‘ನಾಳೆಯಿಂದ ಹಾಲಿನ ದರ 3 ರೂ. ಏರಿಕೆ’

ಬೆಂಗಳೂರು, ಜ.6: ನಂದಿನಿ ಸಾಮಾನ್ಯ ಹಾಲಿನ ದರ ಪ್ರತಿ ಲೀಟರ್‌ಗೆ 3 ರೂ.ಏರಿಕೆ ಮಾಡುವಂತೆ ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳ (ಕೆಎಂಎಫ್)ಕ್ಕೆ ರಾಜ್ಯ ಸರಕಾರ ಅನುಮತಿ ನೀಡಿದೆ ಎಂದು ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ತಿಳಿಸಿದ್ದಾರೆ.ಶುಕ್ರವಾರ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಜತೆ ಸಭೆ ನಡೆಸಿ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.8ರ ರವಿವಾರದಿಂದ ಹಾಲಿನ ದರ ಏರಿಕೆಯಾಗಲಿದ್ದು, ಸಾಮಾನ್ಯ ಹಾಲಿನ ದರ 21ರಿಂದ 24 ರೂ.ಗಳಾಗಲಿದೆ ಎಂದು ಪ್ರಕ ಟಿಸಿದರು. ಮೊಸರಿನ ದರ ಕೂಡ 4 ರೂ.ಹೆಚ್ಚಳವಾಗಲಿದ್ದು, ಪ್ರತಿ ಲೀಟರ್‌ಗೆ 26ರಿಂದ 30 ರೂ.ಗಳಾಗಲಿದೆ. ಬೆಂಗಳೂರು, ಮೈಸೂರು, ತುಮಕೂರು, ಮಂಡ್ಯ ಹಾಗೂ ಹಾಸನದಲ್ಲಿ 24 ರೂ., ದಕ್ಷಿಣ ಕನ್ನಡ, ರಾಯಚೂರು ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ 25 ರೂ., ಗುಲ್ಬರ್ಗದಲ್ಲಿ 27 ರೂ. ಗಳಾಗಲಿದೆಯೆಂದು ರೆಡ್ಡಿ ಮಾಹಿತಿ ನೀಡಿದರು.
ಯಾವುದೇ ಲಾಭದ ಉದ್ದೇಶದಿಂದ ಹಾಲಿನ ದರ ಏರಿಕೆ ಮಾಡಿಲ್ಲ, ಕೆಎಂಎಫ್ ರೈತರ ಸಂಸ್ಥೆಯಾಗಿದ್ದು, ರೈತರ ಹಿತಾಸಕ್ತಿಗಾಗಿ ಹಾಲಿನ ದರ ಹೆಚ್ಚಳ ಮಾಡಲಾಗಿದೆ. ಆಂಧ್ರದಲ್ಲಿ ಹಾಲು ಉತ್ಪಾದಕರಿಗೆ ಸರಕಾರ ಪ್ರತಿ ಲೀಟರ್‌ಗೆ 19 ರೂ.ನೀಡುತ್ತಿದ್ದು, 27ರೂ.ಗಳಿಗೆ ಮಾರಾಟ ಮಾಡುತ್ತಿದೆ. ಆದರೆ, ರಾಜ್ಯದಲ್ಲಿ ರೈತರಿಗೆ 22ರಿಂದ 23 ರೂ.ಗಳನ್ನು ನೀಡುತ್ತಿದ್ದು, ಕೇವಲ 1ರೂ. ಮಾತ್ರ ತಾವು ಇಟ್ಟುಕೊಳ್ಳುತ್ತಿದ್ದೇವೆ ಎಂದು ಸೋಮಶೇಖರ ರೆಡ್ಡಿ ತಿಳಿಸಿದರು.
Please follow and like us:
error