ಅಭಿಮನ್ಯು ಚಿತ್ರ ವಿಮರ್ಶೆ – 5 Star Rated Movie

ಭಲೇ ಭಲೇ ಅಭಿಮನ್ಯು…
          ಸಿನಿಮಾ ಸಹ ಒಂದು ಮಾಧ್ಯಮ. ಮೊದಲೆಲ್ಲ ಮನರಂಜನೆಯಷ್ಟೇ ಈ ಮಾಧ್ಯಮದ ಉದ್ದೇಶವಾಗಿತ್ತು. ಅಫ್‌ಕೋರ್ಸ್ ಇವತ್ತಿಗೂ ಎಷ್ಟೋ ಜನ ಸಿನಿಮಾನಾ ಮನರಂಜನೆಗೆಂದೇ ನೋಡೋರಿದ್ದಾರೆ. ಪ್ರಜ್ಞಾವಂತರಿಗೆ, ಸಾಕಷ್ಟು ಓದಿಕೊಂಡೋರಿಗೆ ಸಿನಿಮಾ ಮನರಂಜನೆಗೆ ಮೀಸಲಾಗಬಾರದು. ಬೇರೆಲ್ಲ ಮಾಧ್ಯಮಗಳಂತೆ ಸಿನಿಮಾ ಕೂಡಾ ಮಾಹಿತಿ ನೀಡಬೇಕು. ಸಾಮಾಜಿಕ ಕಳಕಳಿ ಪ್ರದರ್ಶಿಸಬೇಕು ಎಂಬ ಅಭಿಲಾಷೆ ಇರೋದ್ರಿಂದ ಈ ವರ್ಗದ ಬಹುತೇಕ ಜನರು ಸಿನಿಮಾ ಟಾಕೀಸಿಗೆ ಕಾಲಿಡದೇ ಬಹಳ ವರ್ಷಗಳೇ ಉರುಳಿವೆ. ಇಂಥವರನ್ನೂ ಸೆಳೆಯುವ ಸಾಮರ್ಥ್ಯ ಈ ವಾರ ತೆರೆಕಂಡ ಕನ್ನಡದ ಅಭಿಮನ್ಯುವಿಗಿದೆ ಎನ್ನಲಡ್ಡಿಯಿಲ್ಲ. 
          ಸಿನಿಮಾ ಮಾಡಲು ಕಥೆ ಮುಖ್ಯ. ನಾಯಕನ ಕಾಲ್‌ಶೀಟ್ ಮುಖ್ಯ. ಬಜೆಟ್ ಮುಖ್ಯ ಎನ್ನುವ ಮಂದಿಗೇನೂ ಕೊರತೆ ಇಲ್ಲ. ಒಂದು ಕಾನ್ಸೆಪ್ಟಿನಿಂದಲೂ ಸಿನಿಮಾ ಮಾಡಬಹುದು ಎಂಬುದನ್ನು ಅರ್ಜುನ್ ಸರ್ಜಾ ಅಭಿಮನ್ಯುವನ್ನು ತೆರೆಗೆ ತರುವ ಮೂಲಕ ತೋರಿಸಿದ್ದಾರೆ. ಎಷ್ಟೋ ಜನ ಕಾನ್ಸೆಪ್ಟ್‌ವೊಂದನ್ನು ಇಟ್ಟುಕೊಂಡು ಸಿನಿಮಾ ಮಾಡಲು ಹೋಗಿ ಎಡವಿದ್ದಾರೆ. ಯಾಕೆಂದರೆ ಆ ಕಾನ್ಸೆಪ್ಟ್ ಸಿನಿಮಾದ ಹೆಸರಿನಲ್ಲಿ ಬಿಡುಗಡೆಗೊಂಡರೂ, ಕಿರುಚಿತ್ರ ಇಲ್ಲವೇ ಸಾಕ್ಷ್ಯಚಿತ್ರಗಳಾಗಿ ಪ್ರೇಕ್ಷಕನನ್ನು ಥೇಟರ್ ಕಡೆಗೆ ಬಾರದಂತೆ ಮಾಡಿ ನಷ್ಟ ಅನುಭವಿಸಿವೆ. 
        ಶಿಕ್ಷಣ ವ್ಯವಸ್ಥೆ ಬದಲಾಗಬೇಕಿದೆ ಎನ್ನುವ ಒಂದೇ ಕಾನ್ಸೆಪ್ಟ್‌ನ್ನು ಆಧರಿಸಿ, ಹೇಗೆ ಬದಲಾಗಬೇಕು? ಬದಲಾದರೆ ಆಗುವ ಪ್ರಯೋಜನವೇನು? ಇದನ್ನು ಮಾಡುವವರು ಯಾರು? ಈಗಿರುವ ವ್ಯವಸ್ಥೆಗೆ ಬಲಿಯಾಗುತ್ತಿರುವವರ ಬದುಕು ಹೇಗಿದೆ? ಬಡತನ, ಶ್ರೀಮಂತಿಕೆಯ ಗಂಧ-ಗಾಳಿಯನ್ನೂ ಅರಿಯದ ಕಂದಮ್ಮಗಳಿಗೆ ಶಿಕ್ಷಣದ ಹೆಸರಿನಲ್ಲಿ “ಕೊರಗುವ ಸರಕಾರಿ ಶಾಲೆ, ಆದ್ಧೂರಿಯ ಖಾಸಗಿ ಶಾಲೆ” ಎಂಬ ಬೇಧ-ಭಾವದ ಬೀಜವನ್ನು ಹುಟ್ಟು ಹಾಕುತ್ತಿರುವುದು ಯಾಕೆ? ಪರಿಣಾಮ ಏನು? ಇದಕ್ಕಿರುವ ಪರಿಹಾರ ಎಂಥದ್ದು? ಹೀಗೆ ಯೋಚಿಸಿ ಇದಕ್ಕೊಂದು ಸಿನಿಮಾ ಚೌಕಟ್ಟು ನೀಡಿ, ಅರ್ಜುನ್ ಸರ್ಜಾ ಅಭಿಮನ್ಯುವನ್ನು ತೆರೆಗೆ ತಂದಿದ್ದಾರೆ.
         ಬರೀ ಇದಷ್ಟನ್ನೇ ಹೇಳಿದ್ದರೆ ಖಂಡಿತವಾಗಿ ಅಭಿಮನ್ಯು ಸಾಕ್ಷ್ಯಚಿತ್ರವಾಗುವ ಎಲ್ಲ ಅಪಾಯಗಳು ಇದ್ದವು. ಇದನ್ನೆಲ್ಲ ಮುಂಚಿತವಾಗಿ ಆಲೋಚಿಸಿ, ಯೋಚನೆಯನ್ನು ಸಿನಿಮಾ ಪರಿಧಿಗೆ ತಂದು, ಕುಟುಂಬಸಮೇತರಾಗಿ ನೋಡುವಂಥ ಎಲ್ಲ ಕಮರ್ಷಿಯಲ್ ಅಂಶಗಳನ್ನು ತುಂಬಿ ಎಲ್ಲೂ ಬೋರಾಗದಂತೆ ಚಿತ್ರವನ್ನು ನಿರೂಪಿಸಲಾಗಿದೆ.    
          ಚಿತ್ರವು ಆರಂಭವಾಗುವುದೇ ಅಂತ್ಯದಿಂದ. ನಂತರ ೫ ಪಾತ್ರಗಳ ಮೂಲಕ ಇಡೀ ಸಿನಿಮಾವನ್ನು ವಿಭಜಿಸಿ ಕುತೂಹಲ ಮೂಡಿಸುತ್ತಾರೆ. ಬಡಕಾರ್ಪೆಂಟರ್ ತನ್ನ ಮಗಳು ತಮ್ಮಂತೆ ಬಡತನದಲ್ಲಿ ಬೆಂದುಹೋಗಬಾರದು ಎಂದು ಕಿಡ್ನಿ ಮಾರಿ, ಸಾಲ ಮಾಡಿದರೂ ಶಾಲೆಯ ಶುಲ್ಕ ಭರಿಸಲು ಆಗುವುದಿಲ್ಲ. ಶಾಲೆಯ ಮುಖ್ಯಸ್ಥ ಶುಲ್ಕ ಕಟ್ಟುವವರೆಗೆ ಮಗಳನ್ನು ಶಾಲೆಗೆ ಕಳಿಸಬಾರದು ಎಂದು ಹೇಳಿ ಅವಮಾನಿಸಿದ್ದರಿಂದ ಇಡೀ ಕುಟುಂಬವೇ ಆತ್ಮಹತ್ಯೆಗೆ ಶರಣಾಗುತ್ತದೆ. 
        ಈ ಘಟನೆ ಅಭಿಮನ್ಯುವಿನ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಪ್ರಾಮಾಣಿಕತೆಯ ಪ್ರತಿಬಿಂಬದಂತಿರುವ ಪುಟ್ಟ ಮಗುವಿನ ಸಾವಿಗೆ ಕಾರಣದ ಬೆನ್ನು ಹತ್ತಿ, ಅದಕ್ಕೆ ಈಗಿರುವ ಶಿಕ್ಷಣದ ವ್ಯವಸ್ಥೆ ಬುಡಮೇಲಾಗಬೇಕು. ಎಲ್ಲ ಖಾಸಗಿ ಶಾಲೆಗಳು ರಾಷ್ಟ್ರೀಕರಣಗೊಳ್ಳಬೇಕು. ಸರಕಾರ ಖಾಸಗಿ ಶಾಲೆಗಳ ಮಾಲಕರಿಗೆ ಹಾಕಿದ ಬಂಡವಾಳವನ್ನು ಪರಿಹಾರದ ರೂಪದಲ್ಲಿ ನೀಡಿ, ದೇಶಾದ್ಯಂತ ಎಲ್ಲ ಶಾಲೆಗಳು ಒಂದೇ ಎನ್ನುವ ಏಕತಾ ಭಾವ ಮೂಡುವಂತೆ ಮಾಡಬೇಕು. ಆಗ ಡೋನೇಷನ್ ಹೆಸರಿನಲ್ಲಿ ನಡೆಯುತ್ತಿರುವ ಸುಲಿಗೆ, ಸಾವುಗಳಿಗೆ ಕಡಿವಾಣ ಬೀಳಲು ಸಾಧ್ಯ ಎಂದು ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳ ಮೂಲಕ ದೇಶಕ್ಕೆ ತಿಳಿಸುವ ಅಭಿಮನ್ಯು, ಸದ್ಯದ ಸರಕಾರಿ ಶಾಲೆಗಳಲ್ಲಿರುವ ಅವ್ಯವಸ್ಥೆ, ಶಿಕ್ಷಕರ ಕೊರತೆ, ಕರ್ತವ್ಯನಿರತ ಶಿಕ್ಷಕರ ಹೊಣೆಗೇಡಿತನವನ್ನೂ ಮಾತುಗಳಲ್ಲಿ ಬಿಂಬಿಸಿ, ಕಟುವಾಸ್ತವ ಹೇಳುತ್ತಾನೆ. 
         ಇಲ್ಲಿಂದ ಶುರುವಾಗುವುದು ಸಿನಿಮಾದ ಕಥೆ. ಕಮರ್ಷಿಯಲ್ ಸಿನಿಮಾಗಳಂತೆ ಇಲ್ಲೂ ಫೈಟ್ಸ್‌ಗಳಿವೆ. ಪಿಸ್ತೂಲು, ಗನ್ ಮಷಿನ್‌ಗಳ ಅಬ್ಬರವಿದೆ. ನವಿರಾದ ಹಾಡುಗಳಿವೆ. ಜಹಾಂಗೀರ್ ಅವರ ಕಾಮಿಡಿ ಇದೆ. ಎಲ್ಲಕ್ಕಿಂತ ಉತ್ತಮವಾದ ಸಾಮಾಜಿಕ ಸಂದೇಶವಿದೆ. ಹಾಗಾಗಿ ಈ ಚಿತ್ರವನ್ನು ಭಾರತದ ಮಾಜಿ ರಾಷ್ಟ್ರಪತಿ ಆಬ್ದುಲ್ ಕಲಾಂ ಹಾಗೂ ಭಾರತದ ಮಾಧ್ಯಮಗಳಿಗೆ ಅರ್ಪಣೆ ಮಾಡಿರುವುದು ಸಾರ್ಥಕ ಎನಿಸುವ ಭಾವ ನೋಡುಗರ ಮನದಲ್ಲಿ ಮೂಡುತ್ತದೆ.
         ಇಡೀ ಸಿನಿಮಾವನ್ನು ಪ್ರಬುದ್ಧ ವ್ಯಕ್ತಿಯಾಗಿ ಅರ್ಜುನ್ ಹೊತ್ತು ಸಾಗಿಸಿದ್ದಾರೆ. ಕನ್ನಡದಲ್ಲಿ ಈವರೆಗೂ ಯಾಕೆ ಅರ್ಜುನ್ ಸಿನಿಮಾ ನಿರ್ದೇಶಿಸಲಿಲ್ಲ ಎನ್ನುವಷ್ಟು ಚೆನ್ನಾಗಿ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ನಾಯಕ ಮಾತ್ರವಲ್ಲ, ಇಂಥ ನಿರ್ದೇಶಕರೂ ಸಹ ಕನ್ನಡಚಿತ್ರರಂಗಕ್ಕೆ ಬೇಕಿತ್ತು ಎಂಬ ಕೊರಗನ್ನು ಅರ್ಜುನ್, ಅಭಿಮನ್ಯುವಿನ ಮೂಲಕ ನೀಗಿಸಿದ್ದಾರೆ. ಸಂಭಾಷಣೆಯಲ್ಲೂ ಅಷ್ಟೇ, ತೂಕದ ಮಾತುಗಳನ್ನು ಹೆಣೆದು ತಾವೊಬ್ಬ ಮಾಗಿದ ಚಿತ್ರಕರ್ಮಿ ಎಂದು ಸಾಬೀತುಪಡಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತದ “ಕತ್ತಲಾದ ಮನೆಗೆ ಬೆಳಕ…” ಹಾಡು ನೆನಪಲ್ಲುಳಿಯುತ್ತದೆ. ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ವೇಣುಗೋಪಾಲ್ ಕ್ಯಾಮರಾ ವರ್ಕ್ ಕಣ್ತುಂಬಿಕೊಳ್ಳುತ್ತದೆ. ಕೆ.ಕೆ. ಸಂಕಲನ ಯಾವ ಗೊಂದಲಕ್ಕೂ ಅವಕಾಶ ಕೊಟ್ಟಿಲ್ಲ. 
       ಸುರ್ವಿನ್ ಚಾವ್ಲಾ, ಸಿಮ್ರಾನ್ ಕಪೂರ, ರಾಹುಲ್ ದೇವ, ರವಿಕಾಳೆ, ವಿನಯಾ ಪ್ರಸಾದ್ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಜೊತೆಗೆ ಚಿತ್ರದಲ್ಲಿರುವ ಅನೇಕ ಹೊಸ ಪಾತ್ರಧಾರಿಗಳು ಗಮನ ಸೆಳೆಯುತ್ತಾರೆ. ಹಾಡೊಂದರಲ್ಲಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ, ಕನ್ನಡದ ಸಮರಸಿಂಹ ಅಭಿಜಿತ್ ರಂಜಿಸುತ್ತಾರೆ. 
       ಭವಿಷ್ಯದ ಭಾರತ ಎನ್ನುವ ಕಾನ್ಸೆಪ್ಟ್ ಇಡೀ ದೇಶಾದ್ಯಂತ ಮೆಚ್ಚುಗೆ ಗಳಿಸಿ, ಭಾರತ ಪ್ರಕಾಶಿಸುತ್ತಿದೆ ಎನ್ನುವಲ್ಲಿಗೆ ಚಿತ್ರ ಸುಖಾಂತ್ಯ. ದೇಶದ ದುಡಿಯುವ ವರ್ಗದ ಜೊತೆಗೆ ಆಳುವ ವರ್ಗವೂ ಸಿನಿಮಾ ನೋಡಿದರೆ ಅರ್ಜುನ್ ಪ್ರಯತ್ನಕ್ಕೆ ಫಲ ಸಿಗುತ್ತದೆ. ಯಾರೂ ಈ ಸಿನಿಮಾವನ್ನು ಮಿಸ್ ಮಾಡ್ಕೋಬೇಡಿ. ಥೇಟರ್‌ಗೆ ಹೋಗಿ ಸಿನಿಮಾ ನೋಡಿ. 
                 
-ಚಿತ್ರಪ್ರಿಯ ಸಂಭ್ರಮ್.
ರೇಟಿಂಗ್ : *****
———————
*ನೋಡಬೇಡಿ
**ನೋಡ್ತಿರಾ?
***ನೋಡಬಹುದು. 
****ಚೆನ್ನಾಗಿದೆ.
*****ನೋಡಲೇಬೇಕು.  
Please follow and like us:
error

Related posts

Leave a Comment