ಕಡಿಮೆ ಬೆಲೆಯ ಟ್ಯಾಬ್ಲೆಟ್ ‘ಆಕಾಶ್’ಗೆ ಭಾರೀ ಬೇಡಿಕೆ: 3 ಲಕ್ಷ ಬುಕ್ಕಿಂಗ್

ಹೊಸದಿಲ್ಲಿ,ನ.17:ವಿಶ್ವದ ಅತಿ ಕಡಿಮೆ ಬೆಲೆಯ ಟ್ಯಾಬ್ಲೆಟ್ ಆಕಾಶ್‌ಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ.ಕೇವಲ ರೂ.3000ಬೆಲೆಯ ಆಕಾಶ್ ಮುಂದಿನ ತಿಂಗಳ ಕೊನೆಯ ವೇಳೆಗೆ ಮಾರುಕಟ್ಟೆಗೆ ಬರಲಿದೆಯಾದರೂ,ಬಿಡುಗಡೆಗೆ ಮುನ್ನವೇ ಅದಕ್ಕೆ ಸುಮಾರು 3ಲಕ್ಷ ಪೂರ್ವ ಬೇಡಿಕೆ ಬಂದಿದೆ ಎಂದು ಮೂಲಗಳು ಹೇಳಿವೆ.
ಇಂಗ್ಲೆಂಡ್ ಮೂಲದ ಡಾಟಾವಿಂಡ್ ಸಂಸ್ಥೆಯು ನಿರ್ಮಿತ ಅನುದಾನಿತ ಟ್ಯಾಬ್ಲೆಟ್ ಮಾದರಿಯನ್ನು ಈಗಾಗಲೇ ಶಾಲೆ ಮತ್ತು ಕಾಲೇಜುಗಳಲ್ಲಿ ಉಚಿತವಾಗಿ ಹಂಚಲು ನಿರ್ಧರಿಸಲಾಗಿದೆ.ಪ್ರಸ್ತುತ ಭಾರತದ ಟ್ಯಾಬ್ಲೆಟ್ ಪಿಸಿ ಮಾರುಕಟ್ಟೆಯಲ್ಲಿ ಸ್ವಾಮ್ಯತೆಯನ್ನು ಸಾಧಿಸಿರುವ ಆ್ಯಪಲ್,ಸ್ಯಾಮ್‌ಸಂಗ್ ಮತ್ತು ರಿಲಯನ್ಸ್ ಸಂಸ್ಥೆಗಳು 2,50,000ಟ್ಯಾಬ್ಲೆಟ್ ಪಿಸಿಗಳನ್ನು ಮಾರಾಟ ಮಾಡಿವೆ.ಆದರೆ ಆಕಾಶ್‌ಗೆ 3ಲಕ್ಷ ಮುಂಗಡ ಕಾದಿರಿಸುವಿಕೆಯ ಬೇಡಿಕೆಯೇ ಬಂದಿರುವುದರಿಂದ ಭಾರತದ ಟ್ಯಾಬ್ಲೆಟ್ ಪಿಸಿ ಮಾರುಕಟ್ಟೆಯಲ್ಲಿ ಆ ಸಂಸ್ಥೆಗಳ ಸ್ವಾಮ್ಯತೆಯನ್ನು ಇದು ಮುರಿಯಲಿದೆ ಎಂದು ಅಂದಾಜಿಸಲಾಗಿದೆ.
‘‘ಯಾವುದೇ ಹಣ ಸ್ವೀಕರಿಸದೆ ಆಕಾಶ್‌ಗೆ ಬುಕ್ಕಿಂಗ್ ಆರಂಭಿಸಲಾಗಿದೆ. ಪ್ರತಿ ತಿಂಗಳಿಗೆ ರೂ.99ಡಾಟಾ ಯೋಜನೆಗಾಗಿ ನಾವು ನಿರ್ವಾಹಕ ರೊಬ್ಬರನ್ನು ಗುರುತಿಸಿದ್ದೇವೆ’’ಎಂದು ಡಾಟಾವಿಂಡ್‌ನ ಸಿಇಒ ಸುನೀತ್ ಸಿಂಗ್ ತುಲಿ ಹೇಳಿದ್ದಾರೆ. ಡಾಟಾ ಸ್ಟ್ರೀಮಿಂಗ್ ತಂತ್ರಜ್ಞಾನದ ಮೂಲಕ ಇಂಟರ್‌ನೆಟ್ ಸ್ವೀಕಾರ ವೆಚ್ಚವು ಹೆಚ್ಚುಕಮ್ಮಿ ಉಚಿತವಾಗುವಂತಹ ವ್ಯವಸ್ಥೆಯನ್ನು ತನ್ನ ಸಂಸ್ಥೆಯು ಹೊಂದಲಿದೆ ಎಂದು ಅವರು ತಿಳಿಸಿದ್ದಾರೆ.‘‘ಆ ತಂತ್ರಜ್ಞಾನವನ್ನು ಹೊಂದಿರುವ ನಮ್ಮ ಉಪಕರಣಗಳು ಇಂಟರ್‌ನೆಟ್‌ನ್ನು ಉಚಿತಗೊಳಿಸುವ ಭರವಸೆ ನಮಗಿದೆ’’ ಎಂದು ತುಲಿ ತಿಳಿಸಿದ್ದಾರೆ.
ಡಾಟಾ ವಿಂಡ್ ಸಂಸ್ಥೆಯು ಸುಮಾರು 10,000ಟ್ಯಾಬ್‌ಲೆಟ್‌ಗಳನ್ನು ಸರಕಾರದ ಶಿಕ್ಷಣಕ್ಕಾಗಿ ರಾಷ್ಟ್ರೀಯ ಮಿಶನ್‌ಗೆ ರೂ. 2,500ಬೆಲೆಯಲ್ಲಿ ನೀಡಿದೆ.
ಈ ಉಪಕರಣಗಳನ್ನು ಐಐಟಗಳು,ಆರ್‌ಇಸಿಗಳು,ಬಿಐಟಿಎಸ್ ಪಿಲನಿ,ತೇರಿ ವಿವಿ ಮತ್ತಿತರ ವಿವಿಗಳ ವಿದ್ಯಾರ್ಥಿಗಳು ಈ ಟ್ಯಾಬ್ಲೆಟ್‌ಗಳನ್ನು ಬಳಸುತ್ತಿದ್ದಾರೆ. ಆಕಾಶ್‌ನ ಮುಂದಿನ ಅವತರಣಿಕೆಯಲ್ಲಿ,ಟಚ್ ಸ್ಕ್ರೀನ್ ಮತ್ತು ವೇಗವನ್ನು ದ್ವಿಗುಣಗೊಳಿಸುವ ತಂತ್ರಜ್ಞಾನಗಳ ಅಳವಡಿಕೆಯಾಗಲಿದೆ.ಕೀಬೋರ್ಡ್‌ನ ಆವಶ್ಯಕತೆಯಿರುವವರಿಗೆ ರೂ.400ರಲ್ಲಿ ಅದಕ್ಕೆ ಹೆಚ್ಚುವರಿ ಕೀಬೋರ್ಡ್ ಒಂದನ್ನು ಒದಗಿಸಲು ಡಾಟಾವಿಂಡ್ ಯೋಜಿಸಿದೆ.ಆಗ ಆಕಾಶ್‌ನ ಬೆಲೆ ರೂ. 3,400ರಷ್ಟಾಗಲಿದೆ

Related posts

Leave a Comment