-ಕಾಮಗಾರಿ ನಡೆಸದೆ ಬಿಲ್ ಎತ್ತಿರುವ ಆರೋಪ
ಓರ್ವ ಎಂಜನೀಯರ್ ವಿರುದ್ಧ ಕ್ರಮಕ್ಕೆ ಸರಕಾರಕ್ಕೆ ಶಿಫಾರಸು
–
ಕೊಪ್ಪಳ: ಕನಕಗಿರಿ ವಿಧಾನಸಭಾ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾಮಗಾರಿ ನಿರ್ವಹಿಸಿದೇ ಬಿಲ್ ಎತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ಪಂಚಾಯಿತಿ ಸಿಇಒ ರಘುನಂದನ್ ಮೂರ್ತಿ ಪಂಚಾಯತ್ರಾಜ್ ಎಂಜನಿಯರ್ ಇಲಾಖೆಯ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ.
2019ರಲ್ಲಿ ಪ್ರವಾಹ ಬಂದಾಗ ವಿವಿಧ ಕಾಮಗಾರಿಗಳಿಗಾಗಿ ಸರಕಾರ ಸುಮಾರು 4 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ಪಂಚಾಯತ್ ರಾಜ್ ಎಂಜನಿಯರಿಂಗ್ ಇಲಾಖೆಯ ಇಇ ರಂಗಯ್ಯ ಬಡಿಗೇರ, ಎಇಇ ಎಸ್.ಡಿ.ನಾಗೋಡ, ಜೆಇ ಡಿ.ಎಂ.ರವಿ ಹಾಗೂ ಲೆಕ್ಕಾಧೀಕ್ಷಕ ನಾರಾಯಣಸ್ವಾಮಿ ಸೇರಿದಂತೆ ಹಲವು ಅಧಿಕಾರಿಗಳು ಸರಕಾರದ ಅನುದಾನವನ್ನು ದುರುಪಯೋಗ ಮಾಡಿಕೊಂಡಿರುವ ಕುರಿತು ಮಾಜಿ ಸಚಿವ ಶಿವರಾಜ ತಂಗಡಗಿ ದಾಖಲೆ ಬಿಡುಗಡೆಗೊಳಿಸಿ, ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒಗೆ ದೂರು ಸಲ್ಲಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಪಂ ಸಿಇಒ ರಘುನಂದನ್ ಮೂರ್ತಿ ಅವರು, ಆರೋಪ ಇರುವ ಕಾಮಗಾರಿಗಳನ್ನು ಥರ್ಡ್ ಪಾರ್ಟಿ ಇನ್ಸ್ಪೆಕ್ಷನ್ ನಡೆಸಿದಾಗ ದೂರಿನಲ್ಲಿ ಸತ್ಯಾಂಶ ಕಂಡು ಬಂದಿದ್ದು, ನಾಲ್ವರು ಅಧಿಕಾರಿಗಳಿಗೆ ಈ ಹಿಂದೆ ಕಾರಣ ಕೇಳಿ ವಾರದೊಳಗೆ ಉತ್ತರಿಸುವಂತೆ ನೋಟೀಸ್ ಜಾರಿ ಮಾಡಿದ್ದರು. ಶುಕ್ರವಾರ ಗಂಗಾವತಿ ಉಪವಿಭಾಗದ ಕಿರಿಯ ಎಂಜನೀಯರ್ ಡಿ.ಎಂ.ರವಿ, ಎಇಇ ಎಸ್. ಡಿ.ನಾಗೋಡ ಹಾಗೂ ಲೆಕ್ಕಾಧೀಕ್ಷಕ ನಾರಾಯಣಸ್ವಾಮಿ ಅವರನ್ನು ಅಮಾನತುಗೊಳಿಸಿರುವ ಜಿಪಂ ಸಿಇಒ, ಪಿಆರ್ಇಡಿಯ ಇಇ ರಂಗಯ್ಯ ಬಡಿಗೇರ ವಿರುದ್ಧ ಕ್ರಮಕ್ಕೆ ಸರಕಾರಕ್ಕೆ ಶಿಫಾರಸು ಪತ್ರ ಬರೆದಿದ್ದಾರೆ.
