ಶಾರುಕ್ ವಾಂಖೇಡೆ ಪ್ರವೇಶಕ್ಕೆ 5 ವರ್ಷ ನಿಷೇಧ

ಮುಂಬೈ, ಮೇ 18: ಐಪಿಎಲ್ ಪಂದ್ಯವೊಂದರ ವೇಳೆ ಅಧಿಕಾರಿಗಳೊಂದಿಗೆ ಅನುಚಿತ ವರ್ತನೆ ತೋರಿಸಿದುದಕ್ಕಾಗಿ ಮುಂಬೈ ಕ್ರಿಕೆಟ್ ಮಂಡಳಿಯು (ಎಂಸಿಎ) ಕೋಲ್ಕತಾ ನೈಟ್ ರೈಡರ್ಸ್‌ ತಂಡದ ಸಹ-ಮಾಲಕ, ಬಾಲಿವುಡ್ ನಟ ಶಾರುಕ್ ಖಾನ್‌ಗೆ ವಾಂಖೇಡೆ ಕ್ರೀಡಾಂಗಣ ಪ್ರವೇಶಕ್ಕೆ 5 ವರ್ಷಗಳ ನಿಷೇಧ ವಿಧಿಸಿದೆ.
ಮೇ 16ರಂದು ಕೆಕೆಆರ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಬಳಿಕ ಶಾರುಕ್, ಭದ್ರತಾ ಸಿಬ್ಬಂದಿಯೊಬ್ಬನ ಮೇಲೆ ಹಲ್ಲೆ ನಡೆಸಿ, ಐಪಿಎಲ್‌ನ ಅಧಿಕಾರಿಗಳನ್ನು ಬೈದಿದ್ದಾರೆಂದು ಸಂಘಟನೆ ಆರೋಪಿಸಿದೆ.
ಕೆಲವು ಅಧಿಕಾರಿಗಳು ಅವರಿಗೆ ಜೀವಾವಧಿ ನಿಷೇಧ ವಿಧಿಸುವ ಬೆದರಿಕೆ ಒಡ್ಡಿದ್ದರಾದರೂ, ಆಡಳಿತ ಮಂಡಳಿಯು ಅದನ್ನು 5 ವರ್ಷಗಳಿಗೆ ಇಳಿಸಿದೆ.
ಅಧ್ಯಕ್ಷ ವಿಲಾಸರಾವ್ ದೇಶ್‌ಮುಖ್‌ರ ನೇತೃತ್ವದಲ್ಲಿ ನಡೆದ ಎಂಸಿಎಯ ತುರ್ತು ಸಭೆಯೊಂದರಲ್ಲಿ ಶಾರುಕ್‌ಗೆ 5 ವರ್ಷ ನಿಷೇಧ ಹೇರುವ ನಿರ್ಧಾರ ಕೈಗೊಳ್ಳಲಾಯಿತು.
ಯಾವುದೇ ಪ್ರಚೋದನೆಯಿಲ್ಲದೆ ಎಂಸಿಎ ಅಧಿಕಾರಿಗಳನ್ನು ನಿಂದಿಸಿದ ಹಾಗೂ ಬಿಸಿಸಿಐ-ಐಪಿಎಲ್ ಅಧಿಕಾರಿಗಳ ಸಮ್ಮುಖದಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ಕೈ ಮಾಡಿದ ಶಾರುಕ್ ಕೃತ್ಯವನ್ನು ಇಂದು ನಡೆದ ಎಂಸಿಎಯ ಆಡಳಿತ ಮಂಡಳಿಯ ಸಭೆಯೊಂದರಲ್ಲಿ ಖಂಡಿಸಲಾಯಿತೆಂದು ದೇಶ್‌ಮುಖ್ ತಿಳಿಸಿದರು.
ಖಾನ್ ಕ್ಷಮೆ ಯಾಚಿಸಿದರೆ ಈ ನಿರ್ಧಾರದಲ್ಲಿ ಬದಲಾವಣೆಯಾಗಬಹುದೇ ಎಂಬ ಪ್ರಶ್ನೆಗೆ, ಅಂತಹ ಪ್ರಸಕ್ತಿಯೇ ಉದ್ಭವಿಸದೆಂದು ಉತ್ತರಿಸಿದರು.
ಈ ನಿಷೇಧವು ಅಂತಹ ನಡವಳಿಕೆ ತೋರುವ ಪ್ರತಿಯೊಬ್ಬರಿಗೂ ಪಾಠವಾಗಿದೆ. ಬುಧವಾರ ರಾತ್ರಿ ಈ ಅನುಚಿತ ಘಟನೆ ನಡೆದಾಗ ಎಂಸಿಎಯ ಶೇ.50ಕ್ಕಿಂತ ಹೆಚ್ಚು ಸದಸ್ಯರು ಅಲ್ಲಿದ್ದರೆಂದು ದೇಶ್‌ಮುಖ್ ತಿಳಿಸಿದರು.
ಕ್ರಿಕೆಟ್ ಮಂಡಳಿಗೆ ಘಟನೆಯ ಕುರಿತು ಮಾಹಿತಿ ನೀಡಲಾಗಿದೆ. ಘಟನೆಗೆ ಎಂಸಿಎಯ ಉಪಾಧ್ಯಕ್ಷ ಹಾಗೂ ಬಿಸಿಸಿಐನ ಸಿಎಒ ಪ್ರೊ. ರತ್ನಾಕರ ಶೆಟ್ಟಿ ಸಾಕ್ಷಿಯಾಗಿದ್ದರೆಂದು ಅವರು ಹೇಳಿದರು.
Please follow and like us:
error