ಜಾನು ಚಿತ್ರ ವಿಮರ್ಶೆ

ಅರ್ಧ ಪಯಣ, ಇನ್ನರ್ಧ ಹೈರಾಣಾ!
     ಕೆಲವು ಸಲ ಯಾರ್‍ಯಾರೋ ಯಾರದೋ ಹಿಂದೆ ಯಾಕೆ ಬಿಳ್ತಾರೆ ಅಂತ ಗೊತ್ತಾಗಲ್ಲ ಬಿಡ್ರಿ ಅಂತ ಒಂದು ದೃಶ್ಯದಲ್ಲಿ ನಾಯಕ ಸಿದ್ದು ಜಾನುವಿನೊಂದಿಗೆ ಮದುವೆ ನಿಶ್ಚಯವಾಗಲಿರುವ ಹುಡುಗನಿಗೆ ಹೇಳುತ್ತಾನೆ. ಹಾಗೆಯೇ ಪ್ರೀತಂ ಗುಬ್ಬಿ ಈಗಾಗಲೇ ಆಗಾಗ ನೋಡಿರುವ ಕೆಲ ಸಿನಿಮಾಗಳ ಹಿಂದೆ ಬಿದ್ದು ಕತೆ ಮಾಡಿದಂತಿದೆ. ಆದರೆ ಪ್ರೇಕ್ಷಕರಿಗೆ ಒಂದೊಂದೂ ಸೀನು `ಇದು ಆ ಸಿನಿಮಾದಲ್ಲಿದ್ದಂತೆ ಇದೆ. ಈ ಸಿನಿಮಾದಲ್ಲಿದ್ದಂತೇ ಇದೆ’ ಎಂಬುದು ಗೊತ್ತಾಗಿಬಿಡುತ್ತದೆ. ಚಿತ್ರದ ಮೊದಲರ್ಧ ಮೆರವಣಿಗೆ, ಚಿರುವಿನ ಕತೆ ನೆನಪಿಸಿದರೆ, ಉಳಿದರ್ಧ ಮರ್ಯಾದೆ ರಾಮಣ್ಣ, ಸಾರಥಿ, ಪರಮಾತ್ಮನ ಕತೆಯನ್ನು ಮಿಕ್ಸ ಮಾಡಿ ಕೊಟ್ಟಂತೆ ಕಾಣುತ್ತದೆ.
     ಆದರೂ ಜಾನು ಸಿನಿಮಾ ಬೋರ್ ಹೊಡೆಸದಂತೆ ನಿರೂಪಿಸಿರುವುದು ನಿರ್ದೇಶಕರ ಜಾಣ್ಮೆ ಎನ್ನಲಡ್ಡಿಯಿಲ್ಲ. ಬಯಲುಸೀಮೆಯ ತಿಂಡಿಪೋತಿ ಹುಡುಗಿ ಜಾನು ಊರನ್ನೆ ನಡುಗಿಸುವ ಗೌಡನ ಮಗಳು. ಮೈಸೂರು ದಸರಾ ನೋಡಲು ಮನೆಯಲ್ಲಿ ಯಾರಿಗೂ ಹೇಳದೇ, ಕೇಳದೇ ಪ್ರೀತಿಸಿದ ಹುಡುಗನೊಂದಿಗೆ ಓಡಿಹೋಗುತ್ತಿದ್ದೇನೆ ಎಂದು ಚೀಟಿ ಬರೆದಿಟ್ಟು ಒಬ್ಬಳೇ ಮೈಸೂರಿಗೆ ಬಂದು ಸಾಕಷ್ಟು ರೊಕ್ಕ ಖಾಲಿ ಮಾಡ್ತಾಳ. ಹೋಟೇಲ್‌ನಲ್ಲಿ ಬರೀ ಉಪಹಾರಕ್ಕೆ ಆಕೆಗೆ ೮೦೦ ರು. ಬಿಲ್ ಮಾಡಿಸಿ ಕತೆಯನ್ನು ಓಡಿಸಿದ್ದಾರೆ ನಿರ್ದೇಶಕರು. 
      ತಿಂದ ಬಿಲ್ ಕೊಡಲು ಹಣ ಇರದ ಹುಡುಗಿಯನ್ನು ಸೇಫಾಗಿ ಮನೆ ತಲುಪಿಸುವ ಕಾಯಕವನ್ನು ನಾಯಕನಿಗೆ ಹೊರಿಸಿ ಮಾರ್ಗ ಮಧ್ಯೆದಲ್ಲಿಯೇ ಇಬ್ಬರಿಗೂ ಲವ್ ಆಗುವ ಹಂತಕ್ಕೆ ತಂದು, ಪ್ರೀತಿಯ ಜಾನುವನ್ನು ಅವರೂರಿಗೆ ಬಿಟ್ಟು  ನಾಯಕ ಸಿದ್ದು ಒಲ್ಲದ ಮನಸ್ಸಿನಿಂದ ತನ್ನೂರಿಗೆ ಮರಳಬೇಕೆನ್ನುವಷ್ಟರಲ್ಲಿ ದಾಂಡಿಗರ ದಂಡನ್ನು ದಂಡಿಸಿ ಮುಗಿಸುವ ಹೊತ್ತಿಗೆ ಥೇಟರ್‌ನ ಹೊರಗಡೆ ಇರುವ ನೀರು, ಚಹಾ, ಕೂಲ್‌ಡ್ರಿಂಕ್ಸ ಕುಡಿಯಲು ಪ್ರೇಕ್ಷಕರಿಗೆ ವಿರಾಮ.
      ಉಳಿದ ಕತೆ ನೋಡುತ್ತಿದ್ದಂತೆ ಥೇಟ್ ಮರ್ಯಾದೆ ರಾಮಣ್ಣ. ಕುಸ್ತಿ ಪಂದ್ಯವಂತೂ ಸಾರಥಿ ಸಿನಿಮಾ ಬೇಡವೆಂದರೂ ನೆನಪಿಗೆ ಬರುತ್ತದೆ. ವಿಭಿನ್ನವಾದ ಸಿನಿಮಾಗಳನ್ನು ನೀಡಿರುವ ಗುಬ್ಬಿಗೆ ಇದೆಲ್ಲ ಬೇಕಿತ್ತಾ ಎಂದು ಸಿನಿಮಾ ನೋಡುವವರಿಗೆ ಅನ್ನಿಸಿದರೆ ಪ್ರೀತಂ ಬೇಸರಿಸಿಕೊಳ್ಳಬಾರದು. ಉಳಿದ ಕತೆ ಪ್ರೇಕ್ಷಕರ ನಿರೀಕ್ಷೆಯಂತೆ ಸಾಗುತ್ತದೆ ಹಾಗೂ ಮುಗಿಯುತ್ತದೆ. 
      ಸಾಧುಕೋಕಿಲಾ ನಟನೆಯ ಕಿಕ್, ಭಟ್ಟರ ಹಾಡುಗಳು, ಕೃಷ್ಣ ಅವರ ಕ್ಯಾಮರಾ ಕಣ್ಣಿನಲ್ಲಿ ಮೂಡಿಬಂದಿರುವ ದೃಶ್ಯಗಳು ಮಸ್ತ್ ಮಜಾ ಕೊಡುತ್ತದೆ. ಹರಿಕೃಷ್ಣ ಸಂಗೀತದಲ್ಲಿ ಪರಮಾತ್ಮನ ಗುಂಗಿದೆ. ಕಣ್ ಮುಚ್ರೋ ಹಾಡಿಗೆ ನೀಡಿರುವ ಸಂಗೀತ ಹುಡುಗರು ಸಿನಿಮಾದ ನಾ ಬೋರ್ಡು ಇರದ ಬಸ್‌ನು ಹತ್ತಿ ಬಂದ ಚೋಕರಿ ಹಾಡನ್ನು ನೆನಪಿಸುತ್ತದೆ. ಅಲ್ಲಲ್ಲಿ ಕಚಗುಳಿ ಇಡುವ ಸಂಭಾಷಣೆಗಳು ಚಿತ್ರದ ಓಟಕ್ಕೆ ತುಸು ವೇಗ ತಂದುಕೊಟ್ಟಿವೆ. ಉತ್ತರ ಕರ್ನಾಟಕ ಭಾಷೆಯ ಮೇಲೆ ಹಿಡಿತ ಸಾಽಸಲು ಪ್ರಯತ್ನಿಸಿರುವ ಗುಬ್ಬಿ ಪ್ರೇಕ್ಷಕರಿಗೆ ನಗೆಯನ್ನು ಉಣಬಡಿಸಿ ತಾವು ನಗೆಪಾಟೀಲಿಗೀಡಾಗಿದ್ದಾರೆ. 
       ಉತ್ತರ ಕರ್ನಾಟಕದಲ್ಲಿ ಯಾವ ಗಂಡನೂ ಹೆಂಡತಿಗೆ ಬೇ ಎನ್ನುವ ಪದ ಬಳಸುವುದಿಲ್ಲ. ಚಿತ್ರದಲ್ಲಿ ಬರುವ ನಾಯಕಿಯ ತಂದೆ ಗೌಡ ತನ್ನ ಹೆಂಡತಿಗೆ ಪದೇ ಪದೇ ಬೇ ಬೇ ಎನ್ನುವ ಪದ ಬಳಸುತ್ತಾನೆ. ಮೂಲತಃ ಬೇ ಎನ್ನುವ ಪದ ಹುಟ್ಟಿದ್ದು ಅಬ್ಬೆ ಎಂಬ ಪದದಿಂದ. ಅಬ್ಬೆ ಎಂದರೆ ತಾಯಿ ಎಂದರ್ಥ. ಉತ್ತರ ಕರ್ನಾಟಕ ಭಾಷೆಯನ್ನು ಬಳಸುವಾಗ ಗುಬ್ಬಿ ಕೊಂಚ ಅಧ್ಯಯನ ಮಾಡಬೇಕಿತ್ತು. ಇಲ್ಲ ಭಟ್ಟರನ್ನು ಸರಿಯಾಗಿ ಕೇಳಬೇಕಿತ್ತು. 
      ಜಾನಿಯ ಗೆಲುವಿನ ಜೋಶ್‌ನಲ್ಲಿ ಜಾನುವನ್ನು ತಯಾರಿಸಿರುವ ಜಯಣ್ಣ ಹಾಗೂ ಭೋಗೇಂದ್ರ ಅವರಿಗೆ ಪ್ರೀತಂ ಮೇಲೆ ಸಾಕಷ್ಟು ಭರವಸೆ ಇದೆ ಎನ್ನುವುದು ಚಿತ್ರದ ಪ್ರತಿ ದೃಶ್ಯಗಳಿಂದ ಸಾಬೀತಾಗಿದೆ. ರಂಗಾಯಣ ರಘು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಶೋಭ್‌ರಾಜ್ ಗೌಡನ ಪಾತ್ರಕ್ಕೆ ಇನ್ನಷ್ಟೂ ಗತ್ತು, ಗೈರತ್ತು ತರಬೇಕಿತ್ತು. ಸಂಗು ಪಾತ್ರ ನಿರ್ವಹಿಸಿದ ಮಧು ಗುರುಪಾದಸ್ವಾಮಿ ಅತ್ತ ಖಳನಟರು ಆಗದ, ಇತ್ತ ಕಾಮಿಡಿಯನ್ ಆಗದ ಪಾತ್ರವನ್ನು ಇನ್ನೊಂಚೂರು ನಿಬಾಯಿಸಬೇಕಿತ್ತು. ನಟನೆಯಲ್ಲಿ ಸಾಧುಕೋಕಿಲಾ, ನಾಯಕ ಯಶ್ ಹಾಗೂ ನಾಯಕಿ ದೀಪಾ ಸನ್ನಿಽಗೆ ಫುಲ್ ಮಾರ್ಕ್ಸ. ಕಾಡೊಂದರಲ್ಲಿರುವ ಪೊಲೀಸ್ ಸ್ಟೇಷನ್‌ನಲ್ಲಿ ಪೋಲಿಯಾಗಿ ಹಾಗೂ ಜಾಲಿಯಾಗಿ ಮಾತನಾಡುವ ಪೊಲೀಸ್ ಪಾತ್ರ ಚಿಕ್ಕದಾದರೂ ಗಮನ ಸೆಳೆಯುತ್ತದೆ.
     ಮಧ್ಯಂತರದವರೆಗೂ ಪ್ರಯಾಣದಲ್ಲಿ ಸಾಗುವ ಜಾನು ಕತೆ ಮಿಕ್ಕಂತೆ ಸರಳವಾಗಿ ಊಹೆಗೆ ನಿಲುಕುತ್ತದೆ. ಒಟ್ಟಿನಲ್ಲಿ ಅರ್ಧ ಪ್ರಯಾಣ, ಉಳಿದರ್ಧ ಹೈರಾಣಾ!
-ಚಿತ್ರಪ್ರಿಯ ಸಂಭ್ರಮ್
Please follow and like us:
error