You are here
Home > Koppal News > 5 ವರ್ಷ ಕಾರಾಗೃಹದಲ್ಲಿ ಸುಖಾರಾಮ್

5 ವರ್ಷ ಕಾರಾಗೃಹದಲ್ಲಿ ಸುಖಾರಾಮ್

ಹೊಸದಿಲ್ಲಿ,  : ಕಳೆದ 1996ರಲ್ಲಿ ಖಾಸಗಿ ಸಂಸ್ಥೆಯೊಂದಕ್ಕೆ ಆಕರ್ಷಕ ಗುತ್ತಿಗೆಯನ್ನು ನೀಡಲು ರೂ. 3 ಲಕ್ಷ ಲಂಚ ಪಡೆದ ಆರೋಪದಲ್ಲಿ ಮಾಜಿ ದೂರ ಸಂಪರ್ಕ ಸಚಿವ ಸುಖರಾಮ್‌ಗೆ ದಿಲ್ಲಿಯ ನ್ಯಾಯಾಲಯವೊಂದು 5 ವರ್ಷಗಳ ಸೆರೆವಾಸ ಶಿಕ್ಷೆಯನ್ನು ಇಂದು ಘೋಷಿಸಿದೆ. ವೃದ್ಧಾಪ್ಯದ ಕಾರಣದಿಂದ ತನಗೆ ಕ್ಷಮಾದಾನ ನೀಡಬೇಕೆಂದು 86ರ ಹರೆಯದ ಸುಖರಾಮ್ ನ್ಯಾಯಾಲಯಕ್ಕೆ ಮನವಿ ಮಾಡಿದರಾದರೂ, ಅವರನ್ನು ‘ಅಭ್ಯಾಸಿ ಅಪರಾಧಿ’ ಎಂದು ಕರೆದ ಸಿಬಿಐ, ಗರಿಷ್ಠ ಶಿಕ್ಷೆ ನೀಡುವಂತೆ ವಿನಂತಿಸಿತು.
ಪಿ.ವಿ. ನರಸಿಂಹ ರಾವ್ ಸರಕಾರದಲ್ಲಿ ದೂರ ಸಂಪರ್ಕ ಸಚಿವರಾಗಿದ್ದ ಸುಖರಾಮ್ ಇಲಾಖೆಗೆ 3.5 ಲಕ್ಷ ಕಂಡಕ್ಟರ್ ಕಿ.ಮೀ. ಪಾಲಿಥೀನ್ ಲೇಪಿತ ಜೆಲ್ಲಿ ತುಂಬಿದ ಕೇಬಲ್ (ಪಿಐಜೆಎಫ್) ಪೂರೈಕೆಗಾಗಿ ಹರ್ಯಾಣ ಟೆಲಿಕಾಂ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆಗೆ ರೂ. 30 ಲಕ್ಷಗಳ ಗುತ್ತಿಗೆ ನೀಡಿಕೆಯಲ್ಲಿ ಅಧಿಕಾರ ದುರುಪಯೋಗ ಹಾಗೂ ಅವ್ಯವಹಾರ ನಡೆಸಿದ್ದರೆಂಬ ಆರೋಪದಲ್ಲಿ ದೋಷಿಯೆಂದು ನ್ಯಾಯಾಲಯ ನಿನ್ನೆ ತೀರ್ಪು ನೀಡಿತ್ತು. ಭರಷ್ಟಾಚಾರ ನಿಗ್ರಹ ಕಾಯ್ದೆ ಹಾಗೂ ಭಾರತೀಯ ದಂಡಸಂಹಿತೆಯ ವಿವಿಧ ಪರಿಚ್ಛೇದಗಳನ್ವಯ ಗರಿಷ್ಠ 7 ವರ್ಷ ಶಿಕ್ಷೆ ವಿಧಿಸಬಹುದಾದ ಆರೋಪಗಳನ್ನು ಸುಖರಾಮ್ ವಿರುದ್ಧ ಹೊರಿಸಲಾಗಿತ್ತು.
‘‘ನಾನು 86ರ ಹರೆಯದ ವೃದ್ಧನಾಗಿದ್ದು, ಕಳೆದ 12-13 ವರ್ಷಗಳಿಂದ ವಿಚಾರಣೆಗೆ ಹಾಜರಾಗುತ್ತಿದ್ದೇನೆ. ನಾನು ಪತ್ನಿಯನ್ನು ಕಳೆದುಕೊಂಡಿದ್ದು, ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದೇನೆ. ಆದುದರಿಂದ ನನಗೆ ಕ್ಷಮಾದಾನ ನೀಡಬೇಕು’’ ಎಂದು ಸುಖರಾಮ್ ತನ್ನ ವಕೀಲರ ಮೂಲಕ ನ್ಯಾಯಮೂರ್ತಿ ಆರ್.ಪಿ. ಪಾಂಡೆಯವರಿಗೆ ಮನವಿ ಮಾಡಿದರು.
ತನ್ನ ಪ್ರಾಯವು ಕ್ಷಮಾದಾನ ಪರಿಶೀಲನೆಗೆ ಉತ್ತಮ ಕಾರಣವೆಂದು ಅವರು ಪ್ರತಿಪಾದಿಸಿದರು. ಅಲ್ಲದೆ, ಇದು ಸರಕಾರಕ್ಕೆ ನಷ್ಟ ಉಂಟು ಮಾಡಿರುವ ಪ್ರಕರಣವಲ್ಲ. ಸುಖರಾಮ್ ಲಂಚ ಪಡೆದಿದ್ದಾ ರೆಂಬುದು ಸಿಬಿಐಯ ಆರೋಪ ವಾಗಿದೆ. ಆದರೆ, ಅದರಿಂದ ಸರಕಾರಕ್ಕೆ ಯಾವುದೇ ನಷ್ಟವಾಗಿಲ್ಲ ಎಂದು ಅವರ ವಕೀಲರು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಬಿಐ ವಕೀಲರು, ಸುಖರಾಮ್‌ಗೆ ಇತರ ಎರಡು ಪ್ರಕರಣಗಳಲ್ಲಿ ಶಿಕ್ಷೆಯಾಗಿರುವುದರಿಂದ ಅವರೊಬ್ಬ ‘ಅಭ್ಯಾಸಿ ಅಪರಾಧಿ’ಯಾಗಿದ್ದಾರೆ. ಆದುದರಿಂದ ಕ್ಷಮೆಗೆ ಅರ್ಹರಲ್ಲವೆಂದು ಪ್ರತಿವಾದ ಮಂಡಿಸಿದರು. ಹಿಂದಿನ ಎರಡು ಪ್ರಕರಣಗಳಲ್ಲಿ ಸುಖರಾಮ್‌ಗೆ ಶಿಕ್ಷೆ ವಿಧಿಸಲಾಗಿತ್ತಾದರೂ ಅವರು ಹೊರಗೇ ಇದ್ದರು. ಆದರೆ, ಈ ಬಾರಿ ತೀರ್ಪು ಘೋಷಣೆಯಾದೊಡನೆಯೇ ಅವರನ್ನು ಬಂಧಿಸಿ ತಿಹಾರ್ ಬಂದಿಖಾನೆಗೆ ಕಳುಹಿಸಲಾಗಿದೆ.

Leave a Reply

Top