ಟಕಾರ್ಪಣ್ಯಗಳನ್ನು ಮರೆತು ಭಾಗವಹಿಸುತ್ತಾರೆ ಎಂದು ತಾಲೂಕ ಪಂಚಾಯತ್ ಸದಸ್ಯರೂ ಆಗಿರುವ ಬಂಜಾರ ಸಮಾಜದ ಜಿಲ್ಲಾ ಅಧ್ಯಕ್ಷರಾದ ಶ್ರೀ ಭರತನಾಯ್ಕರು ಹೇಳುತ್ತಾರೆ. ಈ ಸಲದ ತೀಜ್ ಹಬ್ಬ ೭-೯-೨೦೧೦ ರಂದು ಕುಣಿಕೇರಿ ತಾಂಡಾದಲ್ಲಿ ಆಚರಿಸಲಾಗುತ್ತದೆ. ಬಂದು ನೀವೂ ಭಾಗವಹಿಸಿ. ಪೂರಕ ಮಾಹಿತಿ,ಚಿತ್ರಗಳು : ಶ್ರೀ ಭರತನಾಯ್ಕ ಬಂಜಾರ ಸಮಾಜದ ಜಿಲ್ಲಾ ಅಧ್ಯಕ್ಷರು, ಕುಣಿಕೇರಿ ತಾಂಡಾ ಶ್ರೀ ಆರ್.ಚಂದ್ರನಾಯ್ಕ

Leave a Reply