ಹೈ-ಕಗೆ ಸೌಲಭ್ಯದ ಬಂಪರ್ ಲಾಟರಿ

ವಿಧಾನಸಭೆಯಲ್ಲಿ ವಿಶೇಷ ಸ್ಥಾನಮಾನದನ್ವಯ ಮಾರ್ಗಸೂಚಿ ಪ್ರಕಟ
ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚನೆ, ಅಭಿವೃದ್ಧಿ ವೆಚ್ಚಕ್ಕಾಗಿ ನ್ಯಾಯ ಸಮ್ಮತ ನಿಧಿ ಹಂಚಿಕೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 70ರಿಂದ ಶೇ. 85ರಷ್ಟು ಮೀಸಲು…
ಹೈದ್ರಾಬಾದ್-ಕರ್ನಾಟಕ ಭಾಗಕ್ಕೆ ಸಂವಿಧಾನದ 371ನೇ (ಜೆ) ತಿದ್ದುಪಡಿಯನ್ವಯ ನೀಡಿರುವ ವಿಶೇಷ ಸ್ಥಾನಮಾನದನ್ವಯ ಸಿಗಲಿರುವ ಸೌಲಭ್ಯಗಳು. ಈ ಕುರಿತಂತೆ ಸಚಿವ ಎಚ್.ಕೆ. ಪಾಟೀಲ್ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಸಂಪುಟ ಉಪಸಮಿತಿ ನೀಡಿದ ವರದಿ ಮತ್ತು ಅದಕ್ಕೆ ಕೆಲವೊಂದು ಮಾರ್ಪಾಡುಗಳನ್ನು ಮಾಡಿ ಮಂತ್ರಿಪರಿಷತ್ ಸಭೆಯ ಅನುಮೋದನೆಯೊಂದಿಗೆ ರೂಪಿಸಿರುವ ಮಾರ್ಗಸೂಚಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ  ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ರಾಷ್ಟ್ರಪತಿಗಳು ಅನುಮೋದನೆ ನೀಡಿದ ಬಳಿಕ ವಿಶೇಷ ಹೊಣೆಗಾರಿಕೆಯಡಿ ರಾಜ್ಯಪಾಲರು ಅಧಿಸೂಚನೆ ಹೊರಡಿಸಲಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಶಿಕ್ಷಣ, ಉದ್ಯೋಗದಲ್ಲಿ ಮೀಸಲು: ಶಿಕ್ಷಣ ಹಾಗೂ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಹುಟ್ಟಿನಿಂದ ಅಥವಾ ವಲಸೆಯಿಂದ ಆ ಪ್ರದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಮೀಸಲು ನಿಗದಿಪಡಿಸಲಾಗಿದೆ. ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿ ಶೇ. 70 ಮತ್ತು ರಾಜ್ಯ ಮಟ್ಟದಲ್ಲಿ ಶೇ. 8ರಷ್ಟು ಸೀಟುಗಳನ್ನು ಕ್ರಮವಾಗಿ ಸ್ಥಳೀಯ ಮತ್ತು ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ನೀಡಬೇಕು.
ಅದೇ ರೀತಿ ರಾಜ್ಯ ಸರ್ಕಾರದ ಮತ್ತು ಸರ್ಕಾರದ ಅಧೀನದಲ್ಲಿರುವ ನಿಗಮ, ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಹುದ್ದೆಗಳನ್ನು ಗುರುತಿಸಿ ನೇರ ನೇಮಕಾತಿ ಅಥವಾ ಬಡ್ತಿ ನೀಡಲು ಮೀಸಲು ನಿಗದಿಪಡಿಸಬೇಕು. ಎ ಮತ್ತು ಬಿ ವರ್ಗದ ಹುದ್ದೆಗಳಿಗೆ ಶೇ. 75, ಸಿ ವರ್ಗದ ಹುದ್ದೆಗಳಿಗೆ ಶೇ. 80 ಮತ್ತು ಡಿ ವರ್ಗದ ಹುದ್ದೆಗಳಿಗೆ ಶೇ. 85 ಮೀಸಲು ನೀಡಬೇಕು. ಈ ಆದೇಶ ರಾಜ್ಯ ಮಟ್ಟದ ಸರ್ಕಾರಿ ಕಚೇರಿ ಮತ್ತು ಸಂಸ್ಥೆಗಳಲ್ಲಿ ಶೇ. 8ರಷ್ಟು ಮೀಸಲು ಕಲ್ಪಿಸುತ್ತದೆ. ಜತೆಗೆ ಕಿರಿಯ ಸಮೂಹ ಎ ವರ್ಗದವರೆಗೂ ಬಡ್ತಿಯಲ್ಲಿ ಮೀಸಲು ಕಲ್ಪಿಸುತ್ತದೆ.
ಇತರೆ ಕಾರ್ಯಕ್ರಮಗಳು: ಇದಲ್ಲದೆ ಸಾಮಾಜಿಕ, ಆರ್ಥಿಕ, ಮೂಲಸೌಕರ್ಯಗಳು ಮತ್ತು ಇನ್ನಿತರ ಅಭಿವೃದ್ಧಿ ವಿಷಯಗಳಿಗೆ ಸಂಬಂಧಿಸಿದಂತೆ 22 ಅಂಶಗಳ ಕುರಿತು ಶಿಫಾರಸು ಮಾಡಲಾಗಿದೆ. ಈ ಪ್ರದೇಶಗಳ ಶೈಕ್ಷಣಿಕ ಸಂಸ್ಥೆಗಳಿಗೆ ನೀಡಬಹುದಾದ ವಿಶೇಷ ಸಹಾಯಾನುದಾನವನ್ನು ಸರ್ಕಾರ ಶೀಘ್ರದಲ್ಲೇ ಪ್ರಕಟಿಸಬೇಕು. ಈ ಭಾಗದಲ್ಲಿ ಜಾರಿಗೊಳಿಸಬಹುದಾದ ವಿಶೇಷ ಕೈಗಾರಿಕಾ ಬಂಡವಾಳ ನೀತಿ ಮತ್ತು ಮೂಲ ಸೌಕರ್ಯ ನೀತಿಯನ್ನು ಸರ್ಕಾರ ಶೀಘ್ರವೇ ಪ್ರಕಟಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಸಂಖ್ಯೆಯ ಅನುಪಾತಕ್ಕೆ ಅನುಸಾರವಾಗಿ ಪ. ಜಾತಿ ಮತ್ತು ಪಂಗಡದ ವಿಶೇಷ ಘಟಕ ಉಪಯೋಜನೆಗಳನ್ನು ವಿಸ್ತರಿಸಬೇಕು ಎಂಬ ಶಿಫಾರಸುಗಳನ್ನು ಮಾಡಲಾಗಿದೆ. ಅದೇ ರೀತಿ ಮಹಿಳೆಯರ ಸ್ಥಾನಮಾನ ಕುರಿತಂತೆ ಅಭಿವೃದ್ಧಿ ಮೂಲದಲ್ಲಿ ಪುರುಷರಿಗೆ ಸಮನಾಗಿ ತರಲು ಮಹಿಳೆಯರಿಗೆ ಆರೋಗ್ಯ, ಪೌಷ್ಟಿಕತೆ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು. ಮಕ್ಕಳ ಅಪೌಷ್ಟಿಕತೆ ಮತ್ತು ಶೈಕ್ಷಣಿಕ ಅಗತ್ಯತೆಗೆ ಅನುಗುಣವಾಗಿ ನಿರ್ದಿಷ್ಟ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು ಎಂದು ಸಂಪುಟ ಉಪಸಮಿತಿ ಶಿಫಾರಸು ಮಾಡಿದೆ.
ಆದ್ಯತೆಯ ಅಂಶಗಳು: ಅನುಚ್ಛೇದ 371(ಜೆ) ತಿದ್ದುಪಡಿ ಜಾರಿಗೊಳಿಸುವ ನಿಟ್ಟಿನಲ್ಲಿ ಕೆಲ ಅಂಶಗಳನ್ನು ಆದ್ಯತೆಗಳೆಂದು ಗುರುತಿಸಲಾಗಿದೆ. ಪರಿಣಾಮಕಾರಿಯಾದ ಅನುಷ್ಠಾನ ಕಾರ್ಯಕ್ರಮ ಜಾರಿಗೊಳಿಸಬೇಕು. ರಾಜ್ಯ, ಪ್ರಾದೇಶಿಕ, ಜಿಲ್ಲಾ ಮತ್ತು ಕ್ಷೇತ್ರ ಮಟ್ಟದಲ್ಲಿ ಯೋಜನೆ ಮತ್ತು ಕಾರ್ಯಕ್ರಮ ರೂಪಿಸಲು ಸಾಂಸ್ಥಿಕ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಸರ್ಕಾರದ ನೀತಿ ಮತ್ತು ಕಾರ್ಯಕ್ರಮಗಳ ಅನುಷ್ಠಾನದ ಮೇಲ್ವಿಚಾರಣೆ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಸಾಂಸ್ಥಿಕ ವ್ಯವಸ್ಥೆ ರೂಪಿಸಬೇಕು. ಅನುದಾನದ ಸದ್ಬಳಕೆಗೆ ಪರಿಣಾಮಕಾರಿ ತಾಂತ್ರಿಕತೆ ಅಳವಡಿಸಬೇಕು ಮತ್ತು ರಾಜ್ಯಮಟ್ಟದಲ್ಲಿ ಕಾರ್ಯಕ್ರಮ ಜಾರಿಗೊಳಿಸಲು ಮತ್ತು ಮೇಲ್ವಿಚಾರಣೆಗೆ ಪರಿಣಾಮಕಾರಿ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಅಭಿವೃದ್ಧಿ ಮಂಡಳಿ ಕಾರ್ಯಗಳು
ಸಲಹಾ ಪರಿಷತ್ತು ಶಿಫಾರಸು ಮಾಡುವ ಅಭಿವೃದ್ಧಿ ಯೋಜನೆ ಮತ್ತು ನೀತಿ ನಿಯಮಗಳನ್ನು ಪರಿಗಣಿಸುವುದು.
ವಿವಿಧ ವಲಯಗಳ ಸಾಂದರ್ಭಿಕ ಮಟ್ಟ ತಿಳಿದುಕೊಳ್ಳುವುದು ಮತ್ತು ಅಭಿವೃದ್ಧಿ ವೆಚ್ಚದ ಮಟ್ಟದ ಬಗ್ಗೆ ಸಲಹೆ ನೀಡುವುದು.
ರಾಜ್ಯಪಾಲರಿಗೆ ಆ ಪ್ರದೇಶಕ್ಕೆ ಅಗತ್ಯವಿರುವ ನೀತಿ ನಿಯಮಗಳ ಬಗ್ಗೆ ಸಲಹೆ ನೀಡುವುದು ಹಾಗೂ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಹಣ ಒದಗಿಸುವುದು.
ಹುದ್ದೆಗಳ ಸೃಜನೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನೀಡುವ ಬಗ್ಗೆ ಸಲಹೆ ನೀಡುವುದು.
ಮಂಡಳಿ ಸದಸ್ಯರಾಗಿ ಸಂಸದರು, ಶಾಸಕರು, ಜಿಲ್ಲಾ ಪಂಚಾಯ್ತಿ, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಇರುತ್ತಾರೆ.
ರಾಜ್ಯಪಾಲರು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ಹಾಗೂ ರಾಜ್ಯದ ಅಗತ್ಯತೆಗಳನ್ನು ಪರಿಗಣನೆಗೆ ತೆಗೆದುಕೊಂಡು ಆ ಪ್ರದೇಶಕ್ಕೆ ಸಮನಾಗಿ ಹಣ ಒದಗಿಸುವ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವುದು.
ಕೃಪೆ : ಕನ್ನಡಪ್ರಭ ವಾರ್ತೆ

Leave a Reply