5 ನೇ ದೂರಿಗೂ ಸಿಕ್ತು ಜಾಮೀನು

ಯಡ್ಡಿಗೆ ಕೊಂಚ ರಿಲೀಫ್ 
ಬೆಂಗಳೂರು : ಭೂ ಹಗರಣದ ಸಂಬಂಧ ವಕೀಲ ಸಿರಾಜಿನ್ ಬಾಷಾ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಲ್ಲಿಸಿರುವ 5ನೇ ದೂರಿನ ಕುರಿತಂತೆ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಬಿ.ವಿ.ಪಿಂಟೋ ಅವರು ಸೋಮವಾರ ಜಾಮೀನು ನೀಡಿದ್ದು, ಯಡಿಯೂರಪ್ಪ ಮತ್ತಷ್ಟು ನಿರಾಳರಾದಂತಾಗಿದೆ.
ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ 5ನೇ ದೂರಿನ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿ ಪಿಂಟೋ ಅವರು, ಯಡಿಯೂರಪ್ಪನವರಿಗೆ ಎರಡು ಶ್ಯೂರಿಟಿ,ಎರಡು ಲಕ್ಷ ರೂಪಾಯಿ ಬಾಂಡ್ ಆಧಾರದ ಮೇಲೆ ಷರತ್ತು ಬದ್ಧ ಜಾಮೀನು ನೀಡಿದರು.
ನಾಗರಬಾವಿಯಲ್ಲಿ 5.15ಎಕರೆ ಜಮೀನನ್ನು ಡಿನೋಟಿಫಿಕೇಷನ್ ಮಾಡಿ ತಮ್ಮ ಮಕ್ಕಳ ಒಡೆತನದ ದವಳಗಿರಿ ಪ್ರಾಪರ್ಟೀಸ್,ಸಹ್ಯಾದ್ರಿ ಹೆಲ್ತ್ ಕೇರ್‌ಗಾಗಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಸಿರಾಜಿನ್ ಬಾಷಾ ಲೋಕಾಯುಕ್ತ ವಿಶೇಷ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಿದ್ದರು. ದೂರಿನ ಸಂಬಂಧ ಯಡಿಯೂರಪ್ಪನವರು ನಿರೀಕ್ಷಣಾ ಜಾಮೀನು ನೀಡುವಂತೆ ಹೈಕೋರ್ಟ್ ಮೊರೆ ಹೋಗಿದ್ದರು.
ಇದಕ್ಕೂ ಮೊದಲು ಸಿರಾಜಿನ್ ಬಾಷಾ ಸಲ್ಲಿಸಿದ್ದ 1ಮತ್ತು 4ನೇ ದೂರಿಗೆ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಬಿ.ವಿ.ಪಿಂಟೋ ಅವರು ನವೆಂಬರ್ 16ರಂದು ಷರತ್ತು ಬದ್ಧ ಜಾಮೀನು ನೀಡಿದ್ದರು. ಪ್ರಕರಣದಲ್ಲಿನ ಉಳಿದ ಆರೋಪಿಗಳಾದ ಯಡಿಯೂರಪ್ಪ ಪುತ್ರರಾದ ರಾಘವೇಂದ್ರ, ವಿಜಯೇಂದ್ರ, ಅಳಿಯ ಸೋಹನ್ ಕುಮಾರ್‌ಗೂ ಜಾಮೀನು ಸಿಕ್ಕಿತ್ತು.
yadiyurapp bail

Leave a Reply