ಬಳ್ಳಾರಿ ಮಿನಿ ಸಮರ; ಶ್ರೀರಾಮುಲು ನಡೆ ನಿಗೂಢ-ನ.9ಕ್ಕೆ ನಾಮಪತ್ರ

ಅಕ್ರಮ ಗಣಿಗಾರಿಕೆ ವರದಿಯಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿರುವುದರಿಂದ ತಮ್ಮ ಘನತೆಗೆ ಧಕ್ಕೆ ಬಂದಿದೆ ಎಂದು ಶ್ರೀರಾಮುಲು ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ತೆರವಾಗಿರುವ ಬಳ್ಳಾರಿ ಗ್ರಾಮಾಂತರ ಕ್ಷೇತ್ರಕ್ಕೆ ನ.30ರಂದು ಉಪ ಚುನಾವಣೆ ನಡೆಯುವ ನಿಟ್ಟಿನಲ್ಲಿ ಉಪಚುನಾವಣೆ ಕಾವು ಜೋರಾಗತೊಡಗಿದೆ.
ಏತನ್ಮಧ್ಯೆ ಶ್ರೀರಾಮುಲು ಅವರು ಕಳೆದ ಎರಡು ದಿನಗಳ ಕಾಲ ತಮ್ಮ ಆಪ್ತರು,ಬೆಂಬಲಿಗರು, ಸಂಸದೆ ಜೆ.ಶಾಂತಾ,ಮೃತ್ಯುಂಜಯ ಜತೆ ತಾವು ಬಿಜೆಪಿಯಿಂದ ಸ್ಪರ್ಧಿಸಬೇಕೋ ಅಥವಾ ಪಕ್ಷೇತರನಾಗಿ ಕಣಕ್ಕಿಳಿಯಬೇಕೆ ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಆದರೂ ಚರ್ಚೆಯಲ್ಲಿ ಯಾವುದೇ ಅಂತಿಮ ನಿಲುವು ಕೈಗೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಚರ್ಚೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಶ್ರೀರಾಮುಲು,ತಾನು ನವೆಂಬರ್ 9ರಂದು ನಾಮಪತ್ರ ಸಲ್ಲಿಸುವುದಾಗಿ ಹೇಳಿದರು.ಆದರೆ ತಾವು ಪಕ್ಷೇತರ ಅಥವಾ ಬಿಜೆಪಿ ಚಿಹ್ನೆಯಡಿಯಲ್ಲಿ ಸ್ಪರ್ಧಿಸುತ್ತಾರೋ ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.
ಇನ್ನೂ ಕೆಲವು ದಿನಗಳಿವೆ ಹಾಗಾಗಿ ನಾನೊಂದು ಉತ್ತಮ ನಿರ್ಧಾರ ಕೈಗೊಳ್ಳುತ್ತೇನೆ. ಅಲ್ಲದೇ ಮಿತ್ರ ಜನಾರ್ದನ ರೆಡ್ಡಿಯವರನ್ನೂ ಚಂಚಲಗುಡ ಜೈಲಿನಲ್ಲಿ ಭೇಟಿಯಾಗಿ ಅವರ ಅಭಿಪ್ರಾಯ ಪಡೆಯುವುದಾಗಿಯೂ ಹೇಳಿದರು.ಒಟ್ಟಾರೆ ಶ್ರೀರಾಮುಲು ನಡೆ ನಿಗೂಢವಾಗಿದ್ದರೆ,ಬಿಜೆಪಿ ಮಾತ್ರ ಅತಂತ್ರ ಸ್ಥಿತಿಗೆ ಸಿಕ್ಕಿಹಾಕಿಕೊಂಡಿದೆ.
ಒಂದೆಡೆ ಶ್ರೀರಾಮುಲು ಅವರೇ ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ,ರಾಜ್ಯಾಧ್ಯಕ್ಷ ಈಶ್ವರಪ್ಪ,ಸಚಿವ ಜಗದೀಶ್ ಶೆಟ್ಟರ್ ಹೇಳುತ್ತಿದ್ದಾರೆ. ಮತ್ತೊಂದೆಡೆ ಶ್ರೀರಾಮುಲು ಯಾವುದನ್ನೂ ಸ್ಪಷ್ಟಪಡಿಸುತ್ತಿಲ್ಲ.
ಮತ್ತೊಂದೆಡೆ ಕಾಂಗ್ರೆಸ್ ಪಾಳಯ ಕೂಡ ಶ್ರೀರಾಮುಲು ವಿರುದ್ಧ ಯಾರನ್ನು ಕಣಕ್ಕೆ ಇಳಿಸಬೇಕು ಎಂಬುದರ ಕುರಿತು ಶನಿವಾರ ಕಾಂಗ್ರೆಸ್ ಚುನಾವಣಾ ವೀಕ್ಷಕ ನಾಡಗೌಡ ನೇತೃತ್ವದಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದರು.ಜೆಡಿಎಸ್ ಮಾತ್ರ ಬಿಜೆಪಿ ಮತ್ತು ಕಾಂಗ್ರೆಸ್ ಯಾರನ್ನು ಕಣಕ್ಕಿಳಿಸಲಿದೆ ಎಂಬುದನ್ನು ನೋಡಿ,ತಮ್ಮ ಹುರಿಯಾಳನ್ನು ಅಖಾಡಕ್ಕೆ ಇಳಿಸುವ ತಂತ್ರಕ್ಕೆ ಮುಂದಾಗಿದೆ..

Leave a Reply