ಆ. 31 ರೊಳಗೆ ತೆರೆದ ಕೊಳವೆಬಾವಿ ಮುಚ್ಚಿ, ಪ್ರಮಾಣಪತ್ರ ಸಲ್ಲಿಸಿ ಡಿ.ಸಿ. ಆರ್.ಆರ್. ಜನ್ನು ತಾಕೀತು

ಕೊಪ್ಪಳ ಜಿಲ್ಲೆಯಲ್ಲಿರುವ ಸರ್ಕಾರಿ ಹಾಗೂ ಖಾಸಗಿ ವಿಫಲ ಅಥವಾ ಅನುಪಯುಕ್ತ ಕೊಳವೆ ಬಾವಿಗಳನ್ನು ಆ. 31 ರೊಳಗೆ ಸುರಕ್ಷಿತವಾಗಿ ಮುಚ್ಚಿ, ಈ ಕುರಿತ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

  ಜಿಲ್ಲೆಯಲ್ಲಿನ ವಿಫಲ ಅಥವಾ ನಿರುಪಯುಕ್ತ ಕೊಳವೆಬಾವಿಗಳನ್ನು ಸುರಕ್ಷಿತವಾಗಿ ಮುಚ್ಚುವ ಕುರಿತಂತೆ ಸರ್ಕಾರ ಹೊರಡಿಸಿರುವ ಸುತ್ತೋಲೆ ಅಂಶಗಳ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಜಿಲ್ಲೆಯಲ್ಲಿ ವಿವಿಧ ಯೋಜನೆಗಳಡಿ ಸರ್ಕಾರದಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕೊರೆಯಿಸಲಾಗಿರುವ ಕೊಳವೆ ಬಾವಿಗಳ ಪೈಕಿ, ವಿಫಲವಾಗಿರುವ ಹಾಗೂ ನಿರುಪಯುಕ್ತವಾಗಿರುವ ಕೊಳವೆ ಬಾವಿಗಳು ಹಾಗೂ ಅಂತಹ ಕೊಳವೆಬಾವಿಗಳನ್ನು ಸುರಕ್ಷಿತವಾಗಿ ಮುಚ್ಚಿರುವ ಬಗ್ಗೆ ಅಧಿಕಾರಿಗಳು, ಇದುವರೆಗೂ ಸಮಗ್ರ ಅಂಕಿ-ಅಂಶಗಳನ್ನು ಸಮರ್ಪಕವಾಗಿ ಒದಗಿಸದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಈ ಕುರಿತಂತೆ ಸರ್ಕಾರ ಈಗಾಗಲೆ ಸುತ್ತೋಲೆಯನ್ನು ಹೊರಡಿಸಿದ್ದು, ಆಗಸ್ಟ್ ತಿಂಗಳ ನಂತರ ಯಾವುದೇ ಪ್ರದೇಶದಲ್ಲಿ ಸುರಕ್ಷಿತವಾಗಿ ಮುಚ್ಚದೇ ಇರುವ ಖಾಸಗಿ ಅಥವಾ ಸರ್ಕಾರಿ ವಿಫಲ/ನಿರುಪಯುಕ್ತ ಕೊಳವೆ ಬಾವಿಗಳು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರವಾಗಿ ಹೊಣೆಗಾರರನ್ನಾಗಿಸುವಂತೆ ಸೂಚನೆ ನೀಡಿದೆ.  ಸರ್ಕಾರಿ ಅಥವಾ ಖಾಸಗಿ ಕೊಳವೆ ಬಾವಿಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಗ್ರಾಮ ಪಂಚಾಯತಿ ಪಿಡಿಓ, ಗ್ರಾಮ ಲೆಕ್ಕಿಗರು, ಸ್ಥಳೀಯವಾಗಿ ಸಾರ್ವಜನಿಕರಿಂದ ಮತ್ತು ರಿಗ್ ಮಾಲೀಕರಿಂದ ಪಡೆದು, ಸುರಕ್ಷಿತವಾಗಿ ಮುಚ್ಚಿಸಬೇಕು.  ಸರ್ಕಾರಿ ವಿಫಲ ಬೋರ್‍ವೆಲ್‍ಗಳು ಕಂಡುಬಂದಲ್ಲಿ ಪಿಡಿಓ, ಗ್ರಾಮ ಲೆಕ್ಕಿಗರು, ಪಂಚಾಯತಿರಾಜ್ ಇಂಜಿನಿಯರಿಂಗ್ ಇಲಾಖೆ ಕಿರಿಯ ಇಂಜಿನಿಯರ್, ಸ್ಥಳೀಯ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಒಳಗೊಂಡ ತಂಡವೇ ಸುರಕ್ಷಿತವಾಗಿ ಮುಚ್ಚಿಸಲು ಕ್ರಮ ಕೈಗೊಳ್ಳಬೇಕು.  ಖಾಸಗಿ ಬೋರ್‍ವೆಲ್‍ಗಳನ್ನು ಸಹ ಸಂಬಂಧಪಟ್ಟ ಪ್ರದೇಶದ ಮಾಲೀಕರೇ ಸುರಕ್ಷಿತವಾಗಿ ಮುಚ್ಚಬೇಕು.  ಒಂದು ವೇಳೆ ಯಾವುದೇ ಅನಾಹುತವಾದಲ್ಲಿ, ಬೋರ್‍ವೆಲ್ ಕೊರೆದ ಸಂಸ್ಥೆ ಹಾಗೂ ಜಮೀನು ಅಥವಾ ನಿವೇಶನದ ಮಾಲೀಕರನ್ನು ಜವಾಬ್ದಾರನ್ನಾಗಿಸಿ, ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.  ಕೊಳವೆ ಬಾವಿ ಕೊರೆಯಿಸುವ ಮುನ್ನ 15 ದಿನಗಳ ಮುಂಚೆ, ಸಂಬಂಧಪಟ್ಟವರು ಆಯಾ ಪಿಡಿಓ ಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು.  ಕೊಳವೆಬಾವಿ ಕೊರೆಯುವ ರಿಗ್ ಯಂತ್ರದವರು ಯಾವುದೇ ಕೊಳವೆ ಬಾವಿ ಕೊರೆಯುವ ಮುನ್ನ, ಸಂಬಂಧಪಟ್ಟವರು ಅದಕ್ಕೆ ಅನುಮತಿ ಪಡೆದಿರುವುದನ್ನು ಖಚಿತ ಪಡಿಸಿಕೊಂಡ ನಂತರವೇ ಕೊರೆಯಬೇಕು.  ಇಲ್ಲದಿದ್ದಲ್ಲಿ ಪೊಲೀಸ್ ಅಧಿಕಾರಿಗಳು ಯಂತ್ರವನ್ನು ವಶಕ್ಕೆ ಪಡೆದು, ಕಾನೂನು ರೀತ್ಯ ಕ್ರಮ ಜರುಗಿಸಲು ಸರ್ಕಾರ ಈಗಾಗಲೆ ಸೂಚನೆ ನೀಡಿದೆ.  ಜಿಲ್ಲೆಯಲ್ಲಿನ ಸರ್ಕಾರಿ ಅಥವಾ ಖಾಸಗಿ ವಿಫಲ/ ನಿರುಪಯುಕ್ತ ತೆರೆದ ಎಲ್ಲ ಕೊಳವೆ ಬಾವಿಗಳನ್ನು ಸುರಕ್ಷಿತವಾಗಿ ಮುಚ್ಚಲಾಗಿದೆ, ಎಂಬುದಾಗಿ ಆಯಾ ಗ್ರಾ.ಪಂ. ಗಳ ಪಿಡಿಓ, ಪಿಆರ್‍ಇಡಿ ಕಿರಿಯ ಇಂಜಿನಿಯರ್ ಹಾಗೂ ಗ್ರಾಮ ಲೆಕ್ಕಿಗರಿಂದ ಜಂಟಿ ಪ್ರಮಾಣಪತ್ರವನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆ. 31 ರ ಒಳಗಾಗಿ ಪಡೆದು, ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ರವಿ ಬಸರಿಹಳ್ಳಿ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಆರ್‍ಇಡಿ ಸಹಾಯಕ ಇಂಜಿನಿಯರ್‍ಗಳು, ತಹಸಿಲ್ದಾರರು, ನಗರಸಭೆ, ಪುರಸಭೆಗಳ ಮುಖ್ಯಾಧಿಕಾರಿಗಳು ಭಾಗವಹಿಸಿದ್ದರು.

Leave a Reply