ಜ. 30 ಕ್ಕೆ ಲಕ್ಷ ಶೌಚಾಲಯ ಗುರಿ ಸಾಧನೆಗೆ ಸಹಕರಿಸಲು ಜಿ.ಪಂ. ಸಿಇಓ ಕೃಷ್ಣ ಉದಪುಡಿ ಮನವಿ

ಜಿಲ್ಲೆಯಲ್ಲಿ ಸ್ವಚ್ಛ ಭಾರತ ಅಭಿಯಾನದಡಿ 2015 ನೂತನ ವರ್ಷದಲ್ಲಿ 1 ಲಕ್ಷ ಶೌಚಾಲಯ ನಿರ್ಮಾಣದ ಗುರಿಯನ್ನು ಸಾಧಿಸಿ ಜ. 30 ರ ಒಳಗಾಗಿ 01 ಲಕ್ಷದ ಒಂದನೇ ಶೌಚಾಲಯ ನಿರ್ಮಾಣ ಮಾಡುವ ಮಹತ್ವಾಕಾಂಕ್ಷೆಯನ್ನು ಸಾಕಾರಗೊಳಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮನವಿ ಮಾಡಿಕೊಂಡಿದ್ದಾರೆ.
       ವೈಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ಕೊಪ್ಪಳ ಜಿಲ್ಲೆಯ ಜನ ಆಸಕ್ತಿಯಿಂದ ಮುನ್ನುಗ್ಗಿ ಕಳೆದ ವರ್ಷ 54000 ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡು ನೈರ್ಮಲ್ಯ ವಿಷಯದಲ್ಲಿ ಇಡೀ ರಾಜ್ಯದಲ್ಲೇ ಕ್ರಾಂತಿಕಾರಕ ಬದಲಾವಣೆ ತರಲು ಉತ್ಸಾಹದಿಂದ ಪಾಲ್ಗೊಂಡ ನೆನಪು ಇನ್ನೂ ಹಸಿರಾಗೇ ಇದೆ. ಈ ವರ್ಷ ಸ್ವಚ್ಛ ಭಾರತ ಅಭಿಯಾನದಲ್ಲಿ ಇನ್ನೊಂದು ದೊಡ್ಡ ದಾಪುಗಾಲು ಇಟ್ಟು 100001 ಶೌಚಾಲಯ ನಿರ್ಮಿಸಿ ಮಹಾತ್ಮ ಗಾಂಧೀಜಿಯವರ ಪುಣ್ಯ ತಿಥಿಯನ್ನು ಜನೇವರಿ 30 ರಂದು ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ಜನತೆ ಒಗ್ಗೂಡಿ ಸಫಲಗೊಳಿಸಬೇಕಾಗಿದೆ.  ಈ ಹಿಂದೆ ವೈಯಕ್ತಿಕ ಶೌಚಾಲಯವನ್ನು ನಿರ್ಮಿಸಲು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ 5,400/- ರೂ. ಹಾಗೂ ನಿರ್ಮಲ ಭಾರತ ಅಭಿಯಾನದಲ್ಲಿ ರೂ.4,700/- ಈ ರೀತಿಯಾಗಿ ವೈಯಕ್ತಿಕ ಫಲಾನುಭವಿಗಳಿಗೆ ಸಹಾಯಧನವನ್ನು ನೀಡಲಾಗುತ್ತಿತ್ತು.  ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ವಿಶೇಷವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಹೆಚ್ಚಿನ ಪ್ರೋತ್ಸಾಹ ಧನ ರೂ.5000/- ಸೇರಿಸಿ ಒಟ್ಟು ರೂ.15000/- ಗಳನ್ನು ನೀಡುವ ಪದ್ಧತಿ ರೂಡಿಯಲ್ಲಿತ್ತು.  ಆದರೆ ಕಳೆದ ಅಕ್ಟೋಬರ್ ತಿಂಗಳಿನಿಂದ ನಿರ್ಮಲ ಭರತ ಅಭಿಯಾನದ ಬದಲಿಗೆ ಸ್ವಚ್ಛ ಭಾರತ ಮಿಷನ್ ಜಾರಿಗೆ ಬಂದಿದ್ದು,  ಉದ್ಯೋಗಖಾತ್ರಿ ಯೋಜನೆಯಲ್ಲಿ ನೀಡುತ್ತಿದ್ದ ರೂ.5400 ಗಳನ್ನು ಕೈಬಿಟ್ಟು, ಈಗ ಪೂರ್ತಿಯಾಗಿ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ವೈಯಕ್ತಿಕ ಫಲಾನುಭವಿಗೆ ಒಟ್ಟು ರೂ.12,000 ಗಳ ಪ್ರೋತ್ಸಾಹಧನವನ್ನು ನೀಡುವ ವ್ಯವಸ್ಥೆ ಜಾರಿಯಾಗಿದೆ. ಈ ಹಿಂದಿನಂತೆ ಎನ್.ಆರ್.ಇ.ಜಿ. ಅಡಿಯಲ್ಲಿ ಎನ್.ಎಂ.ಆರ್. ಹಾಕುವ ಪದ್ಧತಿಯನ್ನು ತೆಗೆದು ಹಾಕಿದ ಕಾರಣ ವೈಯಕ್ತಿಕ ಫಲಾನುಭವಿಗಳಿಗೆ ಇನ್ನು ಸರಳೀಕರಣಗೊಳಿಸಿ ರೂ.12,000 ಗಳನ್ನು ಒಟ್ಟಾರೆಯಾಗಿ ಪಾವತಿಸುವ ಪದ್ಧತಿ ಚಾಲನೆಗೆ ಬಂದಿದೆ. ಅಲ್ಲದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ರೂ.15000/- ಗಳ ಪ್ರೋತ್ಸಾಹಧನವೂ ದೊರೆಯುತ್ತದೆ. ಇದರಿಂದ ವೈಯಕ್ತಿಕ ಫಲಾನುಭವಿಗಳ 20 ದಿವಸ ಮಾನವ ದಿನಗಳ ಉಳಿತಾಯ ಆಗುವುದಲ್ಲದೇ ಶೌಚಾಲಯ ನಿರ್ಮಿಸಿಕೊಂಡವರಿಗೆ ತಕ್ಷಣ ರೂ.12000 ಸಹಾಯಧನ ಸಿಗುವ ನೀತಿಯನ್ನು ರೂಪಿಸಲಾಗಿದೆ. ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡ ಪ್ರತಿಯೊಬ್ಬರಿಗೂ ಅನುದಾನದ ಪಾವತಿಯನ್ನು ತಕ್ಷಣವೇ ಪಾವತಿ ಮಾಡಲಾಗುವುದರಿಂದ, ಶೌಚಾಲಯ ಇಲ್ಲದೇ ಇರುವ ಎಲ್ಲ ಕುಟುಂಬಗಳು ಕೂಡಲೆ ಶೌಚಾಲಯ ಕಟ್ಟಿಸಿಕೊಳ್ಳಲು ಮುಂದಾಗುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮನವಿ ಮಾಡಿಕೊಂಡಿದ್ದಾರೆ.

Please follow and like us:
error

Related posts

Leave a Comment