ವಾರಾಹಿ ನೀರಾವರಿ ಯೋಜನೆ : ಏಪ್ರಿಲ್‍ನೊಳಗೆ 3000 ಹೆಕ್ಟೇರ್ ಜಮೀನಿಗೆ ನೀರಾವರಿ

  ವಾರಾಹಿ ನೀರಾವರಿ ಯೋಜನೆಯಡಿ ಏಪ್ರಿಲ್ ಮಾಹೆಯೊಳಗೆ 3000 ಹೆಕ್ಟೇರ್ ಜಮೀನಿಗೆ ನೀರಾವರಿಯನ್ನು ಒದಗಿಸಲಾಗುವುದೆಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ತಿಳಿಸಿದರು.
ವಿಧಾನ ಪರಿಷತ್ತಿನಲ್ಲಿಂದು ಮಾಜಿ ಮುಖ್ಯಮಂತ್ರಿ  ದಿವಂಗತ ಗುಂಡೂರಾವ್ ಅವರ ಕಾಲದಲ್ಲಿಯೇ   9.43 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು  ಕೈಗೊಳ್ಳಲು ಉದ್ದೇಶಿಸಲಾಗಿತ್ತು.  ಆದರೆ 1980 ರಿಂದ 2001 ರ ವರೆಗೆ ಈ ಕುರಿತು ಬರೀ ಚರ್ಚೆಯನ್ನು ನಡೆಸುವ ಮೂಲಕ ಸಮಯವನ್ನು ವ್ಯರ್ಥ ಮಾಡಲಾಯಿತು ಎಂದು ಪ್ರಶ್ನೋತ್ತರ ವೇಳೆಯಲ್ಲಿ  ಸದಸ್ಯ ಕೆ. ಪ್ರತಾಪ ಚಂದ್ರಶೆಟ್ಟಿ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.ನೀರಾವರಿ ಸೌಲಭ್ಯ ಒದಗಿಸುವ ಜೊತೆಗೆ ವಿದ್ಯುತ್ ಉತ್ಪಾದಿಸುವ ಕುರಿತು ವಿವಿಧ ಇಲಾಖೆಗಳೊಂದಿಗೆ ಚರ್ಚೆ ನಡೆಸಲಾಗಿ, ಅರಣ್ಯ ಮತ್ತು ಪರಿಸರ ಸಂರಕ್ಷಣೆಯ ಉದ್ದೇಶದಿಂದ ವಿದ್ಯುತ್ ಉತ್ಪಾದನಾ ಘಟಕವನ್ನು ಕೈ ಬಿಟ್ಟು ನೀರಾವರಿ ಯೋಜನೆಯನ್ನು ಮಾತ್ರ ಕೈಗೆತ್ತಿಕೊಳ್ಳಲಾಗಿದೆ.  ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯವರು 260 ಹೆಕ್ಟೆರ್ ರಕ್ಷಿತಾರಣ್ಯ ಪ್ರದೇಶದಲ್ಲಿ  129.60 ಹೆಕ್ಟೇರ್ ಪ್ರದೇಶವನ್ನು ಈ ಯೋಜನೆಗೆ ಬಿಡುಗಡೆಗೊಳಿಸಲು ತಾತ್ವಿಕವಾಗಿ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಮೂಲ ಯೋಜನೆಯಲ್ಲಿದ್ದ ಕಾಲುವೆಗಳ ಉದ್ದವನ್ನು ಕಡಿಮೆಗೊಳಿಸಲಾಗಿದೆ.  ಹಾಗೆಯೇ 15718 ಹೆಕ್ಟೇರ್ ಇದ್ದ ಮೂಲ ಅಚ್ಚುಕಟ್ಟು ಪ್ರದೇಶದಲ್ಲಿ 702 ಹೆಕ್ಟೇರ್ ಅಚ್ಚುಕಟ್ಟನ್ನು ಕಡಿಮೆ ಮಾಡಲಾಗಿದೆ ಎಂದು ಹೇಳಿದರು.
Please follow and like us:
error