3ಜಿ ರೋಮಿಂಗ್ ನಿಲ್ಲಿಸುವಂತೆ ಮೊಬೈಲ್ ಕಂಪೆನಿಗಳಿಗೆ ಸರಕಾರದ ಸೂಚನೆ

 ಹೊಸದಿಲ್ಲಿ,ಡಿ.22:ಪರವಾನಿಗೆ ನಿಯಮಗಳನ್ನು ಉಲ್ಲಂಘಿಸುತ್ತಿರುವುದಕ್ಕೆ ಮೊಬೈಲ್ ಕಂಪೆನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ದೂರ ಸಂಪರ್ಕ ಸಚಿವಾಲಯ,2ಜಿ ರೋಮಿಂಗ್ ಒಪ್ಪಂದವನ್ನು ಮುಂದುವರಿಸದಿರುವಂತೆ ಸೂಚಿಸಿದ್ದು,ಇದನ್ನು ಉಲ್ಲಂಘಿಸಿದರೆ ಭಾರೀ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.
ದೂರ ಸಂಪರ್ಕ ಪರವಾನಿಗೆಯ ರೋಮಿಂಗ್ ಒಪ್ಪಂದವನ್ನು ಸೇವೆ ಒದಗಿಸುವ ಕಂಪೆನಿಗಳು ಉಲ್ಲಂಘಿಸುತ್ತಿವೆ ಎಂದು ಭಾರತ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ,ಕಾನೂನು ಸಚಿವಾಲಯ ಮತ್ತು ದೂರ ಸಂಪರ್ಕ ಇಲಾಖೆ ಒಮ್ಮತಾಭಿಪ್ರಾಯಕ್ಕೆ ಬಂದ ನಂತರ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿದೆ.
ಕಳೆದ ವರ್ಷದ ಹರಾಜಿನಲ್ಲಿ ಕೆಲ ವೃತ್ತಗಳಲ್ಲಿ 3ಜಿ ಮೊಬೈಲ್ ಸೇವೆ ಒದಗಿಸಲು ಸ್ಪೆಕ್ಟ್ರಂ ಪಡೆಯಲು ವಿಫಲವಾಗಿದ್ದರಿಂದ ಪ್ರಮುಖ ಮೊಬೈಲ್ ಕಂಪೆನಿಗಳಾದ ಭಾರ್ತಿ,ವೊಡಾಫೋನ್ ಮತ್ತು ಐಡಿಯಾ ಈ ಸೇವೆ ಒದಗಿಸಲು ಪರಸ್ಪರ ಒಪ್ಪಂದ ಮಾಡಿಕೊಂಡಿದ್ದವು.
ಕಂಪೆನಿಗಳ ನಡುವಿನ 3ಜಿ ರೋಮಿಂಗ್ ಒಪ್ಪಂದ ಪರವಾನಿಗೆಯ ನಿಯಮ ಮತ್ತು ಷರತ್ತುಗಳ ಉಲ್ಲಂಘನೆಯಾಗಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿದ್ದು,ಕೂಡಲೆ ಈ ಸೇವೆಗಳನ್ನು ರದ್ದುಪಡಿಸುವಂತೆ ಕಂಪೆನಿಗಳಿಗೆ ನೋಟಿಸ್ ಜಾರಿ ಮಾಡಲಿದ್ದು,ಡಂಡ ವಿಧಿಸುವ ಕುರಿತು ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದು ದೂರ ಸಂಪರ್ಕ ಕಾರ್ಯದರ್ಶಿ ಆರ್. ಚಂದ್ರಶೇಖರ್ ತಿಳಿಸಿದ್ದಾರೆ.
ಟಾಟಾ ಮತ್ತು ಏರ್‌ಸೆಲ್ ಆರು ವೃತ್ತಗಳಲ್ಲಿ 3ಜಿ ಸೆವೆ ಒದಗಿಸಲು ಇಂತಹದೇ ಒಪ್ಪಂದಗಳನ್ನು ಮಾಡಿಕೊಂಡಿದ್ದರೂ ಕೆಲ ಸಮಯದ ನಂತರ ಈ ವ್ಯವಸ್ಥೆಯನ್ನು ಅವು ರದ್ದುಪಡಿಸಿದ್ದವು.
Please follow and like us:
error