ನಿವೃತ್ತಿ ಹೊಂದಿದ ಕೆ.ಹೆಚ್. ಕಾಕನೂರ ಅವರಿಗೆ ಆತ್ಮೀಯ ಬೀಳ್ಕೊಡುಗೆ

 ಸರ್ಕಾರಿ ಅಧಿಕಾರಿಗಳು ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವುದರ ಮೂಲಕ ಸಮಾಜದಲ್ಲಿ ಗೌರವ ಸಂಪಾದನೆ ಮಾಡಬೇಕು ಎಂದು ಜಿಲ್ಲಾ ಪಂಚಾಯತಿಯ ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೆಚ್. ಕಾಕನೂರ ಅವರು ಹೇಳಿದರು.
  ಜ. ೩೧ ರಂದು ವಯೋನಿವೃತ್ತಿ ಹೊಂದಿದ ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೆಚ್. ಕಾಕನೂರ ಅವರನ್ನು ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಆತ್ಮೀಯ  ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
  ಸರ್ಕಾರಿ ನೌಕರರು, ಸಾರ್ವಜನಿಕ ಸೇವೆಗೆ ದೇವರು ಕರುಣಿಸಿದ ವರದಾನವೆಂದು ಭಾವಿಸಿ, ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಬೇಕು.  ಈ ಮೂಲಕ ಸಮಾಜದಲ್ಲಿ ಗೌರವ ಸಂಪಾದನೆ ಮಾಡಬೇಕು.  ಯಾರದ್ದೋ ಪ್ರಭಾವಕ್ಕೆ ಒಳಗಾಗಿ, ಅಥವಾ ಆಮಿಷಕ್ಕೆ ಬಲಿಯಾಗಿ ಕಾನೂನು ಉಲ್ಲಂಘನೆ ಮಾಡಬಾರದು.  ಈ ರೀತಿ ನಿಯಮಗಳನ್ನು ಉಲ್ಲಂಘಿಸಿ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದುಕೊಳ್ಳಬಾರದು.   ಸರ್ಕಾರಿ ಸಂಬಳ ಪಡೆಯುವ ಸರ್ಕಾರಿ ನೌಕರರು ಆತ್ಮಸಾಕ್ಷಿಗನುಗುಣವಾಗಿ ಕರ್ತವ್ಯ ನಿರ್ವಹಿಸಬೇಕು.  ಕೊಪ್ಪಳ ಜಿಲ್ಲೆಯಲ್ಲಿ ಮುಖ್ಯ ಕಾರ್ಯನಿರ್ವಾಹಕರ ಹುದ್ದೆಯಲ್ಲಿ ಸಲ್ಲಿಸಿರುವ ಸೇವೆ ನನಗೆ ತೃಪ್ತಿ ತಂದಿದ್ದು,   ಯಾವುದೇ ಅಧಿಕಾರಿಗಳಲ್ಲಿ ತಪ್ಪು ಕಂಡುಬಂದ ಸಂದರ್ಭದಲ್ಲಿ ಸರಿಪಡಿಸಲು ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದ್ದೇನೆ.  ಇದರಲ್ಲಿ ಯಾವುದೇ ದುರುದ್ದೇಶ ಇರಲಿಲ್ಲ.  ಯಾರ ಒತ್ತಡದಿಂದಲೂ ಕ್ರಮ ಕೈಗೊಳ್ಳಲು ಮುಂದಾಗಲಿಲ್ಲ.  ಸರ್ಕಾರದ ಕೆಲಸ ಜನಸಾಮಾನ್ಯರಿಗೆ ತಲುಪಬೇಕು ಎನ್ನುವ ಉದ್ದೇಶದಿಂದ ಮಾತ್ರ ಇಂತಹ ಕ್ರಮಕ್ಕೆ ಮುಂದಾಗಿದ್ದೇನೆಯೇ ಹೊರತು ಇದರಲ್ಲಿ ಯಾವುದೇ ನನ್ನ ಪೂರ್ವಗ್ರಹ ಮನಸ್ಸು ಇರಲಿಲ್ಲ.  ತಮ್ಮ ಇಲಾಖೆಯ ಬಗ್ಗೆ, ಕಾನೂನುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಅಗತ್ಯವಾಗಿದೆ.  ಸರ್ಕಾರ ಕೊಟ್ಟಿರುವ ಎಲ್ಲ ಕೆಲಸಗಳನ್ನು ಮಾಡಲಿಕ್ಕಾಗದಿದ್ದರೂ, ಕೆಲಸ ಮಾಡುವ ಮನಸ್ಸನ್ನು ತೋರಿಸಿಕೊಡಬೇಕು.  ನನ್ನ ಕೆಲಸದ ಅವಧಿಯಲ್ಲಿ ಯಾರಿಗೂ ನೋವನ್ನುಂಟು ಮಾಡುವ ಉದ್ದೇಶ ನನಗಿರಲಿಲ್ಲ.  ಅದು ಕೇವಲ ಸಾಂದರ್ಭಿಕ ಕ್ರಮವಾಗಿದ್ದು,  ನಾನು ತೆಗೆದುಕೊಂಡ ನಿರ್ದಾಕ್ಷಿಣ್ಯ ಕ್ರಮದಿಂದ ಅಥವಾ ಮಾತುಗಳಿಂದ ಯಾರಿಗಾದರೂ ನೋವಾಗಿದ್ದಲ್ಲಿ ದಯವಿಟ್ಟು ಕ್ಷಮಿಸಿ ಎಂದು ಅಧಿಕಾರಿ, ಸಿಬ್ಬಂದಿಗಳಲ್ಲಿ ವಿನಮ್ರತೆಯಿಂದ ಮನವಿ ಮಾಡಿಕೊಂಡರು.
  ಜಿಲ್ಲಾ ಪಂಚಾಯತ್ ವ್ಯವಸ್ಥೆಯಲ್ಲಿ ಅಧಿಕಾರಿಗಳು ಸುಗಮ ಕಾರ್ಯನಿರ್ವಹಿಸುವುದು ಕಷ್ಟದ ಕೆಲಸವೇ ಆಗಿದ್ದರೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೆ.ಹೆಚ್. ಕಾಕನೂರ ಅವರು ದಕ್ಷತೆ ಹಾಗೂ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದ್ದಾರೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಹುದ್ದೆಯ ಪ್ರಭಾರವನ್ನು ವಹಿಸಿಕೊಂಡ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ನುಡಿದರು.
  ಸಮಾರಂಭದಲ್ಲಿ ಜಿ.ಪಂ.  ಉಪಕಾರ್ಯದರ್ಶಿ ಅನ್ನದಾನಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ  ಮಂಟೇಲಿಂಗಾಚಾರ್, ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾರ್ ಮುಂತಾದವರು ಕೆ.ಹೆಚ್. ಕಾಕನೂರ ಅವರ ಕಾರ್ಯತತ್ಪರತೆಯನ್ನು ಶ್ಲಾಘಿಸಿದರು.  ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
Please follow and like us:
error