ಬಳ್ಳಾರಿ ಉಪಸಮರ :70 ಶೇಕಡಾ ಶಾಂತಿಯುತ ಮತದಾನ

ಬಳ್ಳಾರಿ :  ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಉಪ ಚುನಾವಣೆ ಮತದಾನ ಕೆಲವೊಂದು ಗೊಂದಲಗಳನ್ನು ಹೊರತುಪಡಿಸಿ ಶಾಂತಯುತವಾಗಿ ಮುಕ್ತಾಯಗೊಂಡಿದೆ.
ಇಂದು ಬೆಳಿಗ್ಗೆ 8ಗಂಟೆಗೆ ಮತದಾನ ಆರಂಭಗೊಂಡಿತ್ತು. ಬೆಳಿಗ್ಗಿನಿಂದಲೇ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಮತದಾರರು ಭಾರೀ ಉತ್ಸಾಹದಿಂದಲೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನದ ವೇಳೆಗೆ ಶೇ.35ರಷ್ಟು ಮತದಾನವಾಗಿತ್ತು. ಸಂಜೆ ಐದು ಗಂಟೆಗೆ ಮತದಾನ ಮುಕ್ತಾಯವಾಗಿದ್ದು, ಶೇ.70ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ರಾಮನಗರದ ಬಂಡಿಹಟ್ಟಿ ಮತಗಟ್ಟೆ ಸಂಖ್ಯೆ 80ರಲ್ಲಿ ಮತದಾರರ ಭಾವಚಿತ್ರ ಅದಲು ಬದಲು ಹಾಗೂ ಕೆಲವು ಮತದಾರರ ಹೆಸರು ನಾಪತ್ತೆಯಾದ ಗೊಂದಲ ಹೊರತುಪಡಿಸಿದರೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ.
ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆಯ ಬಿಗಿ ಬಂದೋಬಸ್ತ್ ನಡುವೆಯೇ ಈ ಹಿಂದಿನ ಚುನಾವಣೆಗಿಂತ ಈ ಬಾರಿ ಅತಿ ಹೆಚ್ಚು ಮತದಾನವಾಗಿರುವುದು ವಿಶೇಷವಾಗಿದೆ. ಬಿಜೆಪಿ ಅಭ್ಯರ್ಥಿ ಗಾದಿ ಲಿಂಗಪ್ಪ, ರಾಮಪ್ರಸಾದ್ ಹಾಗೂ ಸಂಸದ ಸಣ್ಣ ಫಕೀರಪ್ಪ ತಮ್ಮ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು, ಕಾಂಗ್ರೆಸ್‌ನ ರಾಮಪ್ರಸಾದ್ ಹಾಗೂ ಬಿಜೆಪಿಯ ಗಾದಿ ಲಿಂಗಪ್ಪ ಹಣೆಬರಹ ಮತಪೆಟ್ಟಿಗೆ ಸೇರಿದ್ದು, ಡಿಸೆಂಬರ್ 4ರಂದು ಮತ ಎಣಿಕೆ ನಡೆಯಲಿದೆ.
Please follow and like us:
error