371ನೇ ಕಲಂ: ಕೇಂದ್ರ ಸಂಪುಟ ಅಸ್ತು

ನವದೆಹಲಿ: ಹೈದರಾಬಾದ್- ಕರ್ನಾಟಕದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371ನೇ ಕಲಮಿನ ತಿದ್ದುಪಡಿ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಒಪ್ಪಿಗೆ ನೀಡಿತು. ಇದರೊಂದಿಗೆ ಈ ಭಾಗದ ಜನರ ದಶಕಗಳ ಕನಸು ನನಸಾಗುವ ಕಾಲ ಸಮೀಪಿಸಿದೆ.
ಉದ್ದೇಶಿತ ತಿದ್ದುಪಡಿ ಮಸೂದೆ ಮುಂಗಾರು ಅಧಿವೇಶನ ಮುಗಿಯುವ ಮುನ್ನ ಸಂಸತ್ತಿನಲ್ಲಿ ಮಂಡನೆ ಆಗಲಿದೆ. ಸಂಸತ್ ಅಧಿವೇಶನ ಇದೇ 7ರಂದು ಮುಗಿಯುವ ಹಿನ್ನೆಲೆಯಲ್ಲಿ ಬರುವ ಚಳಿಗಾಲದ ಅಧಿವೇಶನದಲ್ಲಿ ಅಂಗೀಕಾರ ಪಡೆಯುವ ಸಾಧ್ಯತೆಯಿದೆ ಎಂದು ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಇಂಧನ ಸಚಿವ ವೀರಪ್ಪ ಮೊಯಿಲಿ ತಿಳಿಸಿದರು.
ಪ್ರಧಾನಿ ಮನಮೋಹನ್‌ಸಿಂಗ್ ಅಧ್ಯಕ್ಷತೆಯಲ್ಲಿ ಸೇರಿದ್ದ ಸಂಪುಟ ಸಭೆ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ   ಉದ್ಯೋಗ, ಶಿಕ್ಷಣದಲ್ಲಿ ಸ್ಥಳೀಯರಿಗೆ ಪ್ರತ್ಯೇಕ ಮೀಸಲಾತಿ ಒದಗಿಸುವ ಪ್ರಸ್ತಾವನೆಗೆ ಅನುಮತಿ ನೀಡಿತು. ತಿದ್ದುಪಡಿ ಮಸೂದೆ ಅಂಗೀಕಾರವಾದ ಬಳಿಕ ರಾಜ್ಯ ಸರ್ಕಾರ ಈ ಸಂಬಂಧ ಪ್ರತ್ಯೇಕ ನಿಯಮಾವಳಿ ರೂಪಿಸಲಿದೆ.
ಸಂವಿಧಾನಕ್ಕೆ ತಿದ್ದುಪಡಿ ತಂದು ವಿಶೇಷ ಸ್ಥಾನಮಾನ ನೀಡುವುದರಿಂದ ಆರು ಜಿಲ್ಲೆಗಳಿಗೆ `ವಿಶೇಷ ಪ್ಯಾಕೇಜ್` ಪ್ರಕಟಿಸಿದರೆ ಪಕ್ಷಪಾತದ ಆಧಾರದ ಮೇಲೆ ಯಾರೂ ಪ್ರಶ್ನೆ ಮಾಡುವಂತಿಲ್ಲ. ಈ ಭಾಗದ ಯೋಜನೆಗಳಿಗೆ ನಿಗದಿಪಡಿಸುವ ಹಣಕಾಸು ಬಳಕೆ ಆಗಿಲ್ಲವೆಂಬ ಕಾರಣಕ್ಕೆ ವ್ಯರ್ಥವಾಗುವುದಿಲ್ಲ. ಅಲ್ಲದೆ, ರಾಜ್ಯ ಸರ್ಕಾರ ನಡೆಸುವ ನೇಮಕಾತಿಗಳು, ವಿಶ್ವವಿದ್ಯಾಲಯ, ಶಾಲಾ- ಕಾಲೇಜುಗಳ ಪ್ರವೇಶದಲ್ಲಿ ಸ್ಥಳೀಯರಿಗೆ ಮೀಸಲಾತಿ ದೊರೆಯಲಿದೆ. ಮೀಸಲಾತಿ ಪ್ರಮಾಣವನ್ನು ರಾಜ್ಯ ಸರ್ಕಾರ ನಿರ್ಧರಿಸಲಿದೆ. 
ಹೈದರಾಬಾದ್- ಕರ್ನಾಟಕ ಭಾಗದ ಅಭಿವೃದ್ಧಿಗೆ ಬಜೆಟ್‌ನಲ್ಲಿ ಪ್ರತ್ಯೇಕ ಹಣ ನಿಗದಿ ಮಾಡಲು ಅವಕಾಶವಿರುತ್ತದೆ. ಈ ಭಾಗದ ಯೋಜನೆಗಳಿಗೆ ಹಣಕಾಸು ನೆರವು ನೀಡುವಂತೆ ರಾಜ್ಯ ಸರ್ಕಾರ ಯೋಜನಾ ಆಯೋಗಕ್ಕೆ ಮನವಿ ಮಾಡಬಹುದು ಎಂದು ಖರ್ಗೆ ವಿವರಿಸಿದರು.
ಪ್ರಧಾನಿ ವಿಶೇಷ ಆಸಕ್ತಿ: ಮನಮೋಹನ್‌ಸಿಂಗ್ ನೇತೃತ್ವದ ರಾಜಕೀಯ ವ್ಯವಹಾರ ಸಮಿತಿ ಇತ್ತೀಚೆಗೆ ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿತ್ತು.
ಮಂಗಳವಾರ ಸಚಿವ ಸಂಪುಟದ ಮುಂದೆ ಉದ್ಯೋಗದಲ್ಲಿ ಪರಿಶಿಷ್ಟರಿಗೆ ಬಡ್ತಿ ನೀಡುವ ಪ್ರಸ್ತಾವನೆ ಮಾತ್ರವಿತ್ತು. ಈ ಪ್ರಸ್ತಾವನೆಗೆ ಒಪ್ಪಿಗೆ ದೊರೆತ ಬಳಿಕ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಖುದ್ದು ಹೈದರಾಬಾದ್- ಕರ್ನಾಟಕದ ವಿಶೇಷ ಸ್ಥಾನಮಾನದ ವಿಷಯ ಪ್ರಸ್ತಾಪಿಸಿದರು. ರಾಜಕೀಯ ವ್ಯವಹಾರ ಸಮಿತಿ ಈ ಪ್ರಸ್ತಾವನೆಗೆ ಸರ್ವಾನುಮತದ ಒಪ್ಪಿಗೆ ನೀಡಿದ್ದು, ಸಚಿವ ಸಂಪುಟವೂ ಅನುಮೋದನೆ ಕೊಡಬೇಕೆಂದು ಮನವಿ ಮಾಡಿದರು. ಪ್ರಧಾನಿ ಮನವಿಗೆ ಚಕಾರವೆತ್ತದೆ ಸಭೆ ಒಪ್ಪಿಗೆ ನೀಡಿತು.
ಕಾನೂನು ಸಚಿವಾಲಯ ಸಂವಿಧಾನ ತಿದ್ದುಪಡಿ ಮಸೂದೆ ರೂಪಿಸಲಿದೆ. ಗೃಹ ಸಚಿವಾಲಯ ಇದನ್ನು ಸಂಸತ್ತಿನಲ್ಲಿ ಮಂಡಿಸಲಿದೆ. ಇದು ಸಂವಿಧಾನ ತಿದ್ದುಪಡಿ ಮಸೂದೆ ಆಗಿರುವುದರಿಂದ ಉಭಯ ಸದನಗಳ 2/3ರಷ್ಟು ಬಹುಮತ ಅಗತ್ಯವಿದೆ. ಆದರೆ, ಹೈದರಾಬಾದ್-ಕರ್ನಾಟಕದ ವಿಶೇಷ ಸ್ಥಾನಮಾನಕ್ಕೆ ಎರಡು ದಶಕಗಳಿಂದ ನಡೆದಿರುವ ಪಕ್ಷಾತೀತವಾದ ಹೋರಾಟಕ್ಕೆ ಎಲ್ಲ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಅನೇಕ ಸಲ ಸರ್ವಪಕ್ಷಗಳ ನಿಯೋಗ ದೆಹಲಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಸೂದೆ ವಿರೋಧವಿಲ್ಲದೆ ಸರ್ವಾನುಮತದಿಂದ ಅಂಗೀಕಾರವಾಗುವ ಸಾಧ್ಯತೆ ಇದೆ.
ಹಿಂದಿನ ಎನ್‌ಡಿಎ ಸರ್ಕಾರ ಹೈದರಾಬಾದ್- ಕರ್ನಾಟಕದ ಜನರ ಬೇಡಿಕೆಯನ್ನು ತಳ್ಳಿಹಾಕಿತ್ತು. ಎನ್‌ಡಿಎ ಸರ್ಕಾರದಲ್ಲಿ ಗೃಹ ಇಲಾಖೆ ಹೊಣೆ ಹೊತ್ತಿದ್ದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದಿದ್ದರು. ಈಗ ಯುಪಿಎ ಸರ್ಕಾರ ಆರು ಜಿಲ್ಲೆಗಳ ಜನರ ಭಾವನೆಗಳನ್ನು ಗೌರವಿಸಿದೆ. ಅವರ ಕನಸಿಗೆ ಬಣ್ಣ ತುಂಬಿದೆ.
ವಿಶೇಷ ಸವಲತ್ತು
ಕೇಂದ್ರದ ಯುಪಿಎ ಸರ್ಕಾರ ಸಂವಿಧಾನದ 371ನೇ ಕಲಮಿಗೆ ತರಲು ಹೊರಟಿರುವ ತಿದ್ದುಪಡಿ ಮಸೂದೆ ಮಹಾರಾಷ್ಟ್ರದ ವಿದರ್ಭ ಹಾಗೂ ಆಂಧ್ರಪ್ರದೇಶದ ತೆಲಂಗಾಣಕ್ಕಿಂತ ಉತ್ತಮವಾದ ಅಂಶಗಳನ್ನು ಒಳಗೊಂಡಿದೆ. ಈಗಾಗಲೇ ಒಂಬತ್ತು ರಾಜ್ಯಗಳ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿದ್ದು, ಹೈದರಾಬಾದ್- ಕರ್ನಾಟಕ ತಿದ್ದುಪಡಿ ಮಸೂದೆಗೆ 371(ಜೆ) ಎಂದು ಹೆಸರಿಸಲಾಗಿದೆ.
ವಿಜಾಪುರ ಬಂದ್ ವಿಜಾಪುರ: ಹೈದರಾಬಾದ್ ಕರ್ನಾ ಟಕ ಪ್ರದೇಶದ ಜೊತೆಗೆ ವಿಜಾಪುರ ಜಿಲ್ಲೆಗೂ ಸಂವಿಧಾನದ 371 ವಿಧಿ ಅನ್ವಯ ವಿಶೇಷ ಸ್ಥಾನಮಾನ ನೀಡ ಬೇಕು ಎಂದು ಒತ್ತಾಯಿಸಿ ಮಂಗಳವಾರ ವಿಜಾಪುರ ಜಿಲ್ಲಾ ಬಂದ್ ಆಚರಿಸಲಾಯಿತು. ಜಿಲ್ಲೆಯ ಜನರ ಹೋರಾಟಕ್ಕೆ ಸಂಸದ ರಮೇಶ ಜಿಗಜಿಣಗಿ ಬೆಂಬಲ ವ್ಯಕ್ತಪಡಿಸಿದ್ದಾರೆ

Leave a Reply