ರಾಜೀನಾಮೆ ವಾಪಸ್

 : ವರಿಷ್ಠರಿಂದ ಭಿನ್ನರಿಗೆ ನಾಯಕತ್ವ ಬದಲಾವಣೆಯ ಭರವಸೆ
 ಬೆಂಗಳೂರು, ಜು.2: ಬಿಜೆಪಿಯೊಳಗೆ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದು ರಾಜೀನಾಮೆ ನೀಡಿದ್ದ ಬಿ.ಎಸ್. ಯಡಿಯೂರಪ್ಪ ಬಣದ ಒಂಬತ್ತು ಮಂದಿ ಸಚಿವರು ಹೈಕಮಾಂಡ್‌ನ ಆದೇಶದ ಹಿನ್ನೆಲೆಯಲ್ಲಿ ತಮ್ಮ ರಾಜೀನಾಮೆಯನ್ನು ವಾಪಾಸ್ ಪಡೆದಿದ್ದಾರೆ. ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರನ್ನು ಬದಲಿಸುವಂತೆ ಆಗ್ರಹಿಸಿ ಸಚಿವರು ರಾಜೀನಾಮೆ ನೀಡಿದ ಬೆನ್ನಲ್ಲಿಯೇ ಜು.5ರ ಗಡುವು ಕೂಡಾ ವಿಧಿ ಸಿದ್ದ ಯಡಿಯೂರಪ್ಪ ಬಣದ ಸಚಿವರು ಸೋಮವಾರ ಏಕಾಏಕಿ ರಾಜೀನಾಮೆ ವಾಪಸ್ ಪಡೆದಿರುವುದು ಬಹಳಷ್ಟು ಕುತೂಹಲಕ್ಕೆಡೆ ಮಾಡಿಕೊಟ್ಟಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ರಾಜೀನಾಮೆ ನೀಡಿರುವ ಸಚಿವರು ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರನ್ನು ದೂರವಾಣಿಯ ಮೂಲಕ ಸಂಪರ್ಕಿಸಿ, ನಾಯಕತ್ವ ಬದಲಾವಣೆಯ ವಿಚಾರವನ್ನೆಲ್ಲ ಬಗೆಹರಿಸುತೇವೆ. ಮೊದಲು ಸಚಿವರು ನೀಡಿರುವ ರಾಜೀನಾಮೆಯನ್ನು ಹಿಂಪಡೆಯಬೇಕು. ಅನಂತರ ಇಂದು ದಿಲ್ಲಿಗೆ ಬರುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ವಾಪಸ್ ಪಡೆದಿದ್ದಾರೆನ್ನಲಾಗಿದೆ. ಜೂ.29ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜಗದೀಶ್ ಶೆಟ್ಟರ್, ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ವಸತಿ ಸಚಿವ ವಿ.ಸೋಮಣ್ಣ, ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ, ಪಶುಸಂಗೋಪನಾ ಮತ್ತು ಲಾಟರಿ ಖಾತೆ ಸಚಿವ ರೇವೂನಾಯಕ್ ಬೆಳಮಗಿ, ಲೋಕೋಪಯೋಗಿ ಮತ್ತು ಬಂದರು ಖಾತೆ ಸಚಿವ ಸಿ.ಎಂ.ಉದಾಸಿ, ಕೃಷಿ ಸಚಿವ ಉಮೇಶ್ ಕತ್ತಿ, ಸಣ್ಣ ಕೈಗಾರಿಕಾ ಸಚಿವ ರಾಜೂ ಗೌಡ ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಇಂದು ಅವರೆಲ್ಲರೂ ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ.
ಭರವಸೆಯ ಹಿನ್ನೆಲೆಯಲ್ಲಿ ರಾಜೀನಾಮೆ ವಾಪಸ್
ನಾಯಕತ್ವಕ್ಕಾಗಿ ನಡೆಯುತ್ತಿರುವ ಹೋರಾಟವನ್ನು ಪರಿಹರಿಸುತ್ತೇವೆ ಎಂದು ವರಿಷ್ಠರು ಭರವಸೆ ನೀಡಿದ ಹಿನ್ನೆಲೆಯಲ್ಲಿ ತಾವು ಅವರ ಮೇಲೆ ನಂಬಿಕೆ ಇಟ್ಟು ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದಿದ್ದೇವೆ ಎಂದು ಸಚಿವ ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಯಡಿಯೂರಪ್ಪನವರ ನಿವಾಸದಲ್ಲಿಂದು ರಾಜೀನಾಮೆ ವಾಪಸ್ ಪಡೆದ ಸಚಿವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಾಯಕತ್ವ ಬದಲಾವಣೆಯ ಕುರಿತು ಚರ್ಚೆ ನಡೆಸಲು ದಿಲ್ಲಿಗೆ ಬರುವಂತೆ ಹಾಗೂ ಇದಕ್ಕೂ ಮೊದಲು ತಾವು ತಮ್ಮ ರಾಜೀನಾಮೆ ವಾಪಸ್ ಪಡೆಯಬೇಕು ಎಂದು ಗಡ್ಕರಿ ತಮಗೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ರಾಜೀನಾಮೆ ವಾಪಸ್ ಪಡೆಯುವ ತೀರ್ಮಾನಕ್ಕೆ ಬಂದಿದ್ದೇವೆ ಎಂದರು.

Leave a Reply