ವಿಶ್ವದಲ್ಲೆಲ್ಲೇ ಇರಲಿ, 30 ನಿಮಿಷದಲ್ಲಿ ಟಾರ್ಗೆಟ್ ಚಿಂದಿ!

: ಅಮೆರಿಕದಿಂದ ಸುಧಾರಿತ ಹೈಪರ್‌ಸಾನಿಕ್ ಕ್ಷಿಪಣಿ ಯಶಸ್ವಿ ಪ್ರಯೋಗ
ಇದರ ವೇಗ ಶಬ್ದದ ವೇಗಕ್ಕಿಂತ ೫ ಪಟ್ಟು ಅಧಿಕ
ವಾಷಿಂಗ್ಟನ್: ಅಮೆರಿಕ ಮತ್ತೆ ತನ್ನ ಸಾಮರ್ಥ್ಯವನ್ನು ಜಗಜ್ಜಾಹೀರು ಮಾಡಿದೆ. ಶಬ್ದದ ವೇಗಕ್ಕಿಂತ ಬರೋಬ್ಬರಿ ೫ ಪಟ್ಟು ಅಧಿಕ ವೇಗದಲ್ಲಿ ಸಂಚರಿಸಬಲ್ಲಂತಹ ಹೈಪರ್‌ಸಾನಿಕ್ ಕ್ಷಿಪಣಿಯನ್ನು ಅಮೆರಿಕ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಪ್ರಪಂಚದ ಯಾವುದೇ ಮೂಲೆಯ ಮೇಲೂ ದಾಳಿ ನಡೆಸಬಲ್ಲ ಅತ್ಯಾಧುನಿಕ ಕ್ಷಿಪಣಿಯಿದು. ಕ್ಷಿಪಣಿಯ ಯಶಸ್ವಿ ಪರೀಕ್ಷೆ ಅಮೆರಿಕದ ಪಾಲಿಗೆ ದೊಡ್ಡ ಸಾಧನೆಯೇ ಸರಿ.
ಶುಕ್ರವಾರವಷ್ಟೇ ಹವಾಯ್‌ನಿಂದ ರಾಕೆಟ್ ಮೂಲಕ ಈ‘ಸುಧಾರಿತ ಹೈಪರ್‌ಸಾನಿಕ್ ವೆಪನ್’ (ಎ‌ಎಚ್‌ಡಬ್ಲ್ಯೂ) ಎಂಬ ಹೆಸರಿನ ಈ ಕ್ಷಿಪಣಿಯ ಪ್ರಯೋಗ ನಡೆಸಲಾಯಿತು. ಹವಾಯ್‌ನಿಂದ ೨,೫೦೦ ಮೈಲು ದೂರದಲ್ಲಿರುವ ಮಾರ್ಶಲ್ ದ್ವೀಪದ ಗುರಿಯ ಮೇಲೆ ದಾಳಿ ನಡೆಸುವ ಮೂಲಕ ಹೈಪರ್‌ಸಾನಿಕ್ ಕ್ಷಿಪಣಿ ತನ್ನ ಬಲಪ್ರದರ್ಶನ ನಡೆಸಿತು.
೩೦ ನಿಮಿಷ ಸಾಕು ಗುರಿ ತಲುಪಲು: ಅಮೆರಿಕ ಸೇನೆ ಪರೀಕ್ಷೆ ನಡೆಸಿದ ಈ ಕ್ಷಿಪಣಿ ಬರೋಬ್ಬರಿ ೯೦೦ ಕೆಜಿ ತೂಕವಿದ್ದು, ಕೇವಲ ೩೦ ನಿಮಿಷಗಳ ಅವಧಿಯಲ್ಲಿ ಪ್ರಪಂಚದ ಯಾವುದೇ ಭಾಗದ ಮೇಲೂ ದಾಳಿ ನಡೆಸಬಲ್ಲುದು. ಶಬ್ದದ ವೇಗಕ್ಕಿಂತ ೫ ಪಟ್ಟು ಅಂದರೆ ಗಂಟೆಗೆ ಸುಮಾರು ೩,೭೨೮ ಮೈಲುಗಳ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಈ ಕ್ಷಿಪಣಿಗಿದೆ. ಕಳೆದ ಆಗಸ್ಟ್ ೧೧ರಂದು ಪೆಂಟಗನ್ ಗಂಟೆಗೆ ೧೬,೭೭೬ ಮೈಲು ಸಂಚರಿಸಬಲ್ಲ ಎಚ್‌ಟಿವಿ-೨ ಕ್ಷಿಪಣಿಯ ಪರೀಕ್ಷೆ ನಡೆಸಿತ್ತಾದರೂ ಅದು ವಿಫಲವಾಗಿತ್ತು.
ಹೈಪರ್‌ಸಾನಿಕ್ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿ ನಡೆದ ಪರಿಣಾಮ, ಇನ್ನು ಮುಂದೆ ಅಮೆರಿಕ ಕ್ಷಿಪಣಿ ಪ್ರಯೋಗಕ್ಕೆ ವಿದೇಶಗಳ ನೆಲೆಯನ್ನು ಅವಲಂಬಿಸಬೇಕಾಗಿಲ್ಲ. ಏರೋಡೈನಾಮಿಕ್ಸ್, ಯಾನ, ದಿಗ್ದರ್ಶನ, ನಿಯಂತ್ರಣ, ಶಾಖ ಕಾಯ್ದುಕೊಳ್ಳುವ ತಂತ್ರಜ್ಞಾನಗಳ ದತ್ತಾಂಶ ಸಂಗ್ರಹವೇ ಈ ಕ್ಷಿಪಣಿ ಪರೀಕ್ಷೆಯ ಉದ್ದೇಶ ಎಂದು ಅಮೆರಿಕ ಸೇನೆಯ ವಕ್ತಾರ ಲೆ. ಕರ್ನಲ್ ಮೆಲಿಂಡಾ ಮೋರ್ಗನ್ ತಿಳಿಸಿದ್ದಾರೆ.
ಕ್ಷಿಪಣಿಯ ವಿಶೇಷತೆ
ಉದ್ದ: ೧೨ ಅಡಿ ತೂಕ: ೯೦೦ ಕೆಜಿ
ಮೂಲದ್ರವ್ಯಗಳು: ಕಾರ್ಬನ್ ಸಂಯುಕ್ತದಿಂದ ತಯಾರಿಸಲಾದ ಮೂಲದ್ರವ್ಯಗಳು ಕ್ಷಿಪಣಿ ಹಾರಾಟದ ವೇಳೆ ಉತ್ಪತ್ತಿಯಾಗುವ ಸುಮಾರು ೨,೦೦೦ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವನ್ನು ತಡೆಯುವ ಸಾಮರ್ಥ್ಯ ಹೊಂದಿದೆ.
ವ್ಯಾಪ್ತಿ: ೩೦ ನಿಮಿಷಗಳಲ್ಲಿ ಜಗತ್ತಿನ ಯಾವುದೇ ಮೂಲೆಗೂ ದಾಳಿ
ವೆಚ್ಚ: ರು. ೧,೫೬೪ ಕೋಟಿ ಈವರೆಗೆ
ಹೊರುವ ಸಾಮರ್ಥ್ಯ
ಅಣುಬಾಂಬ್ ಅಥವಾ ಕ್ಷಿಪಣಿ ಸೇರಿದಂತೆ ಒಟ್ಟು ೧೨,೦೦೦ ಪೌಂಡ್ ತೂಕ
ಲಂಡನ್‌ನಿಂದ…
ಜಂಬೋ ಜೆಟ್‌ನಲ್ಲಿ
೨೩ ಗಂಟೆಗಳು
ಫಾಲ್ಕಾನ್
ಎಚ್‌ಟಿವಿ-೨ನಲ್ಲಿ ೧ ಗಂಟೆ
ನಿಯಂತ್ರಣ ವ್ಯವಸ್ಥೆ
ಮಾನವರಹಿತ ಕ್ಷಿಪಣಿಯಾದರೂ ಅದರಲ್ಲಿರುವ ಸೆನ್ಸರ್‌ಗಳು ಉಷ್ಣತೆ, ದಿಗ್ದರ್ಶನ ಹಾಗೂ ವೇಗದ ಲಕ್ಷಗಟ್ಟಲೆ ಅಳತೆಯನ್ನು ದಾಖಲಿಸಬಲ್ಲುದು.
ಒತ್ತಡ
ಟರ್ಬೋ ಜೆಟ್‌ಗಳು ಉರಿದು ಕ್ಷಿಪಣಿಯ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಹೈಪರ್‌ ಸೋನಿಕ್ ವೇಗದಲ್ಲಿ ಕ್ಷಿಪಣಿಯು ಹಾರಲು ಸ್ಕ್ರಾಮ್‌ಜೆಟ್‌ಗಳು ನೆರವಾಗುತ್ತವೆ. ಇದರಿಂದಾಗಿ ಗಂಟೆಗೆ ೨೦,೯೨೧ ಕಿ.ಮೀ. ವೇಗದಲ್ಲಿ ಸಾಗುತ್ತದೆ.

Related posts

Leave a Comment