90ರ ಹರೆಯದಲ್ಲೂ ಪಿಎಚ್ಡಿ ಪ್ರವೇಶ ಪರೀಕ್ಷೆ ಬರೆದ ನಿವೃತ್ತ ಶಿಕ್ಷಕ !

ಇಂದಿನ ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಕರ ಬಗ್ಗೆ ಬಹಳಷ್ಟು ಅಸಮಾಧಾನ ಹೊಂದಿರುವ

ಇವರು ಶಿಕ್ಷಕರು ನಿರಂತರ ಅಧ್ಯಯನ ಶೀಲರಾಗಿರಬೇಕು ಎನ್ನುತ್ತಾರೆ. 

ಶಿಕ್ಷಕರ ದಿನಾಚರಣೆಯ ದಿನದಂದು 90ರ ಹರೆಯದಲ್ಲೂ ಪಿಎಚ್ಡಿ ಪ್ರವೇಶ ಪರೀಕ್ಷೆ ಬರೆಯುತ್ತಿರುವ ಉತ್ಸಾಹಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಲ್ಲಿ ಇಷ್ಟೊಂದು ಉತ್ಸಾಹದಿಂದ ಪ್ರವೇಶ ಪರೀಕ್ಷೆ ಬರೆಯುತ್ತಿರುವರ ಶರಣಬಸವರಾಜ್ ಬಿಸರಳ್ಳಿ. ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮದವರು. ಕೊಪ್ಪಳ ಜಿಲ್ಲೆಯ ಹಿರಿಯ ಸ್ವಾತಂತ್ರ ಯೋಧರು ಅಷ್ಟೇ ಅಲ್ಲ ನಿವೃತ್ತ ಶಿಕ್ಷಕರು. ಹೈಸ್ಕೂಲ್  ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ 26 ವರ್ಷಗಳ ಮೇಲಾಗಿದೆ. ಆದರೂ ಅವರು ನಿರಂತರ ಅಧ್ಯಯನ ಶೀಲರು. ಹೇಗಾದರೂ ಮಾಡಿ ಪಿಎಚ್ಡಿ ಪದವಿ ಪಡೆಯಬೇಕು ಎನ್ನುವ  ಹಂಬಲದಿಂದ ಕಳೆದ ವರ್ಷವೂ ಸಹ ಪ್ರವೇಶ ಪರೀಕ್ಷೆ ಬರೆದಿದ್ದರು ಆದರೆ ಪ್ರವೇಶ ಸಿಕ್ಕಿರಲಿಲ್ಲ. ಈ ವರ್ಷ ಮತ್ತೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಪಿಹೆಚ್‌ಡಿ ಪ್ರವೇಶಾತಿಗಾಗಿ ಪರೀಕ್ಷೆ ಬರೆದಿದ್ದಾರೆ ಈ ಸಲ ಖಂಡಿತವಾಗಿಯೂ ಉತ್ತೀರ್ಣರಾಗುವ ಭರವಸೆ ಹೊಂದಿದ್ಧಾರೆ. 

ಜ್ಞಾನ ಹೆಚ್ಚಿಸಿಕೊಳ್ಳಲು ಪ್ರತಿಯೊಬ್ಬರು ಸಹ ನಿರಂತರ ವಿದ್ಯಾರ್ಥಿಗಳಾಗಿರಬೇಕು ಎಂಬ ಮಾತಿದೆ. ಇದಕ್ಕೆ ಈ ಸ್ವಾತಂತ್ರ್ಯ ಹೋರಾಟಗಾರ ನೈಜ ನಿದರ್ಶನ. ಹಂಪಿ ಕನ್ನಡ ವಿವಿಯಲ್ಲಿ ಈ ಬಾರಿ ಪಿಹೆಚ್​ಡಿ ಪದವಿ ಪಡೆಯಬೇಕೆಂದು ಪ್ರವೇಶ ಪರೀಕ್ಷೆ ಬರೆಯುವ ಮೂಲಕ ಇಳಿ ವಯಸ್ಸಿನಲ್ಲೂ ಓದುವ ಹಂಬಲ ಹೊಂದಿ, ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ.  ಅವರಿಗೆ ವಚನ ಸಾಹಿತ್ಯದಲ್ಲಿ ಪಿಹೆಚ್​ಡಿ ಪದವಿ ಪಡೆಯುವ ಆಸೆ ಇದೆ. ಹೀಗಾಗಿ, ಅವರು ಪ್ರವೇಶ ಪರೀಕ್ಷೆ ಬರೆದಿದ್ದು, ಸೀಟ್ ಸಿಗುವ ವಿಶ್ವಾಸ ಹೊಂದಿದ್ದಾರೆ. ನಿವೃತ್ತ ಶಿಕ್ಷಕರಾಗಿರುವ ಇವರು ನಿವೃತ್ತಿಯ ನಂತರ ಅನೇಕ ಪದವಿಗಳನ್ನು ಪಡೆದುಕೊಂಡಿದ್ದಾರೆ. 1929 ರಲ್ಲಿ ಜನಿಸಿದ ಇವರು ಸ್ವಾತಂತ್ರ್ಯ ಹೋರಾಟಗಾರರು, ಹೈದ್ರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಹೋರಾಟ ಮಾಡಿದ ಹಿರಿಯ ಜೀವ. 1951-52 ರಲ್ಲಿ ತಾಲೂಕಿನ ಕವಲೂರು ಗ್ರಾಮದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾಗಿ ಸೇವೆ ಆರಂಭಿಸಿದ ಅವರು ಜಿಲ್ಲೆಯ ವಿವಿಧ ಭಾಗದಲ್ಲಿ ಸೇವೆ ಸಲ್ಲಿಸಿ 1991-92 ರಲ್ಲಿ ಸೇವಾ ನಿವೃತ್ತಿ ಹೊಂದಿದ್ದಾರೆ. ಸೇವಾ ನಿವೃತ್ತಿಯ ಬಳಿಕ ಧಾರವಾಡದಲ್ಲಿ ಕಾನೂನು ಪದವಿ, ಎಂಎ ಪದವಿ ಪಡೆದಿದ್ದಾರೆ. ಪಿಹೆಚ್​ಡಿ ಮಾಡಬೇಕು ಎಂದುಕೊಂಡು ಹಂಪಿ ವಿಶ್ವವಿದ್ಯಾಲದಯಲ್ಲಿ ಮತ್ತೆ ಸ್ನಾತಕೋತ್ತರ ಪದವಿ ಪಡೆದಿದ್ದಲ್ಲದೇ ಇದೀಗ ಪಿಹೆಚ್​ಡಿ ಪದವಿ ಪ್ರವೇಶ ಪರೀಕ್ಷೆ ಬರೆದಿದ್ದಾರೆ.ಅನೇಕ ಕೃತಿಗಳನ್ನು ರಚಿಸಿರುವ ಅವರು ಸಾಹಿತ್ಯದಲ್ಲಿ ಇನ್ನೂ ಅಪಾರ ಕೃಷಿ ಮಾಡುವ ಹೆಬ್ಬಯಕೆ ಹೊಂದಿದ್ದಾರೆ. ಪಿಹೆಚ್​ಡಿ ಪದವಿ ಪಡೆದರೆ ಅಧ್ಯಯನದ ಜೊತೆಗೆ ಕಾವ್ಯಕ್ಕೆ ಗಟ್ಟಿತನ ಬರುತ್ತದೆ. ಹೀಗಾಗಿ ಈ ವಯಸ್ಸಿನಲ್ಲಿಯೂ ಪಿಹೆಚ್​ಡಿ ಮಾಡಬೇಕು ಎಂಬ ಹಂಬಲ ಹೊಂದಿದ್ದಾರೆ.

ತಮ್ಮ ಇಳಿವಯಸ್ಸಿನಲ್ಲಿಯೂ ಉತ್ಸಾಹ ತುಂಬಿಕೊಂಡು ಕಲಿಕಾ ವಿದ್ಯಾರ್ಥಿಯಾಗಿರುವ ಈ ಹಿರಿಯ ಚೇತನ ಇಂದಿನ ಯುವಜನಾಂಗಕ್ಕೆ ನಿಜಕ್ಕೂ ಚೈತನ್ಯದ ಚಿಲುಮೆಯಾಗಿದ್ಧಾರೆ. ಇವರ ಉತ್ಸಾಹ ನಿಜಕ್ಕೂ ಸರ್ವರಿಗೂ ಮಾದರಿಯಾಗಿದೆ.

Please follow and like us:
error